Advertisement

ಬದುಕೆಂಬ ಅಗ್ನಿದಿವ್ಯ

06:00 AM Aug 03, 2018 | |

ಶಿಕ್ಷಣ ಮತ್ತು ಆಧುನಿಕ ಸುಧಾರಣೆಗಳು ಇಂದು ನೂರಾರು ಆಯ್ಕೆಗಳನ್ನು ನಮ್ಮೆದುರು ತೆರೆದಿಟ್ಟಿವೆ. ಶಿಕ್ಷಣದ ಸಾರ್ವತ್ರೀಕರಣವೆಂಬ ವರ ಸ್ತ್ರೀಯರ ಬಾಳಿಗೆ ಹೊಸದೊಂದು ಆಯಾಮವನ್ನು ಒದಗಿಸಿದೆ. ಆದರೆ, ಇವೆಲ್ಲಕ್ಕೂ ಪೂರ್ವದ ಕರಿನೆರಳುಗಳು ಇಂದಿಗೂ ಮನಸ್ಸಿನ ಭಿತ್ತಿಯಲ್ಲಿ ಶಾಶ್ವತವಾಗಿ ಉಳಿದುಹೋಗಿವೆ. ಹುಟ್ಟು ಯಾವತ್ತಿದ್ದರೂ ನಮ್ಮ ಆಯ್ಕೆಯಾಗಲು ಸಾಧ್ಯವಿಲ್ಲ. ಆಗಿನ ಕಾಲಘಟ್ಟದಲ್ಲಿ ಮದುವೆಯೂ ಕೂಡ. ಅಯಾಚಿತವಾಗಿ ಆ ಹಳ್ಳಿಯಲ್ಲಿ ಹುಟ್ಟಿದ್ದರಿಂದ ಹೊಳೆಯಿಂದ ಸುತ್ತುವರೆದ, ಊರೆಂದು ಕರೆಯಲು ಕನಿಷ್ಠ ಅರ್ಹತೆಯನ್ನೂ ಹೊಂದಿರದ ಅಲ್ಲಿನ ಹಸಿ, ಹಸಿ ಅನುಭವಗಳು ಮನಸ್ಸಿನಲ್ಲಿ ಸ್ಮತಿಯಾಗಿ ಉಳಿದುಹೋಗಿವೆ. ಹಳೆಯ ನೆನಪುಗಳನ್ನು ಕೆದಕಿದಾಗ ಅದ್ಯಾಕೋ ಬದುಕಿನ ಬಂಡಿಯನ್ನು ಅನಿವಾರ್ಯವಾಗಿ ಒಂಟಿ ಚಕ್ರವಾಗಿ ಮುನ್ನಡೆಸಿದ ಹೆಂಗಸರೇ ಕಣ್ಮುಂದೆ ಬಂದು ನಿಲ್ಲುತ್ತಾರೆ.

