Advertisement

ದಂಡ ಸಹಿತ ತೆರಿಗೆ ಸಂಗ್ರಹ 100 ಕೋಟಿಗೂ ಹೆಚ್ಚು

06:00 AM Jul 26, 2018 | Team Udayavani |

ಬೆಂಗಳೂರು: ಜಿಎಸ್‌ಟಿ ಜಾರಿಯಾದ ಮೇಲೂ ತೆರಿಗೆ ಪಾವತಿ ವಿಳಂಬಕ್ಕೆ ಪೂರ್ಣ ಪ್ರಮಾಣದ ಬ್ರೇಕ್‌ ಬಿದ್ದಿಲ್ಲ. ಈ ನಡುವೆ ಕಟ್ಟುನಿಟ್ಟಾಗಿ ಕಾರ್ಯಾಚರಣೆ ನಡೆಸಿದ ಇಲಾಖೆ ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ದಂಡ ಸಹಿತ ತೆರಿಗೆ ಸಂಗ್ರಹಿಸಿದೆ.

Advertisement

ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, 40 ಸಾವಿರ ವ್ಯಾಪಾರ-ವಹಿವಾಟುದಾರರ ಪೈಕಿ ಸುಮಾರು 3000 ಮಂದಿ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ. ಇದನ್ನು ಪತ್ತೆ ಹಚ್ಚಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಇಷ್ಟು ದೊಡ್ಡ ಪ್ರಮಾಣದ ತೆರಿಗೆ ಸಂಗ್ರಹಿಸಿ ಬಿಸಿ  ಮುಟ್ಟಿಸಿದ್ದಾರೆ.

ಜಿಎಸ್‌ಟಿ ಜಾರಿಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉದ್ಯಮ ಕ್ಷೇತ್ರವಾರು ತೆರಿಗೆ ಪರಿಶೀಲನೆ, ಇ-ವೇ ರಸೀದಿ ಹಾಗೂ ರಿಟರ್ನ್ಸ್ ವಿವರಗಳನ್ನು ತಾಳೆ ಹಾಕಿ ಪರಿಶೀಲಿಸುವ ಕಾರ್ಯದಲ್ಲಿ ಇಲಾಖೆ ಸಜ್ಜಾಗಿದೆ. ಆ ಮೂಲಕ ಎಲ್ಲ ಕೋನಗಳಿಂದಲೂ ತೆರಿಗೆ ವಂಚಕರ ಪತ್ತೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

ರಾಜ್ಯದಲ್ಲಿ 7 ಲಕ್ಷಕ್ಕೂ ಹೆಚ್ಚು ಮಂದಿ ಜಿಎಸ್‌ಟಿಯಡಿ ನೋಂದಾಯಿಸಿಕೊಂಡಿದ್ದು, ಇವರಿಂದ ಸಂಗ್ರಹವಾಗುವ ತೆರಿಗೆ ರಾಜ್ಯ ಸರ್ಕಾರದ ಪ್ರಮುಖ ತೆರಿಗೆ ಆದಾಯ ಮೂಲಗಳಲ್ಲಿ ಒಂದಾಗಿದೆ. ಜಿಎಸ್‌ಟಿ ಅನುಷ್ಠಾನ ನಂತರದ ತಾಂತ್ರಿಕ ಸಮಸ್ಯೆಗಳು ಬಹುತೇಕ ನಿವಾರಣೆಯಾಗಿ ಪ್ರಕ್ರಿಯೆ ಸುಗಮವಾದ ಬಳಿಕ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ತೆರಿಗೆ ವಂಚಕರನ್ನು ಪತ್ತೆ ಮಾಡುವ ಕಾರ್ಯಕ್ಕೆ ಚುರುಕು ಮುಟ್ಟಿಸಿದೆ.

