Advertisement

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

01:31 PM May 18, 2022 | Team Udayavani |

ನವಿಮುಂಬಯಿ: ಪನ್ವೇಲ್‌ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ  ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದು ಕೊಂಡಿರುವಾಗಲೇ ಶಿರವಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೋರ್ಬೆ ಅಣೆಕಟ್ಟಿನ ನೀರನ್ನು ಓರ್ವ ಡೆವಲಪರ್‌ಗಾಗಿ ಸರಕಾರ ಮೀಸಲಿಟ್ಟಿರುವುದು ಬೆಳಕಿಗೆ ಬಂದಿದೆ.

Advertisement

ಈ ಅಣೆಕಟ್ಟಿನ ಶೇ. 80ರಷ್ಟು ನೀರನ್ನು ಮೂರು ವರ್ಷಗಳ ಹಿಂದೆ ಡೆವಲಪರ್‌ಗಾಗಿ ಕಾಯ್ದಿರಿಸಲಾಗಿದ್ದರೂ ಡೆವಲಪರ್‌ ಮಾತ್ರ ನಿರ್ಮಾಣ ಯೋಜನೆಯ ಒಂದು ಇಟ್ಟಿಗೆಯನ್ನೂ ಹಾಕಿಲ್ಲ. ಆದರೆ ಆತನಿಗಾಗಿ ಸರಕಾರ ನೀರು ಕಾಯ್ದಿರಿಸಿದ್ದರಿಂದ ಈ ಭಾಗದ 30 ಗ್ರಾಮಗಳ ಜನರು ದಾಹದಿಂದ ನರಳುತ್ತಿರುವುದು ಕಂಡುಬಂದಿದೆ.

ಪನ್ವೇಲ್‌ ಪಂ. ಸಮಿತಿಯ ನೀರು ಸರಬರಾಜು ವಿಭಾಗವು ಪನ್ವೇಲ್‌ನಲ್ಲಿ ಜಲಜೀವನ್‌ ಮಿಷನ್‌ ಅಡಿಯಲ್ಲಿ ಎಲ್ಲ  ಮನೆಗಳಿಗೆ ಕೊಳವೆ ನೀರಿನ ಯೋಜನೆ ಒದಗಿಸಲು ಸಮೀಕ್ಷೆ ನಡೆಸುತ್ತಿದೆ. ತಾಲೂಕಿನ 120 ಗ್ರಾಮಗಳ ಪೈಕಿ 90 ಗ್ರಾಮಗಳಲ್ಲಿ ಯಶ್‌ ಕನ್ಸಲ್‌ಟೆನ್ಸಿ ಸಮೀಕ್ಷೆ ನಡೆಸಿದೆ. ಈ ಗ್ರಾಮಗಳಿಗೆ ಸುಮಾರು 40 ಮಿಲಿಯನ್‌ ಲೀ. ನೀರು ಬೇಕಾಗಲಿದ್ದು, ಇದಕ್ಕಾಗಿ 82 ಕೋ. ರೂ. ವೆಚ್ಚವಾಗಲಿದೆ. ಈ 40 ಮಿಲಿಯನ್‌ ಲೀಟರ್‌ ನೀರನ್ನು ಎಲ್ಲಿಂದ ತರುವುದು ಎಂಬುದು ಆಡಳಿತದ ಮುಂದಿರುವ ಪ್ರಶ್ನೆ.

ಸುಮಾರು ಮೂರು ವರ್ಷಗಳ ಹಿಂದೆ ಖಾಸಗಿ ಡೆವಲಪರ್‌ ಅಣೆಕಟ್ಟಿನಲ್ಲಿ  ಶೇ. 80ರಷ್ಟು ನೀರನ್ನು ಕಾಯ್ದಿರಿಸಿದ್ದರು. ಅದರಂತೆ ಈ ಡೆವಲಪರ್‌ನ ಅಭಿವೃದ್ಧಿ ಯೋಜನೆಗೆ ಈ ಅಣೆಕಟ್ಟಿನಿಂದ ಶೇ. 80ರಷ್ಟು ನೀರನ್ನು ಪಡೆಯಲು ಸರಕಾರ ಅನುಮತಿ ನೀಡಿದೆ. ಗಮನಾರ್ಹ ವಿಷ ಯವೆಂದರೆ ನಿರ್ಮಾಣ ಯೋಜನೆಗೆ ಸಿಡ್ಕೊದಿಂದ ಇನ್ನೂ ಅನುಮೋದನೆ ಪಡೆಯದ ಡೆವಲಪರ್‌ಗೆ ಸರಕಾರವು ನೀರು ಮೀಸಲಾತಿಯ ಅನುಮತಿಯನ್ನು 3 ವರ್ಷಗಳ ಹಿಂದೆ ನೀಡಿದೆ.

