Advertisement
ಬೇಸಿಗೆಯ ಸುಡುಬಿಸಿಲು ಸುಡಲಿಲ್ಲ, ಮಳೆಗಾಲದ ಪ್ರವಾಹ ಮುಳುಗಿ ಸಲಿಲ್ಲ. ಆದರೆ ಸಾವಿರಾರು ಮೈಲಿ ದೂರದಲ್ಲಿ ಕೂತ ಒಬ್ಬ ರಾಜಕಾರಣಿ ಸ್ವಾತಂತ್ರ್ಯ ಪೂರ್ವ ಅವಿಭಜಿತ ಬಂಗಾಳ ಮತ್ತು ಸುತ್ತಮುತ್ತಲಿನ ರಾಜ್ಯಗಳ ಬರೋಬ್ಬರಿ ಮೂವತ್ತು ಲಕ್ಷ ಜನರ ಸಾವಿಗೆ ಕಾರಣನಾದ.
Related Articles
Advertisement
ವಿಶ್ವಸಂಸ್ಥೆಗೆ 1943 ನವೆಂಬರ್ 9ರಂದು ಹೊಸ ಅಂಗ ಸೇರಿಕೊಳ್ಳುತ್ತದೆ- ಪರಿಹಾರ ಮತ್ತು ಪುನರ್ವಸತಿ ಆಯೋಗ. ಅದರ ಧ್ಯೇಯವೇ ಜನ ಹಸಿವಿ ನಿಂದ ಸಾಯುವುದನ್ನು ತಡೆಯುವುದು. ಅದು ಹುಟ್ಟಿದ ದಿನವೇ ಅಮೆರಿಕ ಅಧ್ಯಕ್ಷರಿಗೆ ಮತ್ತು ಅವರ ಪತ್ನಿಗೆ ಒಂದು ಪತ್ರ ಬರುತ್ತದೆ. ಅಮೆರಿಕದಲ್ಲಿದ್ದ ಭಾರತೀಯ ಸಂಘಟನೆಯೊಂದರ ಅಧ್ಯಕ್ಷ ಜೆ.ಜೆ.ಸಿಂಗ್ ಬಂಗಾಳದ ಬರಗಾಲದಲ್ಲಿ ಒದ್ದಾಡುತ್ತಿದ್ದ ಜನರಿಗಾಗಿ ರೂಸ್ವೆಲ್ಟ್ ಹತ್ತಿರ ಸಹಾಯ ಕೇಳು ತ್ತಾರೆ. ಪತ್ರ ಓದಿ ಎಲೀನರ್ ರೂಸ್ವೆಲ್ಟ್ ಮರುಗಿ ತನ್ನ ಗಂಡನ ಬಳಿ ಸಹಾಯ ಮಾಡಲು ಕೇಳಿಕೊಂಡರೆ, ರೂಸ್ವೆಲ್ಟ… ತನ್ನ ಪತ್ನಿಗೆ ಬಾಯಿಮಾತಿನ ಭರವಸೆ ಕೊಡುತ್ತಾನೆ ವಿನಃ ಕೊನೆಗೂ ಚರ್ಚಿಲ್ ವಿರುದ್ಧ ಹೋಗುವುದಿಲ್ಲ. ಲಕ್ಷಾಂತರ ಜನರ ಪ್ರಾಣಕ್ಕಿಂತ ಚರ್ಚಿಲ್‌ಗೆ ಭಾರತೀಯರ ಮೇಲಿನ ದ್ವೇಷ ಮುಖ್ಯ ವಾದರೆ, ರೂಸ್ವೆಲ್ಟ್ಗೆ ಚರ್ಚಿಲ್‌ನ ನ್ನು ಮೆಚ್ಚಿಸುವುದೇ ಮುಖ್ಯವಾಗುತ್ತದೆ.
