Advertisement

ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯವಾಗಿಸುವ ಗುರಿ: ಕತ್ತಿ

09:32 PM Oct 02, 2021 | Team Udayavani |

ಬೆಂಗಳೂರು: ಕರ್ನಾಟಕವನ್ನು ಬರುವ ದಿನಗಳಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯವನ್ನಾಗಿ ಮಾಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.

Advertisement

ನಗರದ ಕಬ್ಬನ್‌ ಪಾರ್ಕ್‌ ನಲ್ಲಿ ಆಯೋಜಿಸಲಾಗಿದ್ದ 67ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರಸ್ತುತ ಶೇ.20ರಷ್ಟು ಅರಣ್ಯ ಪ್ರದೇಶವಿದೆ. ಈ ಪ್ರಮಾಣವನ್ನು ಶೇ.30ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ವನ್ಯಜೀವಿ ಹಾಗೂ ಕಾಡಿನ ರಕ್ಷಣೆಯ ಬಗ್ಗೆ ನಮ್ಮಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ. ಕಾಡು ಉಳಿದರೆ ಮಾತ್ರ ನಾವು ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯ. ಕರ್ನಾಟಕ ಗಂಧದ ನಾಡು ಎಂಬ ಕೀರ್ತಿ ಹೊಂದಿದೆ. ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅರಣ್ಯ ಇಲಾಖೆಯು ಕರ್ನಾಟಕವನ್ನು ಬರುವ ದಿನಗಳಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:“ಮದುವೆಗಳ ಬದಲಿಗೆ ವಿಚ್ಛೇದನಗಳನ್ನು ಸಂಭ್ರಮಿಸಬೇಕು” : ರಾಮ್ ಗೋಪಾಲ್ ವರ್ಮಾ

ಯುಗಗಳಿಂದ ಮಾನವ ವನ್ಯಜೀವಿಗಳ ಜೊತೆಗೆ ಸೌಹಾರ್ದ ಬಾಂಧವ್ಯವನ್ನು ಬೆಳೆಸಿಕೊಂಡೆ ಬಂದಿದ್ದಾನೆ. ಇಂದು ವನ್ಯಜೀವಿಗಳ ರಕ್ಷಣೆ ಅಗತ್ಯವಾಗಿದೆ. ವನ್ಯಜೀವಿಗಳ ಸಂರಕ್ಷಣೆಗೆ ಕಾಡು ಕೂಡಾ ಸುರಕ್ಷಿತವಾಗಿರಬೇಕು. ಆಗ ಮಾತ್ರ ನಮಗೆಲ್ಲಾ ಶುದ್ಧ ಗಾಳಿ, ಆಹಾರ, ನೀರು ಸಿಗುವುದಕ್ಕೆ ಸಾಧ್ಯ. ಆಯುರ್ವೇದದಲ್ಲಿ ಅರಣ್ಯದಲ್ಲಿ ಸಿಗುವ ವಿವಿಧ ಸಸ್ಯ ಸಂಕುಲ, ಹೂವು, ಹಣ್ಣುಗಳಲ್ಲಿರುವ ಔಷಧ ಗುಣಗಳ ಬಗ್ಗೆ ಮಹತ್ವ ತಿಳಿಸಲಾಗಿದೆ. ಅರಣ್ಯವನ್ನ ಪೂಜಿಸುವ ಸಂಪ್ರದಾಯ ನಮ್ಮಲ್ಲಿ ಜಾರಿಯಲ್ಲಿದೆ. ವನ್ಯ ಜೀವಿ ಸಂರಕ್ಷಣಾ ಅಧಿನಿಯಮದ ಮೂಲಕ ವನ್ಯಜೀವಿಗಳ ರಕ್ಷಣೆಗೆ ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ಹಲವು ಯೋಜನೆಗಳ ಮೂಲಕ ಅರಣ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯು ವನ ಹಾಗೂ ವನ್ಯಜೀವಿ ಸಂರಕ್ಷಣೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಅರಣ್ಯ ಪಡೆ ಮುಖ್ಯಸ್ಥ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್‌ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೀನಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ; ಜಾಗೃತಿ
ಇದೇ ಸಂದರ್ಭದಲ್ಲಿ ಅಳಿವಿನ ಅಂಚಿನಲ್ಲಿರುವ ಮೀನಿನ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಆ ನಂತರದಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಲು ಕಬ್ಬನ್‌ ಪಾರ್ಕ್‌ ನಿಂದ ಲಾಲ್‌ ಬಾಗ್‌ವರೆಗಿನ ಜಾಗೃತಿ ಜಾಥಾ ನಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next