2005 ಜು. 26ರಂದು ಮುಂಬಯಿಯನ್ನೇ ಮುಳುಗಿಸಿದ ಜಲಪ್ರಳಯ. ಈ ದುರಂತದಿಂದ ಆಡಳಿತ ವ್ಯವಸ್ಥೆ ಪಾಠ ಕಲಿಯದಿದ್ದರೂ ಜನರು ಕಲಿತಿದ್ದರು. ಹೀಗಾಗಿ ಮನೆಯಿಂದ ಹೊರಡದೆ ಸಂಭಾವ್ಯ ಆಪತ್ತುಗಳನ್ನು ತಪ್ಪಿಸಿಕೊಂಡರು.
Advertisement
ಮುಂಬಯಿ: ಮಂಗಳವಾರದ ಮಹಾಮಳೆಗೆ ಮುಂಬಯಿ ಮತ್ತೆ ತತ್ತರಿಸಿದೆ. ರೈಲು, ವಿಮಾನ, ವಾಹನ ಸಂಚಾರ ಸ್ತಬ್ಧಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ, ನರಕ ದರ್ಶನ ಮಾಡಿಸಿದೆ.
ಮಧ್ಯ ರೈಲ್ವೇ, ಪಶ್ಚಿಮ ರೈಲ್ವೇ ಹಾಗೂ ಹಾರ್ಬರ್ ಲೈನ್ – ಈ ಮೂರೂ ರೈಲ್ವೇ ಮಾರ್ಗಗಳು ಮುಳುಗಿ, ಲೋಕಲ್ ರೈಲು ಸ್ಥಗಿತಗೊಂಡಿತು. ವಿಮಾನ ನಿಲ್ದಾಣದ ರನ್‌ವೇಯಲ್ಲಿ ನೀರು ತುಂಬಿದ ಕಾರಣ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ವಿಮಾನಗಳು ಹಾರದೆ ಸಮಸ್ಯೆಯಾಯಿತು. ಲೋವರ್ ಪರೇಲ್, ದಾದರ್, ಕುರ್ಲಾ, ಮಾಟುಂಗಾ, ಅಂಧೇರಿ, ಕಿಂಗ್ ಸರ್ಕರ್, ವರ್ಲಿ, ಸಾಕಿನಾಕ, ವಡಾಲಾ, ಪ್ರಭಾದೇವಿ, ಖಾರ್ ವೆಸ್ಟ್, ಘಾಟ್ ಕೋಪರ್, ಸಯನ್, ಹಿಂದ್ ಮಾತಾ ಸಹಿತ ಪ್ರತಿ ವರ್ಷ ಮಾಮೂಲಿಯಂತೆ ಮುಳುಗಡೆಯಾಗುವ ತಗ್ಗು ಪ್ರದೇಶಗಳಲ್ಲಿ ಸೊಂಟ ಮಟ್ಟಕ್ಕೆ ನೀರು ನಿಂತಿತ್ತು. ಮನೆಯಿಂದ ಹೊರ ಬಂದಿದ್ದವರೆಲ್ಲ ದಾರಿ ಮಧ್ಯೆ ಸಿಲುಕಿ ಅಲ್ಲೇ ಹಾಗೂ ಕಚೇರಿ ಸೇರಿದವರೆಲ್ಲ ಅಲ್ಲಿಯೇ ರಾತ್ರಿ ಕಳೆಯಬೇಕಾಯಿತು. ಮನೆಯಲ್ಲಿ ಉಳಿದವರೇ ಅದೃಷ್ಟವಂತರು ಎಂಬಂತಾಗಿತ್ತು. 50 ಸಾವಿರ ನೌಕರರು ಮನೆಗೆ ಮರಳಲು ಸಂಚಾರ ವ್ಯವಸ್ಥೆಯಿಲ್ಲದೆ ತಮ್ಮ ಕೆಲಸದ ಸ್ಥಳದಲ್ಲಿಯೇ ಉಳಿಯಬೇಕಾಯಿತು. ಸುಮಾರು 20ಕ್ಕೂ ಹೆಚ್ಚು ಮರಗಳು ಉರುಳಿ ಮನೆ ಹಾಗೂ ವಾಹನಗಳಿಗೆ ಹಾನಿಯಾಗಿದೆ. ಹಲವೆಡೆ ಶಾರ್ಟ್ ಸರ್ಕ್ನೂಟ್ ಸಂಭವಿಸಿದೆ.
Related Articles
ಈ ಹಿಂದೆ 2005ರ ಜುಲೈ 26, 27ರಂದು ಸುರಿದಿದ್ದ ಭಾರೀ ಮಳೆಯಿಂದ (ಸುಮಾರು 90 ಸೆಂ.ಮೀ.) ಮೂರು ದಿನಗಳ ಕಾಲ ಕಚೇರಿಯಲ್ಲಿದ್ದ ಜನ ಕಚೇರಿಯಲ್ಲೇ ಉಳಿಯುವಂತಾಗಿತ್ತು, ಮನೆಯಲ್ಲಿ ದ್ದವರು ಹೊರಗೆ ಬರಲಾರದ ಸ್ಥಿತಿ ಇತ್ತು. ಈ ಬಾರಿಯೂ ಅದೇ ಸ್ಥಿತಿ ಪುನರಾವರ್ತನೆಯಾಗಿದೆ.