Advertisement

ದೇವರು ಅದ್ಯಾಕೆ ಈ ಹೊರುವುದು, ಹೆರುವುದರ ಕರ್ಮವನ್ನು ನಮಗೇ ನೀಡಿದ್ದಾನೋ ಎಂದು ಅಲವತ್ತುಕೊಳ್ಳುವ ಮಹಿಳೆಯರಿಗೆ ದೇವೀರಮ್ಮ ಹೀಗೊಂದು ಕಥೆ ಹೇಳುತ್ತಿದ್ದಳು. ಮೊದಲೆಲ್ಲ ಗಂಡಸರೇ ಮೈನೆರೆದು, ಅವರೇ ಮಕ್ಕಳನ್ನೂ ಹಡೆಯುತ್ತಿದ್ದರಂತೆ. ಅವೆಲ್ಲವೂ ಯಾವುದೇ ಮುಚ್ಚುಮರೆಯಿಲ್ಲದೇ ಅವನ ಕಾಲಿನ ಸಿಂಗಾರಹೊಟ್ಟೆಯೆಂಬ (ಮೊಣಕಾಲು ಗಂಟಿನ ಕೆಳಗಿರುವ ಕಾಲಿನ ಹಿಂಭಾಗ) ಜಾಗದಿಂದಲೇ ನಡೆಯುತ್ತಿತ್ತಂತೆ. ಯಾವಳ್ಳೋ ಬಿನ್ನಾಣಗಿತ್ತಿ ಕಾಲುಬ್ಬಿಸಿಕೊಂಡ ಗಂಡಸನ್ನು ನೋಡಿ ನಕ್ಕು ಲೇವಡಿ ಮಾಡಿದ್ದಕ್ಕೆ ದೇವರು ಅವೆಲ್ಲವನ್ನೂ ಹೆಣ್ಣಿಗೆ ವರ್ಗಾಯಿಸಿದನಂತೆ. ಈ ಹೆಣ್ಣುವರ್ಗವೋ ಇವೆಲ್ಲವೂ ಗುಟ್ಟಾಗಿ ನಡೆಯಲೆಂದು ಗುಪ್ತಜಾಗಗಳಿಗೆ ಎಲ್ಲವನ್ನೂ ವರ್ಗಾಯಿಸಿಕೊಂಡರಂತೆ.  ಈ ಜಾನಪದ ಕಥೆಯ ಸತ್ಯಾಂಶ ಏನೇ ಇರಲಿ, ಯಾವುದೇ ವೈದ್ಯಕೀಯ ಸೌಲಭ್ಯದ ಗಂಧಗಾಳಿಯಿಲ್ಲದ ಊರಿನಲ್ಲಿ ಹೆಣ್ಣಿಗೆ ತಾಯ್ತನವೆಂಬುದು ಸಾವು-ಬದುಕಿನ ಪ್ರಶ್ನೆಯಾದದ್ದಂತೂ ಸತ್ಯ.

ಮನೆಯೆಂದರೆ ಮನೆಯಲ್ಲದ, ಬಯಲೆಂದರೆ ಬಯಲಲ್ಲದ ಗುಡಿಸಲಲ್ಲಿ ಚಳಿ, ಮಳೆಗಂಜದೇ ಪ್ರತಿವರ್ಷವೂ ಬಸಿರಾಗುತ್ತ, ಹಡೆಯುತ್ತ, ಹಡೆದ ಮಕ್ಕಳನ್ನು ಬೆನ್ನಿಗೆ ಕಟ್ಟಕೊಂಡು ಬೆಳೆಸುತ್ತ, ಮಡಿಲಮಗು ಅಸುನೀಗಿದರೂ ಒಡಲ ಬೆಂಕಿಯಲ್ಲೇ ಅಡಿಗೆ ಬೇಯಿಸುವರೇನೋ ಎಂಬಂತೆ ನಿಡುಸುಯ್ಯುತ್ತ ನಿತ್ಯದ ಕಾಯಕಗಳಿಗೆ ಅನುವಾಗುವ ಹೆಣ್ಣುಗಳನ್ನು ದೇವರೆನ್ನದೇ ಬೇರೆ ವಿಧಿಯಿಲ್ಲ. ಬಸುರು ಹೊರೆಯಾಗಿ, ಬಾಣಂತನದಲ್ಲಿ ನಂಜಾಗಿ ಕಣ್ಮುಚ್ಚಿದ ಹೆಂಗಸರನ್ನೂ ಆ ಊರು ದೆವ್ವಗಳನ್ನಾಗಿ ಉಳಿಸಿಕೊಂಡಿದೆ. ಈ ದೆವ್ವಗಳ ಗುಂಪು ಮತ್ತೆ, ಮತ್ತೆ ಅನಾರೋಗ್ಯದಿಂದ ಬಸವಳಿದ ಹೆಣ್ಣುಗಳಿಗೆ ಮುಕ್ತಿಯನ್ನು ಕರುಣಿಸಿ ತಮ್ಮ ಗುಂಪಿಗೆ ಸೇರಿಸಿಕೊಂಡಿವೆ. ಕೋಳಿಪಡೆ, ಗಡಂಗು, ಗೂಡಂಗಡಿ, ಜೂಜು ಇವುಗಳಲ್ಲಿ ವ್ಯಸ್ತರಾದ ಗಂಡುಗಳು ದುಡಿಮೆಯ ಪಾಲುದಾರರಾಗಿಯೂ ಕೂಡ ಬದುಕಿನ ಪಾಲುಗಾರಿಕೆಯಿಂದ ಹಿನ್ನಡೆದಿದ್ದಾರೆ. ಹಾಗಾಗಿಯೇ ಹಳೆಯ ಸ್ಮತಿಗಳಲ್ಲಿ ಪಾಲು ಪಡೆಯದೇ ಮಾಸಲು ಚಿತ್ರವಾಗಿ ಉಳಿದುಹೋಗಿದ್ದಾರೆ. ಹೆಂಡತಿಯನ್ನು ಹೊಡೆಯುವುದು ತಮ್ಮ ಪಾರಂಪರಿಕ ಹಕ್ಕು ಎಂಬಂತೆ ವರ್ತಿಸಿದ ಕೆಲವರಂತೂ ಕರಾಳ ನೆನಪಾಗಿ ಕಾಡುತ್ತಾರೆ. ಇವೆಲ್ಲ ಅಗ್ನಿದಿವ್ಯವನ್ನು ದಾಟಿದ ನೂರಾರು ಮಹಿಳೆಯರು ನನ್ನೊಳಗೆ ನಿಂತು ತಮ್ಮ ಕಥೆಯನ್ನು ಹೇಳುತ್ತಾರೆ. ಕೆಲವರ ಕಥೆಗಳಿಗೆ ನನ್ನೊಳಗಿನ ಪದಗಳು ಸೋತು ಬರೆಯದಂತೆ ಮಾಡಿವೆ.

