Advertisement

ಬಾವುಟ ಬದಲಾವಣೆ ಅವಿವೇಕ

10:59 AM Mar 10, 2018 | |

ಬೆಂಗಳೂರು: ನೂತನವಾಗಿ ಬಿಡುಗಡೆ ಮಾಡಿದ ಕನ್ನಡ ಬಾವುಟ ಅವೈಜ್ಞಾನಿಕ ಮತ್ತು ಅವಿವೇಕದಿಂದ ಕೂಡಿದ್ದು, ಈ “ಸರ್ಕಾರಿ ಧ್ವಜ’ವನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ. ಕನ್ನಡಿಗರ ಪಾಲಿಗೆ ಈಗಿರುವ ಹಳದಿ-ಕೆಂಪು ಮಿಶ್ರಿತ ಬಾವುಟವೇ ಅಧಿಕೃತ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದರು. “ಬಾವುಟ ಬದಲಾವಣೆಗೆ ಯಾರೊಬ್ಬರೂ ಬೇಡಿಕೆ ಇಟ್ಟಿರಲಿಲ್ಲ. ಕೇಂದ್ರ ಸರ್ಕಾರವೂ ಯಾವುದೇ ಗಡುವು ವಿಧಿಸಿರಲಿಲ್ಲ.

Advertisement

ಆದಾಗ್ಯೂ ಚುನಾವಣೆ ಹೊಸ್ತಿಲಲ್ಲಿ ತರಾತುರಿಯಲ್ಲಿ ಬಾವುಟದ ಬದಲಾವಣೆ ಮಾಡಿದ್ದು ಏಕೆ? ಇದೊಂದು ಅವಿವೇಕದ
ನಿರ್ಧಾರವಾಗಿದ್ದು, ಹೊಸ ಬಾವುಟವನ್ನು ನಾವು ಸ್ವೀಕರಿಸುವುದಿಲ್ಲ; ಹಳೆಯ ಬಾವುಟ ಬಿಡುವುದಿಲ್ಲ,’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 
ಹಿಂಪಡೆಯಲು ಮನವಿ: ಹೊಸದಾಗಿ ಬಿಡುಗಡೆ ಮಾಡಿದ ಬಾವುಟವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು. ಸ್ಪಂದಿಸದಿದ್ದರೆ, ತೀವ್ರ ಸ್ವರೂಪದ ಹೋರಾಟ ಆಗಲಿದೆ. ಈ ಹೋರಾಟ ಎಲ್ಲಿಗೆ ತಲುಪುತ್ತದೆ ಎನ್ನುವುದು ಊಹಿಸಲಿಕ್ಕೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು
 
ರಾಜೀನಾಮೆಗೆ ಆಗ್ರಹ 
ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಾಟಾಳ್‌ ನಾಗರಾಜ್‌ ಆಗ್ರಹಿಸಿದರು. ಕಸಾಪ ಅಧ್ಯಕ್ಷರಿಗೆ ನಾಡಿನ ಬಾವುಟ ಬೆಳೆದುಬಂದ ಹಾದಿ ಬಗ್ಗೆ ಗೊತ್ತೇ ಇಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷರನ್ನು ಇದೇ ಕನ್ನಡ ಬಾವುಟ ಹೊತ್ತು ಮೆರವಣಿಗೆ ಮಾಡಿದ್ದಾರೆ. ಆದರೆ, ಈಗ ಹೊಸ ಬಾವುಟಕ್ಕೆ ದನಿಗೂಡಿಸಿದ್ದಾರೆ. ಆದ್ದರಿಂದ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಾಟಾಳ್‌ ಒತ್ತಾಯಿಸಿದರು.

ಕೋಲೆ ಬಸವನಂತೆ!
“ಕನ್ನಡ ಸಾಹಿತಿಗಳು ಕೋಲೆ ಬಸವನಂತೆ ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಾರೆ. ಯಾವುದೇ ಸರ್ಕಾರ ಬಂದರೂ ಸಾಹಿತಿಗಳದ್ದು ಒಂದೇ ಮುದ್ರೆ,’ ಎಂದು ವಾಟಾಳ್‌ ನಾಗರಾಜ್‌ ಹರಿಹಾಯ್ದರು. ನಾಡ ಧ್ವಜದ ಇತಿಹಾಸದ ಬಗ್ಗೆ
ಇವರಾರಿಗೂ ಗೊತ್ತಿಲ್ಲ. ಒಂದು ದಿನವೂ ಬೀದಿಗಿಳಿದು ಹೋರಾಟ ಮಾಡಿದವರಲ್ಲ. ಕೋಲೆ ಬಸವನಂತೆ ಎಲ್ಲದಕ್ಕೂ ಕತ್ತು ಅಲ್ಲಾಡಿಸುತ್ತಾರೆ ಎಂದು ಆರೋಪಿಸಿದರು.

ಕನ್ನಡ, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜಕ್ಕೆ ನಮ್ಮ ವಿರೋಧವಿಲ್ಲ. ಜನರ ಅಭಿಪ್ರಾಯಕ್ಕೆ ನಮ್ಮ ಬೆಂಬಲವಿದೆ. ಆದರೆ, ಅಧಿಕಾರಕ್ಕೆ ಬಂದು ನಾಲ್ಕೂ ಮುಕ್ಕಾಲು ವರ್ಷ ಸುಮ್ಮನಿದ್ದು, ಅಧಿಕಾರದಿಂದ ಕೆಳಗಿಳಿಯಲು ಇನ್ನು ಕೆಲವೇ ದಿನ ಇದೆ ಎನ್ನುವಾಗ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜದ ಕಸರತ್ತು ಏಕೆ ಮಾಡಬೇಕಿತ್ತು ಎಂಬುದಷ್ಟೇ ನಮ್ಮ ಪ್ರಶ್ನೆ. 
 ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ 

Advertisement

Udayavani is now on Telegram. Click here to join our channel and stay updated with the latest news.

Next