Advertisement

ಪತಿಯ ಬಳಿ ಇದ್ದ ಚಿನ್ನದ ಗಟ್ಟಿ ಕದ್ದು ಪತ್ನಿ ಪೊಲೀಸರ ಅತಿಥಿ 

12:14 PM Jul 05, 2017 | |

ಬೆಂಗಳೂರು: ಪತಿಗೆ ಮಂಪರು ಬರುವ ಔಷಧ ನೀಡಿ ಆತನ ಬಳಿ ಇದ್ದ 1ಕೆ.ಜಿ ಚಿನ್ನದ ಗಟ್ಟಿ ಕಳವು ಮಾಡಿದ್ದ ಪತ್ನಿಯನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸೂರು ನಿವಾಸಿ ನಾಗಲಕ್ಷ್ಮೀ(28) ಬಂಧಿತ ಮಹಿಳೆ. ಈಕೆಯ ಪತಿ ಮುನಿಯಪ್ಪನ್‌ ಚೆಮ್ಮನೂರು ಜ್ಯುವೆಲರ್‌ನಲ್ಲಿ ನೌಕರನಾಗಿದ್ದು, ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಚಿನ್ನ ಸಾಗಿಸುವ ಹೊಣೆ ವಹಿಸಿಕೊಂಡಿದ್ದ. 

Advertisement

ಫೆ.20ರ ರಾತ್ರಿ 8 ಗಂಟೆಗೆ ಎಸ್‌.ಜೆ.ಪಾರ್ಕ್‌ ರಸ್ತೆ ಯುನಿಟಿ ಬಿಲ್ಡಿಂಗ್‌ನಲ್ಲಿರುವ ಚೆಮ್ಮನೂರು ಜ್ಯುವೆಲರ್‌ ಮಳಿಗೆಯಿಂದ 1 ಕೆ.ಜಿ.200 ಗ್ರಾಂ ಚಿನ್ನದ ಗಟ್ಟಿಯನ್ನು ತಮಿಳುನಾಡಿನ ಕೊಯಮತ್ತೂರಿಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮನೆಗೆ ಹೋಗಿದ್ದರು. ಆಗ ಪತ್ನಿ ನಾಗಲಕ್ಷ್ಮಿ ತಾನೂ ಕೊಯಮತ್ತೂರಿಗೆ ಬರುವುದಾಗಿ ಹೇಳಿದ್ದರಿಂದ ಪತ್ನಿಯನ್ನು ಕರೆದುಕೊಂಡು ಚಿನ್ನದ ಗಟ್ಟಿಯೊಂದಿಗೆ ಖಾಸಗಿ ಬಸ್‌ನಲ್ಲಿ ಮುನಿಯಪ್ಪನ್‌ ಕೋಯಮತ್ತೂರಿಗೆ ಹೊರಟರು. 

ಆಹಾರದಲ್ಲಿ ನಿದ್ದೆ ಮಾತ್ರೆ
ಊಟಕ್ಕಾಗಿ ಸೇಲಂನಲ್ಲಿ ಬಸ್‌ ನಿಲ್ಲಿಸಿದಾಗ ಪತಿಗೆ ಕಾಣದಂತೆ ಪತ್ನಿ ಆಹಾರದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದಳು. ಊಟದ ನಂತರ ಮುನಿಯಪ್ಪನ್‌ ಬಸ್‌ನಲ್ಲಿ ನಿದ್ದೆಗೆ ಜಾರಿದ್ದರು. ನಂತರ ಆಕೆ, ಚಿನ್ನದ ಗಟ್ಟಿ ಇದ್ದ ಪೆಟ್ಟಿಗೆಯನ್ನು ತೆರೆದು 1 ಕೆಜಿ ಚಿನ್ನದ ಗಟ್ಟಿಯನ್ನು ತನ್ನ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದಳು.  ಸ್ವಲ್ಪ ಹೊತ್ತಿನ ಬಳಿಕ ಪತಿಯನ್ನು ಎಚ್ಚರಗೊಳಿಸಿ ಚಿನ್ನದ ಗಟ್ಟಿ ಕಳುವಾಗಿರುವ ಬಗ್ಗೆ ತಿಳಿಸಿದಳು.  ಗಾಬರಿಗೊಂಡ ಮುನಿಯಪ್ಪನ್‌ ಕಂಡಕ್ಟರ್‌ಗೆ ವಿಷಯ ತಿಳಿಸಿ ಪ್ರಯಾಣಿಕರ ಬ್ಯಾಗ್‌ ಮತ್ತು ಜೇಬು ಪರಿಶೀಲನೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾಗಿಲ್ಲ.

ಪತ್ನಿಯ ಹೈಡ್ರಾಮಾ
ಇದೇ ವೇಳೆ ಪತ್ನಿ ನಾಗಲಕ್ಷ್ಮಿ ನನಗೆ ಭಯವಾಗುತ್ತಿದೆ. ವಾಪಸ್‌ ಮನೆಗೆ ಹೋಗುತ್ತೇನೆ. ನೀವು ತಮಿಳುನಾಡು ಪೊಲೀಸರಿಗೆ ದೂರು ಕೊಟ್ಟು ಮನೆಗೆ ಬರುವಂತೆ ಹೇಳಿ ಮಾರ್ಗಮಧ್ಯೆಯೇ ಇಳಿದು ವಾಪಸ್‌ ನಗರಕ್ಕೆ ಬಂದಿದ್ದಾಳೆ. ಮುನಿಯಪ್ಪನ್‌ ದೂರು ಕೊಡಲು ಹೋದಾಗ ತಮಿಳುನಾಡು ಪೊಲೀಸರು, ಬೆಂಗಳೂರಿನಲ್ಲೇ ದೂರು ಕೊಡುವಂತೆ ವಾಪಸ್‌ ಕಳುಹಿಸಿದ್ದರು. ಅದರಂತೆ ಚೆಮ್ಮನೂರು ಜ್ಯುವೆಲರ್‌ ವ್ಯವಸ್ಥಾಪಕ ವಿಲ್ಸನ್‌ ಒನೋನಿ ಎಸ್‌.ಜೆ.ಪಾರ್ಕ್‌ ಠಾಣೆಗೆ ಫೆ.21ಕ್ಕೆ ದೂರು ಕೊಟ್ಟಿದ್ದರು.

