Advertisement

ಮೂಲಭೂತ ಮಂತ್ರ

11:00 PM Feb 01, 2020 | Lakshmi GovindaRaj |

2019ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ, ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯದ ಮೇಲೆ 100 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿದ್ದರು. ಆ ಪ್ರಕಾರ 2019 ಡಿ.31ರಂದು ನಿರ್ಮಲಾ 103 ಲಕ್ಷ ಕೋಟಿ ರೂ. ಮೊತ್ತದ ನ್ಯಾಷನಲ್‌ ಪೈಪ್‌ಲೈನ್‌ ಪ್ರಾಜೆಕ್ಟ್ಗೆ (ಎನ್‌ಐಪಿ) ಚಾಲನೆ ನೀಡಿದ್ದಾರೆ. ಈ ಯೋಜನೆಯಲ್ಲಿ 6500 ವಿವಿಧ ಯೋಜನೆಗಳಿವೆ.

Advertisement

ಗೃಹನಿರ್ಮಾಣ, ಸುರಕ್ಷಿತ ಕುಡಿಯುವ ನೀರು, ಕಡಿಮೆವೆಚ್ಚದಲ್ಲಿ ಇಂಧನ ಲಭ್ಯತೆ, ಎಲ್ಲರಿಗೂ ಆರೋಗ್ಯಸೇವೆ, ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳು, ಆಧುನಿಕ ರೈಲ್ವೆ ನಿಲ್ದಾಣಗಳು, ವಿಮಾನನಿಲ್ದಾಣಗಳು, ಬಸ್‌ ನಿಲ್ದಾಣಗಳು, ಮೆಟ್ರೋ ಮತ್ತು ರೈಲ್ವೆ ಸಾರಿಗೆ, ಸರಕು ಸಾಗಣೆ, ಸಂಗ್ರಹಾಗಾರ, ನೀರಾವರಿ ಯೋಜನೆಗಳು ಇವೆಲ್ಲ ಎನ್‌ಐಪಿಯಲ್ಲಿ ಬರುವ ಸೌಕರ್ಯಗಳು.

ವ್ಯವಸ್ಥಿತವಾಗಿ ಮೂಲಭೂತ ಸೌಕರ್ಯದ ಮೇಲೆ ಹೂಡಿಕೆ ಮಾಡುವುದರಿಂದ ಉದ್ಯೋಗ ನಿರ್ಮಾಣವಾಗುತ್ತದೆ, ಆದಾಯ ಹೆಚ್ಚುತ್ತದೆ, 2025ರಷ್ಟೊತ್ತಿಗೆ ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್‌ ಡಾಲರ್‌ಗಳಿಗೇರಿಸುತ್ತದೆ ಎನ್ನುವುದು ಮೋದಿ ಸರ್ಕಾರದ ಲೆಕ್ಕಾಚಾರ.

ಸದ್ಯದಲ್ಲೇ ರಾಷ್ಟ್ರೀಯ ಸಾಗಣೆ ನೀತಿ: ಸದ್ಯದಲ್ಲೇ ರಾಷ್ಟ್ರೀಯ ಸಾಗಣೆ ನೀತಿ ಜಾರಿಯಾಗಲಿದೆ. ಇದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಿಯಂತ್ರಕ ಸಂಸ್ಥೆಗಳ ಜವಾಬ್ದಾರಿಗಳೇನು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಅಂತರ್ಜಾಲದಲ್ಲಿ ಇ ಲಾಜಿಸ್ಟಿಕ್ಸ್‌ ಮಾರ್ಕೆಟ್‌ ಜಾರಿಯಾ ಗಲಿದೆ. ಇದರ ಮುಖ್ಯ ಉದ್ದೇಶ ಉದ್ಯೋಗ ಸೃಷ್ಟಿಸುವುದು.

ಫಾಸ್ಟ್‌ಟ್ಯಾಗ್‌ನಲ್ಲಿ ಆದಾಯ ನಿರೀಕ್ಷೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್‌ ಜಾರಿ ಮಾಡಿರುವುದು ಉತ್ತಮ ಪರಿಣಾಮ ಬೀರಿದೆ. ಇದು ನಮ್ಮ ಆರ್ಥಿಕಾಭಿವೃದ್ಧಿಗೆ ನೆರವಾಗಲಿದೆ. 2024ರೊಳಗೆ 6000 ಕಿ.ಮೀ. ವ್ಯಾಪ್ತಿಯ ರಸ್ತೆಗಳನ್ನು ಫಾಸ್ಟ್‌ಟ್ಯಾಗ್‌ ವ್ಯಾಪ್ತಿಗೊಳಪಡಿಸಿ, ಆದಾಯ ಸಂಗ್ರಹಿಸುವ ನಿರೀಕ್ಷೆಯಿದೆ.

