Advertisement

ಗುರಿ ಇದ್ದರೆ ಸಾಧನೆಸುಲಭ

04:53 PM Feb 01, 2018 | |

ಕೋಲಾರ: ಮನಸ್ಸಿದ್ದರೆ ಮಾರ್ಗ ಸಿಗುತ್ತದೆ. ಜೀವನದಲ್ಲಿ ಸಾಧನೆ ಮಾಡಬೇಕೆಂಬ ಗುರಿ ಇದ್ದರೆ ಎಲ್ಲಾ ಅಡೆತಡೆಗಳನ್ನು ಎದುರಿಸುವ ಧೈರ್ಯ ಬರುತ್ತದೆ ಎಂದು ಜಿಪಂ ಸಿಇಒ ಬಿ.ಬಿ.ಕಾವೇರಿ ಹೇಳಿದರು. ನಗರದ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್‌ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಡಿಎಲ್‌ಆರ್‌ ಎಸಿ ಸಭೆಯ ನಂತರ ಆರ್‌ಜಿಸಿವೈ ಯೋಜನೆಯ ಶಿಬಿರಾರ್ಥಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿದರು.

Advertisement

ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಇಂದು ಹೈನುಗಾರಿಕೆ ಹಲವು ರೈತರ ಜೀವನಧಾರವಾಗಿದೆ. ಕೋಲಾರ ಜಿಲ್ಲೆ ಹೈನುಗಾರಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ. ನಿರುದ್ಯೋಗ ಯುವಕ, ಯುವತಿಯವರನ್ನು ಸ್ವಾವಲಂಬಿಗಳನ್ನಾಗಿಸಲು ರಾಜೀವ್‌ ಗಾಂಧಿ ಚೈತನ್ಯ ಯೋಜನೆಯಡಿ ಸಬ್ಸಿಡಿ ಸಹಿತ ಸಾಲವನ್ನು ನೀಡಲಾಗುತ್ತಿದ್ದು, ಫ‌ಲಾನುಭವಿಗಳು ಹೈನುಗಾರಿಕೆ ಸೇರಿದಂತೆ ನಿರ್ದಿಷ್ಟಪಡಿಸಿದ ವೃತ್ತಿಗೆ ಹಣ ಬಳಸಬಹುದಾಗಿದೆ ಎಂದರು.

ದುರುಪಯೋಗ ಬೇಡ: ಜನಸಾಮಾನ್ಯರು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಜೀವನದಲ್ಲಿ ಅಭಿವೃದ್ಧಿ ಕಾಣಬೇಕು. ಸರಕಾರದ ಯೋಜನೆಯಡಿ ಸಾಲ ಪಡೆದವರು ಯಾವುದೇ ಕಾರಣಕ್ಕೂ ದುರುಪಯೋಗ ಮಾಡಿಕೊಳ್ಳಬಾರದು. ಸರಕಾರದ ಸೌಲಭ್ಯವನ್ನು ಸೂಕ್ತವಾಗಿ ಬಳಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಎಲ್ಲರಿಂದ ಆಗಬೇಕೆಂದು ಕಿವಿಮಾತು ಹೇಳಿದರು.

ನಿರುದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಸಬ್ಸಿಡಿ ಸಾಲದ ಜೊತೆಗೆ ಕೌಶಲ್ಯ ಯುತ ತರಬೇತಿ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. 

ಕೆನರಾ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಪ್ರಮೋದ್‌ ನಾಯಕ್‌ ಮಾತನಾಡಿ, ಬ್ಯಾಂಕ್‌ಗಳ ಮೂಲ ಉದ್ದೇಶ ಆರ್ಥಿಕವಾಗಿ ಹಿಂದುಳಿದವರಿಗೆ ಸಾಲ ನೀಡುವ ಮೂಲಕ ಶಕ್ತಿ ತುಂಬುವುದೇ ಆಗಿದೆ. ಸರಕಾರದ ಎಲ್ಲಾ ರೀತಿಯ ಜನಪರ ಕಾರ್ಯಕ್ರಮಗಳಿಗೂ ಎಲ್ಲಾ ಬ್ಯಾಂಕ್‌ಗಳು ಸಹಕಾರ ನೀಡುತ್ತಲೇ ಬಂದಿವೆ. ಬ್ಯಾಂಕ್‌ಗಳ ಜೊತೆಗೆ ಜನಸಾಮಾನ್ಯರ ಅಭಿವೃದ್ಧಿಯೂ ಮುಖ್ಯವೆಂದು ಹೇಳಿದರು.

Advertisement

ಸರಕಾರದ ಯೋಜನೆಗಳ ಫ‌ಲಾನುಭವಿಗಳು ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಳಂಬ ತೋರಿದರೆ ಬ್ಯಾಂಕ್‌ ಗಳು ಹೊಸಬರಿಗೆ ಸಾಲ ನೀಡಲು ಅಸಾಧ್ಯ. ಇದನ್ನು ಸಾಲ ಪಡೆದವರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಪ್ರಗತಿ ಸಾಧಿಸಿ: ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಶ್ರೀನಿವಾಸ್‌ರಾವ್‌ ಮಾತನಾಡಿ, ರಾಜೀವ್‌ ಗಾಂಧಿ ಚೈತನ್ಯ ಯೋಜ ನೆಯಡಿ ಜಿಲ್ಲೆಯ ಹಲವು ಬ್ಯಾಂಕ್‌ಗಳು ಫ‌ಲಾನುಭವಿಗಳಿಗೆ ಸಾಲ ನೀಡಿವೆ. ಸರಕಾರಿ ಯೋಜನೆಯ ಕಾನೂನಿನಂತೆ ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಸಾಲ ಬಳಸಿಕೊಂಡು ಜನಸಾಮಾನ್ಯರು ಪ್ರಗತಿ ಕಾಣಬೇಕೆಂದರು.

ಇದೇ ವೇಳೆ ನರ್ಬಾಡ್‌ ಬ್ಯಾಂಕ್‌ಜಿಲ್ಲೆಯ ಕೃಷಿ, ಕೈಗಾರಿಕೆ, ಶಿಕ್ಷಣ, ಗೃಹ ಸಾಲ, ಮೂಲಭೂತ ಸೌಕರ್ಯಗಳಿಗೆ ಅಗತ್ಯ ಸಾಲ ಮತ್ತು ವೆಚ್ಚದ ಬಗ್ಗೆ ತಯಾರಿಸಿರುವ ಪಿಎಲ್‌ ಪಿನ ವಾರ್ಷಿಕ ಕಿರು ಹೊತ್ತಿಗೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸುರೇಶ್‌, ನರ್ಬಾಡ್‌ ಬ್ಯಾಂಕ್‌ ಎಜಿಎಂ ನಟರಾಜನ್‌, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹೆಗಡೆ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಕೆ.ವಿ.ಅಶ್ವತ್ಥನಾರಾಯಣ, ಕೆನರಾ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಕೆಂಪಣ್ಣ, ತರಬೇತಿ ಸಂಸ್ಥೆಯ ವೆಂಕಟೇಶ ಶಾಸ್ತ್ರೀ, ಆರ್ಥಿಕ ಸಾಕ್ಷರತಾ ಕೇಂದ್ರದ ಚೆಂಗಪ್ಪ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next