ಇತಿಹಾಸದ ಪುಟಗಳನ್ನು ಸುಮ್ಮನೆ ತಿರುವಿದರೆ ಅಲ್ಲಿ ಸಿಗುವುದು ಕುತೂಹಲಕಾರಿ ಸತ್ಯಗಳು. ಹಿಟ್ಲರ್ ಮಾತ್ರ ಯಹೂದಿಗಳ ನರಮೇಧ ನಡೆಸಲಿಲ್ಲ. ಅವನ ಮಿತ್ರರಾಷ್ಟ್ರಗಳಾದ ರೊಮೇನಿಯಾ, ಬಲ್ಗೇರಿಯಾ, ಸ್ಲೊವಾಕಿಯಾ, ಇಟೆಲಿ ಮತ್ತು ಹಂಗೇರಿ ಕೂಡ ಸುಮಾರು 2 ಲಕ್ಷ ಯಹೂದಿಗಳನ್ನು ಸಾವಿರಾರು ಮನೆಗಳಲ್ಲಿ ಬಂಧಿಸಿಟ್ಟವು. ಹಂಗೇರಿಯಲ್ಲಿ ಆ ಮನೆಗಳ ಎದುರು ಒಂದು ಹಳದಿ ನಕ್ಷತ್ರವನ್ನು ಅಂಟಿಸಲಾಗುತ್ತಿತ್ತು. ಆ ಹಳದಿ ನಕ್ಷತ್ರದ ಮನೆಗಳ ಒಳಗೆ ಕೊಟ್ಟಿಗೆಯಲ್ಲಿ ದನಗಳನ್ನು ತುಂಬಿದಂತೆ ಯಹೂದಿಗಳನ್ನು ತುಂಬಲಾಗುತ್ತಿತ್ತು. ಅಲ್ಲಿಂದ ಅವರ ಪಯಣ ಜರ್ಮನಿಯ ಶಿಬಿರಗಳಿಗೆ, ಸಾವಿನೆಡೆಗೆ.
ಇತ್ತೀಚೆಗೆ ಬಿಡುಗಡೆಯಾದ “ಹಿಟ್ಲರ್ ನಂತರ ಮಾನವ ಹಕ್ಕುಗಳು’ ಪುಸ್ತಕದಲ್ಲಿ ಡಾ. ಡ್ಯಾನ್ ಪ್ಲೆಶ್, ಹಿಟ್ಲರ್ ನಡೆಸುತ್ತಿದ್ದ ಮರಣ ಶಿಬಿರಗಳ ಬಗ್ಗೆ, ಅದರಲ್ಲಿ ಲಕ್ಷಗಟ್ಟಲೆ ಜನ ವಿಷಾನಿಲ ಸೇವಿಸಿ, ರೋಗಗಳಿಂದ ಮತ್ತು ಚಿತ್ರಹಿಂಸೆಯಿಂದ ಸಾಯುತ್ತಿರುವುದರ ಬಗ್ಗೆ ಬ್ರಿಟನ್‌ಗೆ ಮೊದಲೇ ಮಾಹಿತಿ ಇತ್ತು ಎನ್ನುತ್ತಾರೆ. ಬಲಿಷ್ಠ ರಾಷ್ಟ್ರಗಳ ಮೂಗಿನಡಿಯೇ ಹಿಟ್ಲರ್ ಸುಮಾರು ಒಂದು ಕೋಟಿ ಹತ್ತು ಲಕ್ಷ ಯಹೂದಿಗಳ, ಸ್ಲಾವ್‌ಗಳ, ಸಲಿಂಗಕಾಮಿಗಳ, ರೋಮಾ ಜಿಪ್ಸಿಗಳ ನರಮೇಧ ನಡೆಸಿಯೇಬಿಟ್ಟ. ವಿಶ್ವಸಂಸ್ಥೆಯ ಯುದ್ಧಾಪ ರಾಧ ಆಯೋಗ ಹಿಟ್ಲರ್‌ನ ನರಮೇಧದ ಬಗ್ಗೆ ರಹಸ್ಯವಾಗಿ ತನಿಖೆಯೇನೋ ನಡೆಸಿತು, ಆದರೆ ಅದು ನಾಜಿಗಳ ಬಾಂಬುಗಳ ಸದ್ದು ಲಂಡನ್ ತಲುಪಿದ ಮೇಲೇ. ಅದು ತನ್ನ ಮೊದಲ ಶಿಕ್ಷೆಯನ್ನು ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ವಿಧಿಸಿದ್ದರೆ, ಅದರ ಹೆಸರಿಗೆ, ರಚನೆಗೆ ಒಂದು ಅರ್ಥ ಬರುತ್ತಿತ್ತು. ಆದರೆ ಇಲ್ಲಿವರೆಗೂ ಯಹೂದಿಗಳ ನರಮೇಧದ ಬಗ್ಗೆ ವಿಶ್ವಸಂಸ್ಥೆಯಿಂದ ಹೊರಬಿದ್ದದ್ದು ಬರೀ ಬಾಯಿಮಾತಿನ “ಖಂಡನೆ.’