ಇಷ್ಟಾಗಿಯೂ ಉಡದಂತೆ ಬದುಕಿಗೆ ಗಟ್ಟಿಯಾಗಿ ಜೋತುಬಿದ್ದು, ಅದನ್ನು ಮುನ್ನಡೆಸಿದ ಅವರ ಜೀವನಪ್ರೀತಿ ನನ್ನನ್ನು ಮೂಕಳನ್ನಾಗಿಸುತ್ತದೆ. ತಮ್ಮ ಕಷ್ಟಕ್ಕೆ ಇನ್ಯಾರನ್ನೋ ದೂರದೇ, ಎಂತಹ ವಿಷಮ ಸನ್ನಿವೇಶದಲ್ಲೂ ಬದುಕಿಗೆ ಬೆನ್ನು ತಿರುಗಿಸದೇ ಎಲ್ಲವನ್ನೂ ಬಂಡೆಯಂತೆ ನಿಂತು ಎದುರಿಸಿದ ಹೆಣ್ಣುಗಳ ಯಶೋಗಾಥೆ ಜೀವನಪ್ರೀತಿಯನ್ನು ಉಕ್ಕಿಸುತ್ತದೆ. ತಮಗೆ ಬಂದ ಕಷ್ಟಕೋಟಲೆಗಳು ಮಕ್ಕಳಿಗೆ ಬಾರದಿರಲೆಂದು ಕಡುಕಷ್ಟದ ನಡುವೆಯೂ ಅವರನ್ನು ಓದಿಸಿದ ಅಮ್ಮಂದಿರ ಹಠಕ್ಕೆ ಮನಸ್ಸು ಬಾಗುತ್ತದೆ. ಬದುಕಿನಲ್ಲಿ ನೆಮ್ಮದಿಯನ್ನು ತರಬಲ್ಲ ಎಲ್ಲ ಹಾದಿಗಳೂ ಮುಚ್ಚಿಕೊಂಡಾಗ ತಮ್ಮ ಬೇಗುದಿಯನ್ನು ಹಂಚಿ ನಿರಾಳವಾಗಲು ಚೌಡಿ, ಮಾರಿ, ಮಾಸ್ತಿ ಮೊದಲಾದ ದೇವಾದಿದೇವತೆಯರನ್ನು ಸೃಜಿಸಿಕೊಂಡು ತಮ್ಮ ಬದುಕಿನ ಭಾರವನ್ನು ಅವರ ಹೆಗಲಿಗೇರಿಸಿ ನಿರಾಳವಾಗುವ ಅವರ ನಂಬಿಕೆಗೆ ಜೀವ ಶರಣೆನ್ನುತ್ತದೆ. ಜೀವನದ ಮೂಲಭೂತ ಆವಶ್ಯಕತೆಗಳ ಪೂರೈಕೆಯೇ ಸವಾಲಾಗಿರುವ ಸನ್ನಿವೇಶದಲ್ಲಿ ಜಾತಿ, ಮತ, ಪಂಗಡ, ಧರ್ಮ ಎಲ್ಲವೂ ಗೌಣವಾಗಿ ಎಲ್ಲರೂ ಮನುಷ್ಯರೇ ಆಗಿಬಿಡುವ ಸರಳತೆ ವಿಸ್ಮಯ ಮೂಡಿಸುತ್ತದೆ.

