Advertisement

ಮೊದಲನೇ ವಾರ ಭಾನುವಾರ 

12:19 PM Nov 03, 2017 | |

ನಾನು ದೇವರಲ್ಲಿ ಲೆಕ್ಕವಿಲ್ಲದಷ್ಟು ಸಲ ಏನನ್ನಾದ್ರೂ ಬೇಡಿಕೊಂಡಿದ್ದೀನಿ ಅಂದ್ರೆ ಅದು ಒಂದೇ ವಿಷಯದ ಬಗ್ಗೆ , “ದೇವರೇ, ಭಾನುವಾರ ಬಾರದಿರಲಿ’ ಎಂದು. ಮ್ಯಾಜಿಕ್‌ ತಂತ್ರ-ಮಂತ್ರ ಮಾಡುವ ಕಲೆ ನನಗೆ ಸಿದ್ಧಿಸಿದ್ದರೆ ನಾನು ಮಾಡುತ್ತಿದ್ದ ಮೊದಲ ಕೆಲಸ ವಾರದಲ್ಲಿ ಭಾನುವಾರವನ್ನೂ ತೆಗೆದು ಹಾಕಿ ಕ್ಯಾಲೆಂಡರಿನ ಮೊದಲ ಸಾಲಿನಲ್ಲಿ ಕಣ್ಣಿಗೆ ಎದ್ದು ಕಾಣುವ ಕೆಂಪು ಅಕ್ಷರದ ಭಾನುವಾರ ಇರಲೇಬಾರದು, ಹಾಗೆ ಮಾಡುತ್ತಿದ್ದೆ.

Advertisement

“ಈ ಭಾನುವಾರನಾ ಯಾರಪ್ಪಕಂಡುಹಿಡಿದಿದ್ದು?’ ಎನ್ನುವಾಗ ಭಾನುವಾರವನ್ನು ಕಂಡುಹಿಡಿದ ನಾರಾಯಣ್‌ ಮೇಘೊಜಿ ಲೌಖಂಡೆಯನ್ನು ನೆನೆಸಿಕೊಳ್ಳುತ್ತೇನೆ. ಬ್ರಿಟಿಶರು ಭಾರತದ ಪ್ರಜೆಗಳನ್ನು ವಾರದ ಏಳು ದಿನಗಳಲ್ಲಿ ದುಡಿಸಿಕೊಳ್ಳುತ್ತಿದ್ದರು. ಭಾನುವಾರವನ್ನು ರಜಾದಿನವನ್ನಾಗಿ ಮಾಡಬೇಕೆಂದು ಕೋರಿಕೆ ಸಲ್ಲಿಸಿದ್ದರು. ಬ್ರಿಟಿಷರು ಇದನ್ನು ತಿರಸ್ಕರಿಸಿದ್ದರು. ನಂತರ 1881ರಿಂದ 1889ರ ವರೆಗೆ ಹೋರಾಟ ಮಾಡಿದರು. ಇದಕ್ಕೆ ಮಣಿದ ಆಂಗ್ಲರು 1889ರಲ್ಲಿ ಭಾನುವಾರವನ್ನು ರಜಾದಿನವೆಂದು ಘೋಷಣೆ ಮಾಡಿದರು!

ನನ್ನ ಗೆಳತಿಯರು ನನ್ನ ಗೊಣಗಾಟವನ್ನು ನೋಡಿ, “”ಭಾನುವಾರದ ರಜೆಯ ಮಜ ನಿನಗೆ ಗೊತ್ತಿಲ್ಲ ಬಿಡು” ಎಂದು ವ್ಯಂಗವಾಡುತ್ತಾರೆ. ಈ ಭಾನುವಾರದ ಮೇಲೆ ನನಗೇಕಿಷ್ಟು ಕೋಪ-ಬೇಸರವೆಂದರೆ ಅದನ್ನು ವರ್ಣಿಸುವುದಕ್ಕಿಂತ ಅನುಭವಿಸಿದವರಿಗೇ ಗೊತ್ತು. ಆರು ಜನರಿರುವ ಮಧ್ಯಮ ವರ್ಗದ ಕುಟುಂಬ ನಮ್ಮದು. ಅತ್ತೆ-ಮಾವ, ನಾವಿಬ್ಬರು, ನಮ್ಮಿಬ್ಬರ ಮಕ್ಕಳು. ಅತ್ತ ಹೈಟೆಕ್‌ ಸಂಸಾರಾನೂ ಅಲ್ಲ , ಇತ್ತ ಲೋ ಕ್ಲಾಸು ಸಂಸಾರಾನೂ ಅಲ್ಲ, ಮಧ್ಯಮ ವರ್ಗದ ಮಧ್ಯದಲ್ಲಿ ಸಿಲುಕಿಕೊಂಡಿದ್ದೇವೆ.