ಬಾಮಿಯಾನ್ ಬುದ್ಧ ನೆನಪಿರಬಹುದು. ಜಗತ್ತಿನಲ್ಲೇ ಅತಿ ಎತ್ತರದ, ಹಿಂದುಕುಶ್ ಬೆಟ್ಟಗಳಲ್ಲಿ ಕೆತ್ತಿದ ಬುದ್ಧನ ಎರಡು ವಿಗ್ರಹಗಳನ್ನು ತಾಲಿಬಾನ್ 2001ರಲ್ಲಿ ಬಾಂಬುಗಳನ್ನಿಟ್ಟು ನಾಶ ಮಾಡಿತು. ಆಗಿನ ಯುನೆಸ್ಕೊ ಮುಖ್ಯಸ್ಥ ಕೊಯಿಚಿರೋ ಮತ್ಸುರ ನೇತೃತ್ವದಲ್ಲಿ ಮುಸ್ಲಿಮ್ ದೇಶಗಳಾದ ಈಜಿಪ್ಟ್, ಪಾಕಿಸ್ಥಾನ, ಅರಬ್ ದೇಶಗಳು ಕೂಡ ಅಫಘಾನಿಸ್ಥಾನದ ಸಾಂಸ್ಕೃತಿಕ ಪರಂ ಪರೆ ಯನ್ನು ಕೆಡವದಿರಲು ತಾಲಿಬಾನನ್ನು ಬೇಡಿಕೊಂಡವು. ಆದರೆ ತಾಲಿ ಬಾನ್ ಕ್ಯಾರೆ ಅನ್ನಲಿಲ್ಲ. ಬರೀ “ಬೇಡಿಕೊಳ್ಳುವುದರ’ ಹೊರತಾಗಿ ಯುನೆಸ್ಕೋಗೆ ಇವತ್ತಿನವರೆಗೂ ಯುದ್ಧ-ಪೀಡಿತ ಸಿರಿಯಾ, ಇರಾಕ್, ಅಫ್ಘಾನಿಸ್ಥಾನಗಳಲ್ಲಿ ನಾಶವಾದ ಪಾರಂಪರಿಕ ತಾಣಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮನವಿಗಳು, ಖಂಡನೆಗಳು, ಆರ್ಥಿಕ ನಿರ್ಬಂಧಗಳು, ರಾಜತಾಂತ್ರಿಕತೆ ಮತ್ತು ಮುಗಿಯದ ಚರ್ಚೆಗಳು ಇವುಗಳಲ್ಲೇ ವಿಶ್ವಸಂಸ್ಥೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಇನ್ನು ರಿಪೋರ್ಟುಗಳದ್ದು ಮತ್ತೂಂದು ಕಥೆ. ಕೋಟ್ಯಂತರ ಡಾಲರುಗಳು ವ್ಯಯವಾಗುತ್ತಿರೋದೇ ವಿಶ್ವಸಂಸ್ಥೆಯ ಬೇರೆ ಬೇರೆ ಅಂಗಗಳಿಂದ ಬರುವ, ಯಾರೂ ಓದದ, ಕಾರ್ಯರೂಪಕ್ಕೆ ಬರದ ವರದಿಗಳಿಂದ.
