ಒಂಟೆ ಮತ್ತು ನರಿ ಒಳ್ಳೆಯ ಸ್ನೇಹಿತರಾಗಿದ್ದರು. ಒಂಟೆಯ ಹೆಸರು ಲೊಂಬೋ, ನರಿಯ ಹೆಸರು ಚೋಟು. ಇವರಿಬ್ಬರೂ ನದಿ ತೀರದಲ್ಲಿ ವಾಸಿಸುತ್ತಿದ್ದರು. ನದಿಯ ಆಚೆ ದಡದಲ್ಲಿ ಹಳ್ಳಿಯಿತ್ತು. ಹಳ್ಳಿಗೆ ತಾಗಿಕೊಂಡಂತೆ ಕಬ್ಬಿನ ಗದ್ದೆಯೂ ಇತ್ತು. ಕಬ್ಬಿನ ಗದ್ದೆಯಲ್ಲಿ ಕಬ್ಬು ತಿನ್ನುವ ಆಸೆ ಚೋಟುವಿಗೆ. ಆದರೆ ಲೊಂಬೋಗೆ ಎಲ್ಲಿ ಸಿಕ್ಕಿ ಬೀಳುವೆವೋ ಎನ್ನುವ ಭಯ. ಅದಕ್ಕೆ ಚೋಟು ಒಂದು ಉಪಾಯ ಹೇಳಿತು- “ಹೆದರಬೇಡ ಲೊಂಬೋ. ನಾನಿಲ್ಲವಾ ನಿನ್ನ ಜೊತೆ? ನನಗೆ ನದಿ ದಾಟೋಕೆ ಸಹಾಯ ಮಾಡು ಅಷ್ಟು ಸಾಕು’ ಎಂದಿತು. ನರಿಯ ಭರವಸೆಯ ಮಾತುಗಳನ್ನು ಕೇಳಿ ಒಂಟೆ ಅರೆಮನಸ್ಸಿನಿಂದ ಒಪ್ಪಿಗೆ ಸೂಚಿಸಿತು.
ಆ ರಾತ್ರಿ ಚೋಟುವನ್ನು ಬೆನ್ನ ಮೇಲೆ ಹೊತ್ತುಕೊಂಡು ಲೊಂಬೋ ನದಿ ದಾಟಿತು. ಇಬ್ಬರೂ ಕಬ್ಬಿನ ಗದ್ದೆಗೆ ಬಂದರು. ಹಸಿರಿನಿಂದ ಕೂಡಿದ ಕಬ್ಬಿನ ಗದ್ದೆಗೆ ನುಗ್ಗಿ ಇಬ್ಬರೂ ಮನಸೋ ಇಚ್ಛೆ ತಿನ್ನಲು ಪ್ರಾರಂಭಿಸಿದರು. ಗಂಟೆ ಕಳೆಯುವುದರೊಳಗೆ ಇಬ್ಬರ ಹೊಟ್ಟೆಯೂ ತುಂಬಿತು. ಹೊಟ್ಟೆ ತುಂಬಿದ ಖುಷಿಯಲ್ಲಿ ಚೋಟು ಗಂಟಲು ಸರಿಪಡಿಸಿಕೊಳ್ಳುತ್ತಾ, “ಲೊಂಬೋ, ನನಗೆ ತುಂಬಾ ಖುಷಿಯಾಗುತ್ತಿದೆ. ಖುಷಿಯಾದಾಗಲೆಲ್ಲಾ ಹಾಡಬೇಕು ಅನ್ನಿಸುತ್ತದೆ’ ಎಂದಿತು. “ನಿನ್ನ ದಮ್ಮಯ್ಯ! ಸ್ವಲ್ಪ ಬಾಯಿ ಮುಚ್ಚಿಕೊಂಡು ಸುಮ್ಮನಿರು. ಸ್ವಲ್ಪ ಸದ್ದಾದರೂ ಊರಿನವರು ದೊಣ್ಣೆ ತೆಗೆದುಕೊಂಡು ಬರುತ್ತಾರೆ’ ಎಂದಿತು ಲೊಂಬೋ ಭಯದಿಂದ. ಆದರೆ ಚೋಟು ಕೇಳಬೇಕಲ್ಲ. ಜೋರಾಗಿ ತಾರಕ ಸ್ವರದಲ್ಲಿ ಹಾಡಲು ಪ್ರಾರಂಭಿಸಿಯೇ ಬಿಟ್ಟಿತು.
ಲೊಂಬೋವಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಎಷ್ಟು ಕೇಳಿಕೊಂಡರೂ ಚೋಟು ಅರಚುವುದನ್ನು ನಿಲ್ಲಿಸಲಿಲ್ಲ. ನರಿ ಕೂಗುವುದನ್ನು ಕೇಳಿ ಮಲಗಿದ್ದ ಹಳ್ಳಿಯ ಜನರೆಲ್ಲ ಎದ್ದುಬಂದರು. ಲೊಂಬೋ ಸುತ್ತ ನೋಡಿದರೆ ಚೋಟುವಿನ ಸುಳಿವೇ ಇರಲಿಲ್ಲ. ಜನರು ಬರುವುದನ್ನು ನೋಡಿ ಹೆದರಿದ ಚೋಟು ಹತ್ತಿರದಲ್ಲಿದ್ದ ಪೊದೆಯೊಳಗೆ ಅವಿತುಕೊಂಡಿತ್ತು. ಆದರೆ ಲೊಂಬೊ ಬಚ್ಚಿಟ್ಟುಕೊಳ್ಳುವಷ್ಟು ದೊಡ್ಡ ಪೊದೆ ಅಲ್ಲಿರಲಿಲ್ಲ.
