Advertisement

ಅರಣ್ಯ ಇಲಾಖಾ ಸಿಬಂದಿ ವಿರುದ್ಧ ಆಕ್ರೋಶ

12:40 PM Apr 01, 2017 | Team Udayavani |

ಸುಳ್ಯ : ಅರಂತೋಡು ಗ್ರಾಮದ ಬಾಜಿನಡ್ಕ, ಮರ್ಕಂಜ ಗ್ರಾಮದ ಅಜ್ಜಿಕಲ್ಲು, ಕಟ್ಟಕೋಡಿ ಪ್ರದೇಶದ ಜನರು ಸುಮಾರು 15 ವರ್ಷಗಳಿಂದ ಮೈರಾಜೆ ಅರಣ್ಯ ಪ್ರದೇಶದ ಹೊಂಡಗಳಲ್ಲಿ  ತುಂಬುವ ನೀರನ್ನು ಪೈಪ್‌ಗ್ಳ ಮೂಲಕ ಮನೆ ಬಳಿಗೆ ಹರಿಸಿ ನಿತ್ಯ ಬಳಸುತ್ತಿದ್ದು, ಈ ಪೈಪ್‌ಗ್ಳನ್ನು ಅರಣ್ಯ ಇಲಾಖೆ ಸಿಬಂದಿ ತುಂಡರಿಸಿದ ಘಟನೆ ನಡೆದಿದೆ. ಈ ಬಗ್ಗೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಮೈರಾಜೆ ಅರಣ್ಯ ಪ್ರದೇಶದಲ್ಲಿ  ಕಾಡ್ಗಿಚ್ಚು  ಕಾಣಿಸಿಕೊಂಡಿದ್ದು, ಅದನ್ನು ನಂದಿಸುವಲ್ಲಿ  ಈ ಸ್ಥಳೀಯರು ಸಹಕರಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ಅರಣ್ಯ ಇಲಾಖಾ ಸಿಬಂದಿ ಕಾಡ್ಗಿಚ್ಚಿಗೆ ಇವರೇ ಕಾರಣ ಎಂದು ನೆಪವೊಡ್ಡಿ  ಈ ಪೈಪ್‌ಗ್ಳನ್ನು ತುಂಡರಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ
ಇದರಿಂದಾಗಿ ಸುಮಾರು 15ಕ್ಕೂ ಹೆಚ್ಚು ಕುಟುಂಬಸ್ಥರು ಹನಿ ನೀರಿಲ್ಲದೆ ಪರದಾಡುತ್ತಿದ್ದಾರೆ. ಸೋಮವಾರದೊಳಗೆ ಇದನ್ನು ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ. ಅರಣ್ಯದಂಚಿನಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಾಗಿದ್ದು ಅವರಿಗೆ ಈ ಪೈಪ್‌ ಲೈನ್‌ ನೀರೇ ಆಸರೆಯಾಗಿತ್ತು. ಸುಮಾರು ಒಂದುವರೆ ಕಿ.ಮೀ. ದೂರಕ್ಕೆ ಪೈಪ್‌ ಅಳವಡಿಸಲು ಒಂದೊಂದು ಕುಟುಂಬಕ್ಕೂ  15 ಸಾವಿರ ರೂ.ಗಿಂತಲೂ ಹೆಚ್ಚು  ಖರ್ಚಾಗಿತ್ತು. ತುಂಡರಿಸಿದ ಪೈಪ್‌ಗ್ಳನ್ನು ಸರಿಪಡಿಸಲು 1 ಲಕ್ಷಕ್ಕಿಂತಲೂ ಹೆಚ್ಚು  ಖರ್ಚಾಗುವುದರಿಂದ ಪುನಃ ನಮಗೆ ಅಷ್ಟು ಖರ್ಚು ಮಾಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯವರು ಪೈಪ್‌ ಸರಿಮಾಡಿಕೊಡದಿದ್ದರೆ ಮಹಿಳೆಯರು, ಮಕ್ಕಳು ಸೇರಿ ಎಲ್ಲರೂ ಅರಣ್ಯ ಇಲಾಖಾ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಅರಣ್ಯ ಇಲಾಖೆ ಸರಿಪಡಿಸಿಕೊಡುವ ಭರವಸೆ ನೀಡಿದ್ದು, ಹೊಸ ಪೈಪ್‌ಗ್ಳನ್ನು ತಂದು ಹಾಕಲಾಗಿದೆ.

ಪ್ರತಿಭಟನೆಗೆ ಬೆಂಬಲ
ಸೋಮವಾರದೊಳಗೆ ಹೊಸ ಪೈಪ್‌ಲೈನ್‌ ಹಾಕಿ ನೀರಿನ ಪೈಪ್‌ನ್ನು  ಅರಣ್ಯ ಇಲಾಖೆಯವರು ಸರಿಪಡಿಸಿಕೊಡಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲು ಅವರಿಗೆ ಬೆಂಬಲ ನೀಡುವುದಾಗಿ ಮೊಗೇರ ಸಂಘದ ತಾಲೂಕು ಅಧ್ಯಕ್ಷ  ಪ್ರಕಾಶ್‌ ಬಂಗ್ಲೆಗುಡ್ಡೆ ಮತ್ತು ಮಾಜಿ ಅಧ್ಯಕ್ಷ ದೇವಪ್ಪ ಹೈದಂಗೂರು ಎಚ್ಚರಿಸಿದ್ದಾರೆ. ಅಲ್ಲದೆ ತಪ್ಪಿತಸ್ಥ ಗಾರ್ಡ್‌ಗಳ ವಿರುದ್ಧ  ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next