Advertisement

ಕೇಂದ್ರ ಮಾಹಿತಿ ಆಯೋಗಕ್ಕೆ 9.90 ಕೋ ರೂ. ಭರ್ಜರಿ ನೆರವು: 2020- 21ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರವು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಗಳಿಗೆ ಒಟ್ಟು 9.90 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಇದು ಶೇ. 80ರಷ್ಟು ಹೆಚ್ಚಳ. ಕಳೆದ ಬಾರಿ 5.5 ಕೋಟಿ ರೂ.ಗಳನ್ನು ಮಾತ್ರ ನೀಡಲಾಗಿತ್ತು.

ಸಿಐಸಿಯ ಕೇಂದ್ರ ಕಟ್ಟಡ ನಿರ್ಮಾಣ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಬಲವರ್ಧನೆಗೆ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ. “ಸಿಐಸಿ ಮತ್ತು ಪಿಇಎಸ್‌ಬಿ’ ಎಂಬ ಪ್ರತ್ಯೇಕ ವಿಭಾಗದಡಿ ಸಿಐಸಿ 32 ಕೋಟಿ ರೂ.ಗಳನ್ನು ಹೆಚ್ಚುವರಿ ಅನುದಾನ ಪಡೆದಿದೆ. ಕಳೆದ ಬಾರಿ 30.02 ಕೋಟಿ ರೂ. ಅನುದಾನ ಪಡೆದಿತ್ತು. 32 ಕೋಟಿ ರೂ. ಅನುದಾನವನ್ನು ಸಿಐಸಿ ಮತ್ತು ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ(ಪಿಇಎಸ್‌ಬಿ)ಗಳ ಸ್ಥಾಪನೆ ಸಂಬಂಧಿ ವೆಚ್ಚಗಳಿಗೆ ಬಳಸಿಕೊಳ್ಳಲಾಗುವುದು.

ಸಿಬಿಐ ಅನುದಾನದಲ್ಲಿ 4 ಕೋಟಿ ರೂ. ಅಲ್ಪ ಹೆಚ್ಚಳ: ದೇಶದ ಹಲವು ಹೈಪ್ರೊಫೈಲ್‌ ಪ್ರಕರಣಗಳ ವಿಚಾರಣೆಗಳಿಂದಾಗಿ ಕೇಂದ್ರಬಿಂದುವಾಗಿರುವ ಸಿಬಿಐ ಈ ಬಾರಿಯ ಕೇಂದ್ರ ಮುಂಗಡಪತ್ರದಲ್ಲಿ 802 ಕೋಟಿ ರೂ. ಅನುದಾನ ಪಡೆದಿದೆ. ಮಾನವ ಸಂಪನ್ಮೂಲದ ಕೊರತೆಯ ಹೊರತಾಗಿಯೂ ತನಿಖಾ ಸಂಸ್ಥೆ, ಭ್ರಷ್ಟಾಚಾರ, ಬ್ಯಾಂಕಿಂಗ್‌ ವಂಚನೆ ಮುಂತಾದ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಕರಣಗಳಲ್ಲಿ ತೊಡಗಿದೆ.

ಕಳೆದ ಬಾರಿಯ ಬಜೆಟ್‌ನಲ್ಲಿ 781.01 ಕೋಟಿ ರೂ. ಅನುದಾನವನ್ನು ನಂತರದ ದಿನ ಗಳಲ್ಲಿ 798 ಕೋಟಿ ರೂ. ಗೆ ಏರಿಸಲಾಗಿತ್ತು. ಇ- ಆಡಳಿತ, ತರಬೇತಿ ಕೇಂದ್ರಗಳ ಆಧುನೀಕರಣ, ತಾಂತ್ರಿಕ ಮತ್ತು ವಿಧಿವಿಜ್ಞಾನ ಕೇಂದ್ರಗಳ ಸ್ಥಾಪನೆ, ಕಚೇರಿ ಕಟ್ಟಡ ನಿರ್ಮಾಣ, ವಸತಿ ಸಮುತ್ಛಯಗಳ ನಿರ್ಮಾಣ ಮುಂತಾದ ಕಾರ್ಯ ಗಳಿಗೆ ಈ ಬಾರಿಯ ಅನುದಾನ ಬಳಕೆಯಾಗಲಿದೆ.

ಹೆಚ್ಚುವರಿ 5 ಸ್ಮಾರ್ಟ್‌ ಸಿಟಿಗಳು: ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್‌ಸಿಟಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಆದರೆ ಈ ನಿಟ್ಟಿನಲ್ಲಿ ಪ್ರಯತ್ನ ನಿಂತಿಲ್ಲ. ಈ ಬಾರಿ ಮತ್ತೆ ಹೆಚ್ಚುವರಿ 5 ಸ್ಮಾರ್ಟ್‌ಸಿಟಿಗಳನ್ನು ನಿರ್ಮಲಾ ಘೋಷಿಸಿದ್ದಾರೆ. ಎಂದಿನಂತೆ ಇವೂ ಕೂಡ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಡೆಯಲಿದೆ.

ಸಣ್ಣ ಮತ್ತು ಅತಿಸಣ್ಣ ಉದ್ಯಮದ ಬೆಳವ ಣಿಗೆಗೆ ಆದ್ಯತೆ ನೀಡಲಾಗಿದೆ. ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ರೈತರ ಆದಾಯದ ದ್ವಿಗುಣಕ್ಕೆ, ಹಾಲು ಉತ್ವಾದನೆ ಮತ್ತು ಕಲಿಕಾ ಕ್ಷೇತ್ರಕ್ಕೆ ಮತ್ತಷ್ಟು ಒತ್ತು ನೀಡಲಾಗಿದೆ. ಈ ಬಜೆಟ್‌ಗೆ ನಾನು 10ಕ್ಕೆ 8 ಅಂಕ ನೀಡುತ್ತೇನೆ.
-ಸಿ.ಆರ್‌.ಜನಾರ್ದನ, ಎಫ್ಕೆಸಿಸಿಐ ಅಧ್ಯಕ್ಷ

ಜೀವ ವಿಮೆಯ ಭಾಗಶಃ ಷೇರುಗಳನ್ನು ಮಾರಲು ಸರ್ಕಾರ ಮುಂದಾಗಿರುವುದು ನಿಜಕ್ಕೂ ಅವಮಾನಕರ. ಸರ್ಕಾರ ಸಾರ್ವಜನಿಕ ಸಂಸ್ಥೆಗಳ ಪರಂಪರೆ ಮೇಲೆ ದಾಳಿ ಮಾಡುತ್ತಿರು ವುದು ನೋಡಿ ದಿಗಿಲಾಗಿದೆ. ಜನರಲ್ಲಿದ್ದ ಭದ್ರತಾ ಭಾವ ಕೊನೆಯಾಗುತ್ತಿದೆ. ಇದೊಂದು ಯುಗಾಂತ್ಯ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಕೇಂದ್ರ ಬಜೆಟ್‌ ದಿಕ್ಕುರಹಿತವಾಗಿದೆ. ಯುವಜನರಿಗೆ ಉದ್ಯೋಗಾವಕಾಶಗಳನ್ನು ನೀಡುವ, ಸಂಪತ್ತು ಉತ್ಪಾದಿಸುವ ಕುರಿತು ಒಂದೇ ಒಂದು ಪ್ರಸ್ತಾವನೆಯೂ ಇಲ್ಲ. ಬಿಹಾರಕ್ಕೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಅಥವಾ ಹೊಸ ಉದ್ದಿಮೆಗಳ ಪ್ರಸ್ತಾವನೆಯೇ ಇಲ್ಲ.
-ತೇಜಸ್ವಿ ಯಾದವ್‌, ಆರ್‌ಜೆಡಿ ಶಾಸಕ

ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಇದು ಸಂಸ್ಕೃತಿ ಹೇರಿಕೆಯಂತೆ ಕಾಣುತ್ತಿದೆ. ತಮಿಳುನಾಡಿಗೆ ಯಾವುದೇ ಉಪಯೋಗ ಈ ಬಜೆಟ್‌ನಿಂದ ಆಗಿಲ್ಲ. ಇದರ ಜೊತೆಗೆ ಸಾರ್ವಜನಿಕ ಉದ್ದೆಮೆಗಳನ್ನು ಕೇಂದ್ರ ಬಲಿಕೊಡುತ್ತಿರುವುದು ಆತಂಕ ಹೆಚ್ಚಿಸಿದೆ.
-ಎಂ.ಕೆ. ಸ್ಟಾಲಿನ್‌, ಡಿಎಂಕೆ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next