Advertisement

ಮಹಿಳಾ ಶಿಕ್ಷಣಕ್ಕೆ ಸುವರ್ಣಾವಕಾಶ

04:59 PM Sep 19, 2021 | Team Udayavani |

ಸಿಂಧನೂರು: ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಪರದಾಡುವ ಪಾಲಕರ ಪಾಲಿಗೆ ಇದೊಂದು ಶುಭ ಸುದ್ದಿ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯ ಮೂಲಕವೇ ಇಲ್ಲಿನ ಪಿಜಿ ಸೆಂಟರ್‌ನಲ್ಲಿ ಇನ್ನು ಪದವಿ ತರಗತಿಗಳಿಗೆ ಪ್ರವೇಶ ಪಡೆಯಬಹುದು.

Advertisement

ರಾಯಚೂರು ಜಿಲ್ಲೆಯಲ್ಲೇ ಮೊದಲ ಬಾರಿಗೆ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಮೂಲಕ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿನ ಸರಕಾರಿ ಪದವಿ ಮಹಾವಿದ್ಯಾಲಯ ಸಮೀಪದ ಪಿಜಿ ಸೆಂಟರ್‌ನಲ್ಲಿ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಉನ್ನತ ಮಟ್ಟದ ವ್ಯಾಸಂಗದ ಕನಸು ಹೊತ್ತ ವಿದ್ಯಾರ್ಥಿನಿಯರಿಗೆ ಅಗತ್ಯವಿದ್ದ ಉನ್ನತ ಮಟ್ಟದ ಸೌಕರ್ಯಯುತ ಸರಕಾರಿ ಕಾಲೇಜು ಲಭ್ಯವಾಗಿದ್ದು, ಜಿಲ್ಲೆಯಲ್ಲೇ ಮೊದಲ ಬಾರಿಗೆ ಈ ಸೌಲಭ್ಯ ಹೊಂದಿದ ಕೀರ್ತಿ ತಾಲೂಕಿಗೆ ದಕ್ಕಿದೆ.

ಏನೇನು ಸೌಲಭ್ಯ?: ಬರೋಬ್ಬರಿ 14 ಕೋಟಿ ರೂ.ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಾತರಗತ್ತಿ ಮಾದರಿಯ ಇಲ್ಲಿನ ಅಕ್ಕಮಹಾದೇವಿ ವಿವಿ ಸೆಂಟರ್‌ ಈಗಾಗಲೇ ಬಹುತೇಕ ಗಮನ ಸೆಳೆದಿದೆ. ಪಿಜಿ ಸೆಂಟರ್‌ ಆರಂಭಿಸಿದ ಬಳಿಕ ಬಹುತೇಕ ಖ್ಯಾತಿಗೆ ಪಾತ್ರವಾಗಿದೆ. 10 ಕೋಟಿ ರೂ. ಗಳನ್ನು ವ್ಯಯಿಸಿ ಇಲ್ಲಿ ಈಗಾಗಲೇ ಮೂಲಸೌಲಭ್ಯ ಒದಗಿಸಲಾಗಿದೆ. ಇಂತಹ ಸಂಸ್ಥೆಯಲ್ಲೇ ಇದೀಗ ಪದವಿ ತರಗತಿಗಳಿಗೆ ಮಹಿಳಾ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲು ಅಕ್ಕಮಹಾದೇವಿ ವಿವಿ ಸಮ್ಮತಿ ಸೂಚಿಸಿ ಆದೇಶ ಪ್ರಕಟಿಸಿದೆ. ಅತ್ಯುನ್ನತ ದರ್ಜೆಯ ಪ್ರಯೋಗಾಲಯ, ಆಸನ ವ್ಯವಸ್ಥೆ, ಕೊಠಡಿ, ಗ್ರಂಥಾಲಯ ಹೊಂದಿರುವ ಮಾದರಿ ಕಾಲೇಜು ಇದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹೊಸ ನಿರೀಕ್ಷೆ ಗರಿಗೆದರಿದೆ.

