ಕಲಘಟಗಿ: ಮಳೆಯ ಅಬ್ಬರಕ್ಕೆ ತಾಲೂಕಿನಲ್ಲಿ ಮೊದಲ ಬಲಿಯಾಗಿರುವ ಶಂಕೆ ದಟ್ಟವಾಗಿದೆ. ತುಮ್ರಿಕೊಪ್ಪ ನಿವಾಸಿ ನಾಗರಾಜ ಯಲ್ಲಪ್ಪ ರಾಮದುರ್ಗ (28) ಎಂಬಾತ ಬುಧವಾರ ಸಂಜೆಯಿಂದ ಸಂಶಯಾಸ್ಪದವಾಗಿ ಕಾಣೆಯಾಗಿದ್ದಾನೆ.
ಈತ ಕಂದಾಯ ಇಲಾಖೆಯಲ್ಲಿ ದಾಸ್ತಿಕೊಪ್ಪ ಗ್ರಾಮ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ. ಬುಧವಾರ ಸಂಜೆ ನಾಪತ್ತೆಯಾಗಿದ್ದು, ಆತನ ದ್ವಿಚಕ್ರ ವಾಹನ ಮುಂಡಗೋಡ ರಸ್ತೆಯಲ್ಲಿನ ಬೇಡ್ತಿ ನದಿ ಸೇತುವೆ ಪಕ್ಕದಲ್ಲಿ ಕಂಡುಬಂದಿದೆ. ಈ ಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರಬಹುದೇ ಎಂದು ಶಂಕಿಸಲಾಗಿದೆ. ನಾಗರಾಜ ಕಾಣೆಯಾದ ಕುರಿತು ಆತನ ತಾಯಿ ಬಸಮ್ಮ ಪೊಲೀಸ್ ದೂರು ದಾಖಲಿಸಿದ್ದಾರೆ.
ರಸ್ತೆ ಸಂಚಾರ ಸ್ಥಗಿತ: ತಾಲೂಕಿನಲ್ಲಿ ಹುಬ್ಬಳ್ಳಿ ದಿಕ್ಕಿನಿಂದ ಹರಿಯುವ ಶಾಲ್ಮಲಾ (ಕರ್ಕಿ), ಧಾರವಾಡ ದಿಕ್ಕಿನ ಬೇಡ್ತಿ ಎರಡೂ ಸಂಗೇದೇವರಕೊಪ್ಪದ ಬಳಿ ಸಂಗಮವಾಗಿ ಮುಂದೆ ಬೇಡ್ತಿಯಾಗಿ ಹರಿಯುತ್ತಿದೆ. ನೀರಸಾಗರ ಕೆರೆ ಉಕ್ಕಿ ಹರಿದಿರುವುದರಿಂದ ಹಾಗೂ ಹುಬ್ಬಳ್ಳಿಯ ಕರ್ಕಿ ಹಳ್ಳದಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ಹಿಂಡಸಗೇರಿಯ ಬಳಿ ತಡಸ ರಸ್ತೆಯ ಮೇಲೆ ಸುಮಾರು 10 ಅಡಿಗಳ ಎತ್ತರದಲ್ಲಿ ನೀರು ಹರಿಯುತ್ತಿದೆ. ಇದರಿಂದ ಕಲಘಟಗಿ-ತಡಸ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಅದೇ ಹಳ್ಳವು ಮುಂದೆ ಸಾಗಿ ಮುಂಡಗೋಡ ರಸ್ತೆಯಲ್ಲಿರುವ ಬೇಡ್ತಿ ಹಳ್ಳದ ದಡದಲ್ಲಿರುವ ಶ್ರೀ ಕೃಷ್ಣನ ಗುಡಿಯು ಸಂಪೂರ್ಣ ನೀರಿನಿಂದ ಆವೃತಗೊಂಡಿದೆ. ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾದರೂ ತಾಲೂಕಿನಾದ್ಯಂತ ನೀರಿನ ಅಬ್ಬರ ಜೋರಾಗಿಯೇ ಇದೆ. ಎಲ್ಲ ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿದ್ದು, ಅನೇಕ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
364 ಮನೆಗಳಿಗೆ ಹಾನಿ: ತಾಲೂಕಿನ ಮೂರು ಹೋಬಳಿಗಳ ಪೈಕಿ ಕಲಘಟಗಿ ವ್ಯಾಪ್ತಿಯಲ್ಲಿ 63, ದುಮ್ಮವಾಡ ವ್ಯಾಪ್ತಿಯಲ್ಲಿ 154 ಹಾಗೂ ತಬಕದಹೊನ್ನಿಹಳ್ಳಿ ವ್ಯಾಪ್ತಿಯಲ್ಲಿ 147 ಸೇರಿ 364ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಮಿಶ್ರಿಕೋಟಿ, ದುಮ್ಮವಾಡ, ಉಗ್ಗಿನಕೇರಿ ಜಿನ್ನೂರ, ತಬಕದಹೊನ್ನಿಹಳ್ಳಿ, ಕಲಘಟಗಿ ಮತ್ತು ದೇವಿಕೊಪ್ಪ ಗ್ರಾಮಗಳಲ್ಲಿ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಗಂಭ್ಯಾಪುರ, ಗಳಗಿಹುಲಕೊಪ್ಪ, ಎಮ್ಮೆಟ್ಟಿ, ಮುತ್ತಗಿ, ಸಿಂಗನಳ್ಳಿ, ಗಲಗಿನಗಟ್ಟಿ, ಸೂಳಿಕಟ್ಟಿ, ಕಂದ್ಲಿ, ಡಿಂಬವಳ್ಳಿ ಮುಂತಾದ ಗ್ರಾಮಗಳು ರಸ್ತೆ ಸಂಪರ್ಕದಿಂದ ವಂಚಿತಗೊಂಡಿವೆ.