Advertisement

ಮನೆ ಮನೆಗೆ ಹಂಚುತ್ತಿರುವ ಧ್ವಜ ನಿರ್ದಿಷ್ಟ ಅಳತೆ ಹೊಂದಿಲ್ಲ: ಮಧು ಬಂಗಾರಪ್ಪ

03:43 PM Aug 06, 2022 | Team Udayavani |

ಸೊರಬ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆ. 11ರಂದು ಬೆಳಗ್ಗೆ 8ಕ್ಕೆ ಕಾಂಗ್ರೆಸ್ ಪಕ್ಷದಿಂದ ತಾಲೂಕಿನ ಬಿಳವಾಣಿ ಗ್ರಾಮದಿಂದ ಪಟ್ಟಣದ ಬಂಗಾರ ಧಾಮದ ಮುಂಭಾಗದ ವೃತ್ತದ ವರೆಗೆ ರಾಷ್ಟ್ರ ಧ್ವಜದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರಣಾಳಿಕೆ, ನೀತಿ ಮತ್ತು ದೂರದೃಷ್ಟಿ ಸಮಿತಿ ಉಪಾಧ್ಯಕ್ಷ ಎಸ್. ಮಧು ಬಂಗಾರಪ್ಪ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 75 ಕಿ.ಮೀ ಪಾದಯಾತ್ರೆ ನಡೆಸುವ ಉದ್ದೇಶವನ್ನು ಪಕ್ಷ ಹೊಂದಿದ್ದು, ಪಾದಯಾತ್ರೆ ಮೂಲಕ ಗ್ರಾಮಗಳಲ್ಲಿ ಸಂಚರಿಸಿ, ಯುವಕರಿಗೆ ಸ್ವಾತಂತ್ರ್ಯದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ಅರಿವು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ತಿಳಿಸುವ ಕೆಲಸ ಮಾಡಲಾಗುವುದು. ನಂತರ ಬಂಗಾರಧಾಮದ ವೃತ್ತದಲ್ಲಿ ಸಭೆ ನಡೆಯಲಿದೆ. ಕ್ಷೇತ್ರದಲ್ಲಿ ಸುಮಾರು 8ಸಾವಿರ ಬೂತ್ ಸದಸ್ಯರಿದ್ದು, 40 ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿಯಾಗಿದೆ. ಪಾದಯಾತ್ರೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯು ಪಕ್ಷಾತೀತವಾದ ಕಾರ್ಯಕ್ರಮವಾಗಿದ್ದು, ಯುವ ಜನತೆ ಪಕ್ಷ, ಜಾತಿ, ಧರ್ಮ ಬೇಧ ಮೆರೆತು ನಾವೆಲ್ಲಾ ಭಾರತೀಯರು ಎನ್ನುವ ಮನೋಭಾವದಿಂದ ದೇಶ ಕಟ್ಟುವ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದರು.

ನಿರ್ದಿಷ್ಟ ಅಳತೆ ಹೊಂದಿಲ್ಲ: ರಾಷ್ಟ್ರ ಧ್ವಜಕ್ಕೆ ಅವಮಾನ

ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ. ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುವವರನ್ನು ಬದಲಾವಣೆ ಮಾಡುವ ಶಕ್ತಿ ಸಾಮಾನ್ಯ ಮತದಾರನಿಗೆ ಇದೆ. ಇದೀಗ ಸರ್ಕಾರ ಮನೆಮನೆಗೆ ಹಂಚುತ್ತಿರುವ ಧ್ವಜ ನಿರ್ದಿಷ್ಟ ಅಳತೆ ಮತ್ತು ಗುಣಮಟ್ಟದ ಬಟ್ಟೆಯನ್ನು ಹೊಂದಿಲ್ಲ. ಇದರಿಂದ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜ ಮಹಾರಾಜ ನಡುವೆ ಒಡೆದು ಆಳುವ ನೀತಿಯನ್ನು ಬ್ರಿಟೀಷರು ರೂಪಿಸಿದ್ದರೆ, ಬಿಜೆಪಿಯವರು ಧರ್ಮ, ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳುತ್ತಾ, ಹಿಂದುತ್ವದ ಹೆಸರಲ್ಲಿ ಸಮಾಜವನ್ನ ಹಾಳು ಮಾಡಿದ್ದಾರೆ. ಇಡಿ, ಎನ್‍ಐಎ ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ಹಿಡಿತ ಪಡೆಯುವ ಮೂಲಕ ದೇಶದ ಕಾನೂನನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಆರ್ ಎಸ್‍ಎಸ್ ಮತ್ತು ಹಿಂದೂ ಪರ ಸಂಘಟನೆಗಳು ಬೆಳೆಸಿದ ಬಿಜೆಪಿಗರು ಇದೀಗ ಅವರೇ ಮುಳುವಾಗಿದ್ದಾರೆ. ಇನ್ನಾದರೂ ಆರ್ ಎಸ್‍ಎಸ್ ಮತ್ತು ಹಿಂದೂ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು. ಬಿಜೆಪಿಯ ಆಡಳಿತ ವೈಖರಿಯಿಂದ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ದೇಶಕ್ಕೆ ಮಾರಕವಾದ ಕೃಷಿ ಕಾಯ್ದೆ ತಂದು, ರೈತರಿಂದಲೇ ವಿರೋಧ ವ್ಯಕ್ತವಾದಾಗ ಕೇಂದ್ರ ಸರ್ಕಾರ ವಾಪಾಸ್ ಪಡೆಯಿತು. ಬಿಜೆಪಿ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ಜನತೆಯೇ ಸೂಕ್ತ ಉತ್ತರ ನೀಡುವರು ಎಂದರು.

Advertisement

ಚುನಾವಣೆಗಳ ಸಂದರ್ಭದಲ್ಲಿ ಪ್ರಣಾಳಿಕೆ ಬಹು ಮುಖ್ಯವಾಗಿದ್ದು, ಈಬಾರಿ ವಿಶೇಷವಾಗಿ ಪ್ರನಾಳಿಕೆ ಸಿದ್ಧಪಡಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯ ಪ್ರಣಾಳಿಕೆ ಜತೆಗೆ ಜಿಲ್ಲಾವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಪ್ರಣಾಳಿಕೆಯಲ್ಲಿನ ಪ್ರಸ್ತಾಪಿತ ವಿಷಯಗಳನ್ನು ಪೂರ್ಣಗೊಳಿಸುವುದು. ಈ ನಿಟ್ಟಿನಲ್ಲಿ ಸಮಿತಿಯ ಅಧ್ಯಕ್ಷರಾದ ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಸಭೆ ನಡೆಸಿ, ಸಮಸ್ಯೆಗಳನ್ನು ಅರಿಯಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಆರ್.ಸಿ. ಪಾಟೀಲ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಆರ್.ಟಿ. ಮಂಜುನಾಥ್, ಮುಖಂಡರಾದ ಎಚ್. ಗಣಪತಿ, ಎಂ.ಡಿ. ಶೇಖರ್, ಜೆ. ಪ್ರಕಾಶ್, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಶಿವಪ್ಪ ಯಡಗೊಪ್ಪ, ಪ್ರಕಾಶ್ ಭಂಡಾರಿ, ಜಿ. ಕೆರಿಯಪ್ಪ ಮತ್ತಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next