ತೆರಿಗೆ ಪಾವತಿಸದವರು 3000 ಮಂದಿ
ರಾಜ್ಯದಲ್ಲಿ ಜಿಎಸ್‌ಟಿಯಡಿ ಭಾರೀ ಮೊತ್ತದ ತೆರಿಗೆ ಪಾವತಿ ಮಾಡುವವರ ಸಂಖ್ಯೆ 40 ಸಾವಿರ. ಇವರಿಂದಲೇ ವಾಣಿಜ್ಯ ತೆರಿಗೆ ಆದಾಯದ ಶೇ.80ರಿಂದ ಶೇ.90ರಷ್ಟು ತೆರಿಗೆ ಸಂಗ್ರಹವಾಗುತ್ತದೆ. ಆದರೆ, ಇವರಲ್ಲೇ 2000ದಿಂದ 3000 ಮಂದಿ ನಿಯಮಿತವಾಗಿ ಜಿಎಸ್‌ಟಿ ಪಾವತಿಸದಿರುವುದು ಬಯಲಾಗಿದೆ.

Advertisement

384 ಕೋಟಿ ರೂ. ತೆರಿಗೆ ಬಾಕಿ ಪತ್ತೆ
ತೆರಿಗೆ ಪಾವತಿ ವಿವರಗಳನ್ನು ನಿರಂತರವಾಗಿ ಪರಿಶೀಲನೆಗೆ ಒಳಪಡಿಸುತ್ತಿರುವ ಇಲಾಖೆ ಅಧಿಕಾರಿಗಳು ಮೂರ್‍ನಾಲ್ಕು ತಿಂಗಳಲ್ಲಿ ಆಯ್ದ ತೆರಿಗೆದಾರರು 150 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಇನ್ನೊಂದೆಡೆ ಇಲಾಖೆಯ ಗುಪ್ತಚರ ದಳ ಸ್ವಯಂಪ್ರೇರಿತವಾಗಿ ಸುಮಾರು 500 ಮಂದಿಯ ವ್ಯವಹಾರವನ್ನು ಪರೀಶೀಲನೆಗೆ ಒಳಪಡಿಸಿದಾಗ 234 ಕೋಟಿ ರೂ. ತೆರಿಗೆ ಬಾಕಿ ಇರುವುದು ಬೆಳಕಿಗೆ ಬಂದಿದೆ. ಅದರಂತೆ ಈವರೆಗೆ 384 ಕೋಟಿ ರೂ. ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದಂತಾಗಿದೆ.

100 ಕೋಟಿ ರೂ.ನಷ್ಟು ತೆರಿಗೆ ಸಂಗ್ರಹ
ಪ್ರಮುಖವಾಗಿ ಟೆಲಿಕಾಂ ಸಂಸ್ಥೆ, ಐಷಾರಾಮಿ ಹೋಟೆಲ್‌, ಆತಿಥ್ಯ ಸಂಸ್ಥೆ, ಇಂಜಿನಿಯರಿಂಗ್‌ ಕಂಪೆನಿ, ಕಟ್ಟಡ ನಿರ್ಮಾಣ ಸಂಸ್ಥೆ, ಮನರಂಜನಾ ವಲಯ ಸೇರಿದಂತೆ ಇತರೆ ಕ್ಷೇತ್ರದವರು ತೆರಿಗೆ ವಂಚಿಸಿರುವುದು ಗೊತ್ತಾಗಿದೆ. ಈ ಪೈಕಿ ಹಲವರಿಂದ ದಂಡಸಹಿತ 100 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ವಸೂಲಿ ಮಾಡಿರುವ ಅಧಿಕಾರಿಗಳು, ಉಳಿದ ಬಾಕಿ ತೆರಿಗೆಯನ್ನು ದಂಡಸಹಿತ ಸಂಗ್ರಹಿಸುತ್ತಿದ್ದಾರೆ.

