ಸುಮಾರು ಮೂರು ವರ್ಷಗಳ ಹಿಂದೆ ಪ್ರಕಟವಾದ “ಭಾಗ್ಯ’ ಕಾದಂಬರಿ, ಈಗ “ಭಾಗ್ಯಶ್ರೀ’ ಎನ್ನುವ ಹೆಸರಿನಲ್ಲಿ ಚಲನಚಿತ್ರ ರೂಪದಲ್ಲಿ ತೆರೆಗೆ ಬರುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೆಟ್ಟೇರಿದ್ದ ಈ ಚಿತ್ರ ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಮಕ್ಕಳ ದಿನಾಚರಣೆಯ ಪ್ರಯುಕ್ತ ಇದೇ ನವೆಂಬರ್ 15ರಂದು ತೆರೆಗೆ ಬರುತ್ತಿದೆ. “ಶ್ರೀಬನಶಂಕರಿ ಆರ್ಟ್ ಕಂಬೈನ್ಸ್ ಬೀಳಗಿ’ ಬ್ಯಾನರ್‌ನಲ್ಲಿ ಶ್ರೀಮತಿ ಆಶಾ ಶಾಹೀರ ಬೀಳಗಿ ಈ ನಿರ್ಮಿಸಿರುವ ಈ ಚಿತ್ರವನ್ನು ಎಸ್. ಮಲ್ಲೇಶ್ ನಿರ್ದೇಶಿಸಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಭಾಗ್ಯಶ್ರೀ’ ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿದೆ.
“ಚಿತ್ರದ ಹೆಸರೇ ಹೇಳುವಂತೆ, “ಭಾಗ್ಯಶ್ರೀ’ ಎಂಬ ಹುಡುಗಿಯ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ. ಶಾಲೆಯಲ್ಲಿ ಓದುತ್ತಿರುವ “ಭಾಗ್ಯಶ್ರೀ’ ಎಂಬ ಹುಡುಗಿ ಹೇಗೆ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಾಳೆ. ಆಕೆಯ ಹೋರಾಟದ ಹಾದಿಯಲ್ಲಿ ಎದುರಾಗುವ ಸವಾಲುಗಳೇನು, ಇದನ್ನೆಲ್ಲ ಆಕೆ ಹೇಗೆ ಎದುರಿಸುತ್ತಾಳೆ. ಇತರೆ ಹೆಣ್ಣುಮಕ್ಕಳಿಗೆ ಹೇಗೆ ಮಾದರಿಯಾಗುತ್ತಾಳೆ ಅನ್ನೋದು ಚಿತ್ರದ ಕಥಾಹಂದರ. ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿಗೂ ಬಾಲ್ಯವಿವಾಹ ಪದ್ದತಿ ಆಚರಣೆಯಲ್ಲಿದೆ. ಎಷ್ಟೋ ಬಾಲ್ಯವಿವಾಹಗಳು ಹೊರ ಜಗತ್ತಿಗೆ ಗೊತ್ತಾಗದಂತೆಯೇ ನಡೆದು ಹೋಗುತ್ತವೆ. ಇದೆಲ್ಲದರ ಸುತ್ತ ಬೆಳಕು ಚೆಲ್ಲುವ ಪ್ರಯತ್ನ ಈ ಚಿತ್ರದಲ್ಲಿ ನಡೆದಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ಕೊಡುತ್ತಾರೆ ನಿರ್ದೇಶಕ ಎಸ್. ಮಲ್ಲೇಶ್.