ಇದನ್ನೂ ಓದಿ:ಕೋವಿಡ್ ಸಮಯದಲ್ಲಿ ಮನಮೋಹನ್‌ ಸಿಂಗ್ ಪಿಎಂ ಆಗಿದ್ದರೆ ಏನಾಗಿರುತ್ತಿತ್ತೋ: ಅರುಣ್ ಸಿಂಗ್ ಲೇವಡಿ

150 ಸೀಟುಗಳು ಲಭ್ಯ: 2020-21ನೇ ರಾಷ್ಟ್ರೀಯ ಶಿಕ್ಷಣ ನೀತಿ ಎನ್‌ ಇಪಿ-2020ರ ನಿಯಮಾನುಸಾರ ಇಲ್ಲಿ ಪ್ರವೇಶಾತಿ ಒದಗಿಸಲಾಗುತ್ತಿದೆ. ಪದವಿ ಕಲಾ ವಿಭಾಗಕ್ಕೆ 50 ಸೀಟು, ವಾಣಿಜ್ಯಕ್ಕೆ 50, ವಿಜ್ಞಾನ ವಿಭಾಗಕ್ಕೆ 50 ಸೀಟು ನಿಗದಿಪಡಿಸಲಾಗಿದೆ. ಸೆಪ್ಟೆಂಬರ್‌ 17ರಿಂದಲೇ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಕ್ಟೋಬರ್‌ 10, 2021 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ನಿಗದಿತ ಸೀಟುಗಳು ಭರ್ತಿಯಾದ ಬಳಿಕ ಪ್ರವೇಶಾತಿ ಪೂರ್ಣಗೊಳಿಸುವ ಕುರಿತು ಅಕ್ಕಮಹಾದೇವಿ ವಿಶ್ವವಿದ್ಯಾಲಯ ನಿರ್ಧಾರ ಪ್ರಕಟಿಸಿದೆ.

Advertisement

ಕೊರತೆ ನಿವಾರಿಸುವ ಪ್ರಯತ್ನ
ಮಹಿಳಾ ವಿದ್ಯಾರ್ಥಿನಿಯರಿಗೆ ಸರಕಾರದ ಒಂದು ಪದವಿ ಕಾಲೇಜು ಮಾತ್ರ ತಾಲೂಕಿನಲ್ಲಿದೆ. ಇದನ್ನು ಹೊರತುಪಡಿಸಿ ಇನ್ನೆರಡು ಖಾಸಗಿ ಕಾಲೇಜುಗಳಿವೆ. ಅವುಗಳನ್ನು ಬಿಟ್ಟರೆ ಪ್ರತ್ಯೇಕ ವಿದ್ಯಾರ್ಥಿನಿಯರ ಪದವಿ ಕಾಲೇಜುಗಳು ಇರಲಿಲ್ಲ. ಆದರೆ ಅವುಗಳಿಗಿಂತ ಮಿಗಿಲಾದ ವಿಶ್ವವಿದ್ಯಾಲಯ ದರ್ಜೆಯ ಸೌಲಭ್ಯ ಹೊಂದಿದ ಮಹಿಳಾ ಕಾಲೇಜು ಈ ವರ್ಷದಿಂದಲೇ ಆರಂಭವಾಗುತ್ತಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಸಿಂಧನೂರಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಪಿಜಿ ಸೆಂಟರ್‌ ಹಾಗೂ ಯುಜಿ ಸೆಂಟರ್‌ ತರುವುದು ನನ್ನ ಕನಸಾಗಿತ್ತು. ನನಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಸಾಥ್‌ ನೀಡಿದ ಪರಿಣಾಮ, ವಿವಿ ಅಧಿಕಾರಿಗಳು ಸಹಕರಿಸಿದ್ದರಿಂದ ಇದು ಸಾಧ್ಯವಾಗಿದೆ. ಬಡ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು. -ಆರ್‌.ಸಿ.ಪಾಟೀಲ್‌, ಮಾಜಿ ಸಿಂಡಿಕೇಟ್‌ ಸದಸ್ಯರು, ವಿಜಯಪುರ ಅಕ್ಕಮಹಾದೇವಿ ವಿವಿ, ಸಿಂಧನೂರು.

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next