Advertisement

ಜಯತೀರ್ಥರ ಮೂಲವೃಂದಾವನ ಅಪಪ್ರಚಾರ ನಿಲ್ಲಿಸಿ

02:30 PM Jun 24, 2022 | Team Udayavani |

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿ ತೀರಲ್ಲಿರುವ ಸುಕ್ಷೇತ್ರ ಮಳಖೇಡದ ಶ್ರೀ ಜಯತೀರ್ಥರ ಮೂಲ ವೃಂದಾವನ ಕುರಿತು ಕೆಲವರು ನಡೆಸುತ್ತಿರುವ ಅಪಪ್ರಚಾರ ನಿಲ್ಲಿಸಬೇಕು ಮತ್ತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಕಲ್ಯಾಣ ಕರ್ನಾಟಕದ ಸಮಸ್ತ ಆಸ್ತಿಕ, ವೈಚಾರಿಕ, ಸಾಂಸ್ಕೃತಿಕ ಲೋಕ, ಶ್ರೀ ಜಯತೀರ್ಥರ ಭಕ್ತ ವೃಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿತು.

Advertisement

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಮೆರವಣಿಗೆ ಮಾಡಿದ ಸಮಸ್ತ ಆಸ್ತಿಕ, ವೈಚಾರಿಕ, ಸಾಂಸ್ಕೃತಿಕ ಲೋಕ, ಶ್ರೀ ಜಯತೀರ್ಥರ ಭಕ್ತ ವೃಂದದವರು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಜುಲೈ 17,18,19ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವ ವೃಂದಾನದ ಗಡ್ಡೆಯಲ್ಲಿ ರಘುವರ್ಯ ತೀರ್ಥರ ವೃಂದಾವನಕ್ಕೆ ಜಯತೀರ್ಥರ ವೃಂದಾವನ ಎಂದು ಬಿಂಬಿಸಿ ಆರಾಧನೆ ಮಾಡಲು ಯೋಜಿಸಿ ಕೆಲವರು ಹೇಳಿಕೆ ನೀಡಿದ್ದಾರೆ. ಸರಕಾರ ಇದನ್ನು ತಡೆಯಬೇಕು. ಇಲ್ಲದಿದ್ದರೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಾಂಸ್ಕೃತಿಕ ಲೋಕದ ನೇತೃತ್ವ ವಹಿಸಿದ್ದ ಡಾ| ಶ್ರೀಶೈಲ ನಾಗರಾಳ, ಟೀಕಾಚಾರ್ಯರ ವೃಂದಾವನ ಇರೋದು ಮಳಖೇಡದಲ್ಲಿ ಎಂದು ಎಲ್ಲರಿಗೂ ಗೊತ್ತು. ಹೀಗಿದ್ದರೂ ಅದ್ಯಾಕೆ ಇಂತಹ ಸಂಗತಿಯನ್ನು ವಿವಾದಕ್ಕೆ ತಂದರೋ? ವಿವಾದ ಮಾಡುವುದನ್ನು ಕೈಬಿಟ್ಟು ಶತಮಾನಗಳ ಐತಿಹ್ಯ, ಜನರ ನಂಬಿಕೆಗಳನ್ನು ಎಲ್ಲರು ಒಪ್ಪಲೇಬೇಕು. ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವ ಮುನ್ನವೇ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಉತ್ತರಾದಿ ಮಠದ ರಘೋತ್ತಮ ಘಂಟಿ, ಅರವಿಂದ ನವಲಿ, ಮುಕುಂದ ದೇಶಪಾಂಡೆ, ಪ್ರಶಾಂತ ಕೋರಳ್ಳಿ, ಶರಣ ಸಾಹಿತ್ಯ ಪರಿಷತ್‌ ಚಿತ್ತಾಪುರದ ಡಾ| ಮಲ್ಲಿನಾಥ ತಳವಾರ, ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ, ಸಾಹಿತಿ ಬಳಗದ ಡಾ| ಕಾಶೀನಾಥ ಹಿರೇಮಠ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪವನ ಫಿರೋಜಾಬಾದ್‌, ಗುಂಡಾಚಾರ್ಯ ನರಿಬೋಳ, ದಾಸ ಸಾಹಿತ್ಯ ಅಕಾಡೆಮಿಯ ರವಿ ಲಾತೂರಕರ್‌, ಪಾರಾಯಣ ಸಂಘಗಳ ಸದಸ್ಯರು, ಪಂ. ಗೋಪಾಲಾಚಾರ್ಯ, ಪಂ. ಹಣಮಂತಾಚಾರ್ಯ, ವಿಷ್ಣುದಾಸಾಚಾರ್ಯ ಖಜೂರಿ, ಚಿತ್ತಾಪುರದ ಸತ್ಯಾತ್ಮ ಸೇನೆ ಸದಸ್ಯರು, ಜೇವರ್ಗಿ, ಕಲಬುರಗಿಯ 52 ಸಂಘಟನೆಗಳ ಸದಸ್ಯರು, ಪ್ರಮುಖರು ಭಾಗಿಯಾಗಿದ್ದರು.

