ಒಬ್ಬ ಕೃಷಿ ಆಧಿಕಾರಿ ಸೂಟು ಬೂಟು ಧರಿಸಿಕೊಂಡು ಹಳ್ಳಿಯ ಅಂಚಿನ ರಸ್ತೆಯಲ್ಲಿ ಕಾರಿನಲ್ಲಿ ಸವಾರಿ ಹೊರಟಿದ್ದ. ಅವನ ಜೊತೆಗೆ ಪುಟ್ಟ ಮಗಳು ಮೃದುಲಾ ಕೂಡ ಇದ್ದಳು. ಅವಳು ದೈವಭಕ್ತೆಯಾಗಿದ್ದಳು. ಹಸಿರು ಗದ್ದೆ, ಪೈರು, ಹೊಳೆ ಮುಂತಾದವನ್ನು ಮಗಳಿಗೆ ತೋರಿಸಿಕೊಂಡು ಬರಲೆಂದೇ ಆ ಅಧಿಕಾರಿ ಹಳ್ಳಿಗೆ ಬಂದಿದ್ದರು. ಪ್ರಕೃತಿ ಸೊಬಗಿನ ಜೊತೆಗೆ ಮೃದುಲಾ ಹೊಲದಲ್ಲಿ ಬೆವರು ಹರಿಸಿ ದುಡಿಯುತ್ತಿದ್ದ ರೈತರನ್ನೂ ನೋಡಿದಳು. ಅವರಿಗೆ ಸಹಾಯ ಮಾಡುತ್ತಿದ್ದ ಪುಟ್ಟ ಮಕ್ಕಳನ್ನೂ ನೋಡಿದಳು. ಅವರ ಮುರುಕಲು ಚಿಕ್ಕ ಗುಡಿಸಲುಗಳನ್ನು ನೋಡಿದಾಗ ಅವಳಿಗೆ ಯಾಕೋ ರೈತರ ಮೇಲೆ ಕನಿಕರ ಮೂಡಿತು.
ಮೃದುಲಾ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸುಬ್ಬಯ್ಯ ಎಂಬ ರೈತನ ಬಳಿಗೆ ಹೋಗಿ, ಅವನ ಯೋಗಕ್ಷೇಮ ವಿಚಾರಿಸಿದಳು. ಅವನ ಜೀವನ ಹೇಗೆ ನಡೆಯುತ್ತಿದೆ? ಎಂದು ಕೇಳಿದಳು. ಬಹುಕಷ್ಟದಿಂದ ಅವನ ಸಂಸಾರ ಸಾಗುತ್ತಿತ್ತು. ಬೆಳೆ ಬರದಿರುವುದು ಒಂದು ಸಮಸ್ಯೆಯಾದರೆ, ಬೆಳೆ ಸರಿಯಾಗಿ ಬಂದರೂ ಅದಕ್ಕೆ ಉತ್ತಮ ಬೆಲೆ ಸಿಗದಿರುವುದು ಇನ್ನೊಂದು ಸಮಸ್ಯೆ. ಹೀಗೆ ಮುಂದುವರಿದರೆ ತಾನು ಪಟ್ಟಣಕ್ಕೆ ಹೋಗುವುದಾಗಿ ಸುಬ್ಬಯ್ಯ ಹೇಳಿಕೊಂಡ.
ಮೃದುಲಾ ಅಪ್ಪನ ಬಳಿ ತೆರಳಿ ಈ ರೈತರಿಗೆ ಸಹಾಯ ಮಾಡುವಂತೆ ಕೇಳಿಕೊಂಡಳು. ಆದರೆ ಅಪ್ಪ ನಿರಾಸಕ್ತಿ ತೋರಿದರು. ಇದು ಮೃದುಲಾಳಿಗೆ ಇಷ್ಟವಾಗಲಿಲ್ಲ. ಬಡರೈತ ಸುಬ್ಬಯ್ಯನ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕೆಂದು ಅವಳಿಗೆ ಅನಿಸಿತು. ಇದೇ ಸ್ಥಿತಿ ಮುಂದುವರಿದರೆ ಸುಬ್ಬಯ್ಯ ಕೃಷಿ ಮಾಡುವುದನ್ನೇ ನಿಲ್ಲಿಸಿ ಗುಳೇ ಹೊರಡುತ್ತಾರೆಂಬುದು ಮೃದುಲಾ ಪುಟ್ಟ ಮನಸ್ಸಿಗೆ ತಿಳಿದುಹೋಯಿತು. ಆದರೆ, ಹಾಗೆಂದು ಹಣ ಸಹಾಯ ಮಾಡುವ ಹಾಗಿರಲಿಲ್ಲ. ಏಕೆಂದರೆ ಅದು ಬಡತನ ನೀಗಿಸಲೆಂದು ಮಾಡಿದ ಸಹಾಯ ಎಂದು ಸುಬ್ಬಯ್ಯ ತಿಳಿಯಬಾರದು ಎಂಬುದು ಮೃದುಲಾಳ ಇಂಗಿತವಾಗಿತ್ತು. ಅದಕ್ಕೇ ಅವಳು ಒಂದು ಉಪಾಯ ಹೂಡಿದಳು.
