Advertisement

ಕೃತಕ ಮರಳು: ಡಿಸಿಗಳ ಅಧಿಕಾರ ಕಿತ್ತುಕೊಂಡ ಸರ್ಕಾರ

06:30 AM Oct 31, 2017 | Harsha Rao |

ಬೆಂಗಳೂರು: ರಾಜ್ಯದಲ್ಲಿ “ಕೃತಕ ಮರಳು’ (ಮ್ಯಾನುಫ್ಯಾಕ್ಚರಿಂಗ್‌ ಸ್ಯಾಂಡ್‌ ಎಂ-ಸ್ಯಾಂಡ್‌) ಉತ್ಪಾದನಾ ಘಟಕಗಳಿಗೆ ಪರವಾನಗಿ ಅರ್ಜಿಗಳನ್ನು ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳ ನೇತೃತ್ವದ ಟಾಸ್ಕ್ ಫೋರ್ಸ್‌ಗೆ ನೀಡಲಾಗಿದ್ದ ಅಧಿಕಾರವನ್ನು ವಾಪಸ್‌ ಪಡೆದಿರುವ ಸರ್ಕಾರ, ಆ ಅಧಿಕಾರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಿದೆ.

Advertisement

ವಿಧಾನಸೌಧದಲ್ಲಿ ಸೋಮವಾರ ವಿದೇಶದಿಂದ ಮರಳು ಆಮದು ಮತ್ತು ಕೃತಕ ಮರಳಿಗೆ ಉತ್ತೇಜನ
ನೀಡುವ ಸಂಬಂಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, “ಇನ್ನು ಮುಂದೆ ಎಂ-ಸ್ಯಾಂಡ್‌ ಉತ್ಪಾದನಾ ಘಟಕಗಳ ಪರವಾನಗಿ ಅರ್ಜಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಇತ್ಯರ್ಥ ಮಾಡಲಿದೆ’ ಎಂದರು. ಮರಳಿನ ಕೊರತೆ ನೀಗಿಸಲು ಕೃತಕ ಮರಳು
ಉತ್ಪಾದನೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ.

ಇದಕ್ಕಾಗಿ ಕೃತಕ ಮರಳು ಘಟಕಗಳ ಸ್ಥಾಪನೆಗೆ ಪರವಾನಗಿ ಕೋರಿ ಬರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿ ಟಾಸ್ಕ್ಫೋರ್ಸ್‌ ರಚಿಸಲಾಗಿತ್ತು. ಆದರೆ, ಕಳೆದ ಎರಡು ವರ್ಷಗಳಲ್ಲಿ ಅರ್ಜಿಗಳ ಇತ್ಯರ್ಥದಲ್ಲಿ ಹೆಚ್ಚಿನ ಪ್ರಗತಿ ಕಂಡಿಲ್ಲ. ಕೇವಲ 60 ಘಟಕಗಳು ಮಾತ್ರ ಸ್ಥಾಪನೆಯಾಗಿವೆ. ಸುಮಾರು 8 ಸಾವಿರ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಜಿಲ್ಲಾಧಿಕಾರಿಗಳಿಗೆ ತಾಂತ್ರಿಕ ಮತ್ತು ವೈಜ್ಞಾನಿಕ ವಿಷಯಗಳ ಬಗ್ಗೆ
ಅಷ್ಟೊಂದು ಅನುಭವವಿಲ್ಲದಿರುವುದರಿಂದ ಅರ್ಜಿಗಳ ಇತ್ಯರ್ಥ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಹಾಗಾಗಿ ತಾಂತ್ರಿಕ ಮತ್ತು ವೈಜ್ಞಾನಿಕ ಅನುಭವ ಹೊಂದಿರುವ ಅಧಿಕಾರಿಗಳು ಇರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿಗಳ ಇತ್ಯರ್ಥದ ಅಧಿಕಾರವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಆಮದಿಗೆ ಪ್ರೋತ್ಸಾಹ: ರಾಜ್ಯದಲ್ಲಿ ಮರಳಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಂತರ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಒಟ್ಟು ಬೇಡಿಕೆ ಇರುವ 32ರಿಂದ 35 ದಶಲಕ್ಷ ಮೆಟ್ರಿಕ್‌ ಟನ್‌ನಲ್ಲಿ 9 ದಶಲಕ್ಷ ಮೆಟ್ರಿಕ್‌ ಟನ್‌ ಮಾತ್ರ ನೈಸರ್ಗಿಕ ಮರಳು ಸಿಗುತ್ತಿದೆ. ಉಳಿದ 18 ರಿಂದ 20 ದಶಲಕ್ಷ ಮೆಟ್ರಿಕ್‌ ಟನ್‌ ಮರಳನ್ನು ಕೃತಕವಾಗಿ ತಯಾರಿಸಿ ಪೂರೈಸಬೇಕಾಗುತ್ತದೆ.
ಆದ್ದರಿಂದ ಕೃತಕ ಮರಳಿನ ಜೊತೆಗೆ ವಿದೇಶದಿಂದ ನದಿ ಮರಳು ಆಮದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

ಈಗಾಗಲೇ ಎಂಎಸ್‌ಐಎಲ್‌ ಮುಂದೆ ಬಂದಿದೆ. ಬೇರೆ ಖಾಸಗಿ ಸಂಸ್ಥೆಗಳು ಮುಂದೆ ಬರಬಹುದು. ಮರಳು ಆಮದಿಗೆ ಅನುಕೂಲವಾಗುವ ದೃಷ್ಟಿಯಿಂದ “ಸಣ್ಣ ಖನಿಜಗಳ ರಿಯಾಯಿತಿ ನಿಯಮಗಳಲ್ಲಿ’ ಕೆಲವೊಂದು ಬದಲಾವಣೆಗಳನ್ನು
ತರಲಾಗಿದ್ದು, ಅವುಗಳನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಜಯಚಂದ್ರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next