Advertisement

Politics: ಗರಿಗೆದರಿದ ರಾಜಕೀಯ ವರ್ಷಾಂತ್ಯ: ಪಂಚ ರಾಜ್ಯಗಳಲ್ಲಿ ರಂಗೇರಿದ ಕಣ

11:56 PM Aug 19, 2023 | Team Udayavani |

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಚರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರತೊಡಗಿವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶ, ರಾಜಸ್ಥಾನಕ್ಕೆ ಭೇಟಿ ನೀಡಿ ಹಲವು ಯೋಜನೆಗಳನ್ನು ಉದ್ಘಾಟಿಸುವ ಮೂಲಕ ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷಗಳು ಕೂಡ ಬೇರೆ ಬೇರೆ ರೀತಿಯ ಕಾರ್ಯತಂತ್ರಗಳ ಮೂಲಕ ಮತದಾರರ ಸೆಳೆಯಲು ಮುಂದಾಗಿವೆ. ಎಲ್ಲ 5 ರಾಜ್ಯಗಳಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಮಧ್ಯಪ್ರದೇಶಕ್ಕೆ ಬಿಜೆಪಿ ಶಾಸಕರ ಲಗ್ಗೆ
ಮಧ್ಯಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್‌, ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಬಿಜೆಪಿ ಶಾಸಕರು ಶನಿವಾರ ಭೋಪಾಲ್‌ಗೆ ಆಗಮಿಸಿದ್ದಾರೆ. ಪ್ರತಿ ಶಾಸಕರಿಗೂ ತಲಾ ಒಂದು ಅಸೆಂಬ್ಲಿ ಕ್ಷೇತ್ರದ ಜವಾಬ್ದಾರಿಯನ್ನು ನೀಡಲಾಗುತ್ತದೆ. ಅವರು ಆ ಕ್ಷೇತ್ರಕ್ಕೆ ತೆರಳಿ ಅಲ್ಲಿನ ನೈಜ ಪರಿಸ್ಥಿತಿ ಅರಿಯುವ, ಜನಾಭಿಪ್ರಾಯವನ್ನು ಸಂಗ್ರಹಿಸುವ ಕೆಲಸ ಮಾಡಲಿದ್ದಾರೆ. ಶನಿವಾರದಿಂದ ಈ ಶಾಸಕರಿಗೆ ತರಬೇತಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಈ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಒಟ್ಟು 230 ಅಸೆಂಬ್ಲಿ ಕ್ಷೇತ್ರಗಳಿವೆ.

ಕಾಂಗ್ರೆಸ್‌-ಆಪ್‌ ವಾಕ್ಸಮರ
ಶನಿವಾರ ಛತ್ತೀಸ್‌ಗಡಕ್ಕೆ ಭೇಟಿ ನೀಡಿರುವ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌, ಐಎನ್‌ಡಿಐಎ ಮೈತ್ರಿಕೂಟದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ ವಿರುದ್ಧವೇ ಹರಿಹಾಯ್ದಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟವು ತೀರಾ ಕಳಪೆ ಮಟ್ಟದಲ್ಲಿದೆ. ಕೆಲವು ಶಾಲೆಗಳನ್ನು ಮುಚ್ಚಲಾಗಿದೆ. ಶಿಕ್ಷಕರಿಗೆ ಸರಿಯಾಗಿ ವೇತನವೂ ಸಿಗುತ್ತಿಲ್ಲ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಪವನ್‌ ಖೇರಾ, “ಛತ್ತೀಸ್‌ಗಡ ಸರ್ಕಾರದ ಸಾಧನೆಯನ್ನು ಹಿಂದಿನ ರಮಣ್‌ಸಿಂಗ್‌ ಸರ್ಕಾರದ ಸಾಧನೆಯೊಂದಿಗೆ ಹೋಲಿಕೆ ಮಾಡಬೇಕೇ ಹೊರತು ದೆಹಲಿ ಜತೆಗಲ್ಲ’ ಎಂದಿದ್ದಾರೆ. ಆಪ್‌ ಮತ್ತು ಕಾಂಗ್ರೆಸ್‌ ನಡುವಿನ ಈ ವಾಗ್ಯುದ್ಧವು ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿನ ಒಗ್ಗಟ್ಟಿನ ಬಗ್ಗೆಯೇ ಪ್ರಶ್ನೆ ಏಳುವಂತೆ ಮಾಡಿದೆ.

