Advertisement

ಅಧಿವೇಶನದ ಸವಾಲನ್ನು ಯಶಸ್ವಿಯಾಗಿ ಎದುರಿಸಿದ ಸರ್ಕಾರ

10:38 PM Oct 12, 2019 | Team Udayavani |

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಮೂರು ದಿನಗಳಿಗೆ ಸಮಾಪ್ತಿಗೊಳಿಸಿ, ಹೊಸ ಬಜೆಟ್‌ ಮಂಡಿಸುವ ಸಾಹಸಕ್ಕೆ ಹೋಗದೆ, ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ಗೆ ಅನುಮೋದನೆ ಪಡೆದು, ಪೂರಕ ಅಂದಾಜಿನಲ್ಲಿ ನೆರೆ ಪರಿಹಾರ ಸೇರಿ ಇತರೆ ಬಾಬ್ತುಗಳಿಗೆ ಹಣ ಹೊಂದಾಣಿಕೆ ಮಾಡುವ ಕಸರತ್ತು ಮಾಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.

Advertisement

ಅಲ್ಲದೆ, ಮೂರು ದಿನಗಳ ಕಾಲ ಪ್ರತಿಪಕ್ಷಗಳ ಆರೋಪಗಳಿಗೂ ತಿರುಗೇಟು ನೀಡಿ, ಪ್ರವಾಹ ಪರಿಹಾರ ವಿಚಾರದಲ್ಲಿ ಸರ್ಕಾರದ ನಡೆ ಹಾಗೂ ಕೇಂದ್ರ ಸರ್ಕಾರದ ನೆರವು ಸಮರ್ಥಿಸಿಕೊಳ್ಳುವಲ್ಲಿಯೂ ಸಫ‌ಲವಾಯಿತು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಪಕ್ಷ ಕಾಂಗ್ರೆಸ್‌ನ ಪ್ರಯತ್ನ ವಿಫ‌ಲಗೊಳಿಸುವಲ್ಲಿ ಸರ್ಕಾರ ಇಡೀ ತಂಡವಾಗಿ ಕಾರ್ಯ ನಿರ್ವಹಿಸಿದ್ದು ಎದ್ದು ಕಂಡಿತು.

ಪ್ರವಾಹದಲ್ಲಿ ಮನೆ ಕಳೆದುಕೊಂಡವರಲ್ಲಿ ಒಂದೇ ಮನೆಯಲ್ಲಿ ಎರಡು ಅಥವಾ ಮೂರು ಕುಟುಂಬ ಇದ್ದರೂ ಅವರಿಗೂ ಐದು ಲಕ್ಷ ರೂ. ಪರಿಹಾರ, ಶೇ.25ರಷ್ಟು ಹಾನಿಯಾಗಿರುವ ಮನೆಗೂ ಐದು ಲಕ್ಷ ರೂ.ಪರಿಹಾರ, ಮನೆ ಕಳೆದುಕೊಂಡವರು ಪ್ರಾರಂಭಿಕ ಗುರುತಿಸುವಿಕೆಯಲ್ಲಿ ತಪ್ಪಿ ಹೋಗಿದ್ದರೆ ಮತ್ತೆ ಸಮೀಕ್ಷೆ, ಪ್ರವಾಹದಲ್ಲಿ ಅಂಗಡಿ-ಮುಂಗಟ್ಟು ಕೊಚ್ಚಿ ಹೋಗಿದ್ದರೂ ತಲಾ 20 ಸಾವಿರ ರೂ. ಪರಿಹಾರ, ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರದ ಜತೆಗೆ, ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಪರಿಹಾರ ಘೋಷಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿಪಕ್ಷಗಳ ಬೇಡಿಕೆಗಳಿಗೆ ಸ್ಪಂದಿಸಿ, ಸಂತ್ರಸ್ತರಲ್ಲೂ ಧೈರ್ಯ ತುಂಬುವ ಕೆಲಸ ಮಾಡಿ ಜಾಣ್ಮೆ ಮೆರೆದರು.