ಶನಿವಾರ ರಾತ್ರಿಯೇ ನನ್ನ ಪತಿದೇವರು, “”ಚಿನ್ನಾ , ಪ್ಲೀಸು ನಾಳೆ ಭಾನುವಾರ ತಾನೆ? ಬೆಳಿಗ್ಗೆ ಬೇಗ ಎಬ್ಬಿಸಬೇಡ”, ಮಕ್ಕಳು, “”ಮಮ್ಮಿ,  ನಾಳೆ ಸಂಡೆ? ನಮ್ಮ ಬೇಗ ಎಬ್ಬಿಸಬೇಡಿ” ಎಂದರೆ, ಇನ್ನು ನಮ್ಮತ್ತೆ-ಮಾವನಂತೂ ಸರೀನೆ ಸರಿ. “”ಇವತ್ತು ಭಾನುವಾರ. ತಿಂಡಿ-ಅಡುಗೆಗೇನೂ ಆತುರವಿಲ್ಲ. ನಿಧಾನವಾಗಿ ಮಾಡಬಹುದು. ನಾವು ವಾಕಿಂಗ್‌ ಹೋಗಿ ಬರೋಣ” ಎನ್ನುತ್ತ ಇಬ್ಬರೂ ಹೊರಡುತ್ತಾರೆ. ಇನ್ನು ನಮ್ಮ ಮನೆ ಕೆಲಸದವಳಿಗೂ ಭಾನುವಾರ ರಜೆ. ಎಲ್ಲರಿಗೂ ವಿನಾಯಿತಿ ನೀಡುವ ಈ ಭಾನುವಾರ ನನಗೆ?

ಪ್ರತಿ ಭಾನುವಾರ ಬೆಳಗಿನ 6 ಕ್ಕೆ ನನ್ನ ದಿನಚರಿ ಪ್ರಾರಂಭ. ಮುಗಿಯುವುದಕ್ಕೆ ನಿಗದಿತ ಸಮಯವಿಲ್ಲ. ಕಾಫೀ ಡಿಕಾಕ್ಷನ್ನು ಹಾಕಿ, ಸಿಂಕಿನಲ್ಲಿರುವ ಪಾತ್ರೆ ತೊಳೆದು ಕಿಚನ್ನು-ಹಾಲು, ಮುಂದಿನ ವರಾಂಡದ ಸಂದುಗೊಂದುಗಳಲ್ಲಿರುವ ಕಸವನ್ನೆಲ್ಲ ತೆಗೆದು ಒರೆಸುವ ಹೊತ್ತಿಗೆ  ನನಗೆ 25% ಸುಸ್ತಾಗಿರುತ್ತೆ ! ಅಷ್ಟರಲ್ಲಿ ನಮ್ಮತ್ತೆ-ಮಾವ ವಾಕಿಂಗ್‌ ಮುಗಿಸಿ ತರಕಾರಿ ತಗೊಂಡು ಬರುತ್ತಾರೆ. ಅವರಿಗೆ ಕಾಫೀ ಬೆರೆಸಿಕೊಟ್ಟು ತರಕಾರಿಯನ್ನೆಲ್ಲ ಕ್ಲೀನು ಮಾಡಿ ಫ್ರೀಜರ್‌ನಲ್ಲಿಡುವ ಹೊತ್ತಿಗೆ 9 ಗಂಟೆ. ನನ್ನ ಪತಿ ಮಹಾಶಯ ಎದ್ದು ಕೈಯಲ್ಲಿ ಪೇಪರು ಹಿಡಿದುಕೊಂಡೇ “ಕಾಫೀ…’ ಎಂದು ಕೂಗು ಹಾಕುತ್ತಾರೆ. ಮತ್ತೆ ಒಂದು ರೌಂಡು ಎಲ್ಲರಿಗೂ ಕಾಫಿಯ ಸಮಾರಾಧನೆ.ಅಂದಿನ ತಿಂಡಿ ಅಡಿಗೆ ಬಗ್ಗೆ ಚರ್ಚೆ. ಅತ್ತೆ ಹೇಳಿದ ತಿಂಡಿ ಮಾವನಿಗೆ ಬೇಡ, ಮಾವ ಹೇಳಿದ ತಿಂಡಿ ಅತ್ತೆಗಾಗಲ್ಲ. ಅವರಿಬ್ಬರು ಹೇಳಿದ ತಿಂಡಿ ನನ್ನ ಗಂಡನಿಗೆ ಇಷ್ಟವಾಗಲ್ಲ. ಹೀಗೆ ಚರ್ಚೆ ಮುಂದುವರಿಯುತ್ತಿರುವಾಗಲೇ ಮಕ್ಕಳ ಆಗಮನ. ಅವರಿಗೆ ಹಾಲು ಕೂಟ್ಟರೂ ಚರ್ಚೆ ನಿಲ್ಲುವುದಿಲ್ಲ. ಕೊನೆಗೆ ಮಕ್ಕಳು ಹೇಳಿದ ತಿಂಡಿ ಮಾಡಬೇಕೆಂದು ನಿರ್ಧರಿಸಿದಲ್ಲಿಗೆ ಅಡಿಗೆ ಫೈನಲ್‌ ಆಗುತ್ತದೆ.