ಕಾಶ್ಮೀರದಲ್ಲಿ ಭಾರತದ ಮಿಲಿಟರಿ ಕಾರ್ಯಾಚರಣೆ ಖಂಡಿಸಿ ಮಾನವ ಹಕ್ಕುಗಳ ಆಯೋಗ 2018ರಲ್ಲಿ ಒಂದು ರಿಪೋರ್ಟನ್ನು ತಯಾರಿಸಿತು. ಆಯೋಗ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ಕಣ್ಣಾರೆ ನೋಡಲಿಲ್ಲ. ಎಲ್ಲಿಯೋ ಕುಳಿತು, ಯಾವುದೋ ಎನ್‌ಜಿಓ ಹೇಳಿದ್ದನ್ನೆಲ್ಲ ಬರೆದ ಅದರಲ್ಲಿ ಇರುವುದೆಲ್ಲ ಸೈನ್ಯದ ಮತ್ತು ಸರ್ಕಾರದ ಮೇಲೆ ಸುಳ್ಳು ಆರೋಪಗಳೇ. ಅದರ ಬಗ್ಗೆ ಸರಿಯಾದ ವಿಶ್ಲೇಷಣೆ ಬಂದದ್ದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸಯ್ಯದ್ ಅಕºರುದ್ದೀನ್‌ರವರಿಂದ, ವಿಶ್ವಸಂಸ್ಥೆ, ಯಾರೂ ಕೇಳದ, ಯಾರೂ ಸ್ವಾಗತಿಸದ, ಯಾರೂ ಸಪೋರ್ಟ್ ಮಾಡದ ಮತ್ತು ಯಾರೂ ಕಾರ್ಯರೂಪಕ್ಕೆ ತರದ ರಿಪೋರ್ಟ್ ತಯಾರಿಸಿದೆ ಎಂದು. ಅಂಥದ್ದೇ ಮತ್ತೂಂದು ರಿಪೋರ್ಟು ಭಾರತದ ನಿರುದ್ಯೋಗದ ಬಗ್ಗೆ 2018ರಲ್ಲಿ ಬಂತು. ಅದರ ಪ್ರಕಾರ ದಕ್ಷಿಣ ಏಷ್ಯಾದಲ್ಲಿನ ತೀವ್ರ ಆಹಾರ ಅಭದ್ರತೆಗೆ ಕಾರಣ 45 ವರ್ಷಗಳಲ್ಲೇ ಭಾರತದ ನಿರುದ್ಯೋಗ ಸಮಸ್ಯೆ ಅತಿ ಹೆಚ್ಚು ಆ ವರ್ಷ ಕಂಡುಬಂದದ್ದು. ಆದರೆ ಒಂದು ವರ್ಷದ ನಂತರ ಅಂದರೆ 2019ರಲ್ಲಿ, ಇದೇ ವಿಶ್ವಸಂಸ್ಥೆಯಡಿ ಗ್ಲೋಬಲ್ ಮಲ್ಟಿಡೈಮೆನ್ಶನಲ್ ಪವರ್ಟಿ ಇಂಡೆಕ್ಸ್ ನಡೆಸಿದ ಸರ್ವೇ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದ 27.1 ಕೋಟಿ ಬಡವರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಅಂದರೆ ಬಡತನದ ಪ್ರಮಾಣ ಹತ್ತು ವರ್ಷಗಳಲ್ಲಿ 55%ರಿಂದ 28%ಕ್ಕೆ ಇಳಿದಿದೆ. ಅವರದ್ದೇ ರಿಪೋರ್ಟುಗಳು, ಅದರಲ್ಲೇ ವಿರೋಧಾಭಾಸಗಳು.
ಇನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆಯ ಕತೆಗಳು ಬೇಕಾದಷ್ಟು. ರವಾಂಡಾದಲ್ಲಿ 1994ರಲ್ಲಿ 100 ದಿನಗಳ ಕಾಲ ನಡೆದ ಟುಟ್ಸೆ ಜನಾಂಗದ 8 ಲಕ್ಷ ಅಮಾಯಕರ ಮಾರಣಹೋಮ ತನ್ನ ಬೇಜವಾಬ್ದಾರಿತನದಿಂದ ಆದದ್ದು ಎಂದು ಭದ್ರತಾ ಮಂಡಳಿ ಒಪ್ಪಿಕೊಂಡಿದೆ. ಅಲ್ಲಿನ ಹುಟು ಜನಾಂಗದ ಸರ್ಕಾರ ಇಂಥದ್ದೊಂದು ನರಮೇಧ ಮಾಡುವ ಸೂಚನೆಯನ್ನು ವಿಶ್ವಸಂಸ್ಥೆಯ ಆ ದೇಶದ ಕಮಾಂಡರ್ ಮೊದಲೇ ಕೊಟ್ಟರು. ಅಂಥ ಸ್ಥಿತಿಯಲ್ಲೂ ಸುಮಾರು 2,500 ಶಾಂತಿ ದೂತರನ್ನು ವಿಶ್ವಸಂಸ್ಥೆ ಹಿಂಪಡೆಯಿತು. ಅದರ ಪರಿಣಾಮ ಈ ಮಾರಣಹೋಮ. ಹೈಟಿಯಲ್ಲಿ ಭೂಕಂಪಕ್ಕೆ ತುತ್ತಾದ ಜನರಿಗೆ ನೆರವಾಗಲು ಹೋದ ವಿಶ್ವಸಂಸ್ಥೆಯ ನೇಪಾಳದ ಶಾಂತಿಪಾಲಕರಿಂದ ಅಲ್ಲಿ ಭೀಕರವಾದ ಕಾಲರಾ ಹರಡಿತು. ಸರಿಯಾದ ಚರಂಡಿ ವ್ಯವಸ್ಥೆ ಮಾಡದೆ ಶಾಂತಿ ಪಾಲಕರ ಮಲಮೂತ್ರಗಳು ಅಲ್ಲಿನ ಅತಿ ದೊಡ್ಡ ನದಿ ಸೇರಿ 7 ಲಕ್ಷ ಜನಕ್ಕೆ ರೋಗ ತಗುಲಿದರೆ, ಎಂಟು ಸಾವಿರ ಜನ ಸಾವನ್ನಪ್ಪಿದರು. ಆದರೆ ವಿಶ್ವಸಂಸ್ಥೆ ಈ ದುರಂತಕ್ಕೆ ತಾನೇ ಕಾರಣ ಎಂದು ಒಪ್ಪಿಕೊಳ್ಳುವ ಸೌಜನ್ಯವೂ ತೋರದೆ, ಕೇಸು ಹಾಕಲು ಬಂದರೆ ತನ್ನನ್ನು ಯಾವ ಕೋರ್ಟುಗಳೂ ಮುಟ್ಟಲಾರವು ಎಂದು ಘೋಷಿಸಿತು.
