Advertisement

ವೈಭವದ ಚಾಮರಾಜೇಶ್ವರ ಬ್ರಹ್ಮ ರಥೋತ್ಸವ

03:55 PM Jul 14, 2022 | Team Udayavani |

ಚಾಮರಾಜನಗರ : ಐದು ವರ್ಷಗಳ ಬಳಿಕ, ನಗರದ ಅಧಿದೇವತೆ ಕೆಂಪನಂಜಾಂಬ ಸಮೇತ ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ಬುಧವಾರ ಭಾರಿ ವಿಜೃಂಭಣೆ ಯಿಂದ ಜರುಗಿತು. ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಕೃತಾರ್ಥರಾದರು.

Advertisement

ಆಷಾಢ ಮಾಸದಲ್ಲಿ ನಡೆಯುವ ಅಪರೂಪದ ರಥೋತ್ಸವ ಎಂಬ ವಿಶೇಷ ಚಾಮರಾಜೇಶ್ವರ ರಥೋತ್ಸವಕ್ಕಿದ್ದು, ನವ ದಂಪತಿಗಳು ಹಣ್ಣು ಜವನವನ್ನು ರಥಕ್ಕೆ ಎಸೆದು ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸಿದರು.

ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ಪ್ರಾತಃಕಾಲ ಬೆಳಗ್ಗೆ 11 ರಿಂದ 11.30 ಗಂಟೆಯ ಶುಭ ಕನ್ಯಾ ಲಗ್ನದಲ್ಲಿ ನೂತನ ರಥಕ್ಕೆ ಚಾಮರಾಜೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಬಿಜಂಗೈಯಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಕ್ತಿ, ಭಾವದಿಂದ ತೇರನ್ನು ಎಳೆದರು. ರಥವು ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ಚಲಿಸಿ ಎಸ್‌ .ಬಿ.ಎಂ. ರಸ್ತೆಯಲ್ಲಿ ಸಾಗಿ ವೀರಭದ್ರೇಶ್ವರಸ್ವಾಮಿ ದೇವಾಲಯದ ವೃತ್ತದಿಂದ ಮಾರಮ್ಮ ದೇವಸ್ಥಾನದ ರಸ್ತೆಯ ಮೂಲಕ ಹಳೆ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಸಾಗಿ, ಸ್ವಸ್ಥಾನಕ್ಕೆ ತಲುಪಿತು.

ರಥೋತ್ಸವದಲ್ಲಿ ಭಾರಿ ಜನಸ್ತೋಮ: 5 ವರ್ಷಗಳ ಬಳಿಕ ನಡೆದ ರಥೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವ ಸಾಗುವ ರಸ್ತೆಗಳ ಬದಿಗಳಲ್ಲಿ ಭಾರಿ ಜನಸ್ತೋಮ ನೆರೆದಿತ್ತು. ಅಲ್ಲದೇ ರಥದ ಬೀದಿಯ ಕಟ್ಟಡಗಳ ಮಹಡಿಯಲ್ಲಿ ನಿಂತು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ಎಲ್ಲಿ ನೋಡಿದರಲ್ಲಿ ಜನ ಪ್ರವಾಹ ಕಂಡುಬಂದಿತು.

ರಥೋತ್ಸವ ಹಿನ್ನೆಲೆಯಲ್ಲಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ರಥೋತ್ಸವ ಸಾಗುವ ದಿಕ್ಕುಗಳನ್ನು ಬಂದ್‌ ಮಾಡಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದರಿಂದ ದೂರದ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಭಕ್ತರು ದೇವಸ್ಥಾನದತ್ತ ತೆರಳಿದರು.

Advertisement

ಹಣ್ಣು, ದವಸ ಎಸೆದ ನವ ಜೋಡಿಗಳು: ಸಂಪ್ರದಾಯದಂತೆ ಹೊಸದಾಗಿ ಮದುವೆಯಾದ ನವ ಜೋಡಿಗಳು ಮದುವೆಯ ನಂತರ ಬರುವ ಆಷಾಢ ಮಾಸದಲ್ಲಿ ಜರುಗುವ ಚಾಮರಾಜೇಶ್ವರ ರಥೋತ್ಸವಕ್ಕೆ ಆಗಮಿಸಿ ಹಣ್ಣು, ದವಸ ಎಸೆಯುವುದು ವಾಡಿಕೆ. ಆದರೆ, ಕಳೆದ 5 ವರ್ಷಗಳ ಬಳಿಕ ರಥೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ನವಜೋಡಿಗಳು ಆಗಮಿಸಿದ್ದರು. ಹಣ್ಣು ದವಸ ಎಸೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ನವ ಜೋಡಿಗಳು ಹೊಸ ಬಟ್ಟೆ ತೊಟ್ಟು ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಉಳಿದಂತೆ ಕೆಲ ಹುಡುಗರು ಹಣ್ಣಿನ ಮೇಲೆ ತಮ್ಮ ಇಷ್ಟದ ಸಂಗಾತಿ ಹಾಗೂ ಚಲನಚಿತ್ರ ನಟರ ಹೆಸರನ್ನು ಬರೆದು ತೇರಿಗೆ ಎಸೆದ ದೃಶ್ಯ ಕಂಡುಬಂದಿತು.

ಭರ್ಜರಿ ವ್ಯಾಪಾರ: ರಥೋತ್ಸವ ಹಿನ್ನೆಲೆಯಲ್ಲಿ ಆಟಿಕೆಗಳು, ಹಣ್ಣ ದವನ, ಸಿಹಿ ತಿಂಡಿಗಳ ವ್ಯಾಪಾರ ಜೋರಾಗಿತ್ತು. ರಥೋತ್ಸವಕ್ಕೆ ಆಗಮಿಸಿದ್ದ ಹುಡುಗರು ಪೀಪಿ ಖರೀದಿಸಿ ಅದನ್ನು ಊದುವ ಮೂಲಕ ಎಂಜಾಯ್‌ ಮಾಡಿದರು. ಇದರಿಂದ ರಥೋತ್ಸವದಲ್ಲಿ ಪೀಪಿಗಳು ಸದ್ದು ಜೋರಾಗಿ ಜನರಿಗೆ ಕಿರಿಕಿರಿ ಉಂಟು ಮಾಡಿತು. ರಥೋತ್ಸವ ಹಿನ್ನೆಲೆಯಲ್ಲಿ ರಥದ ಬೀದಿಯ ಕೆಲವು ಕಡೆಗಳಲ್ಲಿ ದಾನಿಗಳು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಸಿದರು.

ರಥೋತ್ಸವದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಡೀಸಿ ಚಾರುಲತಾ ಸೋಮಲ್‌, ಎಡೀಸಿ ಕಾತ್ಯಾಯಿನಿದೇವಿ,
ತಹಸೀಲ್ದಾರ್‌ ಬಸವರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next