Advertisement

ಆಡುತ್ತಿದ್ದ ಬಾಲಕಿ ಕುಡಿಯುವ ನೀರಿನ ಹೊಂಡಕ್ಕೆ ಬಿದ್ದು ಸಾವು

11:12 AM May 26, 2017 | Team Udayavani |

ಸಿದ್ದಾಪುರ: ಹೊಳೆ ಬದಿಯಲ್ಲಿ ಕುಡಿಯುವ ನೀರಿಗಾಗಿ ತೆಗೆಯಲಾದ ಹೊಂಡಕ್ಕೆ 11 ವರ್ಷದ ಬಾಲಕಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ  ಗುರುವಾರ ಹೆಂಗವಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೋಡಾಬೈಲು ಮರೂರು ಸಂಪರ್ಕದ ಮಧ್ಯ ಭಾಗದಲ್ಲಿ  ಹರಿಯುವ ತೊಂಭತ್ತು ಹೊಳೆಯಲ್ಲಿ  ನಡೆದಿದೆ.

Advertisement

ಕೋಡಾಬೈಲು ಸರಸ್ವತಿ ಹಾಗೂ ಮೋಹನ ದಂಪತಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಸ್ವಾತಿ ಹಿರಿಯಳು.  ತೊಂಭತ್ತು ಶ್ರೀ ದುರ್ಗಾ ಪರಮಮೇಶ್ವರಿ ಅನು ದಾನಿತ ಶಾಲೆಯ 6ನೇ ತರಗತಿಗೆ ತೇರ್ಗಡೆಯಾಗಿದ್ದ ವಿದ್ಯಾರ್ಥಿನಿ.

ಘಟನೆ: ಸ್ವಾತಿ ಹಾಗೂ ಸಂಬಂಧಿಕರ ಮಕ್ಕಳೊಂದಿಗೆ ಮನೆ ಸಮೀಪದಲ್ಲಿ ನೀರಿಲ್ಲದೇ ಬತ್ತಿದ ಹೊಳೆಯ ಕಡೆಗಳಲ್ಲಿ ಆಟವಾಡಲು ಹೋಗಿದ್ದರು. ಆ ಸಂದರ್ಭದಲ್ಲಿ ಸ್ವಾತಿ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಜತೆಗಿದ್ದ ಮಕ್ಕಳು ಕೂಡ ಆಟವಾಡುತ್ತಿದ್ದರು. ಮಕ್ಕಳಿಗೆ ಸ್ವಾತಿ ಕಾಣದ್ದರಿಂದ ಗಿಡದ ನಡುವೆ ಅಡಗಿ ಕೊಂಡಿರಬೇಕೆಂದು ಹುಡುಕಾಡಿದ್ದಾರೆ. ಸ್ವಲ್ಪ ಹೊತ್ತಿನ ಅನಂತರ ಮಕ್ಕಳು ಸ್ವಾತಿಯನ್ನು ಮನೆಯ  ತನಕ ಹುಡುಕಿಕೊಂಡು ಹೋಗಿದ್ದಾರೆ. ಮನೆಯವರಲ್ಲಿ ಮಕ್ಕಳು ಸ್ವಾತಿಯನ್ನು ಹುಡುಕಿದರೂ ಸಿಗಲಿಲ್ಲವೆಂದು ತಿಳಿಸಿದ ಕಾರಣ ಮನೆಯವರು ಹಾಗೂ ಅಕ್ಕ ಪಕ್ಕದ ಮನೆಯವರು ಸೇರಿಕೊಂಡು ಸುತ್ತ ಮುತ್ತ ಹುಡುಕಾಟ ನಡೆಸಿದ್ದಾರೆ.   ಬಹಳ ಸಮಯದ ತನಕ ಹುಡುಕಾಟ ನಡೆಸಿದರೂ ಸ್ವಾತಿ ಪತ್ತೆಯಾಗಲಿಲ್ಲ.

ಸ್ವಾತಿ ನೀರಿಗೆ ಬಿದ್ದು ಮುಳುಗಿರ ಬಹುದೆಂದೂ ಸಂಶಯದಿಂದ  ಹೊಳೆಯ ನೀರಿನ ಹೊಂಡದಲ್ಲಿ  ಹುಡುಕಾಟ ನಡೆಸಿದಾಗ ಸ್ವಾತಿ ದೇಹ ಪತ್ತೆಯಾಗಿದೆ. ದೇಹವನ್ನು ಮೇಲೆತ್ತಿ ಸ್ವಾತಿಗೆ ಚಿಕಿತ್ಸೆ ನೀಡಲು ಹಾಲಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಸ್ವಾತಿ ಮೃತ ಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದರು.

ಸ್ವಾತಿ  ತೊಂಭತ್ತು ಶ್ರೀ ದುರ್ಗಾ ಪರಮೇಶ್ವರಿ ಅನುದಾನಿತ ಶಾಲೆಯಲ್ಲಿ 5ನೇ ತರಗತಿಂದ 6ನೇ ತರಗತಿಗೆ ತೇರ್ಗಡೆಯಾಗಿದ್ದಳು. ಘಟನೆಯ ಕುರಿತು ಭೋಜ ಅವರು ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳದ ಪರೀಶಿಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ವಾತಿಯ ಮೃತ ದೇಹವನ್ನು ಶಂಕರನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರೀಸುದಾರರಿಗೆ ನೀಡಲಾ ಯಿತು. 

Advertisement

ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಶಂಕರನಾರಾಯಣ ಪೊಲೀಸ್‌ ಠಾಣಿ ಉಪ ನಿರೀಕ್ಷಕ ಸುನಿಲ್‌ಕುಮಾರ್‌ ಹಾಗೂ ಸಿಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. 

ಹೆಂಗವಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ ತೊಂಭತ್ತು, ಇನ್ನಿತರರು ಭೇಟಿ ನೀಡಿ ಸ್ವಾತಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next