Advertisement

ಭಾನುವಾರದ ಸ್ಪೆಶಲ್‌ ತಿಂಡಿಗಳೆಂದರೆ ಪೂರಿ-ಸಾಗೂ-ಚಟ್ನಿ , ಕ್ಯಾರೆಟು ಹಲ್ವ ಅಥವಾ ಅಕ್ಕಿ ರೊಟ್ಟಿ ಪಲ್ಯ-ಚಟ್ನಿ , ಗಸಗಸೆ ಪಾಯಸ ಅಥವಾ ಮಸಾಲೆದೋಸೆ, ಕೇಸರಿಬಾತ್‌ ಹೀಗೆ. ಅತ್ತೆ ತರಕಾರಿ ಹಚ್ಚುವುದಕ್ಕೆ ಕೂತರೆ ನಾನು ತಿಂಡಿಗೆ ರೆಡಿ ಮಾಡಿಕೊಳ್ಳುತ್ತೀನಿ. ತಿಂಡಿಯಾದ ನಂತರ ಟೀ… ನನಗೆ ಮತ್ತೂಮ್ಮೆ ಪಾತ್ರೆ ತೊಳೆಯುವ ಕೆಲಸ. ಗಂಡ-ಮಕ್ಕಳಿಗೆ ಎಣ್ಣೆ ಸ್ನಾನ. ಈ ವೇಳೆಗೆ 40% ಸುಸ್ತಾಗಿರುತ್ತೇನೆ. ಎಲ್ಲರ ಸ್ನಾನದ ನಂತರ ಬಟ್ಟೆಯನ್ನೆಲ್ಲ ವಾಷಿಂಗ್‌ ಮೆಷಿನ್ನಿಗೆ ಹಾಕಬೇಕು. ಈ ಮಧ್ಯೆ ಮನೆಗೆ ಬರುವ ನೆಂಟರಿಷ್ಟರಿಗೆ ಜ್ಯೂಸು ಕಾಫಿ-ಟೀಯ ಸಮಾರಾಧನೆ. ಇದರ ಮಧ್ಯೆ ಅಡುಗೆಯಾಗಬೇಕು. ಊಟಕ್ಕೆ ಹಪ್ಪಳ, ಸಂಡಿಗೆ ಖಾಯಂ. ಮಾತು-ನಗು- ಹರಟೆಯೊಂದಿಗೆ ಊಟ ಸಾಗುತ್ತದೆ. ಊಟವಾದ ನಂತರ ಅತ್ತೆ, ಮಾವ, ಗಂಡ, ಮಕ್ಕಳು ರೂಮಿಗೆ ಹೋಗಿ ರೆಸ್ಟ್‌ ಮಾಡುತ್ತಾರೆ. ಈ ಭಾಗ್ಯ ನನಗಿಲ್ಲವೆ?

ನಾನು ಯಥಾಪ್ರಕಾರ ಮತ್ತೂಂದು ರೌಂಡು ಪಾತ್ರೆ ತೊಳೆದು ಅಡುಗೆಮನೆ ಕ್ಲೀನು ಮಾಡಿ, ಟೇರೇಸಿಗೆ ಹೋಗಿ ಒಣಗಿರುವ ಬಟ್ಟೆಗಳನ್ನು ತಂದು ಮಡಚಿಟ್ಟು ಸ್ಟೋರ್‌ರೂಮಿನಲ್ಲಿ ಏನೇನು ದಿನಸಿ ಇದೆ, ಏನೇನು ದಿನಸಿ ತರಬೇಕು ಎಂದೆಲ್ಲ ಪಟ್ಟಿ ಮಾಡಿ ಗಂಡನಿಗೆ ಅಥವಾ ಮಾವನಿಗೆ ಕೂಡಬೇಕು. ಈ ವೇಳೆಗೆ ನನಗೆ 60% ಸುಸ್ತಾಗಿರುತ್ತೆ.

