Advertisement

ರಂಗನಾಥ ದೇಗುಲದ ಬಳಿ ಕಸವೋ ಕಸ

07:20 AM Jan 28, 2019 | |

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗನಾಥ ದೇವಾಲಯ ಸುತ್ತಲಿನ ಪ್ರದೇಶದಲ್ಲಿ ಕಸದ ರಾಶಿಗಳೇ ತುಂಬಿಕೊಂಡಿವೆ. ಸ್ವಚ್ಛತೆ ಸಂಪೂರ್ಣವಾಗಿ ಮಾಯವಾಗಿ ಕಸದ ರಾಶಿ ಬೆಳೆದು ನಿಂತು, ತ್ಯಾಜ್ಯಗಳು ಸಂಗ್ರಹಗೊಂಡಿವೆ. ಶುಚಿತ್ವ ಮಾಯವಾಗಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದ್ದರೂ ದೇವಾಲಯದ ಆಡಳಿತ ಮಂಡಳಿ ದಿವ್ಯಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ.

Advertisement

ನಿತ್ಯವೂ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಶ್ರೀರಂಗನಾಥ ಸ್ವಾಮಿ ದರ್ಶನಕ್ಕೆ ಆಗಮಿಸುತ್ತಾರೆ. ದೇಗುಲದ ಸುತ್ತ ಸ್ವಚ್ಛತೆ ಮಾಯವಾಗಿರುವುದರಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ದೇವಾಲಯಕ್ಕೆ ಹೋಗುವ ದಾರಿ ಪಕ್ಕದಲ್ಲಿ ಕುದುರೆ ಲದ್ದಿ ಸೇರಿದಂತೆ ಊಟ ಮಾಡಿ ಬೀಸಾಡಿದ ಪ್ಲಾಸ್ಟಿಕ್‌ ತಟ್ಟೆ, ಲೋಟ, ಎಲೆ, ಪ್ಲಾಸ್ಟಿಕ್‌ ಪೇಪರ್‌ಗಳನ್ನು ದೇಗುಲದ ಪಕ್ಕದಲ್ಲೇ ರಾಶಿ ಹಾಖಲಾಗಿದೆ.

ತ್ಯಾಜ್ಯ, ಕಸದ ರಾಶಿ: ಅಂಗಡಿ ಸಾಲಿನ ಹಿಂಬದಿಯ ಮೈದಾನವೆಲ್ಲಾ ತ್ಯಾಜ್ಯಗಳಿಂದ ಆವರಿಸಿಕೊಂಡಿದೆ. ರಸ್ತೆ ಬದಿ ಹಾಗೂ ದೇಗುಲಕ್ಕೆ ಸೇರಿದ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಕಸದ ರಾಶಿಗಳು ಕಾಣುತ್ತಿದೆ. ಸಂಕ್ರಾಂತಿ ಹಬ್ಬದ ದಿನ ಶ್ರೀರಂಗನಾಥ ಸ್ವಾಮಿಗೆ ಲಕ್ಷದೀಪೋತ್ಸವ ನಡೆಯಿತು.

ಆಗಲೂ ದೇವಾಲಯದ ಆಡಳಿತ ಮಂಡಳಿ ದೇಗುಲದ ಪ್ರವೇಶ ದ್ವಾರದಲ್ಲಷ್ಟೇ ಸ್ವಚ್ಛಗೊಳಿಸಿದರೇ ವಿನಃ ಅಕ್ಕ-ಪಕ್ಕದಲ್ಲಿ ರಾಶಿ ಹಾಕಿರುವ ಕಸದ ರಾಶಿಗಳನ್ನು ಮಾತ್ರ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದರು. ದೇವಾಲಯದ ಸುತ್ತ ಕಸದ ರಾಶಿ ಬಿದ್ದಿದ್ದರೂ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತಿದ್ದಾರೆ. ದೇಗುಲಕ್ಕೆ ಬರುವ ಭಕ್ತರು ಕಸದ ರಾಶಿಯನ್ನು ಕಂಡು ಅಸಹ್ಯಪಟ್ಟುಕೊಳ್ಳುವಂತಾಗಿದೆ.