ತಮ್ಮ ಯಾಂತ್ರಿಕ ಜೀವನದ ಏಕತಾನತೆಯನ್ನು ಮುರಿಯಲು ಅವರು ಕಂಡುಕೊಂಡ ಹಬ್ಬ, ಹರಿದಿನಗಳು, ಸುಗ್ಗಿ, ಸಂಭ್ರಮಗಳು ಮತ್ತು ಆ ದಿನಗಳಲ್ಲಿ ಮನೆಯಂಗಳವನ್ನು ನುಣುಪಾಗಿ ಸಾರಿಸಿ, ಅವರು ಬರೆಯುತ್ತಿದ್ದ ಚಿತ್ರ, ಚಿತ್ತಾರಗಳು ಅಮೂಲ್ಯ ಕಲೆಯ ಕುರುಹಾಗಿ ಮನದಂಗಳದಲ್ಲಿ ದಾಖಲಾಗಿವೆ. ದನ, ಎತ್ತು, ಎಮ್ಮೆ, ಕುರಿ, ಕೋಳಿಗಳನ್ನು ಅವರು ತಮ್ಮ ಸಹವರ್ತಿಗಳೇನೋ ಎಂಬಂತೆ ಪ್ರೀತಿಸುತ್ತಿದ್ದ ಪರಿ ಬೆರಗು ಮೂಡಿಸುತ್ತದೆ. ಹಸುರು ಉಕ್ಕಿಸುವಾಗ, ಭತ್ತ ಕುಟ್ಟುವಾಗ, ತೆನೆ ಬೇರ್ಪಡಿಸುವಾಗ, ಪಲ್ಲಕ್ಕಿಯ ಪೂಜೆ ನಡೆಯುವಾಗ, ಮದುವೆ, ಸೋಬಾನೆಗಳಂಥ ಶುಭ ಕಾರ್ಯಗಳಲ್ಲಿ ಅವರು ಹಾಡುವ ಹಾಡುಗಳಂತೂ ನೆನಪಿನ ಪದರುಗಳಲ್ಲಿ ಪಳೆಯುಳಿಕೆಗಳಂತೆ ಉಳಿದಿವೆ. ಸೈರಿಸಲಾರದ ಸನ್ನಿವೇಶಗಳಲ್ಲಿ ಚಂಡಿ, ಚಾಮುಂಡಿಯರಂತೆ ಸಿಡಿದೆದ್ದ ಹೆಣ್ಣುಗಳ ಸಾಹಸಪ್ರವೃತ್ತಿ ಮುನ್ನಡೆಯ ಮಾರ್ಗವಾಗಿ ಕಂಡಿದೆ. ದೇಹವನ್ನು ಕಾಡುವ ಕಾಯಿಲೆಗಳನ್ನು ದೂರವಿಡುವ ನೂರಾರು ಮನೆಯೌಷಧಗಳು, ಮನೋಬೇನೆಯನ್ನು ಹೊಡೆದೋಡಿಸಬಲ್ಲ ಅನೇಕ ಆಚರಣೆಗಳನ್ನು ಅವರು ಕಾಪಿಟ್ಟುಕೊಂಡ ಬಗೆ ಅವರ ಜಾnನಪರಂಪರೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಅಂತೆಯೇ ಅವರೊಳಗಿನ ಅಜಾnನ ರೂಪಿಸಿದ ಅನೇಕ ಮೂಢನಂಬಿಕೆಗಳು, ಹೆಣ್ಣನ್ನು ಮಾತ್ರ ಗುರಿಯಾಗಿಸಿಕೊಂಡ ಮೈಲಿಗೆಯಂತಹ ನೀತಿ, ನಿರೂಪಣೆಗಳ ಬಗ್ಗೆ ಮತ್ತು ಅದರಿಂದಾಗಿಯೇ ಬದುಕನ್ನು ಮೂರಾಬಟ್ಟೆಯಾಗಿಸಿಕೊಂಡವರ ಬದುಕಿನ ಬಗೆಗೆ ಯೋಚಿಸುವಾಗಲೆಲ್ಲ ಮನಸ್ಸು ಮರುಗುತ್ತದೆ.

