Advertisement

ಸರಕಾರಿ ಆಸ್ಪತ್ರೆ ವೈದ್ಯರು-ಸಿಬ್ಬಂದಿ ಸೇವೆ ಅನನ್ಯ

07:07 PM Oct 23, 2021 | Team Udayavani |

ಹುಬ್ಬಳ್ಳಿ: ಕೋವಿಡ್‌ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಸೇವೆ ಅನನ್ಯವಾಗಿದ್ದು, ಖಾಸಗಿ ಆಸ್ಪತ್ರೆ, ವೈದ್ಯರಿಗೆ ಹೋಲಿಸಿದರೆ ಸರಕಾರಿ ವೈದ್ಯಕೀಯ ಸಿಬ್ಬಂದಿ ಕೈಗೊಂಡ ಸೇವೆ-ಚಿಕಿತ್ಸೆಗೆ ಬೆಲೆ ಕಟ್ಟಲಾಗದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ದೇಶದಲ್ಲಿ 100 ಕೋಟಿ ಜನರಿಗೆ ಕೋವಿಡ್‌ ಲಸಿಕೆ ಮೊದಲನೇ ಡೋಸ್‌ ನೀಡಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಹಾಗೂ ಮಕ್ಕಳಿಗೆ ನ್ಯೂಮೋನಿಯಾ ತಡೆ ನಿಟ್ಟಿನಲ್ಲಿ ನೀಡಲಾಗುವ ನ್ಯೂಮೋಕಾಕಲ್‌ ಲಸಿಕೆಗೆ ಕಿಮ್ಸ್‌ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಬ್ಲ್ಯಾಕ್‌ ಫಂಗಸ್‌ ಸಂದರ್ಭದಲ್ಲೂ ವೈದ್ಯರು ತೋರಿದ ಸೇವೆಗೆ ಸರಕಾರದ ಪರವಾಗಿ ಕೃತಜ್ಞತೆ ಸಲ್ಲಿಸುವೆ. ಕಿಮ್ಸ್‌ ಆಸ್ಪತ್ರೆಯೂ ಕೋವಿಡ್‌ ಸಂದರ್ಭದಲ್ಲಿ ತೋರಿದ ಶ್ರಮ ಶ್ಲಾಘನೀಯ. ಆರು ಜಿಲ್ಲೆಗಳ ಕೋವಿಡ್‌ ಸೋಂಕಿತರಿಗೆ ಇಲ್ಲಿ ಉತ್ತಮ ಚಿಕಿತ್ಸೆ ನೀಡಲಾಗಿದೆ ಎಂದರು.

ಭಾರತದಲ್ಲಿ 100 ಕೋಟಿ ಜನರಿಗೆ ಕೇವಲ 9 ತಿಂಗಳಲ್ಲಿ ಲಸಿಕೆ ನೀಡಿರುವುದ ಕಂಡು ಇಡೀ ಜಗತ್ತು ಬೆರಗಾಗಿದೆ. ರಾಜ್ಯದಲ್ಲಿಯೂ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಹ ಕೋವಿಡ್‌ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದರು. ಕೋವಿಡ್‌ ಮುಕ್ತ ಭಾರತ ನಿರ್ಮಾಣ ನಿಟ್ಟಿನಲ್ಲಿ ಪ್ರಧಾನಿಯವರು ಕೈಗೊಂಡ ಶ್ರಮಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರಲ್ಲದೆ, ಕೋವಿಡ್‌ ಇನ್ನು ಇದ್ದು, ವೈದ್ಯಕೀಯ ಸಿಬ್ಬಂದಿ ವಿರಮಿಸುವುದು ಬೇಡ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ ಮಾತನಾಡಿ, ಕೋವಿಡ್‌ ಲಸಿಕೆ ಸಾಧನೆಯ ಕನಸು ನನಸಾದ ದಿನ ಇದಾಗಿದೆ. ಇತಿಹಾಸದಲ್ಲಿಯೇ ವೇಗವಾಗಿ ಲಸಿಕೆ ನೀಡಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಕ್ರಮ, ಗಟ್ಟಿ ನಾಯಕತ್ವ ಕಾರಣವಾಗಿದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಶೇ.83 ಜನರು ಮೊದಲನೇ ಡೋಸ್‌ ಪಡೆದರೆ, ಶೇ.37.38 ಜನರು ಎರಡೂ ಡೋಸ್‌ ಪಡೆದಿದ್ದಾರೆ. ಕೋವಿಡ್‌ ಇಳಿಮುಖ ಆಗಿರುವುದರಿಂದ 2ನೇ ಡೋಸ್‌ ಪಡೆಯಲು ಜನ ಮುಂದೆ ಬರುತ್ತಿಲ್ಲ ಎಂದೆನಿಸುತ್ತಿದೆ. ಎರಡು ಡೋಸ್‌ ಪಡೆಯುವುದು ಕಡ್ಡಾಯವಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ದಿನಕ್ಕೆ 200-400 ಕೋವಿಡ್‌ ಕೇಸ್‌ಗಳು ಬರುತ್ತಿದ್ದು, ಕೋವಿಡ್‌ ಸಂಪೂರ್ಣವಾಗಿ ಹೋಗಿಲ್ಲ ಎಂದರು.