ಶ್ರೀಲಂಕಾದಲ್ಲಿ ಒಂದು ಲಕ್ಷ ಜನರ ಸಾವಿಗೆ ಕಾರಣವಾದ 26 ವರ್ಷಗಳ ರಕ್ತಸಿಕ್ತ ಆಂತರಿಕ ದಂಗೆಯನ್ನು ತಡೆಯಲು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸಲೇ ಇಲ್ಲ ಎನ್ನುತ್ತದೆ ಅವರದೇ ವರದಿ. ಅದರ ಪರಿಣಾಮ ಎಲ್ಲರ ಮುಂದೇ ಇದೆ. ಎಲ್ಲಿಯ ಮಾನವ ಹಕ್ಕುಗಳು? ಅದಕ್ಯಾಕೆ ಒಂದು ಆಯೋಗ? ಸೌದಿ ಅರೇಬಿಯಾ, ಕ್ಯೂಬಾ, ಈಜಿಪ್ಟ್, ಚೀನ, ಸೊಮಾಲಿಯಾ, ಸುಡಾನ್, ವೆನಿಝುವೆಲಾ ಈ ಆಯೋಗದ ಸದಸ್ಯ ರಾಗಿಯೂ ತಮ್ಮ ದೇಶಗಳಲ್ಲಿ ಹಿಂಸೆಗೆ ಹೆಸರಾದವರು. ಆಫ್ರಿಕಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಾಗರಿಕರು, ಮಧ್ಯಪ್ರಾಚ್ಯದ ಮಹಿಳೆಯರು, ಚೀನದಲ್ಲಿ ಮರು ಶಿಕ್ಷಣ ಶಿಬಿರಗಳಿಗೆ ತಳ್ಳಲ್ಪಟ್ಟಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು, ಯುದ್ಧಗಳಲ್ಲಿ ಬಂದೂಕು ಹಿಡಿಯುವ ಮತ್ತು ಸೂಸೈಡ್ ಬಾಂಬರ್‌ಗಳಾಗುವ ಮಕ್ಕಳು, ಇವರೆಲ್ಲರ ಜೀವ ಉಳಿಸಲು, ಜೀವನ ಮರಳಿ ಕೊಡಲು ವಿಶ್ವಸಂಸ್ಥೆಗೆ ಸಾಧ್ಯವಾಗಿದೆಯೇ? ಕಾಶ್ಮೀರಿ ಹಿಂದೂಗಳ ನಿರಾಶ್ರಿತ ಪರಿಸ್ಥಿತಿಯ ಬಗ್ಗೆ, ಅವರು ಅನುಭವಿಸಿದ ಸಾವು-ನೋವುಗಳ ಬಗ್ಗೆ ಆಗೀಗ ಮರೆತುಹೋದ ಯಾವುದೋ ವಿಷಯವನ್ನು ಮೆಲುಕು ಹಾಕುವಂತೆ “ಅತಿ ಪ್ರಬಲವಾದ ಶಬ್ದಗಳಿಂದ ಖಂಡಿಸುವುದನ್ನು’ ವಿಶ್ವಸಂಸ್ಥೆ ಮರೆಯುವುದಿಲ್ಲ.
ಪ್ರಪಂಚವೆಲ್ಲ ಮುಂದೆ ಹೋದರೂ ವಿಶ್ವಸಂಸ್ಥೆ ಇನ್ನೂ 30 ವರ್ಷಗಳ ಹಿಂದಿನ ಕಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ ಎನ್ನುತ್ತಾರೆ ಅಲ್ಲಿನ ಅಮೆರಿಕ ರಾಯಭಾರಿಯಾಗಿದ್ದ ಜಾನ್ ಬೋಲ್ಟನ್. ಅಲ್ಲಿನ ರಾಜತಾಂತ್ರಿಕರು ತುಕ್ಕು ಹಿಡಿದ ನಿಯಮಗಳನ್ನೇ ಪಠಿಸುತ್ತ, ಮೀಟಿಂಗ್‌ಗಳ ಮೇಲೆ ಮೀಟಿಂಗ್‌ಗಳನ್ನು