Advertisement
ಹಿರಿಯರಿಂದ ಕಿರಿಯರಿಗಾಗಿ… ಒಂದು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕತೆ
ಇವೆಲ್ಲವನ್ನು ಒತ್ತಟ್ಟಿಗಿಡೋಣ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು ಏನು ಕಡಿದು ಹಾಕುತ್ತಾರೆ? ಇಂಗ್ಲಿಷ್ ಪ್ರೊಫೆಸರುಗಳಾದ ಗೋಪಾಲಕೃಷ್ಣ ಅಡಿಗ, ಯು. ಆರ್. ಅನಂತಮೂರ್ತಿ, ಸಿ.ಎನ್. ರಾಮಚಂದ್ರನ್ ಇತ್ಯಾದಿ ಮಹನೀಯರುಗಳು ಕನ್ನಡ ಮಾಧ್ಯಮದಲ್ಲಿ ಕಲಿತವರು. ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಸಪೆìಂಟ್ ಆ್ಯಂಡ್ ದ ರೋಪ್ ಲೇಖಕರಾದ ಹಾಸನದ ರಾಜಾರಾಯರು ಕನ್ನಡ ಶಾಲೆಗೆ ಮಣ್ಣು ಹೊತ್ತವರೂ, ಪತ್ರಿಕಾರಂಗದ ಭೀಷ್ಮ ಎನ್ನಿಸಿದ ಎಂ. ವಿ. ಕಾಮತ್, ಇನ್ಫೋಸಿಸ್‌ನ ನಾರಾಯಣಮೂರ್ತಿ, ಭಾರತರತ್ನ ಸಿ.ಎನ್.ಆರ್. ರಾವ್ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದವರು. ಕಂಪ್ಯೂಟರಿಗೆ ಕನ್ನಡ ಕಲಿಸಿದ ಕೆ. ಪಿ. ರಾವ್ ಕೂಡಾ ಕನ್ನಡದಲ್ಲೇ ಶಿಕ್ಷಣ ಪಡೆದವರು. ಪ್ರಖರ ವಾಗ್ಮಿ ಹಾಗೂ ಕ್ಲಿಷ್ಟ ವೈಜ್ಞಾನಿಕ ಹಾಗೂ ವೈದ್ಯಕೀಯ ಪರಿಜ್ಞಾನವನ್ನು ಜನಸಾಮಾನ್ಯರಿಗೂ ಇಂಗ್ಲಿಷ್, ಕನ್ನಡ, ತುಳುವಿನಲ್ಲಿ ಸರಳವಾಗಿ ತಿಳಿಯಪಡಿಸುವ ಖ್ಯಾತ ವೈದ್ಯ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದ ಡಾ. ಬಿ. ಎಂ. ಹೆಗ್ಡೆಯವರೂ ಕನ್ನಡದಲ್ಲೇ ತಮ್ಮ ಆರಂಭಿಕ ಶಿಕ್ಷಣ ಪಡೆದವರು. ಹೀಗಿರುವಾಗ ಕನ್ನಡದ ಬಗ್ಗೆ ಅಸಡ್ಡೆ ತೋರುವುದು ಸಲ್ಲ.
Related Articles
Advertisement
ನನ್ನದು ಬೇರೆಯೇ ಕಥೆ. ನನ್ನ ಅಪ್ಪಯ್ಯನಿಗೆ ಊರವರ ಉಪದ್ವಾéಪಗಳನ್ನು ಮೈಮೇರಿಸಿಕೊಂಡು ಅಲ್ಲಲ್ಲಿ ಸಕೀìಟು ಬಿಡುವುದು, ತಾವು ಇರಿಸಿಕೊಂಡ ಜೋಡೆತ್ತಿನ ಗಾಡಿಗೆ ಕೀಲೆಣ್ಣೆ ತಲಾಶ್ ಮಾಡುವುದು, ಎತ್ತುಗಳ ಗೊರಸಿಗೆ ಲಾಳ ಹೊಡೆಸುವುದು, ಓರೆಯಾದ ಗಾಡಿಯ ನೊಗವನ್ನು ಪುಟ್ಟಯ್ನಾಚಾರಿಗೆ ದುಂಬಾಲು ಬಿದ್ದು ನೇರವಾಗಿಸುವುದು- ಇತ್ಯಾದಿ ಇತ್ಯಾದಿ ಘನ ಕಾರ್ಯಗಳಿರುವಾಗ ನನ್ನ ಎಡ್ಮಿಶನ್ ಅಂತಹ ಮಹತ್ವದ್ದಾಗಿರಲಿಲ್ಲ. ಹೀಗಾಗಿ, ನನ್ನ ಅಣ್ಣನಿಗೆ ಈ ಕೆಲಸ ನಿಭಾಯಿಸುವಂತೆ ತಾಕೀತು ಮಾಡಿದರು. ಆತನೋ ನನಗಿಂತ ಐದು ವರ್ಷ ಹಿರಿಯ. ನಾನು ಶಾಲೆಗೆ ಹೋಗುವುದಿಲ್ಲ ಎಂದು ಚಂಡಿ ಹಿಡಿದೆ. ಅಮ್ಮ ಅಜ್ಜಿಯಂದಿರು ನನ್ನ ಮನಸ್ಸು ಬದಲಾಯಿಸಲು ಅಚ್ಚುಬೆಲ್ಲ, ಹೆಸರುಬೇಳೆ ಅರೆದು ಮಾಡಿದ ಪಾನಕ (ಉಪವಾಸ ಮಾಡುತ್ತಿದ್ದ ಅಜ್ಜಿಯಂದಿರ ಕೇವಲ ಒಪ್ಪೊತ್ತಿನ ಆಹಾರ), ಊರ ಜಾತ್ರೆಯಲ್ಲಿ ಸಕ್ಕರೆ ಕಡ್ಡಿ ಕೊಡಿಸುವ ಭರವಸೆ ಇತ್ಯಾದಿ ಹಲವಾರು ಆಮಿಷಗಳನ್ನೊಡ್ಡಿದರು. ನಾನು ಜಪ್ಪಯ್ಯ ಎನ್ನಲಿಲ್ಲ. ಅದಕ್ಕೆ ಬಲವಾದ ನನ್ನದೇ ಆದ ಕಾರಣಗಳಿದ್ದವು.
