Advertisement

ವ್ಯಕ್ತಿತ್ವ ವಿಕಸನ ವೀರಶೈವ ಧರ್ಮದ ಗುರಿ

09:42 AM Jul 20, 2017 | |

ದಾವಣಗೆರೆ: ವೀರಶೈವ ಧರ್ಮವೇ ಶಿವಾಗಮಗಳ ಮೂಲ ಬೇರಾಗಿದ್ದು, ವ್ಯಕ್ತಿತ್ವ ವಿಕಸನವೇ ಈ ಧರ್ಮದ ಪರಮ ಗುರಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದ್ದಾರೆ.

Advertisement

ನಗರದ ಅಭಿನವ ರೇಣುಕ ಮಂದಿರದಲ್ಲಿ ಶ್ರೀಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ
ಸಮಾವೇಶದ 2ನೇ ದಿನದ (ಬುಧವಾರ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು, ಶಿವಾಗಮಗಳ ಪೈಕಿ ವೀರಶೈವ ಧರ್ಮದಲ್ಲಿ ಮೂಲ ಬೇರುಗಳಿವೆ. ಈ ಧರ್ಮದ ದಾರ್ಶನಿಕತೆ ಎಲ್ಲ ಧರ್ಮಗಳಿಗೆ ತಾಯಿ ಬೇರು. ಮನುಷ್ಯನ ವ್ಯಕ್ತಿತ್ವ ವಿಕಸನವೇ ವೀರಶೈವ ಧರ್ಮದ ಪರಮ ಗುರಿಯಾಗಿದೆ ಎಂದರು.

ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರ ಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶದ ಸಂಚು ನಡೆಯುತ್ತಿದೆ.
ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ದೇಶ ಉಳಿದರೆ ಧರ್ಮ, ಸಂಸ್ಕೃತಿ ಉಳಿದು, ಬೆಳೆದು ಬರಲು ಸಾಧ್ಯ
ಎಂದು ಅವರು ತಿಳಿಸಿದರು.

ದೇವರ ಮೇಲಿನ ನಂಬಿಕೆ ಬಾಳಿಗೆ ಶಾಶ್ವತ ಆಶಾದೀಪ. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ
ಜೀವನ ಸಾರ್ಥಕ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಧರ್ಮ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾ ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ ಮತ್ತು ಧ್ಯಾನ ಎಂಬ ದಶಸೂತ್ರಗಳು ಎಲ್ಲರ ಬಾಳಿಗೆ ದಾರಿದೀಪ. ಈ ಸೂತ್ರಗಳು ಕಾಯಕ ಮತ್ತು ದಾಸೋಹದ ಮೂಲಕ ಭಾವೈಕ್ಯತೆ ಸಾಮರಸ್ಯ ಬೆಳೆಸಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು. 

ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ವೀರಶೈವ
ಧರ್ಮದ ಇತಿಹಾಸ ಮತ್ತು ಪಂಚಪೀಠಗಳ ಉನ್ನತ ಪರಂಪರೆಯ ಬಗ್ಗೆ ಮಾತನಾಡಿದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಎಪಿಎಂಸಿ ಮಾಜಿ ಸದಸ್ಯ ಎನ್‌.ಜಿ. ಪುಟ್ಟಸ್ವಾಮಿ, ಬಿಜೆಪಿ ಮುಖಂಡರಾದ
ಎಚ್‌.ಎಸ್‌.ನಾಗರಾಜ್‌, ಅಣಬೇರು ಜೀವನಮೂರ್ತಿ, ಎಚ್‌.ಕೆ. ಬಸವರಾಜ, ಮುಖಂಡ ಡಿ.ಎಂ.ಹಾಲಸ್ವಾಮಿ ವೇದಿಕೆಯಲ್ಲಿದ್ದರು. ನಗರ ಸಭೆ ಮಾಜಿ ಸದಸ್ಯ ಬಿ. ವೀರಣ್ಣನವರಿಗೆ ಕಾಯಕಯೋಗಿ ಬಿರುದು ಹಾಗೂ ಶಿವಧೀಕ್ಷೆ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next