Advertisement

ಕೋಚ್‌ಗೆ ಏಟಾಯಿತೆಂದು ಫ‌ುಟ್ಬಾಲ್‌ ಪಂದ್ಯವೇ ರದ್ದು

06:25 AM Feb 27, 2018 | |

ಗ್ರೀಕ್‌: ಭಾರತದಲ್ಲಿ ಫ‌ುಟ್‌ಬಾಲ್‌ ನಡೆದರೆ ಬಹುತೇಕ ಶಾಂತಿಯುತವಾಗಿ ಮುಗಿದು ಹೋಗುತ್ತವೆ. ಬಹುತೇಕ ಇಲ್ಲಿ ಯಾವುದೇ ಕ್ರೀಡೆಗಳು ನಡೆದರೂ ಪೊಲೀಸರಿಗೆ ಚಿಂತೆಯಿಲ್ಲ (ಎಲ್ಲೋ ಅಪರೂಪಕ್ಕೆ ಕ್ರಿಕೆ‌ಟ್‌ ಹೊರತುಪಡಿಸಿ). ಅದೇ ನೀವು ಫ‌ುಟ್‌ಬಾಲ್‌ ಜನಪ್ರಿಯವಾಗಿರುವ ಯಾವುದೇ ಪಾಶ್ಚಾತ್ಯ ನಾಡಿಗೆ ತೆರಳಿ. ಪ್ರತಿ ಕೂಟದ ಒಂದಲ್ಲ ಒಂದು ಹಂತದಲ್ಲಿ ಏನಾದರೂ ಆಗಿಯೇ ತೀರುತ್ತದೆ. ಇನ್ನು ಕೆಲವೊಮ್ಮೆ ನೂರಾರು ಜನರ ಸಾವಿಗೆ ಕಾರಣವಾದ ದುರಂತಗಳು ನಡೆದಿವೆ. ಅದಕ್ಕೆಲ್ಲ ಹೋಲಿಸಿದರೆ ತೀರಾ ಸಾದಾ ಅನ್ನಿಸುವ ಆದರೆ ಅಷ್ಟೇ ಸ್ವಾರಸ್ಯಕರವಾಗಿರುವ ಘಟನೆಯೊಂದು ಭಾನುವಾರ ಗ್ರೀಸ್‌ನಲ್ಲಿ ನಡೆದಿದೆ.

Advertisement

ಗ್ರೀಸ್‌ನಲ್ಲೀಗ ಗ್ರೀಕ್‌ ಸೂಪರ್‌ ಲೀಗ್‌ ಡರ್ಬಿ ಫ‌ುಟ್‌ಬಾಲ್‌ ಕೂಟ ನಡೆಯುತ್ತಿದೆ. ಭಾನುವಾರ ಪಿಎಒಕೆ ಥೆಸ್ಸಾಲೊನಿಕಿ ಮತ್ತು ಒಲಿಂಪಿಯಾಕೋಸ್‌ ತಂಡಗಳ ಪಂದ್ಯ ನಡೆಯಬೇಕಿತ್ತು. ಇನ್ನೇನು ಪಂದ್ಯ ಶುರುವಾಗಬೇಕು, ಆಗ ಒಲಿಂಪಿಯಾಕೋಸ್‌ ಕೋಚ್‌ ಆಸ್ಕರ್‌ ಗಾರ್ಸಿಯಾ ಮುಖಕ್ಕೆ ಆತಿಥೇಯ ಥೆಸ್ಸಾಲೊನಿಕಿ ತಂಡದ ಪ್ರೇಕ್ಷಕನೊಬ್ಬ ಶೌಚಾಲಯದಲ್ಲಿ ಬಳಸುವ ಟಿಶ್ಯೂ ರೋಲನ್ನು ಎತ್ತಿ ಎಸೆದಿದ್ದಾನೆ. ಇದರ ಹೊಡೆತದಿಂದ ಮುಖ ಹಿಡಿದುಕೊಂಡು ಗಾರ್ಸಿಯಾ ಕೆಳಗೆ ಕುಳಿತಿದ್ದಾರೆ. ತುಟಿ ಒಡೆದು ರಕ್ತ ಬಂದಿದ್ದರಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ.

ಇದೇ ಸಿಟ್ಟಿಗೆ ಒಲಿಂಪಿಯಾಕೋಸ್‌ ಕಾರ್ಯದರ್ಶಿ ಥಿಯೊಡೊರಿಡಿಸ್‌, ಇಷ್ಟಾದ ಮೇಲೆ ನಾವು ಪಂದ್ಯವಾಡುವುದಿಲ್ಲ ಎಂದು ಹೇಳಿ ಪಂದ್ಯವನ್ನು ರದ್ದು ಪಡಿಸಿ ತಂಡವನ್ನು ಕರೆದುಕೊಂಡು ಹೊರನಡೆದಿದ್ದಾರೆ. ಇದಕ್ಕೆ ಅಷ್ಟೇ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಥೆಸ್ಸಾಲೊನಿಕಿ ವಕ್ತಾರ ಕಿರಿಯಾಕೊಸ್‌, ಒಲಿಂಪಿಯಾಕೋಸ್‌ ತಂಡ ಇಲ್ಲಿಗೆ ಬಂದಿದ್ದೇ ಈ ಪಂದ್ಯ ರದ್ದು ಮಾಡಲು. ಕಳೆದ 30 ವರ್ಷದಿಂದಲೂ ಅವರು ಪ್ರೇಕ್ಷಕರನ್ನು ರೊಚ್ಚಿಗೆಬ್ಬಿಸುವ ಕೆಲಸವನ್ನೇ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದರ ಮಧ್ಯೆಯೇ ಪೊಲೀಸರು ಪ್ರೇಕ್ಷಕರನ್ನು ನಿಭಾಯಿಸಲು ಹರಸಾಹಸ ಪಟ್ಟಿದ್ದಾರೆ. ಬರೀ ಟಿಶ್ಯೂ ರೋಲ್‌ ಬಡಿದ ಸಿಟ್ಟಿಗೆ ಮಹತ್ವದ ಫ‌ುಟ್‌ಬಾಲ್‌ ಪಂದ್ಯವೊಂದು ರದ್ದಾಗಿದೆ ಎಂದರೆ ನೀವು ನಂಬುತ್ತೀರಾ?

Advertisement

Udayavani is now on Telegram. Click here to join our channel and stay updated with the latest news.

Next