ನಮಗೆ ಬುದ್ಧಿ ಬಂದಾಗಿನಿಂದ ಜಯತೀರ್ಥರ ವೃಂದಾವನ ಸೇಡಂ ತಾಲೂಕಿನ ಕಾಗಿಣಾ ನದಿ ತೀರಲ್ಲಿರುವ ಸುಕ್ಷೇತ್ರ ಮಳಖೇಡದಲ್ಲಿದೆ ಎಂದು ಅರಿತಿದ್ದೇವೆ. ಇದಕ್ಕೆ ಸಾಕಷ್ಟು ಪುರಾವೆಗಳಿವೆ. ನಾವು ಎಲ್ಲ ರೀತಿಯ ಧಾರ್ಮಿಕ ಕಾರ್ಯಗಳನ್ನು ಇಲ್ಲಿಯೇ ಮಾಡುತ್ತಾ ಬಂದಿದ್ದೇವೆ. ಈಗ ಏಕಾಏಕಿಯಾಗಿ ಆನೆಗೊಂದಿಯಲ್ಲಿ ವೃಂದಾವನ ಇದೆ. ಅಲ್ಲಿ ಜುಲೈನಲ್ಲಿ ಆರಾಧನೆ ಮಾಡುತ್ತೇವೆ ಎನ್ನುವ ಕೆಲವರ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಕೂಡಲೇ ಸರಕಾರ ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದರೇ ದೊಡ್ಡ ಹೋರಾಟವೇ ಆಗುತ್ತದೆ. -ರಾಮಾಚಾರ್ಯ ಘಂಟಿ, ಉತ್ತರಾದಿ ಮಠಾಧಿಕಾರಿ

Advertisement

ಮಳಖೇಡ ವಿಚಾರದಲ್ಲಿ ಅನಗತ್ಯ ವಿವಾದ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ. ಇದು ಸರ್ವಥಾ ಸರಿಯಲ್ಲ. ಮಾಧ್ವ ಸಂಪ್ರದಾಯದ ಮಹಾನ್‌ ಯತಿಗಳು ಮಳಖೇಡದಲ್ಲಿರೋದು ಎಲ್ಲರಿಗೂ ತಿಳಿದ ವಿಚಾರ. ಹೀಗಿದ್ದರೂ ವಿವಾದ ಎಬ್ಬಿಸುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ. ಯಾವುದೇ ಇತಿಹಾಸವನ್ನು ಸುಳ್ಳಿನಿಂದ ಸತ್ಯ ಮಾಡಲು ಸಾಧ್ಯವಿಲ್ಲ. -ಡಾ| ಗುರು ಮಧ್ವಾಚಾರ್ಯ ನವಲಿ, ಮುಖ್ಯಸ್ಥ, ಸಂಸ್ಕೃತ ವಿಭಾಗ ಎನ್‌ವಿ ಸಂಸ್ಥೆ

ಮಳಖೇಡ ಉತ್ತರಾದಿ ಮಠದ ಶ್ರದ್ಧಾಕೇಂದ್ರವಾಗಿದೆ. ಟೀಕಾರಾಯರ ಗದ್ದುಗೆಗೆ ಬಹಳ ವರ್ಷಗಳಿಂದ ಭಕ್ತರು ನಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ವಿವಾದ ಉಂಟು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಸರ್ಕಾರ ವಿವಾದ ಇತ್ಯರ್ಥ ಮಾಡಬೇಕು. -ಎಂ ಎಸ್‌.ಪಾಟೀಲ ನರಿಬೋಳ, ಪೇಜಾವರ ಸೇನೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next