ಪ್ರವಾಹದಲ್ಲಿ ಕೊಚ್ಚಿ ಹೋದ ಅಂಗಡಿ -ಮುಂಗಟ್ಟು ಗಳಿಗೆ ಪರಿಹಾರ, ಬೆಳೆ ನಷ್ಟಕ್ಕೆ ರಾಜ್ಯ ಸರ್ಕಾರದಿಂದಲೂ ಪರಿಹಾರ, ಮನೆ ಕಳೆದುಕೊಂಡವರಲ್ಲಿ ಎರಡು, ಮೂರು ಕುಟುಂಬ ಇದ್ದರೂ ಪರಿಹಾರ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಟ್ಟಿದ್ದ ಬೇಡಿ ಕೆಗಳಿಗೂ ಯಡಿಯೂರಪ್ಪನವರು ತಮ್ಮ ಉತ್ತರದಲ್ಲಿ ಸ್ಪಂದಿಸಿ, ಪ್ರತಿಪಕ್ಷವನ್ನೂ ಸಮಾಧಾನಪಡಿಸಿದರು. ಮೂರೂ ದಿನ ಸಹನೆಯಿಂದ ಮೌನವಾಗಿ ಪ್ರತಿಪಕ್ಷಗಳ ಟೀಕೆ-ಟಿಪ್ಪಣಿ ಕೇಳಿ ಆರ್ಥಿಕ ಇತಿಮಿತಿಯಲ್ಲಿ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಿದರು.

ಸಚಿವರ ಸಾಥ್‌: ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಪ್ರವಾಹ ಪರಿಹಾರ ವಿಚಾರದಲ್ಲಿ ಪ್ರತಿಪಕ್ಷಗಳ ಚರ್ಚೆಗೆ ಉತ್ತರ ನೀಡಿದರೆ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೆಚ್ಚಾಗಿ ಸಾಥ್‌ ನೀಡಿದರು. ವಿಧಾನಪರಿಷತ್‌ನಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಪ್ರವಾಹ ಪರಿಹಾರ ಕುರಿತು ಅಂಕಿ-ಅಂಶ ಸಮೇತ ಉತ್ತರ ನೀಡಿದರೆ, ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಸಿ.ಟಿ.ರವಿ ಸೇರಿ ಇತರೆ ಸಚಿವರು ಸರ್ಕಾರವನ್ನು ಸಮರ್ಥಿಸಿಕೊಂಡರು.

Advertisement

ಎಚ್‌ಡಿಕೆ ಸಕಾಲಿಕ ಸಲಹೆ: ಅಧಿವೇಶನದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಕಾಲಿಕವಾಗಿ ಮಾತನಾಡಿ, ಪ್ರವಾಹ ಪರಿಹಾರಕ್ಕಾಗಿ ಬಜೆಟ್‌ನ ಇತರೆ ಕಾರ್ಯಕ್ರಮ ಕಡಿತಗೊಳಿಸಿ, 10 ರಿಂದ 15 ಸಾವಿರ ಕೋಟಿ ರೂ.ಹೊಂದಿಸಿಕೊಳ್ಳಿ ಎಂದು ಸಲಹೆ ನೀಡಿ, ಸರ್ಕಾರದ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಜತೆಗೆ, ನಮ್ಮ- ನಿಮ್ಮ ದೌರ್ಬಲ್ಯಗಳನ್ನು ತೋರಿಸುತ್ತಾ ರಾಜ್ಯದ ಜನರನ್ನು ಬೀದಿಯಲ್ಲಿ ನಿಲ್ಲಿಸುವುದು ಬೇಡ.

ನೆರೆ ಸಮಸ್ಯೆ ನಿರ್ವಹಣೆಯನ್ನು ಭಗವಂತ ನೀಡಿದ ಪರೀಕ್ಷೆ ಎಂದು ಭಾವಿಸಿ, ಜನರ ಸಂಕಷ್ಟಕ್ಕೆ ಸ್ಪಂದಿಸಿ. ಸರ್ಕಾರ ಪ್ರಾಮಾಣಿಕತೆಯಿಂದ ಸ್ಪಂದಿಸುತ್ತಿದೆ ಎಂಬ ವಿಶ್ವಾಸ ಮೂಡಿಸಿ ಎಂದು ಕಿವಿಮಾತು ಹೇಳಿದರು. ಸರ್ಕಾರದ ಮೇಲೆ ಮುಗಿಬೀಳಲು ಹೋಗದೆ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಬಗ್ಗೆ ಗಮನ ಹರಿಸಲು ಸಲಹೆ ನೀಡಿದರು. ಕುಮಾರಸ್ವಾಮಿಯವರ ಭಾಷಣ ಆಡಳಿತ ಪಕ್ಷದ ನಾಯಕರ ಪ್ರಶಂಸೆಗೆ ಪಾತ್ರವಾಗಿದ್ದು ವಿಶೇಷ.

