ಕೋಸ್ಟಲ್‌ವುಡ್‌ನ ಬಹುನಿರೀಕ್ಷಿತ ಸಿನೆಮಾ “ಜಬರ್ದಸ್ತ್ ಶಂಕರ’ ಈ ವಾರ ಬಿಡುಗಡೆಯ ಸಂಭ್ರಮದಲ್ಲಿದೆ. ಕರಾವಳಿಯಲ್ಲಿ ಗಿರಿಗಿಟ್ ಮೂಡಿಸಿದ ಅಬ್ಬರದಿಂದಾಗಿ ಸದ್ಯ ಜಬರ್ದಸ್ತ್ ಶಂಕರ ಸಿನೆಮಾವೂ ದೇಶ-ವಿದೇಶದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಕೋಸ್ಟಲ್‌ವುಡ್‌ನಲ್ಲಿ ಡೈನಾಮಿಕ್ ಹೀರೋ ಆಗಿ ಗುರುತಿಸಿಕೊಂಡಿರುವ ಅರ್ಜುನ್ ಕಾಪಿಕಾಡ್ ಜಬರ್ದಸ್ತ್ ಶಂಕರನಾಗಿ ವಿಭಿನ್ನ ಲುಕ್‌ನಲ್ಲಿ ಸಿನಿ ಪ್ರಿಯರ ಮುಂದೆ ಎಂಟ್ರಿಯಾಗಲಿದ್ದಾರೆ. ತುಳು ಮತ್ತು ಕನ್ನಡದ ಸುಮಾರು 15ರಷ್ಟು ಸಿನೆಮಾಗಳಲ್ಲಿ ನಟಿಸಿರುವ ಅರ್ಜುನ್‌ಗೆ ಈ ಸಿನೆಮಾ ವಿಭಿನ್ನ ಹಾಗೂ ಬಹುನಿರೀಕ್ಷಿತ.
ಇದೊಂದು ವಿಭಿನ್ನ ಕಥೆಯ ಸಿನೆಮಾ. ಹೊಸ ಪರಿಕಲ್ಪನೆಯಲ್ಲಿ ಮೇಕಿಂಗ್ ಮಾಡಲಾಗಿದೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ ಎಲ್ಲವೂ ದೇವದಾಸ್ ಕಾಪಿಕಾಡ್ ಅವರದ್ದು. ನಾನು ನಟ ಹಾಗೂ ಸಹನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ. ಸುಜೀತ್ ನಾಯಕ್‌ರ ಸಂಕಲನ, ಮಣಿಕಾಂತ್ ಕದ್ರಿ ಸಂಗೀತ ಈ ಚಿತ್ರಕ್ಕಿದೆ. ಜಲನಿಧಿ ಫಿಲ್ಮ್ನಡಿ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್ ಹಾಗೂ ರಾಜೇಶ್ ಕುಡ್ಲ ಈ ಸಿನೆಮಾ ನಿರ್ಮಿ ಸಿದ್ದಾರೆ. ಸಿದ್ದು ಹಾಗೂ ಉದಯ ಬಲ್ಲಾಳ್ ಛಾಯಾಚಿತ್ರಗ್ರಹಣ ಮಾಡಿದ್ದಾರೆ. ಮಾಸ್ ಮಾದ ಅವರ ಸಾಹಸ ಹಾಗೂ ಸ್ಟಾರ್ ಗಿರಿ, ವಿನಾಯಕ್ ಪಿಳ್ಳೆ ನೃತ್ಯ ನಿರ್ದೇಶನವಿದೆ ಎನ್ನುತ್ತಾರೆ ಅರ್ಜುನ್ ಕಾಪಿಕಾಡ್.
ಅಂದಹಾಗೆ, ಸಿನೆಮಾದ ತಾರಾಗಣದಲ್ಲಿ ಅರ್ಜುನ್ ಕಾಪಿಕಾಡ್, ನೀತಾ ಅಶೋಕ್, ರಾಶಿ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಸಾಯಿಕೃಷ್ಣ ಕುಡ್ಲ, ಗೋಪಿನಾಥ್ ಭಟ್, ಚೇತನ್ ರೈ, ಸುನಿಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಕುಮಾರ್ ಮಲ್ಲೂರು, ಅರುಣ್ ಬಿ.ಸಿ. ರೋಡ್, ಮಿಮಿಕ್ರಿ ಶರಣ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಚಂದ್ರಹಾಸ್ ಮಾಣಿ, ಹರೀಶ್ ಆಲದಪದವು, ಗಾಳಿಪಟ ಹರೀಶ್ ಮೊದಲಾದವರು ಸಿನೆಮಾದಲ್ಲಿದ್ದಾರೆ. ಕಥೆ ಹಾಗೂ ಕಾಮಿಡಿ ಎರಡನ್ನೂ ಜತೆಯಾಗಿ ಇದರಲ್ಲಿ ಹೆಣೆಯಲಾಗಿದ್ದು, ಕೋಸ್ಟಲ್‌ವುಡ್‌ನಲ್ಲಿ ಇದೊಂದು ವಿನೂತನ ಪ್ರಯೋಗ ಎನ್ನುವುದು ಚಿತ್ರತಂಡದ ಅಭಿಪ್ರಾಯ.
ಇನ್ನು ಅರ್ಜುನ್ ಕಾಪಿಕಾಡ್ ಅವರು ತೆಲಿಕೆದ ಬೊಳ್ಳಿ, ರಂಗ್, ಚಾಲಿಪೋಲಿಲು, ಒರಿಯನ್ ತೂಂಡ ಒರಿಯಗಾಪುಜಿ, ಮಧುರ ಸ್ವಪ್ನ (ಕನ್ನಡ), ದಂಡ್, ಚಂಡಿಕೋರಿ, ಬರ್ಸ, ಯೋಗರಾಜ್ ಭಟ್ ಅವರ ಮುಗುಳು ನಗೆ (ಕನ್ನಡ), ಅರೆ ಮರ್ಲೆರ್, ಏರಾ ಉಲ್ಲೆರ್‌ಗೆ, ಕರ್ಣೆ ಮೊದಲಾದ ಸಿನೆಮಾಗಳ ಮೂಲಕ ಮನೆಮಾತಾಗಿದ್ದಾರೆ. ಕನ್ನಡದಲ್ಲಿ ತೆರೆಕಾಣಲಿರುವ “ಮಾಲ್ಗುಡಿ ಡೇಸ್’, ತುಳುವಿನ “ರಾಹುಕಾಲ ಗುಳಿಗಕಾಲ’ ಚಿತ್ರದಲ್ಲಿಯೂ ನಟಿಸಿದ್ದಾರೆ.
- ದಿನೇಶ್ ಇರಾ