Advertisement

ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ

03:36 PM Jul 04, 2022 | Team Udayavani |

ಗದಗ: ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಕೇಂದ್ರ ಸರ್ಕಾರ 1.40 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಮೀಸಲಿಟ್ಟಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ತಾಲೂಕಿನ ನರಸಾಪುರ ಆಶ್ರಯ ಕಾಲೋನಿಯಲ್ಲಿ ಭಾನುವಾರ ನಡೆದ 2021-22ನೇ ಸಾಲಿನ ಎಸ್‌ ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಕೌಶಾಲಾಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ 60 ದಿನಗಳ ಚರ್ಮದ ವಸ್ತುಗಳ ತಯಾರಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ ಸಹಭಾಗಿತ್ವ ಮುಖ್ಯ. ಗದಗ-ಬೆಟಗೇರಿ ಅವಳಿ ನಗರದಲ್ಲಿ ನೇಕಾರರು ಹೆಚ್ಚಿದ್ದು, ಯುವ ಜನತೆಗೆ ಟೇಲರಿಂಗ್‌ ತರಬೇತಿ ನೀಡಬೇಕು. ಟ್ರೆಂಡಿಂಗ್‌ ಹೊಲಿಗೆ ಯಂತ್ರ ತಿಳಿದಲ್ಲಿ ಹೆಚ್ಚು ಗಾರ್ಮೆಂಟ್ಸ್‌ ಕಾರ್ಖಾನೆಗಳು ಸ್ಥಾಪಿತಗೊಳ್ಳಲು ಸಹಕಾರಿಯಾಗುತ್ತವೆ. ಪರಿಶಿಷ್ಟರನ್ನು ಸ್ವಾವಲಂಬಿಗಳನ್ನಾಗಿಸಲು ಸರ್ಕಾರ ಪಣ ತೊಟ್ಟಿದೆ. ಇದಕ್ಕಾಗಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಯಿಂದ ಬಹುತೇಕ ಕುಲ ಕಸುಬುಗಳು ಕ್ರಮೇಣ ಮಾಯವಾಗುತ್ತಿವೆ. ಯುವ ಪೀಳಿಗೆ ಕುಲ ಕಸುಬುಗಳಿಂದ ವಿಮುಖಗೊಳ್ಳುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕುಲ ಕಸುಬುಗಳ ಬಗ್ಗೆ ತರಬೇತಿ ನೀಡುವ ಮೂಲಕ ಕುಲ ಕಸುಬುಗಳನ್ನು ಪೋಷಿಸುತ್ತಿದೆ ಎಂದರು.

ಆಧುನಿಕರಣದ ಪ್ಲಾಸ್ಟಿಕ್‌ ಯುಗದಲ್ಲಿಯೂ ಚರ್ಮದ ವಸ್ತುಗಳಿಗಿರುವ ಬೇಡಿಕೆ ಕಡಿಮೆಯಾಗಿಲ್ಲ. ಹೀಗಾಗಿ ಚರ್ಮದ ವಸ್ತುಗಳ ತಯಾರಿಕೆಯ ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಹೆಚ್ಚೆಚ್ಚು ಆದಾಯ ಗಳಿಸಬೇಕು. ಸ್ವಯಂ ಉದ್ಯೋಗ ಪ್ರಾರಂಭಿಸಲು ಸರ್ಕಾರ ಸಹಾಯಧನ ಒದಗಿಸುತ್ತಿದೆ. ಹೀಗಾಗಿ ತರಬೇತಿಯ ನಂತರ ಸ್ವಯಂ ಉದ್ಯೋಗ ಆರಂಭಿಸಬೇಕು. ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗಿಗಳಿಗೆ ಕೆಲಸ ಕಲ್ಪಿಸಿ ಕೊಡಬೇಕು. ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

Advertisement

ಇದೇ ವೇಳೆ ಚರ್ಮಗಾರಿಕೆ ತರಬೇತಿ ಪಡೆದ ಫಲಾನುಭವಿಗಳಿಗೆ ಸಂಸದ ಶಿವಕುಮಾರ ಉದಾಸಿ ಅವರು ಹೊಲಿಗೆಯಂತ್ರ ಹಾಗೂ ಪ್ರಮಾಣ ಪತ್ರ ವಿತರಿಸಿದರು. ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ್‌ ಅಬ್ಬಿಗೇರಿ, ಚಂದ್ರಶೇಖರ ತಡಸದ, ಲಕ್ಷ್ಮೀ ಕಾಕಿ, ಜಿಲ್ಲಾ ಸಂಯೋಜಕ ರುದ್ರೇಶ, ಹನುಮಂತಪ್ಪ ಅಳವಂಡಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next