ಮರುದಿನ ಕೊರವಂಜಿಯ ವೇಷ ಹಾಕಿಕೊಂಡು ಸುಬ್ಬಯ್ಯನ ಮನೆಗೆ ಹೋದಳು ಮೃದುಲಾ. ಸುಬ್ಬಯ್ಯನ ಪತ್ನಿ ಕೊರವಂಜಿ ಭವಿಷ್ಯ ಕೇಳಲು ಮುಂದೆ ಬಂದಳು. ಆಗ ಮೃದುಲಾ “ಊರಾಚೆ ಒಂದು ಆಲದ ಮರ ಐತೆ. ನಾಳೆ ಬೆಳಿಗ್ಗೆ 6 ಗಂಟೆಗೆ ಅದರ ಮುಂದೊØàಗಿ ಬೇಡಿಕೊಳ್ಳಿ. ನಿಮ್ಮ ಕೆಲಸಾನ ಪರಮಾತ್ಮ ಮೆಚ್ಚಿದ್ದರೆ ಬಂಗಾರದ ನಾಣ್ಯಗಳ ಮಳೆ ಸುರಿಸ್ತಾನೆ’ ಅಂದಳು. ಸಂತುಷ್ಟಳಾದ ಸುಬ್ಬಯ್ಯನ ಪತ್ನಿ ಒಳಕ್ಕೆ ಹೋಗಿ ಮೃದುಲಾಳ ಜೋಳಿಗೆ ತುಂಬುವಷ್ಟು ಅಕ್ಕಿ ಸುರಿದಳು.
ಸುಬ್ಬಯ್ಯನಿಗೆ ಯಾಕೋ ಕೊರವಂಜಿ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಆದರೆ ಪತ್ನಿಯ ಒತ್ತಾಯಕ್ಕೆ ಮಣಿದು ಅವರಿಬ್ಬರೂ ಮಾರನೇ ದಿನ ಊರಾಚೆಯಿದ್ದ ಆಲದ ಮರದ ಬಳಿ ತೆರಳಿದ. ತನ್ನ ಕಷ್ಟ ನೀಗಿಸೆಂದು ದೇವರನ್ನು ಪ್ರಾರ್ಥಿಸಿದ. ಏನಾಶ್ಚರ್ಯ ಚಿನ್ನದ ನಾಣ್ಯಗಳು ಮೇಲಿಂದ ಬೀಳತೊಡಗಿದವು. ದೇವರ ಮಹಿಮೆಗೆ ತಲೆಬಾಗಿದ ಸುಬ್ಬಯ್ಯ ತಾನು ಕೃಷಿಯನ್ನು ಬಿಟ್ಟು ಪಟ್ಟಣ ಸೇರಲು ಸಿದ್ಧನಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ. ಇಲ್ಲೇ ಇದ್ದು ಕೃಷಿ ಕೆಲಸದಲ್ಲಿ ಚೆನ್ನಾಗಿ ತೊಡಗಿಸಿಕೊಳ್ಳುವೆನೆಂದು ವಾಗ್ಧಾನ ಮಾಡಿ ಚಿನ್ನದ ನಾಣ್ಯಗಳೊಂದಿಗೆ ಮನೆಗೆ ಮರಳಿದ.
ಆವತ್ತಿನಿಂದ, “ಆಲದ ಮರದಲ್ಲಿ ಬಂಗಾರದ ದೇವತೆ ಇದ್ದಾಳೆ. ರೈತರು ಕೋರಿಕೊಂಡದ್ದನ್ನು ನೆರವೇರಿಸಿಕೊಡುತ್ತಾಳೆ’ ಗಾಳಿ ಸುದ್ದಿ ಹಳ್ಳಿಯಲ್ಲಿ ಹಬ್ಬಿತು. ಕೃಷಿ ಬಿಡಬೇಕೆಂದಿದ್ದ ಬಹಳಷ್ಟು ರೈತರು ತಮ್ಮ ನಿರ್ಧಾರವನ್ನು ಬದಲಿಸಿದರು.
ತಾನು ಆಲದ ಮರ ಹತ್ತಿ, ಸುಬ್ಬಯ್ಯನ ಮೇಲೆ ಚಿನ್ನದ ನಾಣ್ಯಗಳನ್ನು ಉದುರಿಸಿದ್ದು ತುಂಬಾ ಒಳ್ಳೆಯದಾಯೆ¤ಂದು ಮೃದುಲಾ ಹಿರಿ ಹಿರಿ ಹಿಗ್ಗಿದಳು.
– ವನರಾಗ ಶರ್ಮಾ, ಯಲ್ಲಾಪುರ