Advertisement

ಅರವಿಂದ ಲಿಂಬಾವಳಿ ವಿರುದ್ಧದ ಎಫ್ಐಆರ್‌ ರದ್ದು

06:11 AM Feb 01, 2019 | Team Udayavani |

ಬೆಂಗಳೂರು: ದೇವರಬೀಸನಹಳ್ಳಿಯ ಖಾಸಗಿ ನರ್ಸರಿ ಶಾಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ ಸಂಬಂಧ ಶಾಸಕ ಅರವಿಂದ ಲಿಂಬಾವಳಿ ಹಾಗೂ ಮತ್ತಿತರರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ ಲಿಂಬಾವಳಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷಾಧಾರಗಳು ಆರೋಪ ಪಟ್ಟಿಯಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟು ಇಡೀ ಪ್ರಕರಣ ಹಾಗೂ ಎಫ್ಐಆರ್‌ ರದ್ದುಗೊಳಿಸಿ ಗುರುವಾರ ಆದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶಾಸಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಇದು ಕಾನೂನು ಬಾಹಿರವಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದುದಕ್ಕೆ ಗಲಾಟೆ ಮಾಡುತ್ತಿದ್ದರೆಂದು ಪ್ರಕರಣ ದಾಖಲಿಸಲಾಗಿದೆ.ಆ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ.

ಆದ್ದರಿಂದ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು. 2017 ಫೆ.18ರಂದು ಮಾರತ್‌ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಘಟನೆ ನಡೆದಿತ್ತು.ಅದನ್ನು ಖಂಡಿಸಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು.

ಆ ಸಂದರ್ಭದಲ್ಲಿ ರಸ್ತೆ ತಡೆ ನಡೆಸಿ ಸಂಚಾರ ದಟ್ಟಣೆ ಉಂಟು ಮಾಡಿ ಸಾರ್ವಜನಿಕ ಜನಜೀವನಕ್ಕೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ಎಚ್‌ಎಎಲ್‌ ಠಾಣಾ ಪೊಲೀಸರು ಅರವಿಂದ ಲಿಂಬಾವಳಿ ಸೇರಿ 24 ಮಂದಿ ವಿರುದ್ಧ ಎಫ್‌ಐರ್‌ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಪಟ್ಟಿ  ಸಲ್ಲಿಸಿದ್ದರು. ನಗರದ ಸಿಸಿಎಚ್‌-82 ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next