ಪತ್ತೆ ವಿಧಾನ ಹೇಗೆ?
ಇಲಾಖೆಯು ತೆರಿಗೆ ವಂಚಕರ ಪತ್ತೆಗೆ ಮೂರ್‍ನಾಲ್ಕು ಬಗೆಯ ಪರಿಶೀಲನೆ ಕೈಗೊಳ್ಳುತ್ತದೆ. ಪ್ರತಿ ತಿಂಗಳು ಸಲ್ಲಿಸುವ ಆರ್‌ 3ಬಿ (ಪ್ರತಿ ಖರೀದಿ- ಮಾರಾಟ ಮೊತ್ತ ಮತ್ತು ಪಾವತಿಸಿದ/ ಸಂಗ್ರಹಿಸಿದ ತೆರಿಗೆ ವಿವರ) ರಿಟರ್ನ್ಸ್ಗಳ ಪರಿಶೀಲನೆ ನಡೆಸುವುದು, ವ್ಯಾಪಾರ- ವ್ಯವಹಾರಸ್ಥರು ಸಲ್ಲಿಸುವ ರಿಟರ್ನ್ಸ್- 1 (ನೋಂದಾಯಿತ ಮಾರಾಟಗಾರರಿಗೆ ಮಾರಿದ ವಿವರ) ವಿವರಗಳ ಮೇಲೆ ನಿಗಾವಹಿಸುವುದು, ಬಳಿಕ ಎರಡೂ ವಿವರ ತಾಳೆ ಹಾಕಿ ಪರಿಶೀಲನೆ ನಡೆಸಲಾಗುತ್ತದೆ.

ನಾನಾ ರೀತಿಯ ವಂಚನೆ
ಬಹಳಷ್ಟು ವ್ಯಾಪಾರ- ವ್ಯವಹಾರಸ್ಥರು 3ಬಿ ಸಲ್ಲಿಸಿದರೂ ಆರ್‌-1 ಸಲ್ಲಿಸುತ್ತಿಲ್ಲ. ಕೆಲವರು ತಾವು ಖರೀದಿಸಿದ ಸರಕುಗಳ ವಿವರ ಸಲ್ಲಿಸುತ್ತಿದ್ದು, ಮಾರಾಟದ ವಿವರ ನಮೂದಿಸುತ್ತಿಲ್ಲ. ಗ್ರಾಹಕರಿಂದ ತೆರಿಗೆ ಸಂಗ್ರಹಿಸಿದರೂ ಅದನ್ನು ಇಲಾಖೆಗೆ ಪಾವತಿಸದಿರುವುದು. ಪ್ರತಿ ವ್ಯವಹಾರದ ಅಂಕಿಸಂಖ್ಯೆ ಇಲಾಖೆ ಬಳಿ ಲಭ್ಯವಿರುವುದರಿಂದ ನಾನಾ ರೂಪದಲ್ಲಿ ತಾಳೆ ಹಾಕಿ ವ್ಯತ್ಯಾಸ ಕಂಡುಬಂದಾಗ ಪರಿಶೀಲಿಸಿ ತೆರಿಗೆ ವಂಚನೆಯನ್ನು ಪತ್ತೆ ಹಚ್ಚುತ್ತಿದೆ.

ಮೂರ್‍ನಾಲ್ಕು ತಿಂಗಳಿನಿಂದ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಈವರೆಗೆ 384 ಕೋಟಿ ರೂ. ತೆರಿಗೆ ಬಾಕಿ ಉಳಿಸಿದಿರುವುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. 100 ಕೋಟಿ ರೂ. ದಂಡಸಹಿತ ತೆರಿಗೆ ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯಮ ಕ್ಷೇತ್ರವಾರು ಪರಿಶೀಲನೆ, ಇ-ವೇ ರಸೀದಿ ಹಾಗೂ 3ಬಿ, ಆರ್‌-1 ವಿವರ ತಾಳೆ ಹಾಕಿ ಪರಿಶೀಲಿಸಲು ಸಿದ್ಧತೆ ನಡೆಸಲಾಗಿದೆ.
– ಎಂ.ಎನ್‌.ಶ್ರೀಕರ, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ

– ಎಂ. ಕೀರ್ತಿಪ್ರಸಾದ್‌
 

Advertisement

Udayavani is now on Telegram. Click here to join our channel and stay updated with the latest news.

Next