ಪಾಠ ಒಂದು : ಈಶನ ಮಗ ಗಣಪ !ನನ್ನ ಬಳಿ ತೇಪೆ ಹಚ್ಚಿದ ಅಂಗಿ ಬಿಟ್ಟರೆ ಪೃಷ್ಠಭಾಗ ಪೂರ್ತಿ ಗವಾಕ್ಷಿಯಾಗಿ ತೆರೆದುಕೊಂಡ ಚಡ್ಡಿ ಇತ್ತು. ಸಮಕಟ್ಟಾಗಿರುವ ಅಂಗಿ-ಚಡ್ಡಿ ಲಾವಂಚದ ಸುಖ-ಸುಗಂಧದೊಂದಿಗೆ ಪೆಠಾರಿಯಲ್ಲಿ ಪವಡಿಸಿತ್ತು. ಅದು ಹೊರಬರುವುದು ನೆಂಟರಿಷ್ಟರ ಮದುವೆ ಸಮಯದಲ್ಲಿ ಅಥವಾ ಊರ ತೇರಿನ ಸುಸಂದರ್ಭದಲ್ಲಿ. ಹೀಗಾಗಿ, ಅಣ್ಣನ ಹಳೆಯ ಚಡ್ಡಿಗೆ ಅದು ಜಾರದಂತೆ ಬಾಳೆನಾರಿನ ಬೆಲ್ಟ್ ಬಿಗಿದು, ಅಣ್ಣನೊಂದಿಗೆ ಹೋಗಿ ಒಂದನೆಯ ತರಗತಿಗೆ ದಾಖಲಾಗತಕ್ಕದ್ದು ಎಂದು ಅಪ್ಪಯ್ಯ ಆರ್ಡರ್ ಮಾಡಿದರೂ, ನಮ್ಮ ಬೋರ್ಡ್ ಶಾಲೆಯ ಹೆಡಾ¾ಸ್ಟರರಾದ ಕೆದ್ಲಾಯ ಮಾಸ್ಟರರ ನಾಗರಬೆತ್ತವನ್ನು ಎಣಿಸಿಯೇ ನನ್ನ ನಡು ನೀರಾಗಲು ತೊಡಗಿತ್ತು. ಅಣ್ಣ ಹೇಗೋ ಮಂಗಾಟಿಸಿ ನನ್ನನ್ನು ಶಾಲೆಗೆ ಒಯ್ದು ಕೆದ್ಲಾಯ ಮಾಸ್ಟರರ ಮುಂದೆ ನಿಲ್ಲಿಸಿದ. ಕೆದ್ಲಾಯ ಮಾಸ್ಟರರು ಅಳುತ್ತಿದ್ದ ನನ್ನನ್ನು ಮುದ್ದು ಮಾಡಿದ್ದು ನನಗೆ ಪರಮಾಶ್ಚರ್ಯಕ್ಕೆ ಕಾರಣವಾಗಿತ್ತು. ಅವರ ಟೇಬಲ್ ಮೇಲೆ ಇರಿಸಿದ್ದ ನಾಗರಬೆತ್ತ ನೋಡಿ ಇನ್ನೊಂದು ರೌಂಡ್ ಅಳು ಬಂತು. ಅಣ್ಣನಲ್ಲಿ ನನ್ನ ಜನ್ಮ ದಿನಾಂಕ ಕೇಳಿದಾಗ ಅದನ್ನು ಆತ ಮರೆತಿದ್ದು ಗೊಂದಲದಲ್ಲಿ ಬಿದ್ದ. ಅಂತೂ ನೆನಪಿಸಿದಂತೆ ಮಾಡಿ ನನ್ನ ವಯಸ್ಸನ್ನು ಹತ್ತು ತಿಂಗಳು ಹೆಚ್ಚಿಸಿದ. ಕೆದ್ಲಾಯ ಮಾಸ್ಟ್ರೆ , ಜವಾನನ್ನು ಕರೆದು ಬಾಳಿಗ ಮಾಸ್ಟ್ರಿಗೆ ಬರುವಂತೆ ಕರೆ ಕಳುಹಿಸಿದರು. ಬಾಳಿಗ ಮಾಸ್ಟ್ರೆ ಬಂದೊಡನೆ, ಒಂದನೆಯ ತರಗತಿಗೆ ನನ್ನನ್ನು ಸೇರಿಸುವಂತೆ ಹೇಳಿ ದಾಖಲಾತಿಗೆ ಬೇಕಾದ ವಿವರಗಳನ್ನು ಅವರಿಗೆ ನೀಡಿದರು. ಒಂದನೆಯ ಕ್ಲಾಸಿನ ಮಕ್ಕಳ ಡ್ರೆಸ್ ನೋಡಿದರೆ, ಬಾಳೆನಾರಿನಲ್ಲಿ ಬಿಗಿದ ನನ್ನ ದೊಗಲೆ ಚಡ್ಡಿ , ಅಲ್ಲಲ್ಲಿ ತೇಪೆ ಹಚ್ಚಿದ ಅಂಗಿಯೇ ಊಂಚು ಎನ್ನಿಸಿತು. ಏಕೆಂದರೆ, ಹಲವಾರು ಗಂಡುಮಕ್ಕಳು ಮೊಣಕಾಲಿನವರೆಗೆ ಬರುವ ಗಂಜಿಪರಾಕು (ಬನಿಯನ್) ತೊಟ್ಟು ಬರುತ್ತಿದ್ದರು. ಅದು ಕೂಡಾ ಜಿರಲೆಗಳು ಅಲ್ಲಲ್ಲಿ ಒಟ್ಟೆ (ತೂತು) ಮಾಡಿದ ಹಿರಿಯರ ಬನೀನು. ಹೆಣ್ಣು ಮಕ್ಕಳ ಡ್ರೆಸ್ ಕೂಡಾ ತೇಪೆ ಹಚ್ಚಿದ ಪರಕಾರ. ನಾನು ಸೇರಿದಂತೆ ಯಾರಿಗೂ ಚಪ್ಪಲಿ ನಾಸ್ತಿ. ಈಗಿನ ಶಾಲಾ ಮಕ್ಕಳಂತೆ ನಮಗೆ ಮಣಭಾರದ ಪುಸ್ತಕಗಳನ್ನು ಹೊರಬೇಕಾಗಿರಲಿಲ್ಲ. ಒಂದು