Advertisement

ವಿದ್ಯೆ ಮಕ್ಕಳ ಭವಿಷ್ಯದ ಬುನಾದಿ: ಪೌರಾಯುಕ್ತ ರಮೇಶ್‌

08:45 PM Jul 29, 2019 | Sriram |

ಮಡಿಕೇರಿ: ಮಡಿಕೇರಿ ಜು.29 ವಿದ್ಯೆ ಎಂಬುವುದು ಮಕ್ಕಳ ಭವಿಷ್ಯದ ಬುನಾದಿಯಾಗಿದ್ದು, ಯಾರೂ ಕದಿಯಲಾಗದ ಸ್ವತ್ತು ಎಂದು ಮಡಿಕೇರಿ ನಗರಸಭಾ ಪೌರಾಯುಕ್ತ ಎಂ.ಎನ್‌. ರಮೇಶ್‌ ಹೇಳಿದರು.

Advertisement

ಮಡಿಕೇರಿಯ ಕ್ಲಬ್‌ ಮಹೇಂದ್ರ ಪ್ರಾಯೋಜಕತ್ವದಲ್ಲಿ ಮಾನವೀಯ ಸ್ನೇಹಿತರ ಒಕ್ಕೂಟ ಮತ್ತು ಮಡಿಕೇರಿ ಹಿತರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕೂರ್ಗ್‌ ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪೋಷಕರು ಮನಸ್ಸು ಮಾಡಿದರೆ ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ನೀಡಬಹುದು. ಇಂಜಿನಿಯರ್‌, ಡಾಕ್ಟರ್‌, ವಿಜ್ಞಾನಿಗಳಾಗುವ ಎಲ್ಲಾ ಅವಕಾಶಗಳು ಇಂದಿನ ವಿದ್ಯಾರ್ಥಿಗಳಿಗಿದ್ದು, ಮಕ್ಕಳ ಭವಿಷ್ಯ ಪೋಷಕರ ನಿರ್ಧಾರದಲ್ಲಡಗಿದೆ ಎಂದರು.

ವಿದ್ಯಾರ್ಜನೆಯ ಸಂದರ್ಭ ಮಕ್ಕಳನ್ನು ಮೊಬೈಲ್‌ ಸಂಪರ್ಕದಿಂದ ದೂರವಿರಿಸಿ ಕಲಿಕೆಗೆ ಆದ್ಯತೆ ನೀಡಬೇಕು. ಮನೆಯಲ್ಲಿ ನಿರ್ದಿಷ್ಟ ಸಮಯವನ್ನು ಮೀಸಲಾಗಿಟ್ಟು ಶೈಕ್ಷಣಿಕ ಚಟುವಟಿಕೆಗೆ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು. ತಾವು ಪತ್ರಿಕಾ ರಂಗದಲ್ಲೂ ಕಾರ್ಯ ನಿರ್ವಹಿಸಿದ್ದು, ಸಂಘಟನೆಗಳ ಮೂಲಕ ಸಮಾಜ ಸೇವೆ ಮಾಡಿರುವುದಾಗಿ ರಮೇಶ್‌ ನೆನಪಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಎಂ.ಇ.ಮಹಮ್ಮದ್‌ ಮಾನವೀಯ ಸ್ನೇಹಿತರ ಒಕ್ಕೂಟದಂತಹ ಜಾತ್ಯತೀತ, ನಿಸ್ವಾರ್ಥ ಸಂಘಟನೆಗಳನ್ನು ಜನರು ಪೋ›ತ್ಸಾಹಿಸಬೇಕೆಂದರು.

Advertisement

ಮಡಿಕೇರಿ ಹಿತರಕ್ಷಣಾ ವೇದಿಕೆಯ ರವೀಗೌಡ ಹಾಗೂ ಕ್ಲಬ್‌ ಮಹೇಂದ್ರದ ಹೆಚ್‌ಆರ್‌ ವ್ಯವಸ್ಥಾಪಕ ಕಾರ್ತಿಕೇಯನ್‌ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಆಯ್ದ 41 ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್‌, ಕೊಡೆ ಹಾಗೂ ರೈನ್‌ ಕೋಟ್‌ಗಳನ್ನು ವಿತರಿಸಲಾಯಿತು.

ಒಕ್ಕೂಟದ ವಕ್ತಾರ ಮೈಕಲ್‌ ವೇಗಸ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಲಬ್‌ ಮಹೇಂದ್ರ ಸಂಸ್ಥೆಯ ಉದಾರ ಕೊಡುಗೆಯನ್ನು ಸ್ಮರಿಸಿದರು.

ಕ್ಲಬ್‌ನ ಮುಖ್ಯ ವ್ಯವಸ್ಥಾಪಕ ದಾಸ್‌ ನವೀನ್‌ ನೊರೋನ ಉಪಸ್ಥಿತರಿದ್ದರು.ಕುಮಾರಿ ಸೇಜಲ್‌ ವಿನ್ಸೆಂಟ್‌ ಪ್ರಾರ್ಥಿಸಿ, ಮಾನವೀಯ ಸ್ನೇಹಿತರ ಒಕ್ಕೂಟದ ಕಾರ್ಯದರ್ಶಿ ಸುಕುಮಾರ್‌ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next