ಅಲ್ಲದೆ, ವಿಚಾರಣೆ ವೇಳೆ ಮುನಿಯಪ್ಪನ್‌ ತನ್ನ ಪತ್ನಿ ನಾಗಲಕ್ಷ್ಮಿ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಕೂಡಲೇ ನಾಗಲಕ್ಷಿಯನ್ನು ವಿಚಾರಣೆ ನಡೆಸಿದಾಗ ಆರಂಭದಲ್ಲಿ ತನಗೇನು ಗೊತ್ತಿಲ್ಲ ಎಂದು ಹೇಳಿದ್ದ ಆಕೆ, ಠಾಣೆಯಲ್ಲೇ ರಂಪಾಟ ಮಾಡಿದಳು. ಇದರಿಂದ ಗೊಂದಲಕ್ಕೊಳಗಾದ ತನಿಖಾಧಿಕಾರಿಗಳು ವಾಪಸ್‌ ಕಳುಹಿಸಿ ಆದರೂ ಈಕೆಯ ಬಗ್ಗೆ ನಿಗಾವಹಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದರು.

Advertisement

ಈ ಮಧ್ಯೆ ನಾಗಲಕ್ಷಿ ಪತಿಯ ಕಣ್ಣು ತಪ್ಪಿಸಿ ಮನೆಯಲ್ಲೇ ಬಚ್ಚಿಟ್ಟಿದ್ದ ಚಿನ್ನದ ಗಟ್ಟಿಯನ್ನು ಚಿನ್ನಾಭರಣ ಮಳಿಗೆಯೊಂದರಲ್ಲಿ ಮಾರಾಟ ಮಾಡಲು ಯತ್ನಿಸಿದ್ದು, ಗಿರವಿ ಅಂಗಡಿ ಮಾಲೀಕ ಖರೀದಿಗೆ ಹಿಂದೇಟು ಹಾಕಿದ್ದಾನೆ. ನಂತರ ಆಕೆ ಸಾಲ ಕೊಟ್ಟಿದ್ದ ವ್ಯಕ್ತಿಗೆ ಕರೆ ಮಾಡಿ ಹಣದ ಬದಲಿಗೆ ಚಿನ್ನದ ಗಟ್ಟಿ ಕೊಟ್ಟಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಜುಲೈ 3ರಂದು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಮಾಡಿದ್ದ 5 ಲಕ್ಷ ರೂ. ಸಾಲ ತೀರಿಸಲು ಕೃತ್ಯವೆಸಗಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಪ್ರತಿಭಟನೆ
ಪತಿ ಮುನಿಯಪ್ಪನ್‌ ಕೊಟ್ಟ ಮಾಹಿತಿಯನ್ನಾಧರಿಸಿ ನಾಗಲಕ್ಷ್ಮಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆದರೆ, ಇದಕ್ಕೂ ಮೊದಲು ನಾಗಲಕ್ಷ್ಮಿ ಹೊಸೂರು ಮತ್ತು ನಗರದಲ್ಲಿರುವ ಪರಿಚಯಸ್ಥರು ಮತ್ತು ಸಂಬಂಧಿಕರನ್ನು ಠಾಣೆ ಬಳಿ ಕರೆಸಿಕೊಂಡು ಎಸ್‌.ಜೆ.ಪಾರ್ಕ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಳು. ಇದರಿಂದ ಮುಜುಗರಗೊಂಡ ಪೊಲೀಸರು ಆಕೆಯನ್ನು ಬಿಟ್ಟು ಕಳುಹಿಸಿ, ನಿಗಾವಹಿಸಿದ್ದರು.

ತಾಯಿ ಕೊಟ್ಟ ಮಾಹಿತಿ
ಆರೋಪಿ ನಾಗಲಕ್ಷ್ಮಿ ತನ್ನ ತಾಯಿಯ ಸ್ನೇಹಿತನ ಬಳಿಯೇ ಸಾಲ ಪಡೆದಿದ್ದಳು. ಚಿನ್ನದ ಗಟ್ಟಿ ಮಾರಲು ಸಾಧ್ಯವಾಗದೆ ಗಟ್ಟಿಯನ್ನೇ ಆತನಿಗೆ ಕೊಟ್ಟು ಸಾಲ ತೀರಿಸಿದ್ದಳು. ಆತ ಇದನ್ನು ನಾಗಲಕ್ಷ್ಮಿ ತಾಯಿಗೆ ತಿಳಿಸಿದ್ದ. ಇದರಿಂದ ಅನುಮಾನಗೊಂಡ ನಾಗಲಕ್ಷ್ಮಿ ತಾಯಿ ತನ್ನ ಅಳಿಯ ಮುನಿಯಪ್ಪನ್‌ಗೆ ತಿಳಿಸಿದ್ದಳು. ನಂತರ ಮುನಿಯಪ್ಪನ್‌ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next