ಬೆಂಗಳೂರು: ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಮುಖಂಡರಾದ ಕೊಂಡಜ್ಜಿ ಮೋಹನ್ ಹಾಗೂ ಮಾಜಿ ಮೇಯರ್ ಪಿ.ಆರ್. ರಮೇಶ್ ಅವರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ಮೇಲ್ಮನೆಗೆ ನೇಮಕ ಮಾಡುವಂತೆ ಕಳುಹಿಸಿದ್ದ ಮೂವರು ಗಣ್ಯರ ಪೈಕಿ ಇಬ್ಬರ ನೇಮಕಕ್ಕೆ ಮಾತ್ರ ಅಂಕಿತ ಹಾಕಿದ್ದು, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ನೇಮಕಾತಿ ಶಿಫಾರಸ್ಸನ್ನು ತಿರಸ್ಕರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿಗರಾದ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರನ್ನು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಡಿ ವಿಧಾನ ಪರಿಷತ್ತಿಗೆ ನಾಮಕರಣ ಸದಸ್ಯರನ್ನಾಗಿ ನೇಮಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದರು. ಸಿ.ಎಂ. ಲಿಂಗಪ್ಪ ಅವರ ಸಮಾಜ ಮತ್ತು ಶಿಕ್ಷಣ ಸೇವೆ ಕುರಿತು ಸರ್ಕಾರ ಕಳುಹಿಸಿದ್ದ ಸಾಧನೆಗಳ ವಿವರವನ್ನು ಪರಿಶೀಲಿಸಿರುವ ರಾಜ್ಯಪಾಲರು ರಾಜಕೀಯ ಹಿನ್ನೆಲೆಯನ್ನೇ ಹೊಂದಿದ ಸಿ.ಎಂ. ಲಿಂಗಪ್ಪ ಅವರ ನೇಮಕ ಶಿಕ್ಷಣ ಮತ್ತು ಸಮಾಜ ಸುಧಾರಣೆ ವರ್ಗದಡಿ ಬರುವುದಿಲ್ಲ ಎಂದು ಅಭಿಪ್ರಾಯಿಸಿ ಲಿಂಗಪ್ಪ ನೇಮಕವನ್ನು ನಿರಾಕರಿಸಿದ್ದಾರೆ.
ಕೊಂಡಜ್ಜಿ ಮೋಹನ್ ಮತ್ತು ಪಿ.ಆರ್. ರಮೇಶ್ ರಾಜಕೀಯ ಹಿನ್ನೆಲೆ ಉಳ್ಳವರಾದರೂ, ರಾಜಕಾರಣದ ಹೊರತಾಗಿಯೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಕ್ಕೆ ರಾಜ್ಯಪಾಲರು ತೃಪ್ತಿ ವ್ಯಕ್ತಪಡಿಸಿ, ಸರ್ಕಾರದ ಶಿಫಾರಸ್ಸಿನಂತೆ ಈ ಇಬ್ಬರನ್ನು ನೇಮಕ ಮಾಡಿದ್ದಾರೆ.
ಕೊಂಡಜ್ಜಿ ಮೋಹನ್: ಇವರು ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಚಿತ್ರರಂಗದಲ್ಲಿಯೂ ನಿರ್ಮಾಪಕರಾಗಿ ‘ಎಲ್ಲಿಂದಲೋ ಬಂದವರು’ ಚಿತ್ರ ನಿರ್ಮಿಸಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇಂಡೊ ಚೀನಾ ಫ್ರೆಂಡ್‌ಶಿಪ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಮುದಾಯ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪನಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಪಿ.ಆರ್. ರಮೇಶ್; ಬೆಂಗಳೂರಿನ ಮಾಜಿ ಮೇಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಸ್ಲಂಬೋರ್ಡ್ ಅಧ್ಯಕ್ಷರಾಗಿ ಹಾಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಮತ್ತು ಪಕ್ಷದ ಸಹ ವಕ್ತಾ¤ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಇವರು ಗಾಂಧೀಜಿ ಸ್ಥಾಪಿಸಿರುವ ಹರಿಜನ ಸೇವಾ ಸಂಘದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿ ಸಂಘ ಕಟ್ಟಿ ಸಮಾಜದ ಒಳಿತಿಗೆ ದುಡಿಯುತ್ತಿದ್ದಾರೆ.
ಈ ಹಿಂದಿನ ರಾಜ್ಯಪಾಲರು ಸಹ ಸಕ್ರಿಯ ರಾಜಕೀಯದಲ್ಲಿದ್ದ ಮಾಜಿ ಸಚಿವರಾದ ವಿ. ಸೋಮಣ್ಣ ಮತ್ತು ಬಂಡೆಪ್ಪ ಕಾಶೆಂಪೂರ್ ಅವರ ಹೆಸರುಗಳನ್ನು ನಾಮ ನಿರ್ದೇಶನಕ್ಕೆ ಅಂದಿನ ಸರ್ಕಾರಗಳು ಶಿಫಾರಸ್ಸು ಮಾಡಿದಾಗ ತಿರಸ್ಕರಿಸಿದ್ದರು.