ಲಸಿಕೆ ನೀಡಲು ಶ್ರಮಿಸಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಈರಣ್ಣ ಜಡಿ, ಸವಿತಾ ಅಮರಶೆಟ್ಟಿ, ನಾಗೇಶ ಕಲಬುರ್ಗಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನರಾಜ್‌ ಸಿಂಗ್‌, ಆರೋಗ್ಯ ಇಲಾಖೆ ಆಯುಕ್ತ ಡಾ| ರಂದೀಪ್‌, ರಾಷ್ಟ್ರೀಯ ಆರೋಗ್ಯ ಮಿಷನ್‌ ವ್ಯವಸ್ಥಾಪಕ ನಿರ್ದೇಶಕಿ ಡಾ| ಅರುಂಧತಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪೊಲೀಸ್‌ ಆಯುಕ್ತ ಲಾಭೂ ರಾಮ್‌, ಜಿಪಂ ಸಿಇಒ ಡಾ| ಬಿ.ಸುಶೀಲಾ, ಆರೋಗ್ಯ ಮತ್ತು ಕುಟುಂಬ ಇಲಾಖೆ ಜಂಟಿ ನಿರ್ದೇಶಕ ಡಾ| ಪ್ರಭು ಬಿರಾದಾರ, ಜಿಲ್ಲಾ ವೈದ್ಯಾಧಿಕಾರಿ ಡಾ| ಯಶವಂತ ಮದೀನಕರ, ಕಿಮ್ಸ್‌ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಎಸ್‌. ಎಂ.ಹೊನಕೇರಿ ಇನ್ನಿತರರಿದ್ದರು. ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಸ್ವಾಗತಿಸಿದರು. ಡಾ| ರಾಜಶೇಖರ ದ್ಯಾಬೇರಿ ನಿರೂಪಿಸಿದರು.

ಕಿಮ್ಸ್‌ ಅಭಿವೃದ್ದಿ ಗೆ ಮಾಸ್ಟರ್‌ ಪ್ಲ್ಯಾನ್ನ್‌; ನವೆಂಬರ್‌ನಲ್ಲಿ ಸಭೆ

ಕಿಮ್ಸ್‌ಗೆ ವಿಶೇಷ ಪ್ಯಾಕೇಜ್‌, ವಿವಿಧ ಸೌಲಭ್ಯಗಳ ನಿಟ್ಟಿನಲ್ಲಿ ನವೆಂಬರ್‌
ನಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸಲಾಗುವುದು. ಕಿಮ್ಸ್‌ಗೆ ಮಾಸ್ಟರ್‌ ಪ್ಲಾನ್‌ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್‌ನಲ್ಲಿ ಇದ್ದ ಸೌಲಭ್ಯಗಳ ಬಳಕೆ ಹಾಗೂ ಸೌಲಭ್ಯಗಳ ಹೆಚ್ಚಳ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ, ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯನ್ನು ನವೆಂಬರ್‌ನಲ್ಲಿ ಕೈಗೊಂಡು ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು, ಇದ್ದ ವ್ಯವಸ್ಥೆಯಲ್ಲಿ ಹೇಗೆ ಸುಧಾರಣೆ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲಾಗುವುದು ಎಂದರು.

ಸಾಂಕ್ರಾಮಿಕ ರೋಗಗಳು ಭಾರತಕ್ಕೆ ಹೊಸತಲ್ಲ. ಕೋವಿಡ್‌ ಸ್ಫೋಟ ಸಂದರ್ಭದಲ್ಲಿ ನಿಯಂತ್ರಣಕ್ಕೆ ಲಸಿಕೆ ಸಂಶೋಧಿಸುವ ಕಾರ್ಯ ಸವಾಲು ರೂಪದ್ದಾಗಿತ್ತು. ನಮ್ಮ ವಿಜ್ಞಾನಿಗಳು ಅದನ್ನು ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸಾಂಕ್ರಾಮಿಕ ಸ್ಫೋಟ ತಡೆ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆ ಬೇಕೆಂಬ ಪಾಠವನ್ನು ಕೋವಿಡ್‌ ಕಲಿಸಿದೆ. ಜತೆಗೆ ಆರೋಗ್ಯ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಯಾಗುವಂತೆ ಮಾಡಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next