“ಅದೊಂದು ವಟವೃಕ್ಷ. ಅಲ್ಲೊಂದು ವಿಚಿತ್ರವಾದ ಸನ್ನಿವೇಶ. ಗುರುವನ್ನು ಸುತ್ತುವರಿದು ಶಿಷ್ಯರೆಲ್ಲ ಕುಳಿತಿದ್ದಾರೆ. ಶಿಷ್ಯರೆಲ್ಲರೂ ವೃದ್ಧರು. ಗುರುವಾದರೋ ಯುವಕ. ಗುರುವು ಮೌನವಾಗಿ ವ್ಯಾಖ್ಯಾನ ಮಾಡುತ್ತಿದ್ದನಂತೆ. ಶಿಷ್ಯರ ಸಂಶಯಗಳೆಲ್ಲವೂ ನಿವಾರಣೆಯಾಯಿತಂತೆ’ - ಇದು ಶಂಕರಭಗವತ್ಪಾದರ ದಕ್ಷಿಣಾಮೂರ್ತಿ ಸ್ತೋತ್ರದ ಭಾವಾರ್ಥ.
ಸಾಮಾನ್ಯವಾಗಿ ಗುರುಗಳು ವೃದ್ಧರಾಗಿರುತ್ತಾರೆ. ಶಿಷ್ಯರು ಯುವಕರಾಗಿರುತ್ತಾರೆ. ಆದರೆ, ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿದೆ. ಇನ್ನು ಮೌನ ಮತ್ತು ವ್ಯಾಖ್ಯಾನ ಎರಡೂ ಆಗುವುದು ಹೇಗೆ? ಮೌನವಾಗಿರಬೇಕು ಇಲ್ಲವೇ ವಾದಗಳಿಂದ, ಉದಾಹರಣೆಗಳಿಂದ ವ್ಯಾಖ್ಯಾನ ಮಾಡಬೇಕು. ಮುಂದಿನದು ಇನ್ನೂ ವಿಚಿತ್ರ. ಇವನ ಮೌನ ವ್ಯಾಖ್ಯಾನದಿಂದ ಶಿಷ್ಯರ ಸಂಶಯಗಳೆಲ್ಲ ನಿವಾರಣೆಯಾದವಂತೆ. ಲೋಕದಲ್ಲಿ ಎಷ್ಟೆಷ್ಟು ಬಾರಿ, ಬಗೆಬಗೆಯ ವಾಗ್‌ವೈಖರಿಯಿಂದ ತಿಳಿ ಹೇಳಿದರೂ ಅರ್ಥವಾಗದೇ ಇರುವ ಸಂದರ್ಭಗಳಿರುತ್ತವೆ. ಇಲ್ಲಿ ಇವನು ಮಾತನ್ನೇ ಆಡುತ್ತಿಲ್ಲ.
ಆದರೂ ಅವರ ಸಂಶಯಗಳು ನಿವಾರಣೆ ಆದುದು ಹೇಗೆ? ಎಲ್ಲವೂ ವಿಚಿತ್ರವಾಗಿವೆಯಲ್ಲವೇ? ಶ್ರೀರಂಗ ಮಹಾಗುರುಗಳು ಹೀಗೆ ವಿವರಣೆ ನೀಡಿದ್ದರು. ಅಲ್ಲಿ ಹೇಳಿದ ವಟವೃಕ್ಷ- ಸಮಸ್ತ ವಿಶ್ವವೃಕ್ಷ. ಅದರ ಮೂಲದಲ್ಲಿ ಆದಿಬೀಜನಾದ ಪರಮಶಿವ ದಕ್ಷಿಣಾಮೂರ್ತಿ ಕುಳಿತಿದ್ದಾನೆ. ಅವನೇ ಲೋಕಗುರು. ಅವನು ಕಾಲದ ಸೀಮೆಯನ್ನು ಮೀರಿದವನು. ಕಾಲವನ್ನೇ ನಿಯಂತ್ರಿಸುವವನು. ಹಾಗೆಂದೇ ಕಾಲದ ಪ್ರಭಾವದ ವೃದ್ಧಾಪ್ಯ ಅವನಿಗಿಲ್ಲ.
ನಿತ್ಯ ಯುವಕನಾಗಿದ್ದಾನೆ. ಶಿಷ್ಯರಾದರೋ ಕಾಲದ ಪ್ರಭಾವಕ್ಕೆ ಒಳಪಟ್ಟು ಪರಮ ಸತ್ಯದ ಅನ್ವೇಷಣೆಯಲ್ಲಿ ವೃದ್ಧರಾಗಿದ್ದಾರೆ. ಶಿಷ್ಯರಿಗೆ ಪರಮ ಸತ್ಯದ ಬಗೆಗೆ ಸಂಶಯ ಬಂದಾಗ ಎದುರಿಗೆ ಕುಳಿತ ಸತ್ಯಸ್ವರೂಪನಾದ ಪರಮ ಶಿವಮೂರ್ತಿಯನ್ನು ನೋಡಿದ್ದಾರೆ. ಅವನು ಒಳಸತ್ಯದ ತುತ್ತ ತುದಿಗೆ ಏರಿ ಕುಳಿತಿದ್ದಾನೆ. ಅವನನ್ನು ನೋಡುತ್ತಲೇ ಇವರ ಕರಣಗಳೆಲ್ಲವೂ ಅವನನ್ನೇ ಅನುಸರಿಸಿ ಆ ಉನ್ನತವಾದ ಸತ್ಯದೆಡೆಗೆ ಏರಿವೆ.
ಸತ್ಯದ ಬೆಳಕಿನಲ್ಲಿ ಜೀವನದ ಎಲ್ಲ ಸಂಶಯಗಳೂ ನಿವಾರಣೆಯಾಗಿವೆ. ಮಾತು ಬಹಳ ಸೀಮಿತವಾದ ಮಾಧ್ಯಮ. ದಕ್ಷಿಣಾಮೂರ್ತಿಯ ಮೌನವೇ ಎಲ್ಲ ಒಳ ಸತ್ಯಗಳನ್ನು ಅವರೆದುರಿಗೆ ಬಿಚ್ಚಿಟ್ಟಿದೆ. ಸೃಷ್ಟಿಯ ಮೂಲ ಮತ್ತು ಅದರ ವಿಸ್ತಾರವೆಲ್ಲವೂ ಒಳಗಣ್ಣಿಗೆ ಗೋಚರವಾದ ಮೇಲೆ ಅವರಿಗೆ ಯಾವ ಸಂಶಯಗಳೂ ಉಳಿಯಲಿಲ್ಲ. ಅಂಥ ದಕ್ಷಿಣಾಮೂರ್ತಿಯು ನಮ್ಮೆಲ್ಲರ ಅಂಧಕಾರವನ್ನು ಕಳೆದು, ಒಳಬೆಳಕನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
* ಬಿ.ಉ. ಸುಬ್ರಹ್ಮಣ್ಯ ಸೋಮಯಾಜಿ, ಸಂಸ್ಕೃತಿ ಚಿಂತಕರು, ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