ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಮುಸ್ಲಿಂ ಸಮುದಾಯದವರನ್ನು ಮಾತ್ರ ಅಧ್ಯಕ್ಷರನ್ನಾಗಿ ನೇಮಕ ಮಾಡುವುದನ್ನು ಸಮರ್ಥಿಸಿಕೊಂಡು 2017ರ ಜು.14ರಂದು ಅಂಗೀಕರಿಸಿದ್ದ ನಿರ್ಣಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆದು ಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ಹೇಳಿದೆ.
ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಕೇವಲ ಮುಸ್ಲಿಮರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಸರತಿ ಆಧಾರದಲ್ಲಿ ಇತರೆ ಅಲ್ಪಸಂಖ್ಯಾತ ಸಮುದಾಯಗಳಿಗೂ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶಿವಮೊಗ್ಗದ ವಕೀಲ ಬಿ.ವಿನೋದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನ್ಯಾ. ರವಿ ಮಳಿಮಠ ಹಾಗೂ ನ್ಯಾ. ಬಿ.ಎಂ. ಶ್ಯಾಂಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ‘ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಮಾತ್ರ ಅಧ್ಯಕ್ಷರನ್ನು ನೇಮಕ ಮಾಡುವುದನ್ನು ಸಮರ್ಥಿಸಿಕೊಂಡು 2017ರ ಜು.14ರಂದು ಅಂಗೀಕರಿಸಿದ್ದ ನಿರ್ಣಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಲಾಗಿದೆ. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಮನವಿಯನ್ನು ಹೊಸದಾಗಿ ಪರಿಗಣಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಅಕ್ರಂ ಬಾಷಾ 2019ರ ಜ.28ರಂದು ಹೊರಡಿಸಿರುವ ಆದೇಶದ ಪ್ರತಿಯನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.
ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಆಯೋಗಕ್ಕೆ ಸರತಿ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಎಲ್ಲ ವರ್ಗದವನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಬಂಧ ಅರ್ಜಿದಾರರ ಮನವಿಯನ್ನು ಹೊಸದಾಗಿ ಪರಿಗಣಿಸಿ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಅರ್ಜಿದಾರರ ಪರ ವಕೀಲ ಎಂ. ಅರುಣ್ ಶ್ಯಾಂ ವಾದ ಮಂಡಿಸಿದ್ದರು.
ಪ್ರಕರಣವೇನು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕೇವಲ ಮುಸ್ಲೀಮರನ್ನು ಮಾತ್ರ ಅಧ್ಯಕ್ಷರನ್ನಾಗಿ ನೇಮಕ ಮಾಡುವುದನ್ನು ಆಕ್ಷೇಪಿಸಿ, ಮುಸ್ಲಿಮರಲ್ಲದೇ ಉಳಿದ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರಿಶ್ಚಿಯನ್, ಜೈನ್, ಬೌದ್ಧ ಮತ್ತು ಸಿಖ್ ಸಮುದಾಯಕ್ಕೆ ಸೇರಿದವರನ್ನು ಸರತಿ ಆಧಾರದ ಮೇಲೆ ಅವಕಾಶ ನೀಡಬೇಕು ಎಂದು ವಕೀಲ ಬಿ. ವಿನೋದ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
2017ರ ಜು.14ರ ನಿರ್ಣಯದಲ್ಲಿ ಏನಿತ್ತು
‘ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ (ತಿದ್ದುಪಡಿ) ಕಾಯ್ದೆ, 2011ರ ನಿಯಮ ಸೆಕ್ಷನ್ 3ರ ಉಪ ನಿಯಮ (2)ರ ಪ್ರಕಾರ ಅಲ್ಪಸಂಖ್ಯಾತ ಸಮುದಾಯದ ಒಬ್ಬರು ಅಧ್ಯಕ್ಷರು ಹಾಗೂ 8 ಮಂದಿ ಸದಸ್ಯರನ್ನು ಒಳಗೊಂಡಿರುತ್ತದೆ. ಇದರಲ್ಲಿ ಕ್ರೈಸ್ತ, ಜೈನ್, ಬುದ್ಧ ಹಾಗೂ ಸಿಖ್ ಸಮುದಾಯದ ತಲಾ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಉಳಿದ ಆರು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಮುಸ್ಲಿಮರ ಜನಸಂಖ್ಯೆ ಅಧಿಕವಾಗಿದೆ (ಅಂದಾಜು ಹತ್ತು ಪಟ್ಟು). ಹಾಗಾಗಿ, ಆಯೋಗ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿವರೆಗೆ ಮುಸ್ಲಿಂ ಸಮುದಾಯದವರನ್ನು ಅಧ್ಯಕ್ಷರ ನ್ನಾಗಿ ನೇಮಕ ಮಾಡುವ ಸಂಪ್ರದಾಯ ಅನುಸರಿಸಿಕೊಂಡು ಬರಲಾಗಿದೆ. 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.12.91, ಕ್ರಿಶ್ಚಿಯನ್ ಶೇ.1.87, ಜೈನ್ ಶೇ.0.72, ಸಿಖ್ ಶೇ. 0.05, ಬೌದ್ಧರು ಶೇ.0.72, ಫಾರ್ಸಿಗಳು ಶೇ. 0.1 ಇದ್ದಾರೆ. ಅಲ್ಪಸಂಖ್ಯಾತರ ಆಯೋಗ ಕಾಯ್ದೆ, 2011ರ ಪ್ರಕಾರ ತೀರ್ಮಾನ ತೆಗೆದುಕೊಳ್ಳುವ ಸಕ್ಷಮ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ. ಈ ವಿಚಾರದಲ್ಲಿ ಸಂವಿಧಾನದ ಪರಿಚ್ಛೇದ 14 ಮತ್ತು 16ರ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದಿಲ್ಲ.