Advertisement

ಅನರ್ಹ ಶಾಸಕರನ್ನು ಸೋಲಿಸುವುದೇ ಕಾಂಗ್ರೆಸ್‌ ಗುರಿ

10:28 PM Nov 03, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಪಕ್ಷದಿಂದ ಎಲ್ಲವನ್ನೂ ಪಡೆದು ಕೊನೆಗೆ ಪಕ್ಷ ಕಷ್ಟ ಕಾಲದಲ್ಲಿ ಇದ್ದಾಗ ಪಕ್ಷಕ್ಕೆ ದ್ರೋಹ ಬಗೆದ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸುವುದು ಕಾಂಗ್ರೆಸ್‌ ಪಕ್ಷದ ಗುರಿ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ವಿ.ಸಿ.ವಿಷ್ಣನಾಥನ್‌ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದಿ ಅಂಜನಪ್ಪ ಪರ ಭಾನುವಾರ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದ ಬಳಿಕ ಹಾರೋಬಂಡೆಯ ಶಿರಡಿಸಾಯಿ ಆಶ್ರಮದಲ್ಲಿ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ತೀರ್ಪು ಏನೇ ಬರಲಿ, ಆದರೆ ಅನರ್ಹರನ್ನು ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಹೇಳಿದರು.

ಬಿಜೆಪಿ ಆಮಿಷಕ್ಕೆ ಬಲಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಠ ಹಿಡಿದು ಸುಧಾಕರ್‌ರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಮಾಡಿದರು. ಅವರ ಅಧಿಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ಕ್ಷೇತ್ರಕ್ಕೆ ನೀಡಿದರು. ಕೊನೆಗೆ ಅವರ ಮಾತಿಗೂ ಬೆಲೆ ಕೊಡದೆ ಬಿಜೆಪಿ ಆಮಿಷಕ್ಕೆ ಬಲಿಯಾದರು. ಈಗ ಬಿಜೆಪಿ ಪಕ್ಷದಲ್ಲಿ ಸಮುದ್ರದ ನೀರಿನಿಂದ ದಡಕ್ಕೆ ಹಾಕಿದ ಮೀನಿನಂತೆ ನರಳುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ದೂರಿದರು.

ಅನರ್ಹ ಶಾಸಕರ ವಿರುದ್ಧ ಬಿಜೆಪಿಯಲ್ಲಿ ಸಾಕಷ್ಟು ಅಸಮಾಧಾನ ಇದೆ. ಇದಕ್ಕೆ ಯಡಿಯೂರಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸಿರುವುದೇ ಸಾಕ್ಷಿ. ಬಿಜೆಪಿ ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿದಿರುವುದು ಯಡಿಯೂರಪ್ಪ ಆಡಿಯೋ ಸ್ಪಷ್ಟಪಡಿಸುತ್ತದೆ ಎಂದರು.

ಪಾಠ ಕಲಿಸಿ: ಮಾತೃ ಪಕ್ಷದಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಪಕ್ಷ ದ್ರೋಹ ಬಗೆದವರಿಗೆ ಉಪ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು. ಇದಕ್ಕೆ ಪಕ್ಷದ ಕಾರ್ಯಕರ್ತರು ಸವಾಲಾಗಿ ಪಕ್ಷದ ಸಂಘಟನೆ ಹಾಗೂ ಚುನಾವಣಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದರು.