ಸಿದ್ದರಾಮಯ್ಯ ಅವರು ಚರ್ಚೆ ಮಾಡುವ ಸಂದರ್ಭದಲ್ಲಿ ಸಚಿವ ಈಶ್ವರಪ್ಪ ಅವರ ಜತೆಗಿನ ವಾಗ್ವಾದ ಅಧಿವೇಶನದಲ್ಲಿ ಬಿಸಿ ಹೆಚ್ಚಿಸಿತ್ತು. ವೈಯಕ್ತಿಕ ಟೀಕೆಗೆ ಇಬ್ಬರೂ ನಾಯಕರು ಇಳಿದಿದ್ದು ಸರಿಯಲ್ಲ, ಸದನದಲ್ಲಿ ಆ ರೀತಿಯ ವೈಯಕ್ತಿಕ ಟೀಕೆಗಳ ಅಗತ್ಯ ಇರಲಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಯಿತು. ಸಮಯ ಪಾಲನೆ ವಿಚಾರದಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ನಿಷ್ಠುರವಾಗಿಯೇ ವರ್ತಿಸಿ, ಪ್ರತಿಪಕ್ಷ ನಾಯಕರಿಗೂ ಇಂತಿಷ್ಟೇ ಸಮಯ ದಲ್ಲಿ ಮಾತು ಮುಗಿಸಬೇಕೆಂದು ತಾಕೀತು ಮಾಡಿದರು. ಪ್ರತಿಪಕ್ಷಗಳು ಅಧಿವೇಶನವನ್ನು ಹತ್ತು ದಿನಕ್ಕೆ ವಿಸ್ತರಿಸಬೇ ಕೆಂದು ಪಟ್ಟು ಹಿಡಿದಿದ್ದರೂ ಮೂರೇ ದಿನದಲ್ಲಿ ಚರ್ಚೆ, ಸರ್ಕಾರದಿಂದ ಉತ್ತರ, ಬಜೆಟ್‌ ಹಾಗೂ ಪೂರಕ ಅಂದಾ ಜಿಗೆ ಅನುಮೋದನೆ ಎಲ್ಲವನ್ನೂ ಪೂರ್ಣಗೊಳಿಸುವಲ್ಲಿ ಮೊದಲ ಅಧಿವೇಶನದಲ್ಲೇ ಯಶಸ್ವಿಯಾದರು.

ಮಾಧ್ಯಮಗಳ ನಿರ್ಬಂಧ ಶಾಶ್ವತ?: ವಿದ್ಯುನ್ಮಾನ ಮಾಧ್ಯಮಗಳ ವಿಡಿಯೋ, ಮುದ್ರಣ ಮಾಧ್ಯಮಗಳ ಕ್ಯಾಮೆರಾಗಳಿಗೆ ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ನಿರ್ಬಂಧ ವಿಧಿಸಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಯಿತು. ಆದರೂ ಸ್ಪೀಕರ್‌, ತಮ್ಮ ನಿರ್ಧಾರಕ್ಕೆ ಬದ್ಧರಾದರು. ಇದು ಪ್ರಾಯೋಗಿಕ, ಮುಂದೆ ಸಾಧಕ-ಬಾಧಕ ಚರ್ಚಿಸಿ, ಲೋಕಸಭೆ ಮಾದರಿಯಲ್ಲಿ ಇನ್ನೂ ವ್ಯವಸ್ಥೆ ಜಾರಿ ಎಂದು ಹೇಳಿದ್ದಾರೆ. ಬಹುಶಃ ಮೂರು ದಿನಗಳ ನಿರ್ಬಂಧ ಶಾಶ್ವತವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ, ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿಯ ನಿಲುವು ಏನು ಎಂಬುದನ್ನು ಕಾದು ನೋಡಬೇಕಾಗಿದೆ.

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next