ಸ್ಲೇಟು (ಬಳಪ), ಬರೆಯಲು ಒಂದು ಕಡ್ಡಿ (ಅದು ಮುರಿದರೆ ಏನೂ ಗಾಬರಿ ಇಲ್ಲ, ಕಡ್ಡಿ ತುಂಡನ್ನು ವಾಂಟೆಗೆ ಸಿಕ್ಕಿಸಿದರಾಯಿತು) ಹಾಗೂ ಮುಂದಿನ ತರಗತಿಗೆ ಉತ್ತೀರ್ಣಗೊಂಡವರಿಂದ ಅರ್ಧ ಬೆಲೆಗೋ, ಕಾಲು ಬೆಲೆಗೋ ಚೌಕಾಸಿ ಮಾಡಿಕೊಂಡು ಕೊಂಡ ಒಂದು ಪಾಠಪುಸ್ತಕ ಇದ್ದರೆ ಮಸ್ತಾಯಿತು. ನನ್ನನ್ನು ಒಂದನೆಯ ತರಗತಿಗೆ ದಾಖಲು ಮಾಡಿಕೊಂಡ ಬಾಳಿಗ ಮಾಸ್ಟ್ರೆ ಅತ್ಯಂತ ಸಾಧು ಸ್ವಭಾವದವರು. ಗಿಡ್ಡ ಆಳ್ತನ, ಖಾದಿ ಬಟ್ಟೆಯ ಧೋತರದ ಕಚ್ಚೆ, ಸ್ವಲ್ಪ ಕಂದು ಬಣ್ಣದ ಖಾದಿಯ ಅರೆತೋಳಿನ ಅಂಗಿ, ಹೆಗಲಿಗೊಂದು ಖಾದಿ ಅಂಗವಸ್ತ್ರ, ಹಣೆಯಲ್ಲಿ ಅಂಗಾರಕ ಸಮೇತ ತ್ರಿಪುಂಡ್ರ ನಾಮ, ಕೆನ್ನೆಯ ಮೇಲ್ಗಡೆ ಎರಡೂ ಕಡೆಗಳಲ್ಲಿ ಗೋಪಿಯ ಮುದ್ರೆ, ಕಿವಿಯಲ್ಲಿ ರಾರಾಜಿಸುವ ಕೆಂಪುಕಲ್ಲಿನ ಒಂಟಿ. ತಲೆಗೆ ಖಾದಿಟೊಪ್ಪಿ , ಟೊಪ್ಪಿಯ ಹಿಂಭಾಗದಲ್ಲಿ ಇಣುಕುತ್ತಿರುವ ಟಿಕ್ಕಿಲಿಯಂತೆ ಕಾಣಿಸುವ ಶೆಂಡಿ (ಶಿಖೆ). ಈ ಮಾಸ್ಟ್ರಾದರೊ ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಹಸುವಿನಂಥವರು. ಪಾಪ ಅಂದರೆ ಅಷ್ಟೂ ಪಾಪ. ಶಾಲೆ ಶುರುವಾಗುವ ಮೊದಲು ಮಕ್ಕಳಿಂದ ಪ್ರಾರ್ಥನೆ ಮಾಡಿಸುತ್ತಿದ್ದುದು ಇದೇ ಬಾಳಿಗ ಮಾಸ್ಟ್ರೆ. ಶಾಲೆಯ ಎದುರಿನ ವಿಶಾಲ ಕಾಂಪೌಂಡ್‌ನಲ್ಲಿ ಮಕ್ಕಳೆಲ್ಲ ಶಿಸ್ತಾಗಿ ನಿಂತು ಸ್ವಾಮಿದೇವನೆ, ಲೋಕಪಾಲನೆ, ನಿನ್ನ ಭಜಿಸುವೆ ಎನ್ನುವ ಪ್ರಾರ್ಥನೆ ಹಾಡುವುದು ಕಡ್ಡಾಯವಾಗಿತ್ತು. ಆ ಬಳಿಕ ಕ್ಲಾಸುಗಳು ಆರಂಭ. ಒಂದನೆಯ ತರಗತಿಯಲ್ಲಿ ಅಕ್ಷರಾಭ್ಯಾಸವೇ ಪ್ರಮುಖ ಭಾಗ. ಸ್ಲೇಟಿನಲ್ಲಿ ಅ, ಆ, ಇ, ಈ ಇತ್ಯಾದಿ ಬರೆದು ಅದರ ಮೇಲೆಯೇ ಪುನಃ ಪುನಃ ಬರೆಯಲು ರತ್ನಾ ಟೀಚರ್ ಹೇಳಿಕೊಟ್ಟರೆ, ವ್ಯಂಜನಾಕ್ಷರಗಳ ಅಭ್ಯಾಸವನ್ನು ನಳಿನಾಕ್ಷಿ ಟೀಚರ್ ಮಾಡಿಸುತ್ತಿದ್ದರು. ಆ ಬಳಿಕ ಸಣ್ಣ ಶಬ್ದಗಳ ಪಾಠ, ಉಕ್ತಲೇಖನ ಎಲ್ಲ ಮುಗಿಸಿ ವಾಕ್ಯರಚನೆಯ ಮರ್ಮ ಕಲಿಸುತ್ತಿದ್ದರು. ಜೊತೆ ಜೊತೆಗೆ ನೀತಿಕಥೆಗಳು, ಪಂಚತಂತ್ರ, ರಾಮಾಯಣ, ಮಹಾಭಾರತದಲ್ಲಿ ಬರುವ ಸಣ್ಣಕತೆಗಳನ್ನು ಕುಣಿಯುತ್ತ, ಕುಣಿಸುತ್ತ, ನಟಿಸುತ್ತ ಕಲಿಸುತ್ತಿದ್ದರು. ಮೂರನೆಯ ತರಗತಿಗೆ ಬರುವಾಗ ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ, ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ, ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದಿ…ಯಿಂದ ಆರಂಭವಾಗುವ ಹಾಡು; ನಾಗರಹಾವೇ ಹಾವೋಳು ಹೂವೇ ಇವೆಲ್ಲ ನಮಗೆ ಕಂಠಪಾಠವಾಗಿದ್ದವು. ಪುಣ್ಯಕೋಟಿಯ ಕಥೆಯನ್ನು ನಟಿಸುತ್ತ ನಮಗೆ ಹೇಳಿಕೊಡುವಾಗ ರತ್ನಾ ಟೀಚರ್ ಬಿಕ್ಕಿ ಬಿಕ್ಕಿ ಅತ್ತದ್ದು ಈಗಲೂ ನೆನಪಿದೆ. ಅವರ ಜೊತೆ ನಾವೂ ಅತ್ತಿದ್ದೆವು. ನನಗಂತೂ ಪುಣ್ಯಕೋಟಿ ಹಸು ನಮ್ಮ ಹಟ್ಟಿಯಲ್ಲಿದ್ದ ಗೋದೆ ದನ ಹಾಗೂ ಅದರ ಮುದ್ದಾದ ಕರುವನ್ನು ಜ್ಞಾಪಿಸಿ ಅಳು ತಡೆಯಲಾಗುತ್ತಿರಲಿಲ್ಲ. ನಾಲ್ಕನೇ ತರಗತಿಗೆ ಬರುವಾಗ ಸ್ಲೇಟು-ಕಡ್ಡಿಗೆ ವಿದಾಯ. ನೋಟ್ ಬುಕ್, ಪೆನ್ಸಿಲ್‌ನ ಆಗಮನವಾಯಿತು. ಹೊಸ ನೋಟ್‌ಬುಕ್ ಬಿಡಿಸುವಾಗ ಅದರಿಂದ ಸೂಸುವ ಪರಿಮಳ ಆಗಿನ ಕಾಲದಲ್ಲಿ ಅತ್ಯಂತ ಮಧುರವೆನ್ನಬೇಕು. ಅಣ್ಣನ ಸಹಾಯದಿಂದ ಪುಸ್ತಕಗಳಿಗೆ ಬೈಂಡ್ ಹಾಕುವ ಕಾರ್ಯ ಅನಿರ್ವಚನೀಯ ಆನಂದ ನೀಡುತ್ತಿತ್ತು. ಈ ಪುಸ್ತಕಗಳ ಜೊತೆಗೆ ಬರುತ್ತಿದ್ದ ಸಣ್ಣ ಪಟ್ಟಿಯಲ್ಲಿ ಹೆಸರು, ತರಗತಿ, ಶಾಲೆಯ ಹೆಸರು ಬರೆದು ಅದನ್ನು ಬೈಂಡ್ ಮಾಡಿದ ಪುಸ್ತಕಕ್ಕೆ ಅಂಟಿಸುವ ಸಂಭ್ರಮ ನೆನೆದರೆ ಈಗಲೂ ರೋಮಾಂಚನವಾಗುತ್ತದೆ. ಇನ್ನು ಪೆನ್ಸಿಲನ್ನು ಕೆತ್ತಿ ಸೀಸವನ್ನು ಹೊರಗೆ ಕಾಣುವಂತೆ ಮಾಡಿ, ಅದನ್ನು ಬರೆಯಲಾಗುವಂತೆ ಶಾರ್ಪ್‌ಗೊಳಿಸುವ ಮಹಾಸಾಧನೆ. ಬಡ್ಡಾದ ಬ್ಲೇಡಿನಲ್ಲಿ ಈ ಕೆಲಸ ಮಾಡುವಾಗ ಬೆರಳುಗಳಿಗೆ ಆದ ಗಾಯಗಳು ಅವೆಷ್ಟೋ. ಅವುಗಳಿಗೆ ತೆಂಗಿನೆಣ್ಣೆಯ ಪಸೆ ತಾಗಿಸಿದರೆ ಅದೇ ಸಿದೌಷಧ. ನಾಲ್ಕನೆಯ ತರಗತಿಯಲ್ಲಿ ಎಬಿಸಿಡಿ
ನಾಲ್ಕನೆಯ ತರಗತಿಯಲ್ಲಿ ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನು ಪುಸ್ತಕದಲ್ಲಿ ಬರೆಯಲು ಸ್ಟೆಲ್ಲಾ ಟೀಚರ್ ಕಲಿಸಿದರು. ಇದನ್ನು ಪುನಃ ಪುನಃ ಬರೆದು ಟೀಚರಿಗೆ ತೋರಿಸಬೇಕಿತ್ತು. ಆ ಬಳಿಕ ಚ, ಚಿ, c, ಛ ಬರೆಯುವುದನ್ನು ಟೀಚರ್ ನಿಧಾನವಾಗಿ ಹೇಳಿಕೊಟ್ಟರು. ನಮ್ಮೆಲ್ಲರಿಗೂ ಕಷ್ಟಕರವಾದ ವಿಷಯವೆಂದರೆ ಗಣಿತ. ಕೂಡಿಸುವುದು, ಕಳೆಯುವುದನ್ನು ಎರಡನೆಯ ತರಗತಿಯಿಂದಲೇ ಹೇಳಿಕೊಡುತ್ತಿದ್ದ ನಳಿನಾಕ್ಷಿ ಟೀಚರ್ ಇದಕ್ಕಾಗಿ ಹುಣಸೆ ಬೀಜ ಅಥವಾ ಗಜ್ಜುಗ ಕಾಯಿಯನ್ನು ಬಳಸುತ್ತಿದ್ದರು. ಆದರೆ, ಈಗ ಗುಣಾಕಾರ, ಭಾಗಾಕಾರ ಕಲಿಯಬೇಕಿತ್ತು. ಜೊತೆಗೆ ಇಪ್ಪತ್ತರವರೆಗಿನ ಮಗ್ಗಿಯನ್ನು ಕೂಡಾ. ಮಗ್ಗಿ ಏನೋ ಕಷ್ಟಪಟ್ಟು ಬಾಯಿಪಾಠ ಮಾಡ ಬಹುದಾಗಿತ್ತು. ಉಪ್ರಾಟೆ ಮಗ್ಗಿ (ಇಪ್ಪತ್ ಇಪ್ಪತ್ಲಿಯಿಂದ ಹಿಡಿದು ಇಪ್ಪೊತೊಬತ್ಲಿಯ ತನಕ) ಒಪ್ಪಿಸುವುದು ಮಹಾಕಷ್ಟದಾಯಕವಾಗಿತ್ತು. ಜೊತೆಗೆ ಮೇಷ- ವೃಷಭ ದಂತಹ 12 ತಿಂಗಳುಗಳು, 28 ನಕ್ಷತ್ರಗಳು, 15 ತಿಥಿಗಳು, 60 ಸಂವತ್ಸರಗಳು, 6 ಋತುಗಳು- ಇವೆಲ್ಲವುಗಳ ಬಾಯಿಪಾಠ ಮಾಡುವುದು ಕಡ್ಡಾಯವಾಗಿತ್ತು. ನಾಲ್ಕರಿಂದ ಎಂಟನೆಯ ತರಗತಿಯವರೆಗೆ ನಮಗೆ ಬೇರೆ ಬೇರೆ ಪೀರಿಯಡ್‌ಗಳಿದ್ದು, ಇದಕ್ಕೆ ಬೇರೆ ಬೇರೆ ಮಾಸ್ಟ್ರೆಗಳು, ಟೀಚರ್‌ಗಳು ಇದ್ದರು. ಕನ್ನಡಕ್ಕೆ ಸೈಕಲ್ ಕಚ್ಚೆಯ ಉಡುಪರು
(4ರಿಂದ 6ನೇ ತರಗತಿಯ ವರೆಗೆ) ಹಾಗೂ ನಾರಾಯಣಾ ಚಾರ್ಯರು (7 ಮತ್ತು 8ನೇ ತರಗತಿಗಳಿಗೆ); ಇತಿಹಾಸ, ಭೂಗೋಳಕ್ಕೆ ಶ್ರೀನಿವಾಸರಾಯರು; ವಿಜ್ಞಾನ, ಸಾಮಾನ್ಯ ಜ್ಞಾನಕ್ಕೆ ವಿಠಲ ಶೆಟ್ಟರು; ಇಂಗ್ಲಿಷ್‌ಗೆ ಸ್ಟೆಲ್ಲಾ ಟೀಚರ್, ಗಣಿತಕ್ಕೆ ಹೆಡ್‌ಮಾಸ್ಟ್ರಾದ ನಾಗರಬೆತ್ತದ ಕೆದ್ಲಾಯ ಮಾಸ್ಟ್ರೆ, ವೃತ್ತಿಶಿಕ್ಷಣಕ್ಕೆ ರಾಜು ಸಾಲ್ಯಾನ್ ಮಾಸ್ಟ್ರೆ ಇವರು ಡ್ರಿಲ್ ಮಾಸೂó ಆಗಿದ್ದರು- ಹೀಗಿದೆ ನಮ್ಮ ಬೋರ್ಡು ಶಾಲೆ ಪರಿಪೂರ್ಣ ಶಿಕ್ಷಣಾ ಕೇಂದ್ರವಾಗಿ ರೂಪುಗೊಂಡಿತ್ತು. ವಿಜ್ಞಾನದ ಇನ್ನೊಬ್ಬ ಅಧ್ಯಾಪಕರಾದ ಗಾಣಿಗ ಮಾಸ್ಟ್ರೆ ನಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ನಮ್ಮಿಂದ ನೃತ್ಯ, ನಾಟಕ, ಯಕ್ಷಗಾನ ಇತ್ಯಾದಿಗಳನ್ನು ರತ್ನಾ ಟೀಚರ್ ಸಹಕಾರದೊಂದಿಗೆ ಏರ್ಪಡಿಸುತ್ತಿದ್ದರು. ವೃತ್ತಿಶಿಕ್ಷಣ ಆ ಕಾಲದಲ್ಲಿ ಕಡ್ಡಾಯವಾಗಿತ್ತು. ನಮ್ಮ ಜಿಲ್ಲೆ ಆಗ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದು, ರಾಜಾಜಿಯವರು ಮುಖ್ಯಮಂತ್ರಿಗಳಾಗಿದ್ದರು. ಅವರು ವೃತ್ತಿಶಿಕ್ಷಣವನ್ನು ಎಲ್ಲ ಶಾಲೆಗೂ ಕಡ್ಡಾಯಗೊಳಿಸಿದರು. ಗಂಡು ಮಕ್ಕಳಿಗೆ ತಕಲಿಯಲ್ಲಿ ನೂಲು ತೆಗೆಯುವುದು ಹಾಗೂ ಕೈಮಗ್ಗದಲ್ಲಿ ಬಟ್ಟೆ ನೇಯುವುದನ್ನು ರಾಜು ಸಾಲ್ಯಾನ್ ಮಾಸ್ಟ್ರೆ ಕಲಿಸುತ್ತಿದ್ದರು. ತಕಲಿಯಲ್ಲಿ ನೂಲು ತೆಗೆಯುವ ಪಾಠ
