ಕೋಲಾರ: ಜಿಲ್ಲೆಯಲ್ಲಿ ಪತ್ತೆಯಾಗಿರುವ ಸೋಂಕಿತರನ್ನು ಆದಷ್ಟು ಬೇಗ ಗುಣಮುಖರನ್ನಾಗಿಸಿ ವಾಪಸ್ ಕಳುಹಿಸುವುದು ಜಿಲ್ಲಾಡಳಿತದ ಮುಂದಿರುವ ಸವಾಲು ಹಾಗೂ ಗುರಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು. ಈ ಸಂಬಂಧ ನಗರದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಜಿಲ್ಲೆಯಲ್ಲಿ ಪತ್ತೆಯಾಗಿರುವ ಐವರು ಸೋಂಕಿತರು ಯಾವುದೇ ರೋಗಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ, ಈ ಐವರನ್ನು ಗುಣಮುಖರನ್ನಾಗಿಸಿ ಯಾವುದೇ ಸಾವು ಸಂಭವಿಸದಂತೆ ಚಿಕಿತ್ಸೆ ನೀಡುವುದು ಸದ್ಯದ ಆದ್ಯತೆಯಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರಿಂದ ಹೊಸ ಪ್ರಕರಣ ಉದ್ಭವವಾಗದಂತೆ ಮಾಡುವುದು ಜಿಲ್ಲಾಡಳಿತದ ಮುಖ್ಯ ಗುರಿಯಾಗಿದೆ ಎಂದು ವಿವರಿಸಿದರು.
ಸಂಪರ್ಕದಲ್ಲಿರುವವರ ಮಾಹಿತಿ:ಕೊರೊನಾ ಪಾಸಿಟಿವ್ ಬಂದ ಪ್ರದೇಶಗಳನ್ನು ಕಂಟೈನ್ ಮೆಂಟ್ ಜೋನ್ ಮಾಡಲಾಗಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 24 ಮಂದಿಯನ್ನೂ ಆರ್.ಜಾಲಪ್ಪ ಕೊವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ ಸೋಂಕಿತರೊಂದಿಗೆ ದ್ವಿತೀಯ ಸಂಪರ್ಕದಲ್ಲಿರುವವರ ಮಾಹಿತಿಯನ್ನು ಕಲೆಹಾಕುತ್ತಿರುವುದಾಗಿ ತಿಳಿಸಿದರು.
ಸದ್ಯಕ್ಕೆ ಸೋಂಕಿತರು ಆರೋಗ್ಯ:ಪಿ-906 (22 ವರ್ಷ) ಮೇ 8 ರಂದು ಜಿಲ್ಲೆಗೆ ಸರ್ಕಾರಿ ಬಸ್‌ನಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಮೂಲಕ ಬಂದಿದ್ದಾರೆ. ಪಿ-907 (70 ವರ್ಷ)- ಲಾಕ್‌ಡೌನ್ ಸಡಿಲಿಕೆಯಾದ ನಂತರ ಮೇ 7 ರಂದು ಬೆಂಗಳೂರಿನ ಜೆ.ಪಿ.ನಗರದಿಂದ ಬಸ್‌ನಲ್ಲಿ ಬಂದಿದ್ದಾರೆ. ಪಿ-908 (22 ವರ್ಷ) ಚೆನ್ನೈನಿಂದ, ಪಿ-909 ಮತ್ತು 910 ಒಡಿಶಾದಿಂದ ಬಂದವರಾಗಿದ್ದಾರೆ. ಸೋಂಕಿತರನ್ನು ಪ್ರತ್ಯೇಕ ಆ್ಯಂಬುಲೆನ್ಸ್‌ನಲ್ಲಿ ಕೊವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಸೋಂಕಿತರು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಂಪರ್ಕದಲ್ಲಿದ್ದವರು ಆಸ್ಪತ್ರೆಗೆ ದಾಖಲು: ರೋಗಿ 906ರ ಜೊತೆಗೆ ಏಳು ಮಂದಿ, 907ರ ಜೊತೆಗೆ 6 ಜನ, 908ರ ಜೊತೆಗೆ ಇಬ್ಬರು, 909ರ ಜೊತೆಗೆ 6 ಜನ ಹಾಗೂ ರೋಗಿ 910ರ ಜೊತೆಗೆ ಮೂವರು ಸೇರಿ ಒಟ್ಟು 24 ಜನರು ಪ್ರಾಥಮಿಕ ಸಂಪರ್ಕ ಹೊಂದಿದ್ದು, ಇವೆಲ್ಲರನ್ನೂ ಜಾಲಪ್ಪ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿತೀಯ ಸಂಪರ್ಕ ಹೊಂದಿರುವವರ ಮಾಹಿತಿ ಕಲೆಹಾಕುವ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕೊರೊನಾ ದೃಢಪಟ್ಟ ಪ್ರಕರಣಗಳನ್ನು ಸರ್ವೇ ತಂಡ ಗುರುತಿಸಿತ್ತು. ಅಲ್ಲದೆ, ಹೋಂ ಕ್ವಾರಂಟೆ„ನ್‌ನಲ್ಲಿ ಇಡಲಾಗಿತ್ತು ಎಂದು ಸ್ಪಷ್ಟಪಡಿಸಿದ ಅವರು, ಕೊರೊನಾ ಪಾಸಿಟಿವ್ ಬಂದ ಪ್ರದೇಶಗಳನ್ನು ಕಂಟೊನ್‌ಮೆಂಟ್ ಜೋನ್ ಮಾಡಲಾಗಿದೆ ಎಂದು ಹೇಳಿದರು ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್ ಇತರರಿದ್ದರು.