Advertisement

ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ:ಡಿಕೆಶಿ

04:04 AM May 24, 2020 | Lakshmi GovindaRaj |

ಬೆಂಗಳೂರು: ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಊರುಗಳಿಗೆ ವಾಪಸ್ಸಾಗಲು ನೋಂದಾವಣಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿದ್ದ  ಹೊರ ರಾಜ್ಯಗಳ ವಲಸಿಗರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಊರಿಗೆ  ತೆರಳಲು ಕಷ್ಟಪಡುತ್ತಿರುವ ಕಾರ್ಮಿಕರು, ಹೊರರಾಜ್ಯದ ವಲಸಿಗರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ರಾಜ್ಯ ಸರ್ಕಾರ ಹೊರ ರಾಜ್ಯದ ವಲಸಿಗರಿಗೆ ರೈಲು  ಟಿಕೆಟ್‌ ವೆಚ್ಚ ಭರಿಸುವುದಾಗಿ ಹೇಳಿತ್ತು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನೆಲೆಯೂ ಇಲ್ಲದೇ ಊರಿಗೂ ತೆರಳಲೂ ಆಗದೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಕಷ್ಟಪಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಗೊಂದಲ ನಿವಾರಿಸಿದ ಸಚಿವ ಸುಧಾಕರ್‌: ಒಡಿಶಾ ಮತ್ತು ಈಶಾನ್ಯ ರಾಜ್ಯದವರು ತಮ್ಮ ಊರುಗಳಿಗೆ ಹೋಗುವ ವಿಚಾರವಾಗಿ ಉಂಟಾಗಿದ್ದ ಗೊಂದಲವನ್ನು ಗಮನಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಸ್ಥಳಕ್ಕೆ ಧಾವಿಸಿ  ಮಾಹಿತಿ ಪಡೆದರು. ಅಸಮರ್ಪಕ ಮಾಹಿತಿಯಿಂದ ಮಣಿಪುರ, ಒಡಿಶಾ ರಾಜ್ಯಗಳ ಸಾವಿರಾರು ಮಂದಿ ಶನಿವಾರ ಬೆಳಗ್ಗೆ ಅರಮನೆ ಮೈದಾನಕ್ಕೆ ಜಮಾಯಿಸಿದ್ದರು.

ಒಂದೂವರೆ ಸಾವಿರ ಮಂದಿಗೆ ಆಯಾ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿಕೊಂಡು ಸೇವಾಸಿಂಧು ಆ್ಯಪ್‌ ಮೂಲಕ ಮೊಬೈಲ್‌ಗ‌ಳಿಗೆ ಸಂದೇಶ ರವಾನಿಸಲಾಗಿತ್ತು. ಆ ಸಂದೇಶ ಪಡೆದವರೆಲ್ಲ ಅದನ್ನು ಫಾರ್ವರ್ಡ್‌ ಮಾಡಿ, ಅರ್ಜಿ ಸಲ್ಲಿಸದವರು ಅನೇಕರು ಬಂದಿದ್ದರಿಂದ ದಟ್ಟಣೆ ಉಂಟಾಗಿತ್ತು.  ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಹೊರಟ್ಟಿದ್ದ ಸಚಿವರು, ಅರಮನೆ ಮೈದಾನದಲ್ಲಿ ಜನ ದಟ್ಟಣೆ ಗಮನಿಸಿ, ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ  ಗೊಂದಲ ಬಗೆಹರಿಸಲು ಸೂಚನೆ ನೀಡಿದ್ದರು. ಎಲ್ಲರ ರಕ್ಷಣೆ ಸರ್ಕಾರದ ಜವಾಬ್ದಾರಿ ಯಾಗಿರುತ್ತದೆ. ಹೀಗಾಗಿ ಯಾರು ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೊರೊನಾ ರೋಗಕ್ಕೆ ಲಸಿಕೆ ಸಿಗುವತನಕ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿ ಗಳನ್ನು ಜನರು ತಪ್ಪದೆ ತಮ್ಮಬದುಕಿನ ಭಾಗವಾಗಿಸಿ ಕೊಳ್ಳಬೇಕು. ಲಾಕ್‌ಡೌನ್‌ ಸಡಿಲಿಕೆಯಿಂದ ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿರುವ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ರಾಜ್ಯಕ್ಕೆ ಬಂದಿದ್ದರಿಂದ  ಸೋಂಕಿತ ಪ್ರಕರಣ ಹೆಚ್ಚಾಗಿದೆ. ಯಾರೊಂದಿಗೂ ಮಾನವೀಯತೆ ಮರೆತು ವ್ಯವಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next