Advertisement

ಕೆರೆ ಸಂರಕ್ಷಣೆಗೆ ತಜ್ಞರ ಶಿಫಾರಸಿನಂತೆ ಸರ್ಕಾರ ನಡೆಯುತ್ತಿಲ್ಲ

12:10 PM Aug 23, 2017 | |

ಬೆಂಗಳೂರು: ಭಾರಿ ನೊರೆ, ಬೆಂಕಿಯಿಂದ ಆತಂಕ ಸೃಷ್ಟಿಸಿದ್ದ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ರಾಷ್ಟ್ರೀಯ ಹಸಿರು ನ್ಯಾಯಪೀಠವು ನಿರಂತರವಾಗಿ ನೀಡುತ್ತಿರುವ ನಿರ್ದೇಶನದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

Advertisement

ಬೆಳ್ಳಂದೂರು ಕೆರೆ ಸಂರಕ್ಷಣೆ ಜತೆಗೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ತಜ್ಞರನ್ನು ಒಳಗೊಂಡ ಸಮಿತಿ ಸಲ್ಲಿಸಿರುವ ಶಿಫಾರಸಿನಂತೆ ಅಲ್ಪಾವಧಿ ಕ್ರಮಗಳನ್ನು ಕಾಲಮಿತಿಯೊಳಗೆ ಕೈಗೊಳ್ಳದಿರುವ ಬಗ್ಗೆಯೂ ಅಪಸ್ವರ ಕೇಳಿಬಂದಿದ್ದು, ದೀರ್ಘಾವಧಿ ಕ್ರಮಗಳನ್ನು ತ್ವರಿತವಾಗಿ ಆರಂಭಿಸದಿರುವ ಕುರಿತೂ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

ಬೆಳ್ಳಂದೂರು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠವು ನಿರಂತರವಾಗಿ ನಿರ್ದೇಶನ ನೀಡುತ್ತಿದ್ದು, ಅದರಂತೆ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ತೃಪ್ತಿಕರವಾಗಿಲ್ಲ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಸಿಇಒ ಶ್ರೀಧರ್‌ ಪಬ್ಬಿಶೆಟ್ಟಿ ತಿಳಿಸಿದ್ದಾರೆ.

ಅಲ್ಪಾವಧಿ ಕ್ರಮಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ತಜ್ಞರ ಸಮಿತಿ ನೀಡಿದ್ದ ಶಿಫಾರಸು ಪಾಲನೆಯಾಗಿಲ್ಲ. ಕೆರೆಯಲ್ಲಿನ ಜೊಂಡು, ಕಳೆ ಸಸಿ ತೆರವುಗೊಳಿಸಿ ಅದನ್ನು ಕೆರೆ ಅಂಗಳದಲ್ಲೇ ಸುರಿಯಲಾಗಿದೆ. ಇದರಿಂದ ಭಾರಿ ಮಳೆ ಸುರಿದರೆ ಕಳೆಯೆಲ್ಲಾ ಮತ್ತೆ ಕೆರೆಗೆ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೆರೆಗೆ 17 ಕಡೆಯಿಂದ ನೀರು ಹರಿದುಬರುತ್ತದೆ. 50ಕ್ಕೂ ಹೆಚ್ಚು ಕೆರೆಗಳ ನೀರು ಕೂಡ ಹಾದು ಹೋಗುತ್ತದೆ. ಹಾಗಿದ್ದರೂ ಕೆರೆ ಸಂರಕ್ಷಣೆಗೆ ಪೂರಕವಾಗಿ ಭರವಸೆ ಹುಟ್ಟಿಸುವ ಕೆಲಸ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಸರ್ವರ ಸಮ್ಮುಖದಲ್ಲಿ ಪರಿಶೀಲನೆ ನಡೆಯಲಿ: ಜಲಮಂಡಳಿಯು ಕೊಳಚೆ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಮುಂದಾಗಿದ್ದು, ಸಂಸ್ಕರಿಸಿದ ನೀರನ್ನು ಕೆರೆಗೆ ಹರಿಸಲು ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ನಿರ್ಮಾಣವಾಗಿರುವ ಕೊಳಚೆ ನೀರು ಸಂಸ್ಕರಣಾ ಘಟಕಗಳ ಕಾರ್ಯ ನಿರ್ವಹಣೆ ಹಾಗೂ ಎಷ್ಟು ಪ್ರಮಾಣದ ನೀರು ಸಂಸ್ಕರಣೆಯಾಗಿ ಕೆರೆ ಸೇರುತ್ತಿದೆ ಎಂಬುದನ್ನು ಅಧಿಕಾರಿಗಳು, ಸ್ಥಳೀಯರು, ಪರಿಸರತಜ್ಞರ ಸಮುಖದಲ್ಲಿ ಪರಿಶೀಲಿಸಲು ಅವಕಾಶ ಕಲ್ಪಿಸಿದರೆ ಸತ್ಯಾಂಶ ಗೊತ್ತಾಗಲಿದೆ ಎಂದು ಪಬ್ಬಿಶೆಟ್ಟಿ ತಿಳಿಸಿದ್ದಾರೆ.

Advertisement

ರಾಜ್ಯ ಸರ್ಕಾರ ಬದ್ಧತೆಯಿಂದ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ತಜ್ಞರ ಸಮಿತಿ ನೀಡಿರುವ ಶಿಫಾರಸಿನಂತೆ ಕಾಲಮಿತಿಯೊಳಗೆ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಅವಕಾಶವಿದೆ. ರಾಜ್ಯ ಸರ್ಕಾರದ ಧೋರಣೆ ಬಗ್ಗೆ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ. ಇನ್ನಾದರೂ ಸರ್ಕಾರ ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next