ದೊಣ್ಣೆಗಳೊಂದಿಗೆ ಬಂದ ಜನರು ಒಂಟೆಯೇ ಕಬ್ಬಿನ ಗದ್ದೆಯನ್ನು ತಿಂದು ಹಾಳು ಮಾಡಿದೆ ಎಂದು ತಿಳಿದು ಸಿಟ್ಟಿನಿಂದ ಚೆನ್ನಾಗಿ ಬಡಿದರು. ಒಂಟೆ ನೋವಿನಿಂದ ನರಳುತ್ತಾ ಗದ್ದೆಯಿಂದ ಓಡಿತು. ಜನರೆಲ್ಲ ಹೋದ ಮೇಲೆ, ಚೋಟು ಮೆಲ್ಲನೆ ಪೊದೆಗಳಿಂದ ಹೊರಬಂದು, “ಅಯ್ಯೋ ಪಾಪ, ನಿನ್ನ ದೇಹ ಇಷ್ಟೊಂದು ದೊಡ್ಡದಿದೆ. ನಿನಗೆ ಎಲ್ಲಿಯೂ ಅಡಗಿ ಕುಳಿತುಕೊಳ್ಳಲು ಅಗುವುದಿಲ್ಲ ಎಂದು ನನಗೆ ಮರೆತೇ ಹೋಗಿತ್ತು. ನಾನು ನೋಡು ಎಷ್ಟು ಸಣ್ಣಕ್ಕಿದ್ದೇನೆ. ಹೇಗೆ, ಎಲ್ಲಿ ಬೇಕಾದರೂ ಅಡಗಬಹುದು’ ಎಂದು ಕುಹಕದ ಸಾಂತ್ವನ ಹೇಳಿತು. ಚೋಟುವಿನ ಮಾತಿನಿಂದ ಲೊಂಬೋವಿಗೆ ಬೇಸರವಾಯ್ತು.
ಇಬ್ಬರೂ ವಾಪಸ್ ಕಾಡಿಗೆ ಹೊರಟರು. ಹೊಳೆ ದಾಟಲು ಚೋಟು ಲೊಂಬೋವಿನ ಬೆನ್ನೇರಿ ಕುಳಿತಿತು. ನದಿಯ ಮಧ್ಯೆ ಬಂದಾಗ ಲೊಂಬೋ ಮೈ ಮುರಿಯುತ್ತಾ, “ಚೋಟು, ಜನರೆಲ್ಲ ಎಷ್ಟು ಹೊಡೆದರು ಗೊತ್ತಾ? ಬೆನ್ನೆಲ್ಲಾ ಉರಿಯುತ್ತಿದೆ. ನೀರಲ್ಲಿ ಮುಳುಗಿದರೆ ಮೈಯೆಲ್ಲಾ ತಂಪಾದೀತು’ ಎಂದು ಮುಳುಗಿತು. ಚೋಟು ಗಾಬರಿಯಲ್ಲಿ, “ನೀನೀಗ ಮುಳುಗು ಹಾಕಿದರೆ ನಾನು ಬಿದ್ದು ಹೋಗುತ್ತೇನೆ. ದಯವಿಟ್ಟು ಹಾಗೆ ಮಾಡಬೇಡ’ ಎಂದಿತು. “ಹಾಡಬೇಡ ಅಂದಾಗ ನನ್ನ ಮಾತು ಕೇಳಲಿಲ್ಲ. ಈಗ ನಿನ್ನ ಮಾತನ್ನು ನಾನೇಕೆ ಕೇಳಲಿ?’ ಎಂದು ಲೊಂಬೋ ನದಿಯಲ್ಲಿ ಇನ್ನೊಂದು ಮುಳುಗು ಹಾಕಿತು. ಮುಳುಗಿ ಮೇಲೆದ್ದ ನರಿ “ಅಯ್ಯೋ ಕ್ಷಮಿಸು ಗೆಳೆಯಾ ಇನ್ಯಾವತ್ತೂ ನಿನ್ನನ್ನು ಸಂಕಟಕ್ಕೆ ಸಿಲುಕಿಸುವುದಿಲ್ಲ’ ಎಂದಾಗ ಲೊಂಬೋ ಸುಮ್ಮನಾಯಿತು. ಸುರಕ್ಷಿತವಾಗಿ ನರಿಯನ್ನು ದಡಕ್ಕೆ ಸೇರಿಸಿತು.
-ವೇದಾವತಿ ಹೆಚ್. ಎಸ್.