ಮಾಡುತ್ತ ಹೊರಗೇನಾಗುತ್ತಿದೆ ಎಂದು ನೋಡುವುದಕ್ಕೂ ಸಂಯಮ, ಸಮಯ ಇಲ್ಲದೆ ಕೂತ ಹಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾಯಂ ಸದಸ್ಯತ್ವವನ್ನು ಭಾರತಕ್ಕೆ ಕೊಡಿಸಲು ರಷ್ಯಾ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಚೀನೀಯರಿಗೆ ಯಾವಾಗಲೂ “ಚೀನ ಮೊದಲು.’ ಹಾಗೇ ಕಾಯಂ ಸದಸ್ಯತ್ವವನ್ನು ಚೀನಗೆ ದಾನ ಮಾಡಿದ ನೆಹರೂಗೆ ಕೂಡ ಆಗ “ಚೀನ ಮೊದಲು.’ ಅದೇ ಚೀನ ಇಲ್ಲಿವರೆಗೂ ಭಾರತದ ಕಾಯಂ ಸದಸ್ಯತ್ವಕ್ಕೆ ಅಡ್ಡಿ ಮಾಡುತ್ತಲೇ ಬಂದಿದೆ. ಆದರೆ ಈಗ ಭಾರತಕ್ಕೇ ಅದರಲ್ಲಿ ಆಸಕ್ತಿ ಇಲ್ಲ. ದಿ.ಸುಷ್ಮಾ ಸ್ವರಾಜ್ ಹೇಳಿದಂತೆ ಭದ್ರತಾ ಮಂಡಳಿಯ ಪ್ರಾಮುಖ್ಯತೆ, ಪ್ರಭಾವ, ಗೌರವ ಮತ್ತು ಮೌಲ್ಯ ಕಡಿಮೆಯಾಗುತ್ತಾ ಬರುತ್ತಿದೆ.
ಇಲ್ಲಿಯವರೆಗೆ ಯಾವ ಯುದ್ಧವನ್ನೂ ವಿಶ್ವಸಂಸ್ಥೆ ತಡೆದಿಲ್ಲ, ಯಾವ ಸರ್ವಾಧಿಕಾರಿಯನ್ನೂ ಮಣಿಸಲು ಆಗಿಲ್ಲ, ಮಾನವ ಹಕ್ಕುಗಳನ್ನು ಕಾಪಾಡಲೂ ಆಗಿಲ್ಲ. ಇನ್ನೂ ಹೀಗೇ ಮುಂದುವರಿದರೆ, ಮೊದಲ ಮಹಾಯುದ್ಧದ ನಂತರ ಶಾಂತಿ ಕಾಪಾಡಲು ಹುಟ್ಟಿ ಕೊನೆಗೆ ಸೋತು, ಎರಡನೇ ಮಾಹಾಯುದ್ಧದ ಆರಂಭದಲ್ಲಿ ಅಂತ್ಯ ಕಂಡ ಲೀಗ್ ಆಫ್ ನೇಷನ್ಸ್ ಕಥೆ ವಿಶ್ವಸಂಸ್ಥೆಗೂ ಬರಬಹುದು. ಅಷ್ಟು ದೊಡ್ಡ ಸಂಸ್ಥೆಯ ಅಧಿಕಾರಿಗಳ ಅದಕ್ಷತೆಯ ಮುಂದೆ ಸಣ್ಣ ಸಣ್ಣ ಎನ್‌ಜಿಓಗಳೇ ಪರವಾಗಿಲ್ಲ. ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿವೆ. ಆದರೆ ವಿಶ್ವಸಂಸ್ಥೆ ಮಾತ್ರ ವಾಸ್ತವತೆಯಿಂದ ದೂರ ಉಳಿದು ಅದೇ “ಖಂಡಿಸುವ’ ಖಾಲಿ ಪದಗಳ ಪದರದಡಿಯಲ್ಲಿ ಬರೀ ಪಳೆಯುಳಿಕೆಯಾಗಿ ಉಳಿಯುವ ಲಕ್ಷಣಗಳೇ ಕಾಣಿಸುತ್ತಿದೆ. ಅದರ ಅಗತ್ಯ ಈಗಿನ ಜಗತ್ತಿಗೆ ಇದೆಯೇ? ಇಲ್ಲವೆಂದೇ ಅನಿಸುತ್ತಿದೆ.
– ಶ್ವೇತಾ ಹಾಲಂಬಿ