ಚಿತ್ರದ ನಿರ್ಮಾಪಕಿ ಆಶಾ ಶಾಹೀರ ಬೀಳಗಿ, ಒಂದೊಳ್ಳೆ ಸಾಮಾಜಿಕ ಸಂದೇಶವನ್ನು ಜನರಿಗೆ ಕೊಡಬೇಕು ಎಂಬ ಉದ್ದೇಶದಿಂದ ಭಾಗ್ಯಶ್ರೀ ಚಿತ್ರವನ್ನು ನಿರ್ಮಿಸಿದ್ದಾರಂತೆ. ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕರು, “ಉತ್ತರ ಕರ್ನಾಟಕದ ಗ್ರಾಮೀಣ ಸಮಸ್ಯೆಗಳ ಚಿತ್ರಣ ಈ ಚಿತ್ರದಲ್ಲಿದೆ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಾರ್ವಜನಿಕವಾಗಿಯೇ ಸಾಮೂಹಿಕ ವಿವಾಹದಲ್ಲಿ ಬಾಲ್ಯವಿವಾಹ ನಡೆಯುತ್ತದೆ. ಅನೇಕ ಕಡೆಗಳಲ್ಲಿ ಈ ಅನಿಷ್ಟ ಪದ್ದತಿ ಆಚರಣೆಯಾಗಿ ನಡೆದುಕೊಂಡು ಬಂದಿದೆ. ಇದನ್ನು ಇನ್ನೂ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ನಮ್ಮ ಚಿತ್ರದ ಮೂಲಕ ಬಾಲ್ಯವಿವಾಹದ ಪರಿಣಾಮಗಳ ಬಗ್ಗೆ ಹೇಳಿದ್ದೇವೆ. ಬಾಲ್ಯವಿವಾಹ ತಡೆಯುವ ಕಥಾಹಂದರ ಈ ಚಿತ್ರದಲ್ಲಿದೆ. ನಮ್ಮ ಚಿತ್ರವನ್ನು ನೋಡಿ ಕೆಲವರಾದರೂ ಬದಲಾದರೆ ನಮ್ಮ ಪ್ರಯತ್ನ ಸಾರ್ಥಕ’ ಎನ್ನುತ್ತಾರೆ.
“”ಭಾಗ್ಯಶ್ರೀ’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅದರಲ್ಲಿ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಸಲುವಾಗಿಯೇ ಕಿತ್ತೂರು ರಾಣಿ ಚೆನ್ನಮ್ಮ ಅವರ ಮೇಲೆ ವಿಶೇಷ ಗೀತೆಯೊಂದನ್ನು ಮಾಡಲಾಗಿದೆ. ಈ ಗೀತೆ ಎಲ್ಲಾ ಕಾಲಕ್ಕೂ ಮಹಿಳೆಯರಿಗೆ ಪ್ರೇರಣೆಯಾಗುತ್ತದೆ’ ಅನ್ನೋದು ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಅವರ ಮಾತು. ಈ ಹಾಡುಗಳಿಗೆ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ವಿಶ್ವನಾಥ ಅವರ ಸಾಹಿತ್ಯವಿದೆ.
ಇನ್ನು “ಭಾಗ್ಯಶ್ರೀ’ ಚಿತ್ರದಲ್ಲಿ, ಬಾಲನಟಿ ಹೀರಾ ಭಾಗ್ಯಶ್ರೀ ಪಾತ್ರ ನಿರ್ವಹಿಸಿ¨ªಾರೆ. ಉಳಿದಂತೆ ಕೀರ್ತಿ, ಮಂಜು, ಬಾಲಕೃಷ್ಣ, ಏಕಾಂತ್, ಶಶಿ ಮೊದಲಾದ ಕಲಾವಿದರು ಚಿತ್ರದ ಇತರೆ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಹೇಮಂತ್ ಕುಮಾರ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನವಿದೆ. ಬೀಳಗಿ, ಕಿತ್ತೂರು, ಬೆಂಗಳೂರು ಸುತ್ತಮುತ್ತ “ಭಾಗ್ಯಶ್ರೀ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಒಟ್ಟಾರೆ ಬಾಲ್ಯವಿವಾಹದ ಬಗ್ಗೆ ಅರಿವು ಮೂಡಿಸಲು ಬರುತ್ತಿರುವ “ಭಾಗ್ಯಶ್ರೀ’ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮೇಲೆ ಪರಿಣಾಮ ಬೀರಲಿದ್ದಾಳೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.