Advertisement

ಸರ್ಕಾರ ಬಡವರು, ರೈತರ ಉದ್ಧಾರ ಮಾಡಲ್ಲ; ಬಿ.ಟಿ.ಲಲಿತಾ ನಾಯಕ್‌

05:53 PM May 28, 2022 | Team Udayavani |

ಮಂಡ್ಯ: ಅರ್ಜಿ ಸಲ್ಲಿಸಿದ 72 ಗಂಟೆಗಳಲ್ಲಿ ಭೂಮಿ ಕೊಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳುವ ಮೂಲಕ ಉದ್ಯಮಿಗಳನ್ನು ಉದ್ಧಾರ ಮಾಡಲು ಹೊರಟಿದೆಯೇ ವಿನಃ, ಬಡವರು, ರೈತರನ್ನು ಅಲ್ಲ ಎಂದು ಮಾಜಿ ಸಚಿವೆ, ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್‌ ಆರೋಪಿಸಿದರು.

Advertisement

ಗೋಹತ್ಯೆ ಮಸೂದೆ ಜಾರಿಗೆ ತರುವ ಮೂಲಕ ಎಲ್ಲಾ ಜನರನ್ನು ಬಡತನಕ್ಕೆ ದೂಡುತ್ತಿದೆ. ಕೂಡಲೇ ಎಲ್ಲಾ ವರ್ಗದವರಿಗೆ ಮಾರಕವಾಗಿರುವ ಗೋಹತ್ಯೆ ಮಸೂದೆ ವಾಪಸ್‌ ಪಡೆಯಬೇಕು. ಉಚಿತ ಶಿಕ್ಷಣ ಮತ್ತು ಆರೋಗ್ಯವನ್ನು ನೀಡುವ ಮೂಲಕ ಖಾಸಗೀಕರಣಕ್ಕೆ ಕಡಿವಾಣ ಹಾಕಬೇಕೆಂದು ಸರ್ಕಾರವನ್ನು ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಆಗ್ರಹಿಸಿದರು.

ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಿ: ಸರ್ಕಾರ  ದಿಂದ ಗುಣಮಟ್ಟದ ಶಾಲೆಗಳನ್ನು ಪ್ರಾರಂಭಿಸಿ, ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬೇಕು. ನಿರಂತರವಾಗಿ ರಾಗಿ, ಭತ್ತ ಹಾಗೂ ಇನ್ನಿತರೆ ರೈತರ ಉತ್ಪನ್ನ ಗಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಿ ರೈತರಿಗೆ ಒಳಿತು ಮಾಡಬೇಕು ಎಂದು ಒತ್ತಾಯಿಸಿದರು.

ಟೋಲ್‌ ಗೇಟ್‌ ನಿಲ್ಲಿಸಿ: ಸರ್ಕಾರ ಅಕ್ರಮ ಗಣಿಗಾರಿಕೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಆಗುತ್ತಿರುವ ನಷ್ಟವನ್ನು ತಪ್ಪಿಸಿ ನಿಯಮಿತ ಕೃಷಿ ಮಾಡಲು ರೈತ ಸಮುದಾಯಕ್ಕೆ ಅನುವು ಮಾಡಿಕೊಡಬೇಕು. ಎಲ್ಲ ಕಡೆ ಟೋಲ್‌ಗೇಟ್‌ ಸ್ಥಾಪಿಸಿ ಜನರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಮೂಲಕ ಕೊಲ್ಲಲಾಗುತ್ತಿದೆ. ಆದ್ದರಿಂದ ಟೋಲ್‌ ಗೇಟ್‌ಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಕೃಷಿ ಪರಿಕರ, ಬೀಜ ವಿತರಿಸಿ: ಭಾರತದ ಶೇ.75 ರೈತರು ದೇಶದ ಬೆನ್ನೆಲುಬು. ಆದರೆ, ಇದೇ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ದೇಶದ ಆಹಾರ ಭದ್ರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಕೃಷಿಯಲ್ಲಿ ರೈತರನ್ನು ಉಳಿಸುವ ಅಗತ್ಯವಿದ್ದು, ಉಚಿತ ಬಿತ್ತನೆ ಬೀಜ, ಕೃಷಿ ಪರಿಕರಗಳನ್ನು ರೈತರಿಗೆ ಪೂರೈಸಬೇಕು ಎಂದು ವಿವರಿಸಿದರು.

Advertisement

ಕೃಷಿ ಕಾಯ್ದೆ ವಾಪಸ್‌ ಪಡೆಯಿರಿ: ಪಕ್ಷದ ರೈತ ವಿಭಾಗದ ರಾಜ್ಯಾಧ್ಯಕ್ಷ ಭೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರವು ತಾವು ಮಾಡಿದ ತಪ್ಪಿನ ಅರಿವಾಗಿ ರೈತರಿಗೆ ಮಾರಕವಾಗಿದ್ದ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿದ್ದು, ಅದೇ ರೀತಿ ಕರ್ನಾಟಕ ಸರ್ಕಾರ ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾಗುವಳಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.

ಉಚಿತ ವಿದ್ಯುತ್‌ ಪೂರೈಸಿ: 1978ರ ಹಿಂದಿನ ಅರಣ್ಯ ಅತಿಕ್ರಮಣಕಾರರನ್ನು ನ್ಯಾಯಾಲಯದ ಆದೇಶದ ಅನ್ವಯ ಕಾಯಂಗೊಳಿಸಬೇಕು. ಸರ್ಕಾರಿ ನೇಮಕಾತಿಯಲ್ಲಿ ರೈತರ ಮಕ್ಕಳಿಗೆ ಶೇ.10 ಮೀಸಲಾತಿ ಕಲ್ಪಿಸಬೇಕು, ರೈತರ ಮನೆಗಳಿಗೆ ಕನಿಷ್ಠ 100 ಯೂನಿಟ್‌ ಉಚಿತ ವಿದ್ಯುತ್‌ ಪೂರೈಸ ಬೇಕೆಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್‌ .ನಾಗೇಶ್‌, ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಅಬ್ದುಲ್‌ ರೌಫ್‌, ಮಂಡ್ಯ ಜಿಲ್ಲಾಧ್ಯಕ್ಷ ಹರಳಹಳ್ಳಿ ಮಹದೇವಸ್ವಾಮಿ, ರಾಮನಗರ ಜಿಲ್ಲಾಧ್ಯಕ್ಷ ಡಿ.ಎಂ.ಮಾದೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಪಿ.ರಾಜೇಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next