Advertisement

ಹೆಸರು ಬೆಳೆಗಾರರಿಗೆ ಸರ್ಕಾರದಿಂದ ಅನ್ಯಾಯ

05:35 PM Aug 31, 2020 | Suhan S |

ಕಲಬುರಗಿ: ರಾಜ್ಯದಲ್ಲಿ ಈಗಾಗಲೇ ಹೆಸರು, ಉದ್ದು, ಸಜ್ಜೆ, ಸೋಯಾಬಿನ್‌ ಮಾರುಕಟ್ಟೆಗೆ ಬರಲಾರಂಭಿಸಿದೆ. ಆದರೂ, ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಬೆಳೆಗಳ ಖರೀದಿಗೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಸರ್ಕಾರದಿಂದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ದೂರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಉತ್ತಮ ಮುಂಗಾರು ಮಳೆಯಿಂದಾಗಿ ಫಸಲು ಚೆನ್ನಾಗಿ ಬಂದಿದೆ. ರಾಜ್ಯದ ಗದಗ, ಕಲಬುರಗಿ, ಧಾರವಾಡ, ಕೊಪ್ಪಳ, ಬೀದರ, ರಾಯಚೂರು ಸೇರಿ ಹತ್ತು ಜಿಲ್ಲೆಗಳಲ್ಲಿ 4.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಮೂರು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬಿತ್ತಲಾಗಿದೆ. ಈಗಾಗಲೇ ಶೇ.20 ಹೆಸರು ಬೆಳೆ ಬಂದಿದೆ. ಮಳೆ ನಿಂತರೆ ಶೇ.50 ಹೆಸರು ಮಾರುಕಟ್ಟೆಗೆ ಬರುತ್ತದೆ. ಉದ್ದು ಕೂಡ ಮುಂದಿನ ಎರಡು ವಾರದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದರು.

ರೈತರು ತಮ್ಮ ಬೆಳೆಯನ್ನು ಮಾರುಕಟ್ಟೆಗೆ ತರುತ್ತಿದ್ದರೂ, ಸರ್ಕಾರ ಬೆಂಬಲ ಬೆಲೆಯಡಿ ಖರೀದಿಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಬೆಂಬಲ ಬೆಲೆ ವಿಷಯವಾಗಿ ಸಂಪುಟ ಉಪಸಮಿತಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಂತಹ ಪ್ರಮುಖರು ಸೇರಿ ಕಾನೂನು, ಕೃಷಿ ಸಚಿವರು ಉಪ ಸಮಿತಿ ಸದಸ್ಯರಾಗಿದ್ದಾರೆ. ಆದರೆ, ಈವರೆಗೂ ಉಪ ಸಮಿತಿ ಸಭೆಯನ್ನೇ ನಡೆಸಿಲ್ಲ. ಸಭೆ ನಡೆಸುವ ದಿನಾಂಕವನ್ನು ನಿಗದಿ ಮಾಡಿಲ್ಲ ಎಂದು ಕಿಡಿಕಾರಿದರು.

ಸರ್ಕಾರದ ಈ ವಿಳಂಬ ನೀತಿಯಿಂದ ರೈತರು ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡುವಂತೆ ಆಗಿದೆ. ಐದು ಸಾವಿರ ರೂ.ಗೆ ಒಂದು ಕ್ವಿಂಟಾಲ್‌ ಹೆಸರು, ನಾಲ್ಕು ಸಾವಿರ ರೂ.ಗೆ ಉದ್ದು ಮಾರಲಾಗುತ್ತಿದೆ. ಇದರಿಂದ ರೈತರಿಗೆ ಸುಮಾರು ಎರಡು ಸಾವಿರ ರೂ. ನಷ್ಟವಾಗುತ್ತಿದೆ. ಇದಕ್ಕೆ ಸರ್ಕಾರವೇ ಕಾರಣವಾಗಿದೆ. ಈಗಲಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚೆತ್ತುಕೊಂಡು ಉಪಸಮಿತಿ ಸಭೆ ನಡೆಸಲು ಸಚಿವರಿಗೆ ಸೂಚಿಸಬೇಕೆಂದು ಆಗ್ರಹಿಸಿದರು.

ರೈತರ ಬಿತ್ತನೆ ಪ್ರದೇಶ ಮತ್ತು ಬೆಳೆದ ಬೆಳೆಗಳ ಅಂಕಿ-ಅಂಶಗಳಲ್ಲಿ ಅಧಿಕಾರಿಗಳು ಸಾಕಷ್ಟು ವ್ಯತ್ಯಾಸ ಮಾಡುತ್ತಿದ್ದಾರೆ. ಈ ಭಾರಿ 4.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, ಪ್ರತಿ ಹೆಕ್ಟೇರ್‌ಗೆ 10 ಕ್ವಿಂಟಾಲ್‌ ಫಸಲು ಬರುತ್ತಿದೆ. ಅಂದರೆ 4.5 ಲಕ್ಷ ಕ್ವಿಂಟಾಲ್‌ ಟನ್‌ ಫಸಲು ಬರಲಿದೆ. ಆದರೆ, ಅಧಿಕಾರಿಗಳು ಕೇವಲ 1.53 ಲಕ್ಷ ಟನ್‌ ಹೆಸರು ಬರಲಿದೆ ಎಂದು ತಪ್ಪು ಲೆಕ್ಕಾಚಾರ ತೋರಿಸಿದ್ದಾರೆ. ಇದರಿಂದಲೂ ರೈತರಿಗೆ ಅನ್ಯಾಯವಾಗಲಿದೆ. ಹೀಗಾಗಿ ಉಪ ಸಮಿತಿಯಲ್ಲಿ ಇದನ್ನು ಸರಿ ಪಡಿಸಬೇಕು.ಕೃಷಿ ಬೆಲೆ ಆಯೋಗ, ಕೃಷಿ ಇಲಾಖೆ ಅಧಿ ಕಾರಿಗಳು ಬೆಳೆ ಪ್ರದೇಶ ಹಾಗೂ ಉತ್ಪಾದನೆ ಬಗ್ಗೆ ನಿಖರ ಅಂಕಿ-ಅಂಶ ನೀಡಬೇಕೆಂದು ಒತ್ತಾಯಿಸಿದರು. ಮುಖಂಡರಾದ ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ ಹಾಜರಿದ್ದರು.

Advertisement

ಸಂಸದರು ಧ್ವನಿ ಎತ್ತಲಿ : ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಶಾಸಕರು ಮತ್ತು ಸಂಸದರು ಇದುವರೆಗೆ ಚಕಾರ ಎತ್ತದಿರುವದು ಬೇಸರ ತಂದಿದೆ. ಕಲ್ಯಾಣ ಕರ್ನಾಟಕ ಭಾಗ ಮಾತ್ರವಲ್ಲದೇ ಧಾರವಾಡ, ಗದಗ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಹೆಸರು, ಉದ್ದು ಬೆಳೆಯಲಾಗಿದೆ. ಧಾರವಾಡ ಸಂಸದ ಪ್ರಹ್ಲಾದ ಜೋಷಿ ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಆದರೂ, ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಬೆಂಬಲ ಬೆಲೆಯಡಿ ಖರೀದಿ ಆರಂಭಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ. – ಮಾರುತಿ ಮಾನ್ಪಡೆ, ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

Advertisement

Udayavani is now on Telegram. Click here to join our channel and stay updated with the latest news.

Next