Advertisement
ಬುಧವಾರವಷ್ಟೇ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತಾರದೆ ಸ್ಪೀಕರ್ ಮತ್ತು ಸಭಾಪತಿ ವಿಶೇಷ ಅಧಿವೇಶನ ದಿನಾಂಕ ನಿಗದಿ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಜತೆಗೆ, ಈ ಕಾರ್ಯಕ್ರಮಕ್ಕೆ 28 ಲಕ್ಷ ರೂ. ಬೇಕೇ ಎಂಬ ಬಗ್ಗೆ ಸಚಿವರು ತಗಾದೆ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯದ ನಿರ್ಧಾರವನ್ನು ಒಪ್ಪಿಕೊಳ್ಳಲು ಆಗದೇ, ಬಿಡಲೂ ಆಗದೇ ಖರ್ಚಿನ ಲೆಕ್ಕವನ್ನು ಮುಂದಿಟ್ಟುಕೊಂಡು ಸದ್ಯ ಅಧಿವೇಶನಕ್ಕೆ ತಡೆ ನೀಡಿದೆ.
Related Articles
Advertisement
ವಿಧಾನಸಭೆ ಸಚಿವಾಲಯ ಶಾಸಕಾಂಗದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಶಾಸಕಾಂಗದ ಕಾರ್ಯಕ್ರಮಗಳ ಲೆಕ್ಕವನ್ನು ಕೇಳಲು ಸರ್ಕಾರಕ್ಕೆ ಅಧಿಕಾರ ಇಲ್ಲ ಎನ್ನಲಾಗುತ್ತಿದೆ. ಶಾಸಕಾಂಗವೇ ಸರ್ಕಾರಕ್ಕೆ ಪ್ರತಿ ವರ್ಷ ಖರ್ಚು ಮಾಡಲು ಹಣ ನೀಡುತ್ತದೆ. ಹೀಗಾಗಿ ಕಾನೂನು ಸಚಿವರಿಗೆ ಶಾಸಕಾಂಗದ ಲೆಕ್ಕ ಕೇಳುವ ಅಧಿಕಾರ ಇಲ್ಲ ಎನ್ನುವುದು ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರ ವಾದ.
ಆದರೆ, ವಿಧಾನಸೌಧ ಲೋಕೋಪಯೋಗಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ವ್ಯಾಪ್ತಿಯಲ್ಲಿರುವುದರಿಂದ ಕಟ್ಟಡ ವಜ್ರಮಹೋತ್ಸವ ನಡೆಸುವ ಅಧಿಕಾರ ವಿಧಾನಸಭೆ ಸಚಿವಾಲಯಕ್ಕೆ ಇಲ್ಲ ಎಂಬ ವಾದ ಸರ್ಕಾರ ಮಾಡುತ್ತಿದೆ. ಅಲ್ಲದೇ ಬೆಳಗಾವಿಯಲ್ಲಿ ನಡೆಯುವ 10 ದಿನದ ಅಧಿವೇಶನಕ್ಕೆ 10 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಆದರೆ, ಕೇವಲ ಎರಡು ದಿನ ನಡೆಯುವ ಅಧಿವೇಶನಕ್ಕೆ 28 ಕೋಟಿ ವೆಚ್ಚ ಮಾಡುತ್ತಿರುವುದು ಹಣಕಾಸು ಇಲಾಖೆಯ ಹುಬ್ಬೇರಿಸುವಂತೆ ಮಾಡಿದೆ.
ರಾಷ್ಟ್ರಪತಿ ಬರ್ತಾರಾ ?ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು, ಈ ನಡುವೆಯೇ ಸರ್ಕಾರ ಮತ್ತು ವಿಧಾನಸಭೆ ಸಚಿವಾಲಯದ ನಡುವೆ ಸಂಘರ್ಷ ಏರ್ಪಟ್ಟಿದೆ.ಈ ರೀತಿಯ ಗೊಂದಲದ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಆಗಮಿಸುತ್ತಾರಾ ಎಂಬ ಚರ್ಚೆ ವಿಧಾನಸೌಧದ ಕಾರಿಡಾರ್‌ನಲ್ಲಿ ಕೇಳಿ ಬರುತ್ತಿದೆ. ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಯಾವುದೇ ಗೊಂದಲ ಇಲ್ಲದಿದ್ದರೆ ಮಾತ್ರ ಪಾಲ್ಗೊಳ್ಳುವ ಸಂಪ್ರದಾಯ ಇದೆ. ಸರ್ಕಾರ ಮತ್ತು ಸಚಿವಾಲಯದ ನಡುವೆಯೇ ಹೊಂದಾಣಿಕೆ ಇಲ್ಲದ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಶೇಷ ಸಂದರ್ಭದಲ್ಲಿ ಅಧಿವೇಶನ ನಡೆಸಲು ವಿಧಾನಸಭೆ ಸಚಿವಾಲಯಕ್ಕೆ ಅಧಿಕಾರ ಇದೆ. ವಿಧಾನಸಭೆ ಸಚಿವಾಲಯ ಮಾಡುವ ವೆಚ್ಚದ ವಿವರವನ್ನು ಕೇಳುವ ಅಧಿಕಾರ ಕಾನೂನು ಸಚಿವರಿಗೆ ಇಲ್ಲ. ಸರ್ಕಾರಕ್ಕೆ ಖರ್ಚು ಮಾಡಲು ಹಣ ನೀಡುವುದೇ ಶಾಸಕಾಂಗ. ಹೀಗಾಗಿ ವಜ್ರಮಹೋತ್ಸವ ಕಾರ್ಯಕ್ರಮದ ಲೆಕ್ಕವನ್ನು ಸರ್ಕಾರ ಕೇಳುವಂತಿಲ್ಲ.