Advertisement

ಭವವೆಂಬುದು ಸಖೀಯರಿಗೆ ಮಾತ್ರವೇ ಎಂಬ ಕಾಲಘಟ್ಟದ ಅನೇಕ ಸಂಗತಿಗಳನ್ನಿಲ್ಲಿ ಘಟನೆಗಳ ಮೂಲಕ ದಾಖಲಿಸಿದ್ದೇನೆ. ಅದರ ಸರಿ-ತಪ್ಪುಗಳ ವಿಮರ್ಶೆ ನಮ್ಮ ಮಿತಿಯನ್ನು ಮೀರಿದ್ದೆಂಬ ಅರಿವು ಅವುಗಳ ವಿಶ್ಲೇಷಣೆಗೆ ಕೈಹಾಕದಂತೆ ನನ್ನನ್ನು ತಡೆದಿವೆ. ಒಂದು ಹಳ್ಳಿ ವ್ಯಕ್ತಿಯೊಬ್ಬನನ್ನು ಬೆಳೆಸುತ್ತದೆ ಎಂಬುದು ಲಂಕೇಶ ಅವರ ಮಾತು. ನಿಜಕ್ಕೂ ಹಳ್ಳಿಯೊಂದು ನೀಡುವ ಗಾಢ ಅನುಭವವನ್ನು ಇನ್ನೆಲ್ಲಿಯೂ ಪಡೆಯಲಾಗದು. ಹಳ್ಳಿಯ ಜೀವನದ ಎಲ್ಲ ಮಿತಿಗಳ ಅನುಭವವಿದ್ದೂ ಕೂಡ ಇಂಥದ್ದೊಂದು ಸಾಂದ್ರ ಅನುಭವಗಳ ಮೂಟೆಯನ್ನು ಮನದೊಳಗೆ ಕಾಪಿಟ್ಟ ನನ್ನ ಹಳ್ಳಿಯನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಹಳ್ಳಿಯ ನಡುವೆ ಜುಳು ಜುಳು ಹರಿವ ಹೊಳೆ ನನ್ನೊಳಗೂ ಸದಾ ಸಂತೋಷದ ಝರಿಯಾಗಿ ಹರಿಯುತ್ತಲೇ ಇರುತ್ತದೆ. 

ಅಂಕಣ ಮುಕ್ತಾಯ

ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next