ಗಂಡ-ಅತ್ತೆ-ಮಾವ-ಮಕ್ಕಳು ಎದ್ದು ಬರುವ ಸಮಯ. ಅವರಿಗೆಲ್ಲ ಕಾಫಿ- ಹಾಲು ಬೆರೆಸಿಕೊಟ್ಟು, ಮಕ್ಕಳ ರೂಮಿಗೆ ಬಂದ್ರೆ ಅಲ್ಲಿನ ಅವಸ್ಥೆ ನೋಡಿ ತಲೆ ತಿರುಗಿದಂತಾಗುತ್ತದೆ. ಸ್ಕೂಲುಬ್ಯಾಗ್‌ ಒಂದೆಡೆ. ಪುಸ್ತಕ, ಪೆನ್ಸಿಲ್‌, ಜಾಮೆಂಟ್ರಿ ಬಾಕ್ಸ್‌, ಬಾಲು, ಬ್ಯಾಟ್‌, ಬಟ್ಟೆಗಳು, ಆಟದ ಸಾಮಾನು ಎಲ್ಲೆಂದರಲ್ಲಿ ಬಿದ್ದಿದ್ದವು. ಅವನ್ನೆಲ್ಲ ಸರಿ ಮಾಡಿ ಮಕ್ಕಳ ವಾರ್ಡ್‌ ರೋಬ್‌ನಲ್ಲಿ ಬಟ್ಟೆಗಳನ್ನೆಲ್ಲ ಮಡಚಿಟ್ಟು ಅವರ ಯೂನಿಫಾರಂ ಐರನು ಮಾಡಿ ಸಾಕ್ಸ್‌ನ್ನೆಲ್ಲ ಎತ್ತಿಟ್ಟು , ಶಾಲೆಯ ಡೈರಿ, ಹೋಂವರ್ಕ್‌ ಚೆಕ್‌ ಮಾಡಿ ನಮ್ಮ ರೂಮಿಗೆ ಬರುವಷ್ಟರಲ್ಲಿ 80% ಸುಸ್ತಾಗಿರುತ್ತೀನಿ. 

ಭಾನುವಾರ ಮಾತ್ರ ನಂಗೆ ಈ ಸಮಸ್ಯೆ. ಬೇರೆ ರಜೆಯ ದಿನಗಳಲ್ಲಿ ಹೀಗಿರಲ್ಲ , ನಾನು ನಮ್ಮ ಮನೆಯವರು ಹೊರಗಡೆ ಹೋಗಿ ಸಿನೆಮಾ-ಹೊಟೇಲ್‌-ಶಾಪಿಂಗ್‌ ಮಾಡಿಕೊಂಡು ಸಂಜೆಯೊಳಗೆ ಮನೆಗೆ ಬರುತ್ತೀವಿ. ಮಕ್ಕಳೂ ಒಂದೊಂದು ಸಲ ಜೊತೆಗೂಡುತ್ತಾರೆ.