Advertisement

ಬೂತ್‌ ಮಟ್ಟದಲ್ಲಿ ಸಂಘಟನೆ: ಮುಂದಿನ ಒಂದು ವಾರದೊಳಗೆ ಪಂಚಾಯಿತಿ ಮತ್ತು ಬೂತ್‌ ಮಟ್ಟಕ್ಕೆ ಒಬ್ಬರಂತೆ ನಿಷ್ಠಾವಂತ ಮುಖಂಡರ ಪಟ್ಟಿಯನ್ನು ತಯಾರಿಸಿ ಅವರ ಮುಖಾಂತರ ಪಕ್ಷ ಸಂಘಟಿಸಬೇಕು. ಬೂತ್‌ ಮಟ್ಟದ ಮುಖಂಡರಿಗೆ ಚುನಾವಣೆಯ ಜವಾಬ್ದಾರಿ ನೀಡಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕೆಂದು ಮುಖಂಡರಿಗೆ ಸೂಚಿಸಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಕಾರ್ಯಕರ್ತರಿಂದ ನಾಯಕರೇ ಹೊರತು ನಾಯಕರಿಂದ ಕಾರ್ಯಕರ್ತರಲ್ಲ. ಚುನಾವಣೆಯಲ್ಲಿ ಕಾರ್ಯಕರ್ತರ ಶಕ್ತಿ ಏನೆಂದು ಅನರ್ಹ ಶಾಸಕರನ್ನು ಸೋಲಿಸುವ ಮುಖಾಂತರ ಪಾಠ ಕಲಿಸಬೇಕೆಂದರು. ಚುನಾವಣೆಯ ಪ್ರಕ್ರಿಯೆಗಳು ಪ್ರಾರಂಭ ಆದ ಮೇಲೆ ರಾಷ್ಟ್ರ ಮಟ್ಟದ ನಾಯಕರು ಸಹಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಶಾಸಕರಾದ ವಿ.ಮುನಿಯಪ್ಪ, ಎನ್‌.ಹೆಚ್‌.ಶಿವಶಂಕರರೆಡ್ಡಿ, ಮಾಜಿ ಶಾಸಕರಾದ ಎನ್‌.ಸಂಪಂಗಿ, ಎಸ್‌.ಎಂ.ಮುನಿಯಪ್ಪ, ಅನಸೂಯಮ್ಮ , ಕಾಂಗ್ರೆಸ್‌ ಅಭ್ಯರ್ಥಿ ನಂದಿ ಅಂಜನಪ್ಪ , ಮುಖಂಡರಾದ ಜಿ.ಹೆಚ್‌.ನಾಗರಾಜ, ಕೆ.ವಿ.ನವೀನ್‌ ಕಿರಣ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ, ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಂ, ಮುಖಂಡರಾದ ಜಾವೀದ್‌, ಪ್ರಸ್‌ ಸುರೇಶ್‌, ಅರುಣ್‌, ಶಂಕರ್‌, ಸುಮಿತ್ರಮ್ಮ, ನಾರಾಯಣಮ್ಮ, ಕೋಡೇಸ್‌ ವೆಂಕಟೇಶ್‌, ಮರಸನಹಳ್ಳಿ ಪ್ರಕಾಶ್‌, ಕೃಷ್ಣನ್‌, ಅಮಾನುಲ್ಲಾ ಉಪಸ್ಥಿತರಿದ್ದರು.

ಅಮಿತ್‌ ಶಾ ಅವರು ರಾಷ್ಟ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಸ್ಥಾನದಲ್ಲಿದ್ದರೂ ಆಪರೇಷನ್‌ ಕಮಲದಲ್ಲಿ ಭಾಗಿಯಾಗಿ ದೇಶದ ಜನರ ಮುಂದೆ ಬೆತ್ತಲಾಗಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕಾರಕ್ಕೆ ಬಿಜೆಪಿ ಪಕ್ಷ ಒಳಗಾಗಿದೆ. ದಿನೇ ದಿನೆ ದೇಶದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಕುಸಿಯುತ್ತಿದೆ. ವಾಮಾ ಮಾರ್ಗದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ.
-ವಿ.ಸಿ.ವಿಷ್ಣುನಾಥನ್‌, ಎಐಸಿಸಿ ಕಾರ್ಯದರ್ಶಿ

ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಕ್ಷೇತ್ರದ ಜನರಿಗೆ ಎಷ್ಟೇ ಆಸೆ, ಆಮಿಷ ತೋರಿದರೂ ಈ ಬಾರಿ ಸೋಲುವುದು ಖಚಿತ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಸುಧಾಕರ್‌ ಕೊಡುಗೆ ಶೂನ್ಯ. ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಬಿಜೆಪಿ ಸರ್ಕಾರ ಮಂಜೂರು ಮಾಡಿದೆ ಎಂದು ಜನತೆಗೆ ಸುಳ್ಳು ಹೇಳುತ್ತಿದ್ದಾರೆ.
-ಎನ್‌.ಹೆಚ್‌.ಶಿವಶಂಕರರೆಡ್ಡಿ, ಮಾಜಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next