ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ; ವಿಶೇಷ ಅತಿಥಿಗಳು
ಜಾತ್ರೆ ನೋಡಲು ಬರುವ ದೇವರ ಮೀನುಗಳು
ಸುಬ್ರಹ್ಮಣ್ಯ :ಇತಿಹಾಸ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿಗ ಚಂಪಾಷಷ್ಠಿ ಜಾತ್ರಾ ಮಹೊತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ದೇಶದೆಲ್ಲಡೆಯಿಂದ ಲಕ್ಷಾಂತರ ಭಕ್ತಾಧಿಗಳು ಬಂದು ಇಲ್ಲಿನ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ಹಲವಾರು ವೈಶಿಷ್ಠ್ಯಗಳನ್ನು ಹೊಂದಿರುವ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಳು ಜಾತ್ರೆ ನೋಡಲು ಬರುವುದು ಇಲ್ಲಿನ ವಿಶೇಷತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ದವಾದ ಹಾಗೂ ಅತೀ ಪುರಾತನವಾದ ದೇವಸ್ಥಾನವಾಗಿದೆ. ಸುಬ್ರಹ್ಮಣ್ಯ ಸ್ವಾಮಿಯೇ ಇಲ್ಲಿನ ಪ್ರಮುಖ ಆರಾಧ್ಯ ಮೂರ್ತಿಯಾಗಿದ್ದಾನೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಪ್ರತಿವರ್ಷ ಚಂಪಾ ಷೃಷ್ಠಿಯಂದು ನಡೆಯುವ ಇಲ್ಲಿನ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸಿ ಇಲ್ಲಿನ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಹಲವು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಬಳಿಯ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಅವುಗಳಲ್ಲಿ ಒಂದಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು , ದೂರದ ಏನೆಕಲ್ಲು- ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತದೆ. ಜಾತ್ರೆ ಮುಗಿಯುವವರೆಗೂ ಇಲ್ಲೇ ಕಂಡು ಬರುವ ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯಲ್ಲಿ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುತ್ತದೆ. ದೈವವು ಬಂದು ನದಿಗೆ ನೈವೇದ್ಯ ಹಾಕಿದ ಬಳಿಕ ಅದನ್ನು ತಿಂದು ಅವುಗಳು ಮರಳಿ ಬಂದಲ್ಲಿಗೇ ಮರಳುತ್ತವೆ.
ಮೀನುಗಳಿಂದಲೇ ತುಂಬಿ
ತುಳುಕುವ ಕುಮಾರಧಾರ ನದಿಯಲ್ಲಿ ಸ್ನಾನ ಮಾಡುವವರಿಗೆ ಇವುಗಳು ಕಚಗುಳಿ ಇಡುತ್ತವೆ. ದೇವರ ಮೀನುಗಳೇ ಎಂದು ಕರೆಯಲ್ಪಡುವ ಇವುಗಳನ್ನು ಯಾರೂ ಹಿಡಿಯುವಂತಿಲ್ಲ. ಮೀನುಗಳು ಈ ನಡವಳಿಕೆಗಳಿಗೆ ನೈಸರ್ಗಿಕ ಕಾರಣಗಳಿದ್ದರೂ, ಸುಬ್ರಹ್ಮಣ್ಯದ ಜಾತ್ರೋತ್ಸವದ ಸಂದರ್ಭವೇ ಇವುಗಳು ಇಲ್ಲಿ ಸೇರುತ್ತಿರುವುದರಿಂದ ಇವು ಭಕ್ತರಿಗೆ ಕುತೂಹಲದ ಕೇಂದ್ರ ಬಿಂದುವಾಗಿದೆ. ಸ್ನಾನಘಟ್ಟದಲ್ಲಿ ಈ ಸಮಯದಲ್ಲಿ ಹೆಚ್ಚಿನ ಭಕ್ತಾಧಿಗಳು ಸೇರುವ ಹಿನ್ನಲೆಯಲ್ಲಿ ಭಕ್ತಾಧಿಗಳು ನೀಡುವ ಆಹಾರಕ್ಕಾಗಿಯೂ ಈ ಮೀನುಗಳು ಸ್ನಾನಘಟ್ಟದ ಬಳಿಯಲ್ಲೇ ಅಲೆಯುತ್ತಿರುತ್ತವೆ. ಅಲ್ಲದೆ ಜಾತ್ರೆಯ ಬ್ರಹ್ಮ ರಥೋತ್ಸವದ ಮರುದಿನ ಶ್ರೀದೇವರ ಅವಭೃತೋತ್ಸವ ಕೂಡ ಕುಮಾರಧಾರ ನದಿಯಲ್ಲಿ ನಡೆಯಲಿದೆ.