– ಎಸ್. ಮೂರ್ತಿ, ವಿಧಾನಸಭೆ ಕಾರ್ಯದರ್ಶಿ. ಎರಡು ದಿನದ ಕಾರ್ಯಕ್ರಮ ಪಟ್ಟಿ ಸಿದ್ದ
ಅಕ್ಟೋಬರ್ 25 ಬುಧವಾರ
ಬೆಳಿಗ್ಗೆ 11 ಕ್ಕೆ : ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಧ್ಯಾಹ್ನ 12.30 ಕ್ಕೆ ರಾಷ್ಟ್ರಪತಿಯಿಂದ ಪರಿಷತ್ ಸಭಾಂಗಣ ವೀಕ್ಷಣೆ. ಗಾಂಧಿ ಪ್ರತಿಮೆ ಎದುರು ಶಾಸಕರೊಂದಿಗೆ ಫೋಟೊ ತೆಗೆಸಿಕೊಳ್ಳುವುದು. ಮಧ್ಯಾಹ್ನ 1.30 ಕ್ಕೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಸಕರಿಗೆ ಭೋಜನ. ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ “ವಿಧಾನಸೌಧ ಕಟ್ಟಡ ನಿರ್ಮಾಣ’ ಸಾಕ್ಷ್ಯ ಚಿತ್ರ ಪ್ರದರ್ಶನ. ಟಿ.ಎನ್ ಸೀತಾರಾಮ್ ನಿರ್ದೇಶನ ” ಕರ್ನಾಟಕ ವಿಧಾನ ಮಂಡಲ ಶಾಸನ ಸಭೆ ನಡೆದು ಬಂದ ಹಾದಿ’ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಸ್ಟರ್ ಕಿಶನ್ ನಿರ್ದೇಶನದ 3ಡಿ ವರ್ಚುವಲ್ ರಿಯಾಲಿಟಿ ವಿಡಿಯೋ ಪ್ರದರ್ಶನ. ಸಾಯಂಕಾಲ 5 ರಿಂದ 6 ಗಂಟೆವರೆಗೆ ವಿಧಾನಸೌಧದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6 ರಿಂದ 6.30 ವರೆಗೆ ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ ಮಂಜಪ್ಪ ಅವರಿಗೆ ಗೌರವ ಅರ್ಪಣೆ. ಸಂಜೆ 6.30 ರಿಂದ 8.30 ರ ವರೆಗೆ ಹಂಸಲೇಖ ತಂಡದಿಂದ ರಸ ಮಂಜರಿ ಕಾರ್ಯಕ್ರಮ ಜೊತೆಗೆ 3ಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಚಿತ್ರಗಳ ಪ್ರದರ್ಶನ. ಅಕ್ಟೋಬರ 26 ಗುರುವಾರ
ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಅಧಿವೇಶನ
ಸಂಜೆ 5 ರಿಂದ 6 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ.
ಸಂಜೆ 6 ರಿಂದ 8.30 ರ ವರೆಗೆ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ತಂಡದಿಂದ ಕರ್ನಾಟಕದ ವೈವಿದ್ಯತೆ ಕುರಿತು “ಶಾಂತಿ ಸಂಸಾರ ಸಂಗೀತ ಕಾರ್ಯಕ್ರಮ’ ಹಾಗೂ 3ಡಿ ಮ್ಯಾಪ್ ಮೂಲಕ ಸರ್ಕಾರದ ಸಾಧನೆಗಳ ಚಿತ್ರಗಳ ಪ್ರದರ್ಶನ ನಡೆಯಲಿದೆ. – ಶಂಕರ ಪಾಗೋಜಿ