ಇನ್ನಷ್ಟು ಅವಾಂತರ: ಈಗಾಗಲೇ ದೇಗುಲದ ಸುತ್ತಲಿನ ಪ್ರದೇಶ ಪ್ಲಾಸ್ಟಿಕ್‌ ತ್ಯಾಜ್ಯಗಳು, ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿದೆ. ಈ ಕಸದ ರಾಶಿಗೆ ಮುತ್ತಿಗೆ ಹಾಕುವ ನಾಯಿಗಳು, ಹಸು ಆಹಾರಕ್ಕಾಗಿ ಬಾಯಿ ಹಾಕುತ್ತಾ ಊಟದ ಎಂಜಲು ತಟ್ಟೆ, ಲೋಟ, ಇನ್ನಿತರೆ ತ್ಯಾಜ್ಯವನ್ನು ಎಳೆದಾಡುತ್ತಾ ಇನ್ನಷ್ಟು ಅವಾಂತರ ಸೃಷ್ಟಿಸುತ್ತಿವೆ.

Advertisement

ಭಕ್ತರು ಹಾಗೂ ಪ್ರವಾಸಿಗರಿಗಾಗಿ ದೇಗುಲದ ಸಮೀಪದಲ್ಲೇ ಕುಡಿಯುವ ನೀರಿನ ಕೊಳಾಯಿಯನ್ನು ಅಳವಡಿಸಲಾಗಿದೆ. ಸುತ್ತಮುತ್ತಲಿನ ಸಾರ್ವಜನಿಕರು ಅಲ್ಲೇ ನಿಂತು ಮೂತ್ರ ಮಾಡಿ ಹೋಗುತ್ತಿದ್ದಾರೆ. ಬೆಳಗ್ಗೆ-ರಾತ್ರಿ ಮಲ ವಿಸರ್ಜನೆಯೂ ಅಲ್ಲಲ್ಲಿ ನಡೆಯುತ್ತಿದೆ. ಅದೇ ಪ್ರದೇಶದಲ್ಲಿ ಓಡಾಡಿಕೊಂಡು ಭಕ್ತರು ದೇವರ ದರ್ಶನ ಪಡೆಯುವಂತಾಗಿದೆ.

ಮಲ- ಮೂತ್ರ ವಿಸರ್ಜಿಸಿ ಹೋಗುವ ಪ್ರದೇಶದಲ್ಲಿ ಕೊಳಚೆ ನೀರು ಕೊಳೆತು ಸುತ್ತಲೂ ಗಬ್ಬು ನಾರುತ್ತಿದೆ. ದೇವಾಲಯದ ಮುಂಭಾಗದ ಆಸು-ಪಾಸಿನ ಪ್ರದೇಶದಲ್ಲಿ ಎಳನೀರು ಬುಂಡೆ, ಕುದುರೆ ಲದ್ದಿಯ ಗುಡ್ಡೆಗಳು, ಹಳಸಿದ ಅನ್ನ, ಕೊಳಚೆ ನೀರು, ಹೀಗೆ ದೇವಾಲಯದ ಬಳಿ ಅಶುಚಿತ್ವ ತಾಂಡವಾಡುತ್ತಿದೆ. ಆದರೂ ಶುಚಿತ್ವದ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ.

ಕೊಳಚೆ ನೀರಿನ ಕಲ್ಯಾಣಿ: ಪ್ರತಿ ವರ್ಷ ರಥಸಪ್ತಮಿಯಂದು ಆಚರಿಸುವ ಗಜೇಂದ್ರ ಮೋಕ್ಷ ನೀಡುವ ಕಲ್ಯಾಣಿಗೆ ಎಲ್ಲಾ ತ್ಯಾಜ್ಯ ನೀರು ಹರಿದು ಸೇರುತ್ತಿದೆ. ಇದರಿಂದ ಕಲ್ಯಾಣಿಯೊಳಗೆ ಕಲ್ಮಶ ನೀರು ತುಂಬಿ ಕೊಳೆತು ನಾರುತ್ತಿದೆ. ಗಾಳಿ ಬೀಸಿದ ಸಮಯದಲ್ಲಿ ತೂರಿ ಹೋಗುವ ಕಸವೆಲ್ಲಾ ಕಲ್ಯಾಣಿಯಲ್ಲಿ ಶೇಖರಣೆಯಾಗುತ್ತಿದೆ.

* ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next