Advertisement

ಸಮಾನ ಶಿಕ್ಷಣ ಜಾರಿಗೊಳಿಸಲು ಸರ್ಕಾರಕ್ಕೆ ಆಗ್ರಹ

02:00 PM May 05, 2019 | Suhan S |

ಕನಕಪುರ: ಎಲ್ಲರಿಗೂ ಸಮಾನವಾದ ಶಿಕ್ಷಣವನ್ನು ಸರ್ಕಾರ ಕಲ್ಪಿಸಬೇಕು, ಏಕ ಶಿಕ್ಷಣ ಜಾರಿಯಾಗಬೇಕು ಎಂದು ಸಮಾನ ಶಿಕ್ಷಣಕ್ಕಾಗಿ ನಾಗರಿಕರ ಹೋರಾಟ ವೇದಿಕೆ ಸಂಚಾಲಕಿ ನಾಗರತ್ನ ಬಂಜಗೆರೆ ಒತ್ತಾಯಿಸಿದರು.

Advertisement

ಸರ್ಕಾರಿ ಶಾಲೆ ಉಳಿವಿಗಾಗಿ ಸಮಾನ ಶಿಕ್ಷಣಕ್ಕಾಗಿ ನಾಗರಿಕರ ಹೋರಾಟ ವೇದಿಕೆ ತಾಲೂಕಿನಲ್ಲಿ ನಡೆಸುತ್ತಿರುವ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಮಾತನಾಡಿ, ಉಳ್ಳವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೇಳಿದಷ್ಟು ಹಣ ನೀಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮಾತ್ರ ಇಂದು ಬಡವರ ಶಾಲೆಗಳಾಗಿ ಉಳಿದಿವೆ ಎಂದರು.

ವ್ಯಾಪಾರಿಕರಣವಾಗಿದೆ ಶಿಕ್ಷಣ: ಶಿಕ್ಷಣ ಎನ್ನುವುದು ವ್ಯಾಪಾರಿಕರಣವಾಗಿದ್ದು. ಎಲ್ಲಾ ಕಡೆ ಖಾಸಗಿ ಸಂಸ್ಥೆಗಳು ಪ್ರಾರಂಭಗೊಂಡಿವೆ. ಶ್ರೀಮಂತರು ಎಷ್ಟೇ ಹಣವಾದರೂ ಖಾಸಗಿ ಶಾಲೆಗೆ ಕಳಿಸುತ್ತಾರೆ. ದಾಖಲಾತಿ ಕಡಿಮೆಯೆಂದು ಸರ್ಕಾರಿ ಶಾಲೆಗಳು ಮುಚ್ಚಲು ಸರ್ಕಾರ ಮುಂದಾಗಿದೆ. ಈ ರೀತಿ ಆದರೆ ಆರ್ಥಿಕವಾಗಿ ಸಬಲವಾಗಿರದ ಬಡವರ ಮಕ್ಕಳು ಯಾವ ಶಾಲೆಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಸಮಾನ ಶಿಕ್ಷಣಕ್ಕೆ ಅವಕಾಶ ನೀಡಿ: ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ, ಸಮಾಜದಲ್ಲಿ ಸಮಾನತೆ ಸಿಗಬೇಕು ಎಂಬುದಾಗಿದೆ. ಆದರೆ, ನಾವು ಶಿಕ್ಷಣ ಕೊಡಬೇಕಾದರೆ ತಾರತಮ್ಯವೆಸಗಿದರೆ ಎಲ್ಲಿ ಸಮಾನತೆ ಮೂಡುತ್ತದೆ. ಅದಕ್ಕಾಗಿ ಎಲ್ಲರಿಗೂ ಸಮಾನವಾದ ಶಿಕ್ಷಣವನ್ನು ಸರ್ಕಾರ ಕಲ್ಪಿಸಬೇಕು, ಏಕ ಶಿಕ್ಷಣ ಜಾರಿಯಾಗಬೇಕು. ಖಾಸಗಿ ಶಾಲೆಗಳ ಸಮಾನಕ್ಕೆ ಸರ್ಕಾರಿ ಶಾಲೆಗಳು ಉನ್ನತಿಯಾಗಬೇಕು. ಈಗಿರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯದ ಜತೆಗೆ ಅವಶ್ಯವಿರುವ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಶಿಕ್ಷಣ ಇಲಾಖೆ ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಪೋಷಕರು ಕೈ ಜೋಡಿಸಿ: ಶೈಕ್ಷಣಿಕ ವ್ಯವಸ್ಥೆಯಲ್ಲಿ ಸರ್ಕಾರದ ಜತೆಗೆ ಪೋಷಕರು ಕೈ ಜೋಡಿಸಬೇಕು. ಖಾಸಗಿ ಶಾಲೆಗಳ ಸರಿ ಸಮಾನವಾಗಿ ಇಂದು ಸರ್ಕಾರಿ ಶಾಲೆಗಳು ರೂಪುಗೊಂಡಿವೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಎಲ್ಲರೂ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.

Advertisement

ಸಮಾನ ಶಿಕ್ಷಣಕ್ಕಾಗಿ ನಾಗರಿಕರ ವೇದಿಕೆಯ ಶೋಭಾ, ಹರ್ಷಲಾ, ಅಮೃತಾ, ಮಹಿಳಾ ಶಕ್ತಿ ವೇದಿಕೆಯ ವಸಂತ, ಸುನಿತಾ, ಶಾಂತ, ವಿವಿಧ ಸಂಘಟನೆಗಳ ಚೀಲೂರು ಮುನಿರಾಜು, ಕೆ.ಎಸ್‌.ಭಾಸ್ಕರ್‌, ಜಯಸಿಂಹ, ನೀಲಿ ರಮೇಶ್‌, ಎಂ.ಚಂದ್ರ, ಸಂತೋಷ, ಚಂದ್ರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next