ಡೆವಲಪರ್ಸ್‌ಗಾಗಿ ನೀರು ಕಾಯ್ದಿರಿಸಲು ಅರ್ಜಿ :

Advertisement

1974ರಲ್ಲಿ ಪನ್ವೇಲ್‌ ತಾಲೂಕಿನ ಶಿರ್ವಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ  ಗರ್ಮಲ್‌ ಮೋರ್ಬೆ ಅಣೆಕಟ್ಟು  ನಿರ್ಮಿಸಲಾಯಿತು. ಈ ಭಾಗದಲ್ಲಿ ರೈತರಿಗೆ ನೀರು ಪೂರೈಸಲು ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಕಾಲಕ್ರಮೇಣ ಕೃಷಿ ಕುಸಿತದಿಂದ ಅಣೆಕಟ್ಟೆಯ ನೀರಿನ ಬಳಕೆಯೂ ಕಡಿಮೆಯಾಗಿದೆ. ಇದರ ಸದುಪಯೋಗ ಪಡೆದುಕೊಂಡು ಅಣೆ ಕಟ್ಟೆಯಿಂದ ನೀರು ಕಾಯ್ದಿರಿಸುವಂತೆ ಗ್ರಾ.ಪಂ.ನಿಂದ ಬೇಡಿಕೆ ಬಂದಿಲ್ಲ ಎಂದು ನೀರಾವರಿ ಇಲಾಖೆಗೆ ತಿಳಿಸಲಾ ಯಿತು. ಡೆವಲಪರ್ಸ್‌ ಪ್ರಾಜೆಕ್ಟ್ನಿಂದ ನೀರು ಕಾಯ್ದಿರಿಸಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದೂ ತೋರಿಸ ಲಾಗಿದೆ ಎಂದು  ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಟಿಲವಾದ ಕುಡಿಯುವ ನೀರಿನ ಸಮಸ್ಯೆ :

ಕೃಷಿಗಿಂತ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗ ಜಟಿಲವಾಗುತ್ತಿದೆ. ಈ ಪ್ರದೇಶದಲ್ಲಿ ಅಂತರ್ಜಲ ಕುಸಿದಿದ್ದು, 500 ಅಡಿ ಆಳಕ್ಕೆ ಹೋಗಿ ಕೊಳವೆಬಾವಿಗಳಲ್ಲಿ ನೀರು ಬರುತ್ತಿದೆ. ಅಂತಹ ಸಮಯದಲ್ಲಿ, ಈ ಪ್ರದೇಶದ ಅನೇಕ ಹಳ್ಳಿಗಳು ಅಣೆಕಟ್ಟಿನ ನೀರಿಗಾಗಿ ಮೊರೆ ಹೋಗಿವೆ. ಆದರೆ ಈ ನೀರು ಕಾಯ್ದಿರಿಸಿರುವುದರಿಂದ ಗ್ರಾಮಸ್ಥರಿಗೆ ಅದು ಹೇಗೆ ಸಿಗುತ್ತದೆ ಎಂಬ ಸಂದಿಗ್ಧತೆ ಎದುರಾಗಿದೆ. ಪ್ರಸ್ತುತ ಸೋರಿಕೆ ತಡೆಯಲು ಅಣೆಕಟ್ಟಿನ ದುರಸ್ತಿ ಕಾರ್ಯ ನಡೆಯುತ್ತಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.

ಸರಕಾರದಿಂದ ನಿರ್ಲಕ್ಷ್ಯ ಆರೋಪ :

ಶಿರವಳಿ, ಮಾವು, ವಾಳಪ್‌, ಚಿಂದ್ರನ್‌, ಮುಳುಂಗಿ, ಮೋರ್ಬೆ, ಕೊಂಡ್ಲೆ  ಮತ್ತು ಶಿರ್ವಾಳಿ ಸಹಿತ ಪನ್ವೇಲ್‌ನ 12 ವಿವಿಧ ಬುಡಕಟ್ಟು ಗ್ರಾಮಗಳಿಗೆ  ಈ ಅಣೆಕಟ್ಟಿನ ನೀರನ್ನು ಬಳಸಿಕೊಂಡು ಜಿಲ್ಲಾಡಳಿತ ನೇರವಾಗಿ ಗ್ರಾಮಕ್ಕೆ  ನೀರು ಸರಬರಾಜು ಮಾಡಬಹುದು. ಅಣೆಕಟ್ಟಿನ ಈ ನೀರನ್ನು ಓರ್ವ  ಡೆವಲಪರ್‌ಗಾಗಿ ನೀಡುವ ಬದಲು ಸುಮಾರು 30 ಹಳ್ಳಿಗಳ ದಾಹ ನೀಗಿಸಬಹುದು. ಸಂಬಂಧಪಟ್ಟ ಡೆವಲಪರ್‌ಗಳು ಯಾವುದೇ ವಸತಿ ಯೋಜನೆಯನ್ನು ಸ್ಥಾಪಿಸದಿರುವಾಗ ಅವರ ಯೋಜನೆಗಳಿಗೆ ನೀರು ನೀಡಲು ನಿರ್ಧರಿಸುವ ಮೊದಲು ಸ್ಥಳೀಯ ಗ್ರಾಮಸ್ಥರ ನೀರಿನ ಸ್ಥಿತಿಯ ಬಗ್ಗೆ ಸರಕಾರ ಏಕೆ ಕೇಳಲಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next