ಕೆಂಗೇರಿ: ವ್ಯಾಸರಾಜರ ಸ್ಮಾರಕವಾಗಿರುವ ನವ ವೃಂದಾವನ ಸ್ಥಳವನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಸರ್ಕಾರದ್ದಾಗಿದ್ದು, ವೃಂದಾವನ ಸ್ಥಳಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂಬ ನಿರ್ಣಯವನ್ನು ಅಖಿಲ ಭಾರತ ಮಾಧ್ವ ಮಹಾಮಂಡಲ ಕೈಗೊಂಡಿದೆ ಎಂದು ಉಡುಪಿಯ ಪೇಜಾವರ ಮಠದ ಪೀಠಾಧ್ಯಕ್ಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ನಿಧಿ ಆಸೆಗಾಗಿ ಧ್ವಂಸ ಮಾಡಲಾಗಿದ್ದ ಶ್ರೀ ವಾಸರಾಜರ ವೃಂದಾವನ ಮರು ನಿರ್ಮಾಣ ಕಾರ್ಯದಲ್ಲಿ ಪೇಜಾವರ ಶ್ರೀಗಳು ಸ್ವತಃ ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ವತಿಯಿಂದ ಬುಧವಾರ ಕೆಂಗೇರಿಯಲ್ಲಿ ಶ್ರೀಗಳಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ವ್ಯಾಸರಾಜರು ನಮ್ಮೆಲ್ಲರ ಹೆಮ್ಮೆಯ ವ್ಯಕ್ತಿಯಾಗಿದ್ದು, ನಮಗೆಲ್ಲರಿಗೂ ಅವರು ಮಾರ್ಗದರ್ಶನ ಮಾಡಿದ್ದಾರೆ. ಲೌಕಿಕವಾಗಿ, ಆಧ್ಯಾತ್ಮಿಕವಾಗಿ ವ್ಯಾಸರಾಜರ ಸಾಧನೆ ಅನನ್ಯವಾದುದು ಎಂದರು.
ಸಾಮಾನ್ಯ ಜನರಿಗಾಗಿ ದಾಸ ಸಾಹಿತ್ಯವನ್ನು ಉತ್ತೇಜಿಸಿ, ಕನಕ, ಪುರಂದರರಂತಹ ದಾಸ ಶ್ರೇಷ್ಠರನ್ನು ವ್ಯಾಸರಾಜರು ನಮಗೆ ಕೊಟ್ಟಿದ್ದಾರೆ. ಶಾಸ್ತ್ರಗಳ ವಿಚಾರದಲ್ಲಂತೂ ಅವರದು ಅದ್ಭುತವಾದ ಸಾಧನೆ. ಇಂತಹ ಮಹನೀಯರ ವೃಂದಾವನವನ್ನು ರಕ್ಷಿಸಲು ಮಾಧ್ವ ಮಠಗಳ ಪೀಠಾಧ್ಯಕ್ಷರ ಜತೆಗೆ ಸರ್ಕಾರ ಹಾಗೂ ಸಾರ್ವಜನಿಕರೂ ಕೈಜೋಡಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಗೌರವಾಧ್ಯಕ್ಷ ವಿದ್ಯಾವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ, 89ರ ಇಳಿ ವಯಸ್ಸಿನಲ್ಲೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಮ್ಮ ಧರ್ಮ, ಪರಂಪರೆಯ ರಕ್ಷಣೆಗಾಗಿ ಪಾದರಸದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಆನೆಗೊಂದಿಯ ಶ್ರೀ ವ್ಯಾಸರಾಜರ ವೃಂದಾವನವನ್ನು ಕಿಡಿಗೇಡಿಗಳು ನಾಶ ಪಡಿಸಿರುವ ವಿಷಯ ತಿಳಿದು, ದೂರದ ಮುಂಬೈನಿಂದ ಹುಬ್ಬಳ್ಳಿಗೆ ಬಂದ ಶ್ರೀಗಳು, ಅಲ್ಲಿಂದ ಸರಿರಾತ್ರಿಯೇ ಆನೆಗೂಂದಿ ತಲುಪಿ, ಇತರ ಮಾಧ್ವ ಯತಿಗಳ ಜತೆಗೂಡಿ ವೃಂದಾವನ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷ ಡಾ.ಕೆ.ರಾಮಕೃಷ್ಣ, ನಿರ್ದೇಶಕರಾದ ಮುರಳೀಧರ, ಕನ್ನಡ ತಿಂಡಿ ಕೇಂದ್ರದ ಡಾ.ಕೆ.ವಿ.ರಾಮಚಂದ್ರ, ಕಲ್ಪತರು ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡಾ ಟ್ರಸ್ಟ್ ಅಧ್ಯಕ್ಷ ನ.ಶ್ರೀ.ಸುಧೀಂದ್ರರಾವ್, ಗುಂಡಣ್ಣ, ಡಾ.ರಾಜಲಕ್ಷ್ಮೀ ಪಾರ್ಥಸಾರಥಿ, ಡಾ.ವಿದ್ಯಾಶ್ರೀ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.