Advertisement
ಸಮಾಜದಲ್ಲಿ ಆಳವಾಗಿ ಬೇರೂರಿರುವ ಯಾವುದೇ ಅನಿಷ್ಟಗಳನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ. ಒಬ್ಬ ಶೋಷಣೆಗೆ ಒಳಗಾದ ವ್ಯಕ್ತಿ ಮತ್ತು ಆತನ ಮನಸ್ಥಿತಿಯನ್ನು ಅರಿಯುವುದು ಹಾಗೂ ಶೋಷಿಸುವ ವ್ಯಕ್ತಿಯಲ್ಲಿನ ದರ್ಪ, ಅಹಂಕಾರಗಳ ವಿರುದ್ಧ ಶೋಷಿತ ವರ್ಗವನ್ನು ಸಿದ್ಧಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಜಾತಿ ಎನ್ನುವುದು ಮೈಗಂಟಿದ ಚರ್ಮವಾಗಿದ್ದ ಅಂದಿನ ಕಾಲಘಟ್ಟದಲ್ಲಿ, ದೇವಸ್ಥಾನ ಪ್ರವೇಶ ಮತ್ತು ಶಿಕ್ಷಣ ಎಂಬುದು ಮೇಲ್ವರ್ಗದ ಸ್ವತ್ತು ಎಂದು ನಂಬಿದ ಮತ್ತು ಬಲವಂತವಾಗಿ ನಂಬಿಸಲ್ಪಟ್ಟ ಆ ಸಮಯದಲ್ಲಿ ‘ನಾಣು’ ಎಂದು ಕರೆಯಲ್ಪಡುತ್ತಿದ್ದ ನಾರಾಯಣ ಗುರುಗಳು ಹುಟ್ಟಿದರು.
Related Articles
Advertisement
ಅಂದಿನ ಸಮಾಜದಲ್ಲಿ ಇದ್ದ ಮತ್ತೂಂದು ಪಿಡುಗು ಎಂದರೆ ದೇವಸ್ಥಾನ ಪ್ರವೇಶ ನಿಷೇಧ. ಬರೇ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಮತ್ತು ಇಂತಹ ಕಡೆಗಳಲ್ಲೆಲ್ಲಾ ಕೆಳ ವರ್ಗಗಳನ್ನು ತೀರಾ ನಿಕೃಷ್ಟವಾಗಿ ನಡೆಸಿಕೊಳ್ಳುವ ಪರಿಯನ್ನು ಗಮನಿಸಿದ ನಾರಾಯಣ ಗುರುಗಳು ದೇವರ ಭಯ ಎಂಬುದು ಜ್ಞಾನದ ವಿಕಾಸಕ್ಕೆ ಕಾರಣವಾಗ ಬೇಕು.ಪರಿಶುದ್ಧವಾದ ಮನಸ್ಸಿನಿಂದ ಮಾಡಿದ ಭಕ್ತಿ ಭಗವಂತನನ್ನು ತಲುಪಬಲ್ಲದು.ಅದಕ್ಕೆ ಮೇಲ್ವರ್ಗದ ಮತ್ತು ಮೇಲ್ವರ್ಗದವರಿಂದ ಬಂಧಿಸಲ್ಪಟ್ಟಿರುವ ದೇವರೇ ಬೇಕಾಗಿಲ್ಲ ಮತ್ತು ಅಲ್ಲಿಗೆ ಹೋಗಬೇಕಾಗಿಯೂ ಇಲ್ಲ ಎಂದು ಸ್ವತಃ ತಾವೇ ದೇವಾಲ ಯವನ್ನು ಸ್ಥಾಪಿಸುವ ಮೂಲಕ ಭಕ್ತಿ ಚಳವಳಿಗೆ ನಾಂದಿ ಹಾಡಿದರು.ಅಲ್ಲದೆ ಕೆಲವು ದೇಗುಲಗಳಲ್ಲಿ ‘ಸತ್ಯ, ಕರ್ತವ್ಯ, ದಯೆ ಮತ್ತು ಪ್ರೀತಿ’ ಎಂದು ಬರೆಸುವ ಮುಖಾಂತರ ಸ್ವತಃ ತಾವೇ ಗುರುವಾಗಿ ನಿಂತು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಪರಿಕಲ್ಪನೆ ಮೂಡಿಸಿ ಅಂದಿನಿಂದ ಇಂದಿನವರೆಗೂ ಒಬ್ಬ ಗುರುವರೇಣ್ಯರಾಗಿ, ಸ್ವಾಮಿಯಾಗಿ, ದೇವರಾಗಿ, ಅದ್ಭುತ ಶಕ್ತಿಯಾಗಿ ಕಾಯುತ್ತಾ ಬಂದವರು.
ಬದುಕಿನಲ್ಲಿ ದುಃಖರಹಿತರಾಗಿ ಬಾಳಬೇಕಾದರೆ ದೇಶ ಸೇವೆ ಮತ್ತು ಈಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆಯೆ ಮೋಕ್ಷವನ್ನು ಕಂಡುಕೊಳ್ಳಬೇಕು ಎಂದು ಬೋಧಿಸಿರುವ ಉಪದೇಶಗಳ ಗಣಿಯಾಗಿರುವ ನಾರಾಯಣ ಗುರುಗಳು ನಮ್ಮೊಂದಿಗೆ ಇಲ್ಲವಾದರೂ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸರಳ, ನಿಷ್ಕಲ್ಮಶ ವ್ಯಕ್ತಿತ್ವ ಬೆಳೆಸಿಕೊಂಡು ಸುಂದರವಾದ ಜೀವನ ನಡೆಸೋಣ.ಅವರ ಮಾನವತಾವಾದವನ್ನು ಮರೆಯದಿರೋಣ.
(ಇಂದು ನಾರಾಯಣ ಗುರುಗಳ ಜಯಂತಿ)
ವಾಸಂತಿ ಅಂಬಲಪಾಡಿ