Advertisement
ಕೇರಳದ ಕೊಚ್ಚಿನ್ ನಿವಾಸಿ ಗಳಾದ ಜಸ್ಟಿನ್ (34), ಶೀಜಾ (33), ಜೋಶ್ (28) ಮತ್ತು ಹರೀಶ್ (17) ಶನಿವಾರ ರಾತ್ರಿ ಪೂರ್ತಿ ದ್ವೀಪದಲ್ಲಿ ದ್ದರು. ಅವರನ್ನು ರವಿವಾರ ಬೆಳಗ್ಗೆ 7.30ಕ್ಕೆ ತೀರಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ. ಮಲ್ಪೆ ಠಾಣೆಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಸುರಕ್ಷಿತವಾಗಿ ಕೇರಳಕ್ಕೆ ಕಳುಹಿಸಿದ್ದಾರೆ.ಜಸ್ಟಿನ್ ಮತ್ತು ಶೀಜಾ ಕೇರಳದಲ್ಲಿ ಹೋಮ್‌ಸ್ಟೇಯಂತಹ ಸಣ್ಣ ಉದ್ಯಮ ನಡೆಸುತ್ತಿದ್ದು, ಜೋಶ್ ಇವರೊಂದಿಗೆ ಕೆಲಸಕ್ಕಿರುವಾತ ಎನ್ನಲಾಗಿದೆ. ಹರೀಶ್ 17 ವರ್ಷದೊಳಗಿನ ಕೊಚ್ಚಿನ್ ಫುಟ್ಬಾಲ್ ಅಕಾಡೆಮಿಯ ಗೋಲ್‌ಕೀಪರ್ ಆಗಿದ್ದ ಎಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸೈಂಟ್ ಮೇರಿಸ್ ದ್ವೀಪದಲ್ಲಿ ವಿಹರಿಸುತ್ತ ಈ ನಾಲ್ವರು ದೊಡ್ಡ ಬಂಡೆಯೊಂದನ್ನು ಏರಿದ್ದರು. ಸಂಜೆ ಬಂಡೆಯ ಸುತ್ತ ನೀರಿನ ಮಟ್ಟ ಏರಿದ್ದರಿಂದ ಇಳಿದು ಬರಲು ಅವರಿಗೆ ಸಾಧ್ಯವಾಗಲಿಲ್ಲ. ನೀರಿನ ಮಟ್ಟ ಸ್ವಲ್ಪ ಇಳಿಯುತ್ತಿದ್ದಂತೆ ಬೋಟ್ ಹೊರಡುವ ಸ್ಥಳಕ್ಕೆ ಈ ನಾಲ್ವರು ಬಂದಾಗ ಕೊನೆಯ ಬೋಟ್ ದ್ವೀಪದಿಂದ ಮಲ್ಪೆಗೆ ವಾಪಸಾಗಿತ್ತು.
Related Articles
ಯಾರನ್ನೂ ಸಂಪರ್ಕಿಸಲು ಸಾಧ್ಯವಾಗದೆ ಈ ನಾಲ್ವರು ಇಡೀ ರಾತ್ರಿ ದ್ವೀಪದಲ್ಲೇ ಕಳೆಯುವಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿವಾರ ಬೆಳಗ್ಗೆ ಬೋಟ್‌ನವರು ಈ ನಾಲ್ವರನ್ನು ಗಮನಿಸಿದ್ದು, ವಿಚಾರಿಸಿ ತೀರಕ್ಕೆ ಕರೆತಂದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದು, ದ್ವೀಪದಲ್ಲಿ ರಾತ್ರಿ ವಾಸ್ತವ್ಯ ಹೂಡಲು ಅವಕಾಶವಿಲ್ಲವಾದುದರಿಂದ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
Advertisement
ಹೆಚ್ಚುವರಿ ಭದ್ರತಾ ಸಿಬಂದಿ ನೇಮಕ
ಕೊನೆಯ ಬೋಟ್ ತಪ್ಪಿಹೋದ ಪರಿಣಾಮ ನಾಲ್ವರು ಪ್ರವಾಸಿಗರು ಸೈಂಟ್ ಮೇರಿಸ್ ದ್ವೀಪದಲ್ಲಿ ರಾತ್ರಿ ಉಳಿದುಕೊಂಡಿರುವುದು ವಿಚಾರಣೆ ಯಿಂದ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಸ್ಥಳೀಯ ಪೊಲೀಸ್ ಠಾಣೆಯಿಂದ ಮಾಹಿತಿ ಕಲೆ ಹಾಕಿದ್ದೇವೆ. ನಾಲ್ವರು ಕೊಟ್ಟ ಹೇಳಿಕೆ ಹೊಂದಾಣಿಕೆಯಾಗಿರುವುದರಿಂದ ಕಳುಹಿಸಿಕೊಟ್ಟಿದ್ದೇವೆ. ಪ್ರವಾಸಿಗರ ಸುರಕ್ಷತೆ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ದ್ವೀಪದಲ್ಲಿ ಹೆಚ್ಚಿನ ಭದ್ರತಾ ಸಿಬಂದಿ ನಿಯೋಜಿಸುವಂತೆ ಸೂಚಿಸುತ್ತೇವೆ.
-ನಿಶಾ ಜೇಮ್ಸ್,ಎಸ್ಪಿ ಉಡುಪಿ