ಸಾಮಾನ್ಯವಾಗಿ ಮರದ ಕೆಲಸ ಮಾಡುತ್ತಿದ್ದ ಕೃಷ್ಣಯ್ನಾಚಾರಿ ಬೇಸಾಯದ ಶ್ರಾಯದಲ್ಲಿ ಕೈಗೊಳ್ಳುತ್ತಿದ್ದ ಕಮ್ಮಾರ ಕೆಲಸದ ನಡುವೆ ಬಿಡುವು ಮಾಡಿಕೊಂಡು ಹತ್ತಿಯಿಂದ ನೂಲು ತೆಗೆಯುವ ತಕಲಿಯನ್ನು ಏನೂ ದುಡ್ಡು ಕೇಳದೆ ನಮಗೆ ಮಾಡಿಕೊಡುತ್ತಿದ್ದರು. ಆಗ ಚಾಲ್ತಿಯಲ್ಲಿದ್ದ ತಾಮ್ರದ ಕಾಲಾಣೆಯ ಮಧ್ಯೆ ತೂತು ಮಾಡಿ, ಅದಕ್ಕೆ ಕೊಡೆಯ ಕಡ್ಡಿಯನ್ನು ಸಿಕ್ಕಿಸಿ, ನೂಲು ಸರಾಗವಾಗಿ ಹೋಗಲು ಸಣ್ಣ ಕೊಕ್ಕೆಯೊಂದನ್ನು ಅದರಲ್ಲಿ ಮಾಡಿದರಾಯಿತು. ತಕಲಿ ಸಿದ್ಧ. ಕಡ್ಡಿ ಜಾರದಂತೆ ಕುದಿಯುವ ತವರದ ಒಂದು ಹುಂಡು ಬಿಟ್ಟರಾಯಿತು. ತಕಲಿಯನ್ನು ವರ್ಷಾನುಗಟ್ಟಲೆ ಬಳಸಬಹುದಾಗಿತ್ತು. ತಕಲಿ ಬಳಸಿ ಹತ್ತಿಯಿಂದ ತೆಗೆದ ನೂಲನ್ನು ತಕಲಿಯ ಬುಡದಲ್ಲಿಯೇ ಸುರುಳಿಗಟ್ಟಿ ಇರಿಸಬೇಕು. ಈ ಸುರುಳಿ ಸಾಕಷ್ಟು ಬೀಗಿದ ಬಳಿಕ ರಾಜು ಸಾಲಿಯಾನ್ ಮಾಸ್ಟ್ರಿಗೆ ಒಪ್ಪಿಸಬೇಕು. ಅವರು ಅದನ್ನು ಚರಕದಲ್ಲಿ ಸುತ್ತಿ ಬಲಪಡಿಸಿ, ಮಗ್ಗಕ್ಕೆ ಜೋಡಿಸುತ್ತಾರೆ. ಮಗ್ಗದ ಲಾಳಿಯನ್ನು ಎಡಕ್ಕೆ ಬಲಕ್ಕೆ ಓಡಿಸುವ ಕೌಶಲ್ಯ ನಮ್ಮ ಕೈಹಿಡಿಯದ್ದರಿಂದ, ಮಗ್ಗಕ್ಕೆ ಹಾಕಿದ ನೂಲು ಅಲ್ಲಲ್ಲಿ ಹರಿಯುತ್ತಿತ್ತು. ಹೀಗಾಗಿ ಅಂತಿಮವಾಗಿ ಸಿದ್ಧಗೊಂಡ ಬಟ್ಟೆ (ಹೆಚ್ಚಾಗಿ ಬೈರಾಸು)ಯಲ್ಲಿ ನೂಲಿನ ತುಂಡುಗಳು ಹೊರಗೆ ಇಣುಕುತ್ತಿದ್ದವು. ಹೆಣ್ಣು ಮಕ್ಕಳಿಗೆ ರತ್ನಾ ಟೀಚರ್ ಮತ್ತು ಪದ್ಮಾ ಟೀಚರ್ ಕಸೂತಿ ಮತ್ತು ಹೊಲಿಗೆಯನ್ನು ಕಲಿಸುತ್ತಿದ್ದರು. ನಮ್ಮ ಶಾಲೆಯ ಎದುರು ಆಟೋಟಗಳಿಗೂ ಸಾಕಷ್ಟು ವಿಶಾಲವಾದ ಮೈದಾನವಿದ್ದು ಅದಕ್ಕೆ ಪಾಗಾರವಿತ್ತು. ಪಾಗಾರದಾಚೆ ವಿವಿಧ ಮರಮಟ್ಟುಗಳುಳ್ಳ ಹಾಡಿ. ನಮ್ಮ ಬಾಳಿಗ ಮಾಸ್ಟ್ರಿಗೆ ಮರಗಿಡಗಳೆಂದರೆ ಮಹಾಪ್ರೀತಿ. ಅವರು ಸ್ವಯಂಪ್ರೇರಣೆಯಿಂದ ಮಕ್ಕಳನ್ನು ಸೇರಿಸಿಕೊಂಡು ಪಾಗಾರದ ಬದಿಯಲ್ಲಿ ತೋಟಗಾರಿಕೆ ನಡೆಸುತ್ತಿದ್ದರು. ಗುಲಾಬಿ, ಜಾಜಿ, ಮಲ್ಲಿಗೆ, ದಾಸವಾಳ, ನಂದಿಬಟ್ಟಲು, ಸಂಪಿಗೆಯಂತಹ ಹೂಗಿಡಗಳಲ್ಲದೆ ತೆಂಗು, ಕಂಗು, ಸೀತಾಫಲ, ಚಿಕ್ಕು, ಪಪ್ಪಾಯಿಯಂತಹ ಫಲವೃಕ್ಷಗಳನ್ನು ಮಾಸ್ಟರರ ನಿರ್ದೇಶನದಂತೆ ನಾವು ನೆಟ್ಟು , ಅವುಗಳಿಗೆ ಶಾಲೆಯ ಬಾವಿಯಿಂದ ಕೊಡಪಾನದಲ್ಲಿ ಸೇದಿದ ನೀರನ್ನು ಉಣಿಸುತ್ತಿದ್ದುದಲ್ಲದೆ, ಮನೆಯಿಂದ ಸೆಗಣಿ ತಂದು ಅವುಗಳ ಬುಡಕ್ಕೆ ಮೆತ್ತುತ್ತಿದ್ದೆವು. ಬಾಳಿಗ ಮಾಸ್ಟ್ರ ಆರೈಕೆಯಲ್ಲಿ ಹೂಗಿಡಗಳು ಮೈತುಂಬಾ ಹೂವು ಹೊತ್ತು ಘಮಘಮಿಸುತ್ತ ಕಂಗೊಳಿಸಿದರೆ, ಫಲ ವೃಕ್ಷಗಳು ಫಲ ಕೇಯುತ್ತಿದ್ದವು. ಆದರೆ, ಒಂದೇ ಒಂದು ತೆಂಗಿನಕಾಯಿಯಾಗಲಿ, ಅಡಿಕೆಯಾಗಲೀ ಬಲಿತುದನ್ನು ನಾವು ಕಂಡಿಲ್ಲ. ಉಳಿದ ಹಣ್ಣಿನ ಗಿಡಗಳದ್ದೂ ಅದೇ ಪಾಡು. ನಮ್ಮ ಪಾಗಾರದಾಚೆಗಿನ ಹಾಡಿ, ಅದರಾಚೆಗಿನ ಗುಡ್ಡ (ಸಣ್ಣ ಬೆಟ್ಟ) ದಿಂದ ಹಿಂಡು ಹಿಂಡಾಗಿ ಆಗಮಿಸುವ ಮಂಗಗಳ ಪಡೆ ದೋರೆಕಾಯಿಗಳನ್ನೆಲ್ಲ ಸ್ವಾಹಾ ಮಾಡುತ್ತಿತ್ತು. ಅಡಕೆಯ ಹಿಂಗಾರವನ್ನು ದರ್ಶನ ಪಾತ್ರಿಯಂತೆ ಮುಖಕ್ಕೆಲ್ಲ ಮಂಗಗಳು ಮೆತ್ತಿಕೊಂಡು ಕುಣಿಯುತ್ತಿದ್ದವು. ಇದರಿಂದ ನಮಗೆಲ್ಲ ಸಿಟ್ಟು ತಡೆಯಲಾಗದಿರುತ್ತಿದ್ದರೂ, ಬಾಳಿಗ ಮಾಸ್ಟ್ರಿಗೆ ಚೂರೂ ಬೇಜಾರಾಗುತ್ತಿರಲಿಲ್ಲ. “”ಪಾಪ, ಮೂಕಪ್ರಾಣಿಗಳು ಎಷ್ಟು ಹಸಿದಿದ್ದವೋ ಏನೋ, ಅವುಗಳ ಹೊಟ್ಟೆ ತಂಪು ಮಾಡಿದ ಪುಣ್ಯ ನಿಮಗೆ ಸಿಗುತ್ತದೆ ಮಕ್ಕಳೆ” ಎನ್ನುತ್ತಿದ್ದರು. ನಾವು ವಿಧಿಯಿಲ್ಲದೆ ಗೋಣು ಅಲ್ಲಾಡಿಸುತ್ತಿದ್ದೆವು. ಶಾಲಾ ವಾರ್ಷಿಕೋತ್ಸವಕ್ಕೆ ಮೊದಲು ಗಾಣಿಗ ಮಾಸ್ಟ್ರೆ, ಸಾಲಿಯಾನ್ ಮಾಸ್ಟ್ರೆ, ಶ್ರೀನಿವಾಸ ರಾವ್ ಮಾಸ್ಟ್ರೆ ಮುಂಡು ಮೇಲೆ ಕಟ್ಟಿಕೊಂಡು ಬನಿಯನ್‌ಧಾರಿಗಳಾಗಿ ಶಾಲೆಯ ಗೋಡೆಗಳಿಗೆ ಸುಣ್ಣಬಣ್ಣ ಬಳಿಯುವುದರಲ್ಲಿ ನಿರತರಾಗಿರುತ್ತಿದ್ದರೆ, ಹೆಡ್‌ಮಾಸ್ಟರ್ ಕೆದ್ಲಾಯರು ಪೀಲಾಹಾಥಿ (ಹನಿಡ್ನೂ) ಸಿಗರೇಟು ಸುಡುತ್ತ ತಮ್ಮ ನಿರ್ದೇಶನ ನೀಡುತ್ತಿದ್ದರು. ವಿದ್ಯಾರ್ಥಿಗಳ ಕಪಿಸೇನೆ ಮಾಸ್ಟ್ರೆಗಳ ಕಾಯಕಕ್ಕೆ ಸಾಥ್ ನೀಡುತ್ತಿತ್ತು. ಗೋಡೆಗಳೆಲ್ಲ ಅಚ್ಚುಕಟ್ಟಾಗಿ ಸುಣ್ಣ ಹೊಡೆಸಿಕೊಂಡು ಆಕರ್ಷಕವಾಗಿ ಕಾಣಿಸುತ್ತಿದ್ದುದೇನೊ ಸರಿ. ಆದರೆ, ನಮ್ಮ ಕೈ, ಮೈ, ದಿರಿಸಿನ ಮೇಲೂ ನಾಲ್ಕಾರು ತಿಂಗಳು ಸುಣ್ಣದ ಲೇಪವಾಗುತ್ತಿತ್ತು. ಮನೆಯಲ್ಲಿ “”ಸ್ವಲ್ಪ ಜಾಗ್ರತೆಯಾಗಿ ಇರಬಾರದಿತ್ತಾ? ಗೋಡೆಗೆ ಮೈತಾಗಿಸಿ ಮುತ್ತು ಕೊಡಲು ಯಾಕೆ ಹೋಗಿದ್ದು” ಎಂದು ಹಿರಿಯರು ಪುಟ್ಟದಾಗಿ ಗದರಿಕೊಳ್ಳುತ್ತಿದ್ದರು. ಆಗ ಎಂಟನೆಯ ಕ್ಲಾಸಿಗೆ ಪಬ್ಲಿಕ್ ಪರೀಕ್ಷೆ ಇರುತ್ತಿತ್ತು. ಪರೀಕ್ಷೆಯ ಆನ್ಸರ್ ಪೇಪರ್ ಅನ್ನು ಶಾಯಿಯಲ್ಲೆ ಬರೆಯಬೇಕು ಎನ್ನುವ ನಿಯಮವಿತ್ತು. ಬಾಲ್‌ಪೆನ್‌ನ ಸುದ್ದಿಯೇ ಇಲ್ಲದಿದ್ದ ಆ ಜಮಾನದಲ್ಲಿ ಇಂಕ್‌ಪೆನ್ ಹೊಂದಿರುವುದು ಪ್ರತಿಷ್ಠೆಯ ವಿಷಯವಾಗಿತ್ತು. ಈ ಪೆನ್ನುಗಳನ್ನು ಹೊಂದಿದ್ದವರೂ, ಅದನ್ನು ತಮ್ಮ ರುಜು ಹೆಟ್ಟಲು ಮಾತ್ರ ಉಪಯೋಗಿಸಿ, ಎಲ್ಲರಿಗೂ ಕಾಣುವಂತೆ ಪೆನ್ನನ್ನು ಜೇಬಿನಲ್ಲಿ ಸಿಕ್ಕಿಸಿಕೊಂಡಿರುತ್ತಿದ್ದರು. ನಾವಾದರೊ ಹ್ಯಾಂಡಲನ್ನು ಶಾಯಿಯಲ್ಲಿ ಅದ್ದಿ ಬರೆಯುವ ಗಿರಾಕಿಗಳು. ಶಾಲೆಯಲ್ಲಿ ಕಪ್ಪು , ನೀಲಿ, ಜಾಂಬಳಿ ಶಾಯಿಯ ಪ್ರಯೋಗ ನಡೆಸಿದ್ದರೂ, ಪರೀಕ್ಷೆಯಲ್ಲಿ ನೀಲಿ ಶಾಯಿ ಮಾತ್ರ ಬಳಸಬೇಕೆಂದು ಕೆದ್ಲಾಯ ಮಾಸ್ಟ್ರ ಕಟ್ಟಪ್ಪಣೆಯಾಗಿತ್ತು. ನಮ್ಮ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ, ನಮ್ಮ ಮನೆಯಿಂದ ಮೂರು ಮೈಲು ದೂರದಲ್ಲಿರುವ ಕಲ್ಯಾಣಪುರ ಶಾಲೆ ಪರೀಕ್ಷಾ ಕೇಂದ್ರವಾಗಿತ್ತು. ಕಲ್ಪಂಡೆ (ಕಲ್ಲುಬಂಡೆ) ದಾರಿಯಲ್ಲಿ ಮೂರು ಮೈಲು ನಡಿಗೆ. ನೀರಿನಲ್ಲಿ ಮುಳುಗಿಸಿ ತೆಗೆದ ಅವಲಕ್ಕಿ, ಅದರ ಮೇಲೆ ಮೊಸರು, ಸ್ವಲ್ಪ ಉಪ್ಪು , ತಟಕು ಉಪ್ಪಿನಕಾಯಿ ರಸ ಹಾಕಿ ಉಗ್ಗದಲ್ಲಿ ಇರಿಸಿದ ಮಧ್ಯಾಹ್ನದೂಟ ಒಂದು ಕೈಯಲ್ಲಾದರೆ, ಇನ್ನೊಂದು ಕೈಯಲ್ಲಿ ಶಾಯಿಯ ಬುತ್ತಿ (ಕುಪ್ಪಿ), ಬರೆಯುವ ಹ್ಯಾಂಡಲ್, ಕೆಲವು ಚಾಕ್ ತುಂಡುಗಳು (ಕಿಸೆಯಲ್ಲಿ), ಅಥವಾ ಬ್ಲಾಟಿಂಗ್ ಪೇಪರ್‌ನೊಂದಿಗೆ ಸಜ್ಜಾಗಿ ಪರೀಕ್ಷೆ ಬರೆಯಲು ಹೊರಟರೆ, ಮರಳುವುದು ಸಂಜೆಗೆ. ಆಗ ಕೈ, ಇಡೀ ಅಂಗಿಯಲ್ಲಿ ಶಾಯಿಯ ಕಲೆಗಳು. ಶಾಯಿಯಲ್ಲಿ ಬರೆದುದನ್ನು ಚಾಕ್ ಅಥವಾ ಬ್ಲಾಟಿಂಗ್ ಪೇಪರ್‌ನಲ್ಲಿ ಒತ್ತದಿದ್ದರೆ ಚಿತ್ತಾಗುತ್ತಿತ್ತು. ಕೆಲವೊಮ್ಮೆ ಹ್ಯಾಂಡಲಿನ ನಿಬ್ಬು ಕೈಕೊಡುತ್ತಿತ್ತು ಅಥವಾ ತುಂಡಾಗಿ ಬರೆಯಲಾಗುತ್ತಿರಲಿಲ್ಲ. ಆಗ ಚಡ್ಡಿಯ ಕಿಸೆಯಲ್ಲಿರಿಸಿದ್ದ ಹೊಸ ನಿಬ್ಬನ್ನು ಹ್ಯಾಂಡಲಿಗೆ ಜೋಡಿಸಬೇಕಾಗುತ್ತಿತ್ತು. ಹೀಗಾಗಿ ಕಂಡಕಂಡಲ್ಲಿ ಶಾಯಿಯ ಕಲೆ, ದುರದೃಷ್ಟವಶಾತ್ ಶಾಯಿಯ ಬುತ್ತಿ (ಕುಪ್ಪಿ) ಕವುಚಿ ಬಿದ್ದರೆ ಮಹಾ ಚಾಂದ್ರಾಣ. ಆ ಕಾಲದಲ್ಲಿ ಮೊದಲೇ ಹೇಳಿದಂತೆ ಪೆನ್‌ಗಳು ಇರಲಿಲ್ಲವೆಂದಲ್ಲ. ಅವು ಉಳ್ಳವರ ಸೊತ್ತಾಗಿದ್ದವು. ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದುದಕ್ಕೆ ನನಗೆ ರವಷ್ಟೂ ಕೀಳರಿಮೆ ಇಲ್ಲ . ಕನ್ನಡ ನನಗೆ ಅನ್ನ ಒದಗಿಸುವ ರಾಜಮಾರ್ಗವಾಗಿ ಕೆಲಸ ಮಾಡಿದೆ. ನನ್ನ ವ್ಯಕ್ತಿತ್ವವನ್ನು ರೂಪಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಲ್ಲಿನ ಶಿಕ್ಷಕ ವರ್ಗಕ್ಕೆ ಸದಾ ನಾನು ತಲೆ ಬಾಗುತ್ತೇನೆ. ವ್ಯಾಸರಾವ್ ನಿಂಜೂರು