ಕಾಂಗ್ರೆಸ್‌ಗೆ ಮರಳಿದ ಸಿಂಧಿಯಾ ಆಪ್ತ
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತ ಸಮಂದರ್‌ ಪಟೇಲ್‌ ಬಿಜೆಪಿ ತೊರೆದು ಶನಿವಾರ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಮಧ್ಯಪ್ರದೇಶದ ಜವಾದ್‌ ಕ್ಷೇತ್ರದ ಶಾಸಕರಾಗಿರುವ ಅವರು ಮಧ್ಯಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ನಾಥ್‌ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು. ಇದಕ್ಕೂ ಮುನ್ನ ಅವರು ಜವಾದ್‌ನಿಂದ ರಾಜಧಾನಿ ಭೋಪಾಲ್‌ವರೆಗೆ 1,200 ಕಾರುಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದರು. 2020ರಲ್ಲಿ ಬಿಜೆಪಿ ಸೇರಿದ ನಂತರ ಕಾಂಗ್ರೆಸ್‌ಗೆ ಮರಳುತ್ತಿರುವ ಸಿಂಧಿಯಾ ಆಪ್ತರ ಪೈಕಿ ಪಟೇಲ್‌ ಮೂರನೆಯವರು. ಸಮಂದರ್‌ ಅವರನ್ನು ಸಿಂಧಿಯಾ ಅವರ “ರೈಟ್‌ ಹ್ಯಾಂಡ್‌’ ಎಂದೇ ಗುರುತಿಸಲಾಗಿದೆ. “ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇತ್ತು’ ಎಂದು ಸಮಂದರ್‌ ಹೇಳಿದ್ದಾರೆ.

10 ಗ್ಯಾರಂಟಿ ಘೋಷಣೆ
ಕಾಂಗ್ರೆಸ್‌ ಆಡಳಿತದ ಛತ್ತೀಸ್‌ಗಡದಲ್ಲಿ ಹೆಜ್ಜೆಯೂರಲು ಪ್ರಯತ್ನಿಸುತ್ತಿರುವ ಆಮ್‌ ಆದ್ಮಿ ಪಕ್ಷ, “ಗ್ಯಾರಂಟಿ’ಗಳ ಮೂಲಕವೇ ಕಾಂಗ್ರೆಸ್‌ಗೆ ಠಕ್ಕರ್‌ ನೀಡಲು ಮುಂದಾಗಿದೆ. ಶನಿವಾರ ರಾಯು³ರದಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಆಪ್‌ ನಾಯಕ ಕೇಜ್ರಿವಾಲ್‌, ಮುಂಬರುವ ವಿಧಾನಸಭೆ ಚುನಾವಣೆಗೆ 10 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. “ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 300 ಯುನಿಟ್‌ವರೆಗೆ ಉಚಿತ ವಿದ್ಯುತ್‌, 2023ರ ನವೆಂಬರ್‌ವರೆಗಿನ ಬಾಕಿ ವಿದ್ಯುತ್‌ ಬಿಲ್‌ ಮನ್ನಾ, 18 ವರ್ಷ ವಯಸ್ಸು ದಾಟಿದ ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ಗೌರವಧನ, ಶಾಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ, ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಭತ್ಯೆ ಸೇರಿದಂತೆ 10 ಗ್ಯಾರಂಟಿಗಳನ್ನು ನೀಡುತ್ತೇವೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

Advertisement

ಅಧಿಕಾರ ಉಳಿಸಿಕೊಳ್ಳುತ್ತೇವೆ
ಮಿಜೋರಾಂನಲ್ಲಿ ಈ ವರ್ಷಾಂತ್ಯ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಂಎನ್‌ಎಫ್ ಜಯ ಗಳಿಸುವುದು ಖಚಿತ ಎಂದು ಮುಖ್ಯಮಂತ್ರಿ ಝೊರಾಮ್‌ಥಂಗಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 40ರ ಪೈಕಿ ನಮ್ಮ ಕೈಯ್ಯಲ್ಲಿ “10 ಸುರಕ್ಷಿತ ಸೀಟು’ಗಳಿದ್ದು, ಈ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಪ್ರಭಾವ ನಗಣ್ಯವಾಗಿದೆ ಎಂದಿದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಆಡಳಿತಾರೂಢ ಎಂಎನ್‌ಎಫ್ 27 ಸ್ಥಾನಗಳನ್ನು ಹೊಂದಿದ್ದರೆ, ಪ್ರಮುಖ ಪ್ರತಿಪಕ್ಷ ಝೆಡ್‌ಪಿಎಂ 7, ಕಾಂಗ್ರೆಸ್‌ 5 ಮತ್ತು ಬಿಜೆಪಿ 1 ಸ್ಥಾನಗಳನ್ನು ಹೊಂದಿವೆ.

ಯಾವುದೇ ಜಾತಿ, ಧರ್ಮದ ತಾರತಮ್ಯ ಮಾತನಾಡದೇ ತೆಲಂಗಾಣದ ಪ್ರತಿಯೊಂದು ವರ್ಗದ ಅಭಿವೃದ್ಧಿಗೂ ಕಾರಣರಾಗಿರುವ ಕೆ.ಚಂದ್ರಶೇಖರ್‌ ರಾವ್‌ ಅವರು “ಹ್ಯಾಟ್ರಿಕ್‌ ಸಿಎಂ’ ಆಗಿ ಹೊರಹೊಮ್ಮಬೇಕು. ಹೈದರಾಬಾದ್‌ ಇಡೀ ದೇಶಕ್ಕೇ ಮಾದರಿಯಾಗಬೇಕು.
ಕೆ.ಟಿ.ರಾಮರಾವ್‌, ತೆಲಂಗಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next