ಗಂಡ, “”ಒಂದು ರೌಂಡು ವಾಕ್‌ ಹೋಗಿ ಬರೋಣ?” ಎಂದಾಗ ನನ್ನ ಸಹನಾಶಕ್ತಿ ಎಲ್ಲ ಉಡುಗಿ ಹೋಗಿರುತ್ತೆ. ಇಲ್ಲವೆಂಬಂತೆ ತಲೆಯಾಡಿಸಿ ಮುಖ ತೊಳೆದು ತಲೆ ಬಾಚಿಕೊಂಡು ನಮ್ಮ ರೂಮಿಗೆ ಹೋದಾಗ ಅಲ್ಲಿನ ದ್ಯಶ್ಯ ಕಂಡು ಕಣ್ಣೀರು ಹರಿಯತೂಡಗುತ್ತದೆ. ಇದೇನೂ ರೂಮಾ? ಫಿಶ್‌ ಮಾರ್ಕೆಟಾ? ಅನ್ನಿಸುವಷ್ಟರ ಮಟ್ಟಿಗೆ ಅಸ್ತವ್ಯಸ್ತವಾಗಿರುತ್ತೆ. ದಿಂಬು, ಬೆಡ್‌ಶೀಟು, ಶರ್ಟು, ಲೋಟ, ಟವಲ್ಲು , ನೆಲದ ಮೇಲೆ ಬಿದ್ದಿರುವ ಕಸ, ಅದನ್ನೆಲ್ಲ ಸರಿಪಡಿಸಿ ರೂಮನ್ನು ಒಂದು ಹಂತಕ್ಕೆ ತರಬೇಕಾದ್ರೆ ಜೋರಾಗಿ ಉಸಿರಾಡುವುದಕ್ಕೂ ನನಗೆ ಶಕ್ತಿ ಇಲ್ಲ. ಒಂದು ವಾರಕ್ಕೆ ಆಗುವಷ್ಟು ನನ್ನ ಹಾಗೂ ಗಂಡನ ಬಟ್ಟೆಗಳನ್ನು ಐರನ್‌ ಮಾಡಿಟ್ಟು ಎತ್ತಿಡುವಷ್ಟರಲ್ಲಿ 100% ಬ್ಯಾಟರಿ ಡೌನು. ರಾತ್ರಿ ಮಾವನವರಿಗೆ ಫ‌ಲಹಾರ, ನಮಗೆಲ್ಲ ಅಡುಗೆಯಾಗಬೇಕು.

ಮರುದಿನ ಬೆಳಿಗ್ಗೆ ಹಾಸಿಗೆ ಬಿಟ್ಟು ಏಳಲಾರದಷ್ಟು ಮೈಕೈ ನೋವು ಸುಸ್ತಾಗಿದ್ರೂ ಓ… ಇವತ್ತು ಸೋಮವಾರ ಎನಿಸಿದಾಕ್ಷಣ ಹಾಸಿಗೆ ಬಿಟ್ಟು ಎದ್ದು ಖುಷಿಯಾಗಿ ಹಾಡು ಗುನುಗುತ್ತ ನಿತ್ಯಕರ್ಮ ಮುಗಿಸಿ ಅಡಿಗೆ ಮನೆ ಕಡೆ ಪಯಣ. ನಮ್ಮ ಮನೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ತಿಂಡಿ-ಊಟ ಯಾವತ್ತು ಯಾವತ್ತು ಏನೇನು ಮಾಡಬೇಕು ಎನ್ನುವ ಲಿಸ್ಟ್‌  ಮಾಡಿ ಅಡುಗೆ ಮನೆಯಲ್ಲಿ ಹಾಕಿದ್ದೀವಿ. ದಿನಾ ಅದರ ಪ್ರಕಾರವೇ ಮಾಡುತ್ತೇವೆ. ಸೋಮವಾರ ಚಪಾತಿ, ಬೀನ್ಸ್‌ ಪಲ್ಯ, ಡಬ್ಬಿಗೆ ವಾಂಗಿಬಾತು ಮೊಸರನ್ನ. ಅತ್ತೆ ಪಲ್ಯ ರೆಡಿಮಾಡಿ ಚಪಾತಿ ಹಿಟ್ಟು ಕಲಿಸಿಟ್ಟಿದ್ದರು. ಕಾಫೀ ಕುಡಿಯುವಾಗ ಕೆಲಸದವರು ಬಂದರು. ಮಕ್ಕಳು ಎದ್ದು ತಮ್ಮ ಕೆಲಸ ಮಾಡಿಕೊಂಡು ರೆಡಿಯಾದರು. ಗಂಡ-ಮಕ್ಕಳನ್ನು ಕಳುಹಿಸಿ ನಾನೂ ತಯಾರಾಗಿ ಸ್ಕೂಟಿಯ ಕೀ ಹಿಡಿದು ಹೊರಬಂದು ಸ್ಕೂಟಿ ಏರಿ ಹೊರಟಾಗ ಗಾಳಿಯಲ್ಲಿ ತೇಲಿಹೋದ ಅನುಭವ. ಪ್ರಪಂಚದಲ್ಲಿ ನನ್ನಷ್ಟು ಸುಖೀ ಯಾರೂ ಇಲ್ಲ. ಶನಿವಾರ ರಾತ್ರಿತನಕ. ಭಾನುವಾರ ಬಂತೆಂದರೆ ಮಾಮೂಲಿ. ನಾನೂ ನಾನಾಗಿರಲ್ಲ.

ಶಶಿರೇಖಾ ನಾಗೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next