ಚಿಂಚೋಳಿ: ಪಟ್ಟಣದ ಚಂದಾಪುರ ನಗರದ ಪಟೇಲ್ ಕಾಲೋನಿ ಬಡಾವಣೆಯಲ್ಲಿ ಕಳೆದೆರಡು ದಿನಗಳಿಂದ ಹಗಲು ರಾತ್ರಿ ಓಡಾಡುತ್ತಿದ್ದ ಕಾಡು ಪ್ರಾಣಿ ಚಿರತೆಯಂತೆ ಕಂಡುಬಂದಿದ್ದು, ಅದನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಶನಿವಾರ ಸರ್ಕಾರಿ ಬಾಲಕರ ಪದವಿ ಪೂರ್ವ ಮಹಾ ವಿದ್ಯಾಲಯದ ಆವರಣದೊಳಗೆ ಚಿರತೆ ಮರಿ ಕಾಣುವ ಪ್ರಾಣಿಯೊಂದು ಓಡಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿ ಸೆರೆ ಹಿಡಿಯಲು ಪಟೇಲ್ ಕಾಲೋನಿ, ಪದವಿ ಮಹಾವಿದ್ಯಾಲಯದ ಸುತ್ತಮುತ್ತ ಬಲೆ ಬೀಸಿದ್ದಾರೆ.
ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಚವ್ಹಾಣ, ಕುಂಚಾವರಂ ವನ್ಯಜೀವಿಧಾಮ ವಲಯ ಅರಣ್ಯಾಧಿಕಾರಿ ಸಂಜೀವ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿ ಕಾರಿ ಸಿದ್ಧಾರೂಢ, ಅರಣ್ಯ ರಕ್ಷಕ ನಟರಾಜ, ಚಂದಾಪುರ ಸರ್ಕಾರಿ ಬಾಲಕರ ಪದವಿ ವಿದ್ಯಾಲಯ, ಕಸ್ತೂರಿಬಾ ಗಾಂಧಿ ಬಾಲಿಕಾ ಶಾಲೆ, ಪಟೇಲ್ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶನಿವಾರ ಸರ್ಕಾರಿ ಬಾಲಕರ ಪದವಿ ಆವರಣದೊಳಗೆ ಚಿರತೆ ಮರಿಯಂತೆ ಕಾಣುವ ಪ್ರಾಣಿಯೊಂದು ಓಡಿ ಹೋಗುತ್ತಿರುವುದನ್ನು ಪಟೇಲ್ ಕಾಲೋನಿ ಯುವಕನೊಬ್ಬ ಬೆಳಗ್ಗೆ ನೋಡಿದ್ದ. ಅದನ್ನು ಮೊಬೈಲ್‌ದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದ. ಸರ್ಕಾರಿ ಬಾಲಕರ ಪದವಿ ವಿದ್ಯಾಲಯದ ಸಿಸಿ ಕ್ಯಾಮೆರಾದಲ್ಲಿ ಚಿತ್ರ ಸೆರೆಯಾಗಿದ್ದನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೃಢಪಡಿಸಿದ್ದಾರೆ.