Advertisement
ನಾಲ್ಕು ದಿನಗಳಿಂದ ಮುಂಬಯಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿದ ಪರಿಣಾಮವಾಗಿ ಮುಂಬೈ ಅಕ್ಷರಶಃ ಜಲಾವೃತವಾಗಿದೆ. ಮೂರು ತಾಸಿನಲ್ಲೇ 6.5 ಸೆಂ.ಮೀ. ಮಳೆ ಸುರಿದ ಪರಿಣಾಮ ಇಷ್ಟೆಲ್ಲ ಅನಾಹುತ ಸಂಭವಿಸಿದೆ. 2009ರಲ್ಲಿ ಲೋಕಾರ್ಪಣೆಗೊಂಡ ಬಾಂದ್ರಾ ವರ್ಲಿ ಸೀ ಲಿಂಕ್ ಇದೇ ಮೊದಲ ಬಾರಿಗೆ ರಾತ್ರಿವರೆಗೂ ಸ್ಥಗಿತಗೊಂಡಿತು.
ನಾಸಿಕ್, ವಿದರ್ಭ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. 2005ರಲ್ಲೂ ಇಂತಹದೇ ಸ್ಥಿತಿ ನಿರ್ಮಾಣವಾಗಿ 2000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿದ್ದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ ಎಂಬುದು ಮಂಗಳವಾರದ ಸ್ಥಿತಿಯಿಂದ ಮತ್ತೂಮ್ಮೆ ಸಾಬೀತಾಗಿದೆ. ಮನೆ ಹಾಗೂ ಕಚೇರಿಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ಜನ ಹರಸಾಹಸ ಪಟ್ಟರು.
ಛತ್ರಪತಿ ಶಿವಾಜಿ ಟರ್ಮಿನಸ್. ಚರ್ಚ್ ಗೇಟ್, ದಾದರ್, ಬಾಂದ್ರಾ, ಅಂಧೇರಿ, ಬೊರಿವಿಲಿ ಸೇರಿದಂತೆ ಹಲವು ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲುಗಳ ಸಂಚಾರವಿಲ್ಲದೆ ವಿಪರೀತ ಜನಜಂಗುಳಿಯಿತ್ತು. ಇನ್ನೆರಡು ದಿನ ಭಾರೀ ಮುನ್ಸೂಚನೆ ಇದೆ.
ಸುರಕ್ಷತಾ ಕ್ರಮಗಳು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ವಿಕೋಪ ನಿಯಂತ್ರಣ ಕೊಠಡಿಗೆ ಖುದ್ದಾಗಿ ತೆರಳಿ, ಪರಿಸ್ಥಿತಿಯನ್ನು ಅವಲೋಕಿಸಿದರು. ನೆರೆ ಸ್ಥಿತಿ ನಿಭಾಯಿಸುವ ಕುರಿತು ಅಧಿಕಾರಿಗಳ ಸಭೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು. ಮಧ್ಯಾಹ್ನದ ಬಳಿಕ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹೆಲಿಕಾಪ್ಟರ್ ಮತ್ತು ನೌಕಾ ಪಡೆಯ ದೋಣಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ನಗರಪಾಲಿಕೆಯ ಪೌರಾಡಳಿತದ 30 ಸಾವಿರಕ್ಕೂ ಹೆಚ್ಚು ಸಿಬಂದಿ, ಪೊಲೀಸರು, ಅಗ್ನಿಶಾಮಕ ದಳ ಮುಂತಾದವುಗಳ ಸಾವಿರಾರು ಸಿಬಂದಿ ಹಗಲಿರುಳೆನ್ನದೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ನೀರೆತ್ತಲು ಬಿಎಂಸಿ 217 ಪಂಪ್‌ಗ್ಳನ್ನು ಬಳಸಿದೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ ಅತೀ ಹೆಚ್ಚು ಸಮಸ್ಯೆ ಎಲ್ಲಿ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದರಿಂದ ನೆರೆಯಲ್ಲಿ ಸಿಲುಕುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ಮೋದಿ ಅಭಯ
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಫಡ್ನವೀಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ನೆರೆ ಸ್ಥಿತಿ ನಿಭಾಯಿಸಲು ಕೇಂದ್ರ ಸರಕಾರದಿಂದ ಎಲ್ಲ ಅಗತ್ಯ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಶಾಲೆಗಳಿಗೆ ರಜೆ
ಮಂಗಳವಾರ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿನ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಸಚಿವ ವಿನೋದ್ ತಾಬ್ಡೆ ಹೇಳಿದರು.