Advertisement

ನಗರಕ್ಕೆ ಬಂದಿಳಿದ ಕಸಗುಡಿಸುವ ಯಂತ್ರ

12:49 AM Jan 11, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಲು ಹೊಸದಾಗಿ 17 ಕಸಗುಡಿಸುವ ಯಂತ್ರಗಳನ್ನು ಖರೀದಿಸಲಾಗಿದ್ದು, ಈಗಾಗಲೇ 15 ಯಂತ್ರಗಳು ನಗರಕ್ಕೆ ಬಂದಿವೆ ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ತಿಳಿಸಿದರು.

Advertisement

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಶುಕ್ರವಾರ ಕಸ ಗುಡಿಸುವ ಯಂತ್ರಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 9 ಯಂತ್ರ ಗಳ ಮೂಲಕ ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇನ್ನು 2 ಯಂತ್ರಗಳು ಶೀಘ್ರ ಬರಲಿವೆ ಎಂದರು.

ಪಾಲಿಕೆಯ 8 ವಲಯಗಳಿಗೂ ಅಗತ್ಯಕ್ಕೆ ತಕ್ಕಂತೆ ಹಂಚಿಕೆ ಮಾಡಿ ಪ್ರತಿನಿತ್ಯ ಯಂತ್ರಗಳ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರವೇ ಕಸ ಗುಡಿಸುವ ಯಂತ್ರಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನಂತರ ಅಗರ ಜಂಕ್ಷನ್‌ನಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೆ ಹೈ ಡೆನ್ಸಿಟಿ ಕಾರಿಡಾರ್‌ ಪ್ರಗತಿ ಕಾಮಗಾರಿ ತಪಾಸಣೆ ನಡೆಸಿ, ರಸ್ತೆಯಲ್ಲಿ ಈಗಾಗಲೇ ಡಾಂಬರೀಕರಣ ಮಾಡಲಾಗಿದ್ದು, ಸರ್ವಿಸ್‌ ರಸ್ತೆ, ಪಾದಚಾರಿ ಮಾರ್ಗ ಹಾಗೂ ಚರಂಡಿ ದುರಸ್ತಿ ಕಾಮಗಾರಿಗೆ ವೇಗ ನೀಡಿ ನಿಗದಿತ ಸಮಯದಲ್ಲಿ ಮುಗಿಸಬೇಕು.

ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಶಾಸಕ ಸತೀಶ್‌ ರೆಡ್ಡಿ, ಉಪಮೇಯರ್‌ ರಾಮಮೋಹನ್‌ ರಾಜು, ವಲಯ ಜಂಟಿ ಆಯುಕ್ತ ರಾಮಕೃಷ್ಣ, ವಲಯ ಮುಖ್ಯ ಅಭಿಯಂತರ ಕೆಂಪರಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

ನಗರದಾದ್ಯಂತ 12 ಹೈ ಡೆನ್ಸಿಟಿ ಕಾರಿಡಾರ್‌ಗಳು: ಬಳ್ಳಾರಿ ರಸ್ತೆ (ಚಾಲುಕ್ಯ ವೃತ್ತದಿಂದ ಹೆಬ್ಟಾಳ), ಹಳೇ ಮದ್ರಾಸ್‌ ರಸ್ತೆ (ಟ್ರಿನಿಟಿ ವೃತ್ತದಿಂದ ಕೆ.ಆರ್‌.ಪುರಂ), ಹಳೇ ಏರ್‌ಪೋರ್ಟ್‌ ರಸ್ತೆ (ಎಎಸ್‌ಸಿ ಸೆಂಟರ್‌ನಿಂದ ಕಾಡುಗೋಡಿ), ಸರ್ಜಾಪುರ ರಸ್ತೆ (ಹೊಸೂರು ರಸ್ತೆಯ ಸೆಂಟ್‌ ಜಾನ್ಸ್‌ ಆಸ್ಪತ್ರೆಯಿಂದ ಕಾರ್ಮೆಲಾರಾಂ ಸೇತುವೆ), ಹೊಸೂರು ರಸ್ತೆ (ವೆಲ್ಲಾರ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌), ಬನ್ನೇರುಘಟ್ಟ ರಸ್ತೆ(ಡೈರಿ ವೃತ್ತದಿಂದ ನೈಸ್‌ ರಸ್ತೆ), ಕನಕಪುರ ರಸ್ತೆ(ಕೆ.ಆರ್‌.ರಸ್ತೆಯಿಂದ ನೈಸ್‌ ರಸ್ತೆ), ಮೈಸೂರು ರಸ್ತೆ (ಹಡ್ಸನ್‌ ವೃತ್ತದಿಂದ ಜ್ಞಾನಭಾರತಿ ಜಂಕ್ಷನ್‌),

ಮಾಗಡಿ ರಸ್ತೆ (ಹಳೇ ಬಿನ್ನಿ ಮಿಲ್‌ನಿಂದ ಅಚಿಜನಾ ನಗರ-ನೈಸ್‌ ರಸ್ತೆ), ತುಮಕೂರು ರಸ್ತೆ (ಓಕಳಿಪುರಂನಿಂದ ಗೊರಗುಂಟೆ ಪಾಳ್ಯ), ವೆಸ್ಟ್‌ ಆಫ್ ಕಾರ್ಡ್‌ ರಸ್ತೆ (ಸೋಪ್‌ ಫ್ಯಾಕ್ಟರಿಯಿಂದ ಮೈಸೂರು ರಸ್ತೆ), ಹೊರ ವರ್ತುಲ ರಿಂಗ್‌ ರಸ್ತೆ(ಗೊರಗುಂಟೆ ಪಾಳ್ಯ-ತುಮಕೂರು ರಸ್ತೆ-ಹೆಬ್ಟಾಳ-ಕೆ.ಆರ್‌.ಪುರ -ಮಾರತಹಳ್ಳಿ -ಜೆ.ಡಿ.ಮರ ಜಂಕ್ಷನ್‌-ನೈಸ್‌ ರಸ್ತೆ ಜಂಕ್ಷನ್‌-ನಾಯಂಡಹಳ್ಳಿ ಜಂಕ್ಷನ್‌-ಕೊಟ್ಟಿಗೆಪಾಳ್ಯ ಜಂಕ್ಷನ್‌-ಗೊರಗುಂಟೆಪಾಳ್ಯ ರಸ್ತೆಯವರೆಗೆ) ಹೈ ಡೆನ್ಸಿಟಿ ಕಾರಿಡಾರ್‌ ಎಂದು ಗುರುತಿಸಲಾಗಿದೆ.

ಒಂದು ಕಸ ಗುಡಿಸುವ ಯಂತ್ರಕ್ಕೆ 1.36 ಕೋಟಿ ರೂ.ಗಳಂತೆ ಒಟ್ಟು 23.28 ಕೋಟಿ ರೂ. ವೆಚ್ಚದಲ್ಲಿ 17 ಯಂತ್ರಗಳನ್ನು ಖರೀದಿಸಲಾಗಿದೆ. ಯಾವ್ಯಾವ ರಸ್ತೆಗಳಲ್ಲಿ ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು ಎಂಬ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.
-ವಿಶ್ವನಾಥ್‌, ಮುಖ್ಯ ಅಭಿಯಂತರ (ಘನತ್ಯಾಜ್ಯ)

Advertisement

Udayavani is now on Telegram. Click here to join our channel and stay updated with the latest news.

Next